ರಾಜ್ಯ ಸರ್ಕಾರದಿಂದ ಶಕ್ತಿ ಯೋಜನೆಯಡಿ ಉಚಿತ ಬಸ್‌ ಪ್ರಯಾಣಕ್ಕೆ ಬಂದ ಮಹಿಳೆಯರು ನೂಕು ನುಗ್ಗಲು ಮಾಡಿದ್ದರಿಂದ ಕೆಎಸ್‌ಆರ್‌ಟಿಸಿ ಬಸ್‌ನ ಬಾಗಿಲು ಮುರಿದು ಹಾಕಿದ್ದಾರೆ.

ಚಾಮರಾಜನಗರ (ಜೂ.17): ರಾಜ್ಯ ಸರ್ಕಾರದಿಂದ ಶಕ್ತಿ ಯೋಜನೆಯಡಿ ಉಚಿತ ಬಸ್‌ ಪ್ರಯಾಣ ಜಾರಿಗೊಂಡ ಹಿನ್ನೆಲೆಯಲ್ಲಿ ಮಣ್ಣೆತ್ತಿನ ಅಮವಾಸ್ಯೆಗಾಗಿ ಮಲೈ ಮಹದೇಶ್ವರ ಬೆಟ್ಟಕ್ಕೆ ಹೋಗುವ ಮಹಿಳೆಯರ ಸಂಖ್ಯೆ ಹೆಚ್ಚಾಗಿತ್ತು. ಆದರೆ, ಬಸ್‌ನಲ್ಲಿ ನೂಕು ನುಗ್ಗಲು ಹೆಚ್ಚಾಗಿದ್ದರಿಂದ ಕೆಎಸ್‌ಆರ್‌ಟಿಸಿ ಬಸ್‌ನ ಬಾಗಿಲೇ ಮುರಿದುಬಿದ್ದಿದೆ.

ಮಹಿಳೆಯರಿಗೆ ಉಚಿತ ಪ್ರಯಾಣದ ಪರಿಣಾಮವಾಗಿ ಕರ್ನಾಟಕ ರಾಜ್ಯ ರಸ್ತೆ ಸಾರಿಗೆ ಸಂಸ್ಥೆ (ಕೆಎಸ್‌ಆರ್‌ಟಿಸಿ) ಬಸ್ ಹತ್ತಲು ಮಹಿಳೆಯರ ನೂಕುನುಗ್ಗಲು ಉಂಟಾಗಿದೆ. ಆದ್ದರಿಂದ ಮಹಿಳೆಯರೇ ತಮ್ಮ ಶಕ್ತಿ ಪ್ರದರ್ಶನ ಮಾಡಿದ್ದು, ಬಸ್ ಬಾಗಿಲನ್ನೇ ಮುರಿದು ಹಾಕಿರುವ ಘಟನೆ ಚಾಮರಾಜನಗರ ಜಿಲ್ಲೆಯ ಕೊಳ್ಳೇಗಾಲದಲ್ಲಿ ನಡೆದಿದೆ. ಮಣ್ಣೆತ್ತಿನ ಅಮಾವಸ್ಯೆಗೆ ಮಲೈ ಮಹದೇಶ್ವರ ಬೆಟ್ಟದತ್ತ ಮಹಿಳೆಯರು ಹೆಚ್ಚಾಗಿ ಹೊರಟಿದ್ದಾರೆ. ಇವರು ನೂಕು ನುಗ್ಗಲಿನಿಂದ ಬಸ್ ಹತ್ತುವಾಗ ಮಹಿಳಾಮಣಿಗಳು ಬಾಗಿಲನ್ನೇ ಮುರಿದು ಹಾಕಿದ್ದಾರೆ. ಈ ಘಟನೆಯಿಂದ ಬಸ್‌ ಕಂಡಕ್ಟರ್‌ ಅವರು, ದಿಕ್ಕು ತೋಚದೆ ಪೆಚ್ಚು ಮೋರೆ ಹಾಕಿ ನಿಂತುಕೊಂಡಿದ್ದರು. 

ಗೃಹಲಕ್ಷ್ಮಿ ಯೋಜನೆಯ ಗುಡ್‌ ನ್ಯೂಸ್‌: ಗ್ರಾ.ಪಂ. ಮಟ್ಟದ ಬಾಪೂಜಿ ಸೇವಾ ಕೇಂದ್ರದಲ್ಲೂ ಅರ್ಜಿ ಸಲ್ಲಿಕೆಗೆ ಅವಕಾಶ

ಪ್ರಯಾಣಿಕರನ್ನು ಮಾರ್ಗ ಮಧ್ಯ ಇಳಿಸಿದ ಬಸ್‌ ಸಿಬ್ಬಂದಿ: ಮತ್ತೊಂದೆಡೆ ಇದೇ ಚಾಮರಾಜನಗರದಲ್ಲಿ ಕೆಎಸ್‌ಆರ್‌ಟಿಸಿ ಚಾಲಕ ಹಾಗೂ ನಿರ್ವಾಹಕರ ಅಮಾನವೀಯವಾಗಿ ವರ್ತನೆ ಮಾಡಿರುವ ಘಟನೆ ನಡೆದಿದೆ. ಟಿಕೆಟ್‌ ಮೆಷಿನ್ ಕೈಕೊಟ್ಟ ನೆಪ ಪ್ರಯಾಣಿಕರನ್ನು ಬಸ್‌ನ ಕಂಡಕ್ಟರ್‌ ಹಾಗೂ ಡ್ರೈವರ್‌ ಮಾರ್ಗಮಧ್ಯೆ ಇಳಿಸಿ ಹೋಗಿದ್ದರು. ಚಾಮರಾಜ‌ನಗರ ಜಿಲ್ಲೆ ಹನೂರು ತಾಲ್ಲೂಕಿನ ಅಜ್ಜೀಪುರದ ಕಾಡಿನ ಬಳಿ ಘಟನೆ ನಡೆದಿದೆ. ಹನೂರಿನಿಂದ ಅಜ್ಜೀಪುರ ನಡುವೆ ಕೈ ಕೊಟ್ಟ ಟಿಕೇಟ್ ಯಂತ್ರ ಕೈಕೊಟ್ಟಿತ್ತು. ಬಸ್ ನಲ್ಲಿದ್ದ ಮಹಿಳೆಯರು ವಿದ್ಯಾರ್ಥಿನಿಯರು ಹಾಗೂ ಇತರ ಪ್ರಯಾಣಿಕರನ್ನು ಕೆಳಗಿಳಿಸಿದ್ದರು. 

ಕಾಡಿನ ಮಧ್ಯೆ ಕಾಲ್ನಡಿಗೆ ಹೊರಟ ಪ್ರಯಾಣಿಕರು: ಉಚಿತ ಪ್ರಯಾಣ ಇದ್ದರೂ ಬಸ್ ನಲ್ಲಿದ್ದ ಮಹಿಳೆಯರು ವಿದ್ಯಾರ್ಥಿನಿಯರನ್ನು ಕೆಳಗಿಳಿಸಿದ್ದಾರೆ. ಕಾಡಿನ ಮಧ್ಯೆ ನಿಲ್ಲಿಸಿದ್ದಕ್ಕೆ ಪ್ರಯಾಣಿಕರು ಗಾಬರಿಯಾಗಿದ್ದಾರೆ. ಕಾಡು ಪ್ರಾಣಿಗಳು ಓಡಾಡುವ ಜಾಗದಲ್ಲಿ ಕಂಡಕ್ಟರ್ ಮಹಿಳೆಯರು ಹಾಗೂ ವಿದ್ಯಾರ್ಥಿಗಳನ್ನು ಕೆಳಗಿಳಿಸಿದ್ದರು. ಇದರಿಂದ ಬೇಸತ್ತ ಪ್ರಯಾಣಿಕರು ಅಪಾಯಕಾರಿ ಕಾಡಿನ ನಡುವೆಯೇ ಕಾಲ್ನಡಿಗೆಯಿಂದ ನಡೆದುಕೊಂಡು ಗ್ರಾಮದತ್ತ ಹೆಜ್ಜೆಯನ್ನು ಹಾಕಿದರು. ಇನ್ನು ಕೆಲವರು ಪ್ರಯಾಣದ ವೇಳೆ ಲಜೇಜುಗಳು ಹಾಗೂ ಮಕ್ಕಳನ್ನು ಕರೆದುಕೊಂಡು ಬಂದಿದ್ದು, ಬಸ್‌ನ ಸಿಬ್ಬಂದಿ ನಡೆಗೆ ತೀವ್ರ ಆಕ್ರೋಶ ವ್ಯಕ್ತಪಡಿಸಿದರು.

ವಾರಗಟ್ಟಲೆ ಪ್ರವಾಸ ಹೊರಟ ಮಹಿಳೆಯರು: ರಾಜ್ಯ ಸರ್ಕಾರದ ಶಕ್ತಿ ಯೋಜನೆಯ ಹಿನ್ನೆಲೆಯಲ್ಲಿ ಮಹಿಳೆಯರು ವಾರಗಟ್ಟಲೆ ಪ್ರವಾಸ ಹೊರಟಿದ್ದಾರೆ. ರಾಯಚೂರು ಜಿಲ್ಲೆ ಮಾನ್ವಿ ತಾಲೂಕು, ಬೊಮ್ಮನಾಳು ಗ್ರಾಮದ 31 ಮಹಿಳೆಯರು 5 ದಿನದ ಪ್ರವಾಸ ಹೊರಟಿದ್ದರು. ಧರ್ಮಸ್ಥಳ, ಉಡುಪಿ, ಮೈಸೂರು ಜಿಲ್ಲೆಗಳಲ್ಲಿ ಪ್ರವಾಸ ಮಾಡಿ, ದೇವಸ್ಥಾನಗಳು, ಅರಮನೆ ಸೇರಿ ಪ್ರವಾಸಿ ಸ್ಥಳಗಳನ್ನು ಸುತ್ತಾಡಿ ಬಂದಿದ್ದಾರೆ. ಪ್ರವಾಸ ಮುಗಿಸಿ ಹೊಸಪೇಟೆ ಕಡೆಗೆ ಮಹಿಳೆಯರ ಗುಂಪು ಸಾಗುತ್ತಿದೆ. ಒಂದೇ ಬಸ್‌ನ ಶೇಕಡ 95 ರಷ್ಟು ಸೀಟ್‌ಗಳನ್ನು ವ್ಯಾಪಿಸಿಕೊಂಡು ಮಹಿಳೆಯರ ಪ್ರವಾಸ ಮಾಡುತ್ತಿದ್ದಾರೆ. ಅಜ್ಜಿ, ಅಮ್ಮ, ಮೊಮ್ಮಗಳು ಸೇರಿಕೊಂಡಂತೆ ಎಲ್ಲರೂ‌ ಸೇರಿ ಒಟ್ಟಿಗೆ ಪ್ರವಾಸಕ್ಕೆ ಬಂದಿದ್ದರು.

ಇಂದಿರಾ ಕ್ಯಾಂಟೀನ್‌ನಲ್ಲಿ ಮಾಂಸ ಸೇವನೆಗೂ ಅವಕಾಶವಿದೆ: ಸಚಿವ ಮಹದೇವಪ್ಪ ಮಾಹಿತಿ

ಫ್ರೀ ಟಿಕೆಟ್‌ ಇದ್ದವರನ್ನು ನಿಲ್ಲಿಸುತ್ತಾರೆ: ಸಿದ್ದರಾಮಯ್ಯ ಫ್ರೀ ಟಿಕೇಟ್ ಯೋಜನೆಯಿಂದ ನಮಗೆ ತಾರತಮ್ಯ ಅನುಭವ ಆಗ್ತಿದೆ. ಐದು ದಿನ ಪ್ರವಾಸ ಒಂದ್ ತರ ಅವಮಾನ ಆಯ್ತು. ಸಿದ್ದರಾಮಯ್ಯ ಫ್ರೀ ಕೊಟ್ಟಿದ್ದಾರೆ ನಾವು ಬಂದಿದ್ದೇವೆ. ನೀವೆಲ್ಲ ನಿಂತು ಬನ್ನಿ, ನಾವು ಕೂರುತೀವಿ ಟಿಕೆಟ್‌ಗೆ ಹಣ ಕೊಟ್ಟವರು ಅವಮಾನ ಮಾಡಿದ್ರು. ನೀವು ಫ್ರೀ ಬರ್ತಿದ್ದಿರಾ, ನಿಂತು ಬನ್ನಿ ಅನ್ನುತ್ತಾರೆ. ಚಿಕ್ಕಮಗಳೂರಿನಿಂದ ಬರುವಾಗ ಅವಮಾನ ಆಯ್ತು. ಇದ್ಯಾಕೋ ಸರಿ ಹೋಗ್ತಿಲ್ಲ. ಇದಕ್ಕೆ ಬದಲಾಗಿ ಬೇರೆ ಯೋಜನೆ ಮಾಡಿದ್ರೆ ಒಳಿತು. ಗಂಡು ಮಕ್ಕಳಿಂದ ಬೇದ ಬಾವ ಶುರುವಾಗಿದೆ. ಇದೆಲ್ಲ ನೋಡಿದಾಗ ಬಬಾರದು ಅಂತ ಅನ್ನಿಸಿದೆ. ಯೋಜನೆ ಬದಲಿಸಿ ಶಿಕ್ಷಣಕ್ಕೆ ಬಳಸಿದ್ರೆ ಒಳ್ಳೇದು ಎಂದು ಮಹಿಳೆಯರು ಹೇಳಿದರು.