ಕರ್ನಾಟಕ ಸರ್ಕಾರ ಮಹತ್ವಾಕಾಂಕ್ಷಿ ಯೋಜನೆಯಾದ ಗೃಹಲಕ್ಷ್ಮಿ ಯೋಜನೆಗೆ ಗ್ರಾಮ ಪಂಚಾಯಿತಿ ಮಟ್ಟದ ಬಾಪೂಜಿ ಸೇವಾ ಕೇಂದ್ರದಲ್ಲಿಯೂ ಅರ್ಜಿ ಸಲ್ಲಿಕೆಗೆ ಸರ್ಕಾರದಿಂದ ಅವಕಾಶ ಮಾಡಿಕೊಲಾಡಗುತ್ತಿದೆ.

ಚಿಕ್ಕಮಗಳೂರು (ಜೂ.17): ರಾಜ್ಯದಲ್ಲಿ ಗೃಹಲಕ್ಷ್ಮೀ ಯೋಜನೆಯನ್ನು ಸರಳಗೊಳಿಸುವ ನಿಟ್ಟಿನಲ್ಲಿ ಕೆಲವೊಂದು ಬದಲಾವಣೆಗಳನ್ನು ಮಾಡಲಾಗುತ್ತಿದೆ. ಗ್ರಾಮ ಪಂಚಾಯಿತಿ ಮಟ್ಟದ ಬಾಪೂಜಿ ಸೇವಾ ಕೇಂದ್ರದಲ್ಲಿಯೂ ಅರ್ಜಿ ಸಲ್ಲಿಕೆಗೆ ಅವಕಾಶ ನೀಡುವ ಹಿನ್ನೆಲೆಯಲ್ಲಿ, ಅರ್ಜಿ ಸಲ್ಲಿಕೆ ಅವಧಿ ವಿಳಂಬವಾಗುತ್ತಿದೆ. ಆದರೆ, ಗೃಹಲಕ್ಷ್ಮಿ ಯೋಜನೆಯ 2000 ರೂ. ಹಣ ಆ.18ರಂದು ರಾಜ್ಯದ ಎಲ್ಲ ಅರ್ಹ ಫಲಾನುಭವಿ ಮಹಿಳೆಯರ ಬ್ಯಾಂಕ್‌ ಖಾತೆಗೆ ಜಮೆಯಾಗಲಿದೆ ಎಂದು ಮಹಿಳಾ ಮತ್ತು ಮಕ್ಕಳ ಕಲ್ಯಾಣ ಇಲಾಖೆ ಸಚಿವೆ ಲಕ್ಷ್ಮೀ ಹೆಬ್ಬಾಳ್ಕರ್‌ ಮಾಹಿತಿ ನೀಡಿದ್ದಾರೆ.

ಚಿಕ್ಕಮಗಳೂರು ಜಿಲ್ಲೆಯ ಕೊಪ್ಪಳ ತಾಲೂಕಿನ ವಿನಯ್‌ ಗುರೂಜಿಯವರ ಗೌರಿಗದ್ದೆ ಆಶ್ರಮದಲ್ಲಿ ನಡೆದ ಮಹಿಳೆಯರಿಗೆ ಬಾಗಿನ ಅರ್ಪಣೆ ಕಾರ್ಯಕ್ರಮದಲ್ಲಿ ಭಾಗವಹಿಸಿ, ನಂತರ ಮಾಧ್ಯಮಗಳೊಂದಿಗೆ ಮಾತನಾಡಿದರು. ರಾಜ್ಯದಲ್ಲಿ ಗೃಹಲಕ್ಷ್ಮಿ ಯೋಜನೆಗೆ ಅಪ್ಲಿಕೇಶನ್ ಹಾಕಲು ಕೆಲಕಾಲ ವಿಳಂಬ ಆಗಲಿದೆ. ಆದರೆ, ಎಲ್ಲ ಅರ್ಹ ಫಲಾನುಭವಿ ಮಹಿಳೆಯರಿಗೆ ಆಗಸ್ಟ್ 17 ಅಥವಾ ಆ.18ಕ್ಕೆ ಖಂಡಿತ ಹಣ ಅವರ ಖಾತೆ ಸೇರುತ್ತದೆ. ಯೋಜನೆಯಲ್ಲಿ ಕೆಲವು ಬದಲಾವಣೆಯಿಂದ ವಿಳಂಬವಾಗುತ್ತಿದೆ ಎಂದು ಮಾಹಿತಿ ನೀಡಿದರು. 

ಪ್ರಧಾನಿಗೆ ಚೋಳರ ಸೆಂಗೋಲ್‌, ಸಿಎಂ ಸಿದ್ದರಾಮಯ್ಯನಿಗೆ ಪೆರಿಯಾರ್‌ ಸೆಂಗೋಲ್‌

ಪಂಚಾಯಿತಿ ಬಾಪೂಜಿ ಸೇವಾ ಕೇಂದ್ರದಲ್ಲೂ ಅರ್ಜಿ ಸಲ್ಲಿಕೆ: ಗೃಹ ಲಕ್ಷ್ಮಿ ಯೋಜನೆ ಜನರಿಗೆ ಸರಳವಾಗಿ ಸಿಗಬೇಕು. ಹಾಗಾಗಿ, ಅಧಿಕಾರಿಗಳಿಗೆ ಕೆಲ ಬದಲಾವಣೆಗಳ ಸೂಚನೆ ನೀಡಿದ್ದೇವೆ. ಗ್ರಾಮ 1 ಕರ್ನಾಟಕ, ಬೆಂಗಳೂರು 1 ನಲ್ಲಿ ಇದರ ಸೇವೆ ಲಾಭ ಪಡೆಯಬಹುದಾಗಿತ್ತು. ಈಗ ಬಾಪೂಜಿ ಸೇವಾ ಕೇಂದ್ರವನ್ನು ಸೇರಿಸಿದ್ದೇವೆ. ಗ್ರಾಮ ಪಂಚಾಯಿತಿಗಳಲ್ಲಿ ಬಾಪೂಜಿ ಸೇವಾ ಕೇಂದ್ರ ಇದೆ. ಸರ್ಕಾರದ ಯೋಜನೆಗಳನ್ನ ಜನರ ಮನೆ ಬಾಗಿಲಿಗೆ ತಲುಪಿಸುವ ಆಸಕ್ತಿ ಇರೋರಿಗೆ ಪ್ರಜಾಪ್ರತಿನಿಧಿ ಮಾಡುತ್ತೇವೆ. ಅವರಿಗೆ ಯಾವ ಖಾತೆಗೆ ಬೇಕೋ ಅದೇ ಅಕೌಂಟ್ ಗೆ ಹಣ ನೀಡುತ್ತೇವೆ. ನಿನ್ನೆ ಕೆಲವು ಬದಲಾವಣೆ ಮಾಡಿದ್ದೇವೆ, ಅಧಿಕಾರಿಗಳು ಈಗಾಗಲೇ ಸಾಪ್ಟ್‌ವೇರ್‌ ರೆಡಿ ಮಾಡುತ್ತಿದ್ದಾರೆ. ಅತಿ ಶೀಘ್ರದಲ್ಲಿ ಅಪ್ಲಿಕೇಶನ್ ಡೌನ್ಲೋಡ್ ಮಾಡುವ ಯೋಜನೆಗೆ ಚಾಲನೆ ನೀಡುತ್ತೇವೆ ಎಂದು ಮಾಹಿತಿ ನೀಡಿದರು. 

ಸಾಫ್ಟ್‌ವೇರ್‌ ಅಪ್ಡೇಟ್‌ ಪ್ರಕ್ರಿಯೆ ಚಾಲನೆಯಲ್ಲಿದೆ: ರಾಜ್ಯದಲ್ಲಿ ಗೃಹ ಲಕ್ಷ್ಮಿ ಯೋಜನೆಗೆ ಜೂ.15ರಿಂದಲೇ ಅರ್ಜಿ ಸಲ್ಲಿಕೆ ಆರಂಭವಾಗಲಿದೆ, ಆ.15ರಂದು ಎಲ್ಲ ಅರ್ಹ ಮಹಿಳೆಯರ ಖಾತೆಗೆ ಹಣ ಜಮೆ ಆಗಲಿದೆ ಎಂದು ಸರ್ಕಾರ ಹೇಳಿತ್ತು. ಆದರೆ, ಯೋಜನೆಯಲ್ಲಿ ಕೆಲವು ಬದಲಾವಣೆ ಮಾಡುವ ನಿಟ್ಟಿನಲ್ಲಿ ಅರ್ಜಿ ಸಲ್ಲಿಕೆ ಪ್ರಕ್ರಿಯೆ ಇನ್ನೂ ವಿಳಂಬವಾಗಿದೆ. ಕೆಲವು ಬದಲಾವಣೆಗಳನ್ನು ಮಾಡಿ ಸಾಫ್ಟ್‌ವೇರ್‌ ಅಪ್‌ಡೇಟ್‌ ಮಾಡಲಾಗುತ್ತಿದ್ದು, ಶೀಘ್ರ ಯೋಜನೆಗೆ ಚಾಲನೆ ನೀಡುವುದಾಗಿ ಸರ್ಕಾರ ತಿಳಿಸಿದೆ. ಇನ್ನು ಆಗಸ್ಟ್‌ 15 ರಿಂದ ಆಗಸ್ಟ್‌ 18ರ ಒಳಗಾಗಿ ಹಣ ಖಾತೆಗೆ ಜಮೆ ಆಗಲಿದೆ ಎಂದು ಹೇಳುತ್ತಿದ್ದು, ಮಹಿಳೆಯರಿಗೆ ಸಂತಸದ ವಿಚಾರವಾಗಿದೆ. 

ಅನ್ನಭಾಗ್ಯ ಯೋಜನೆಗೆ ಮತ್ತೆ ಹಿನ್ನಡೆ: ಅಕ್ಕಿ ಸರಬರಾಜು ಸಾಧ್ಯವಿಲ್ಲವೆಂದ ತೆಲಂಗಾಣ ಸರ್ಕಾರ

ಗೊಂದಲ ಬಗೆಹರಿಸಿದ ಹೆಬ್ಬಾಳ್ಕರ್: ರಾಜ್ಯ ಸರ್ಕಾರ ಘೋಷಿಸಿರುವ ಗ್ಯಾರಂಟಿ ಯೋಜನೆಗಳಲ್ಲಿ ಒಂದಾದ ‘ಗೃಹ ಲಕ್ಷ್ಮಿ’ ಯೋಜನೆಗೆ ಬೆಳಗಾವಿಯಲ್ಲಿ ಆಗಸ್ಟ್‌ 17 ಅಥವಾ 18ರಂದು ಚಾಲನೆ ನೀಡಲು ತಯಾರಿ ನಡೆಸಲಾಗುತ್ತಿದೆ ಎಂದು ಮುಖ್ಯಮಂತ್ರಿ ಸಿದ್ದರಾಮಯ್ಯ ಹೇಳಿದ್ದರು. ಜೂ.2ರಂದು ನಡೆದ ಸಚಿವ ಸಂಪುಟ ಸಭೆ ಬಳಿಕ ಆ.15ರಂದು ಸ್ವಾತಂತ್ರ್ಯ ದಿನಾಚರಣೆ ದಿನ ಗೃಹಲಕ್ಷ್ಮೀ ಯೋಜನೆಗೆ ಫಲಾನುಭವಿಗಳ ಖಾತೆಗೆ ಹಣ ಬೀಳಲಿದೆ ಎಂದಿದ್ದರು. ಆದರೆ, ಉಪಮುಖ್ಯಮಂತ್ರಿ ಡಿ.ಕೆ.ಶಿವಕುಮಾರ್‌ ಒಂದು ಹೆಜ್ಜೆ ಮುಂದೆ ಹೋಗಿ ಸ್ವಾತಂತ್ರ್ಯ ದಿನಾಚರಣೆ ದಿನವೇ ಗೃಹಲಕ್ಷ್ಮೀ ಹಣ ಖಾತೆಗೆ ಬೀಳಲಿದೆ ಎಂದಿದ್ದರು. ಆದರೆ, ಈಗ ಸ್ವತಃ ಮಹಿಳಾ ಮತ್ತು ಮಕ್ಕಳ ಕಲ್ಯಾಣ ಸಚಿವೆ ಲಕ್ಷ್ಮೀ ಹೆಬ್ಬಾಳ್ಕರ್‌ ಅವರೇ ಯೋಜನೆಯ ಬಗ್ಗೆ ಮಾಹಿತಿ ನೀಡಿದ್ದಾರೆ.