ವಿಧಾನ ಪರಿಷತ್ ವಿಪಕ್ಷ ನಾಯಕ ಚಲವಾದಿ ನಾರಾಯಣಸ್ವಾಮಿಯವರು, ಪ್ರಿಯಾಂಕ್ ಖರ್ಗೆಯವರು ಈ ಜನ್ಮದಲ್ಲಿ ಆರೆಸ್ಸೆಸ್ ನಿಷೇಧಿಸಲು ಸಾಧ್ಯವಿಲ್ಲ ಎಂದರು. ಭಯೋತ್ಪಾದಕರನ್ನು ಹುತಾತ್ಮರು ಎನ್ನುವುದನ್ನು ಖಂಡಿಸಿದ ಅವರು, ಬೆಂಗಳೂರು ಮೆಟ್ರೋ ಬಾಂಬ್ ಬೆದರಿಕೆಗೆ ಕಾಂಗ್ರೆಸ್ ಸರ್ಕಾರದ ಆಡಳಿತ ವೈಫಲ್ಯವೇ ಕಾರಣ ಎಂದರು.
ಬೆಂಗಳೂರು (ನ.18): ಪ್ರಿಯಾಂಕ್ ಖರ್ಗೆ ಸುಳ್ಳು ಹೇಳೋದ್ರಲ್ಲಿ ನಿಸ್ಸೀಮರು. ಈ ಜನ್ಮದಲ್ಲಿ ಆರೆಸ್ಸೆಸ್ ನಿಷೇಧಿಸಲು ಅವರಿಂದ ಸಾಧ್ಯವಿಲ್ಲ ಎಂದು ವಿಧಾನ ಪರಿಷತ್ ವಿಪಕ್ಷ ನಾಯಕ ಚಲವಾದಿ ನಾರಾಯಣಸ್ವಾಮಿ ತಿರುಗೇಟು ನೀಡಿದರು.
ಆರೆಸ್ಸೆಸ್ ನಿಷೇಧ ವಿಚಾರವಾಗಿ ಇಂದು ಬಿಜೆಪಿ ಕಚೇರಿ ಬಳಿ ಮಾಧ್ಯಮಗಳೊಂದಿಗೆ ಮಾತನಾಡಿದ ಅವರು, ಆರೆಸ್ಸೆಸ್ ಪಥಸಂಚಲನಕ್ಕೆ ಮುಂದಾದಾಗ ಯಾವುದೇ ಕಾರಣಕ್ಕೂ ಪಥಸಂಚಲನ ಮಾಡಲು ಬಿಡೋಲ್ಲ ಎಂದಿದ್ರು. ಅಧಿಕಾರ ಇದ್ದಿದ್ರೆ ಆರೆಸ್ಸೆಸ್ ನಿಷೇಧ ಮಾಡುತ್ತೇನೆ ಅಂದಿದ್ರು. ನಾನು ಒಂದು ಮಾತು ಹೇಳ್ತೇನೆ ಪ್ರಿಯಾಂಕ್ ಖರ್ಗೆಗೆ ಈ ಜನ್ಮದಲ್ಲಿ ಆರೆಸ್ಸೆಸ್ ನಿಷೇಧ ಮಾಡಲು ಸಾಧ್ಯವಾಗುವುದಿಲ್ಲ ಎಂದು ವಾಗ್ದಾಳಿ ನಡೆಸಿದರು.
ಇರಲಾರೆ ಇರುವೆ ಬಿಟ್ಟುಕೊಂಡ ಪ್ರಿಯಾಂಕ್ ಖರ್ಗೆ:
ಚಿತ್ತಾಪುರದಲ್ಲಿ ಆರೆಸ್ಸೆಸ್ ಪಥಸಂಚಲನಕ್ಕೆ ಅನುಮತಿ ಕೊಟ್ಟಿದ್ದು, ಪಥಸಂಚಲನ ವೇಳೆ 350 ಜನರು ಮಾತ್ರ ಭಾಗಿಯಾಗಬೇಕು ಎಂದಿದ್ದು ನ್ಯಾಯಾಲಯ. ಆದ್ರೆ ನಾನೇ ಹೇಳಿದ್ದೇನೆ ಎನ್ನುವ ರೀತಿ ಪ್ರಿಯಾಂಕ್ ಖರ್ಗೆ ಸುಳ್ಳು ಹೇಳುತ್ತಿದ್ದಾರೆ. ಚಿತ್ತಾಪುರ ಪಥಸಂಚಲನ ವಿಚಾರದಲ್ಲಿ ಪ್ರಿಯಾಂಕ್ ಖರ್ಗೆ ಇರಲಾರದೆ ಇರುವೆ ಬಿಟ್ಟುಕೊಂಡಂತಾಗಿದೆ. ಈಗ ಇರುವೆಗಳು ಕಚ್ಚುತ್ತಿವೆ ಎಂದು ಲೇವಡಿ ಮಾಡಿದರು.
ಇನ್ನು 'ನಾನು ಹುತಾತ್ಮ, ಸೂಸೈಡ್ ಬಾಂಬರ್ ಅಲ್ಲ' ಎಂಬ ಭಯೋತ್ಪಾದಕ ಡಾ ಉಮರ್ ಹೇಳಿಕೆ ವಿಚಾರವಾಗಿ ಪ್ರತಿಕ್ರಿಯಿಸಿದ ಅವರು, ತೀರಿಕೊಂಡ ಮೇಲೆ ಎಲ್ಲರೂ ಹುತಾತ್ಮರೇ. ನಾವು ಇಂಥ ಘಟನೆಗಳನ್ನ ಧರ್ಮ, ಜಾತಿಗೆ ಹೋಲಿಕೆ ಮಾಡಬಾರದು. ಆದ್ರೆ ಇವರು ಪಾರ್ಲಿಮೆಂಟ್ ಮೇಲೆ ಅಟ್ಯಾಕ್ ಮಾಡಿದ್ರು. ಪುಲ್ವಾಮಾ ದಾಳಿ ಕೂಡ ಮಾಡಿದ್ದು ಇದೇ ಧರ್ಮದವರು. ಇದರಲ್ಲಿ ಧರ್ಮ ತರೋದು ಬೇಡ ಅಂದ್ರೆ ಏಕೆ ಇವೆಲ್ಲ ಭಯೋತ್ಪಾದನೆ ಕೃತ್ಯಗಳು ನಡೆಯುತ್ತಿರುವುದು, ಉಗ್ರರನ್ನೆಲ್ಲ ಹುತಾತ್ಮರು ಎಂದರೆ ಏನರ್ಥ? ದೇಶಕ್ಕೆ ಆಪತ್ತು ಬಂದಾಗ ಹೋರಾಟ ಮಾಡಿ ಬಲಿದಾನ ಮಾಡಿದ್ರೆ ಅದನ್ನ ಹುತಾತ್ಮ ಅನ್ನಬಹುದು. ಇದೇನಿದು ಅಮಾಯಕರನ್ನು ಕೊಲ್ಲುವುದು ಹುತಾತ್ಮ ಅನ್ನೋದು ಎಂದು ಕಿಡಿಕಾರಿದರು.
ಬೆಂಗಳೂರು ಮೆಟ್ರೋಗೆ ಬಾಂಬ್ ಬೆದರಿಕೆ: ಸರ್ಕಾರದ ವಿರುದ್ಧ ಚಲವಾದಿ ಕಿಡಿ
ದೆಹಲಿ ಬಾಂಬ್ ಸ್ಫೋಟ ಘಟನೆ ಬೆನ್ನಲ್ಲೇ ಇದೀಗ ಬೆಂಗಳೂರಿನ ಮೆಟ್ರೋ ರೈಲು ಕೂಡ ಸ್ಫೋಟಿಸುವುದಾಗಿ ಆಗಂತುಕನೊಬ್ಬ ಇಮೇಲ್ ಬೆದರಿಕೆ ಹಾಕಿರುವ ವಿಚಾರಕ್ಕೆ ಪ್ರತಿಕ್ರಿಯಿಸಿದ ಅವರು, ಬಾಂಬ್ ಬೆದರಿಕೆ ಸುಳ್ಳು ಬೆದರಿಕೆ ಇರಬಹುದು. ಇದೆಕ್ಕೆಲ್ಲ ಕಾರಣ ಆಡಳಿತ ಪಕ್ಷ, ಈ ರೀತಿ ಬಾಂಬ್ ಬೆದರಿಕೆ ಹಾಕುವವರಿಗೆ ಕಠಿಣ ಶಿಕ್ಷೆ ಕೊಟ್ರೆ ಇದೆಲ್ಲ ತಡೆಯಬಹುದು. ಆದರೆ ಈ ಸರ್ಕಾರ ಏನು ಮಾಡ್ತಿದೆ? ಯಾರನ್ನ ಬಂಧಿಸುತ್ತಿದೆ? ಸೋಷಿಯಲ್ ಮೀಡಿಯಾದಲ್ಲಿ ಬರೆದವರ ಮೇಲೆ ಕೇಸ್ ಹಾಕೋದು, ವಿಡಿಯೋ ಹರಿಬಿಟ್ಟವರ ಮೇಲೆ ಕೇಸ್ ಹಾಕೋದು ಬರೀ ಇದೇ ಕೆಲಸ. ಉಗ್ರರ ಮೇಲೆ ಯಾವ ಕ್ರಮ? ರಾಜ್ಯದಲ್ಲಿ ಅಮಾಯಕರ ಮೇಲೆ ದಾಳಿ, ಅತ್ಯಾ೧ಚಾರ, ಬಾಂಬ್ ಬೆದರಿಕೆ ಇಂತಹ ಕೃತ್ಯ ನಡೆದಾಗ ಈ ಸರ್ಕಾರ ಕಿವಿ ಕಣ್ಣು ಮುಚ್ಚಿಕೊಂಡು ಕೂತಿರುತ್ತೆ. ಸರ್ಕಾರವನ್ನ ಟೀಕಿಸುವವರ ವಿರುದ್ಧ ಸುಳ್ಳು ಕೇಸು ಹಾಕುವುದು, ಪೊಲೀಸರನ್ನ ಕಳಿಸಿ ಬಂಧಿಸುವ ಕೆಲಸ ಮಾಡುತ್ತೆ. ಇದು ಕಾಂಗ್ರೆಸ್ ಸರ್ಕಾರದ ಆಡಳಿತ ರೀತಿ. ಇದೇ ಕಾರಣಕ್ಕೆ ರಾಜ್ಯದಲ್ಲಿ ಕ್ರಿಮಿನಲ್‌ಗಳು, ಉಗ್ರರು, ಖದೀಮರು ರಾಜಾರೋಷವಾಗಿ ಕೃತ್ಯವೆಸಗುತ್ತಿದ್ದಾರೆ. ಅವರಿಗೆ ಈ ಸರ್ಕಾರದ ಮೇಲೆ ಯಾವ ರೀತಿಯೂ ಭಯ ಇಲ್ಲ ಬದಲಾಗಿ ಈ ಸರ್ಕಾರವೇ ತಮ್ಮ ರಕ್ಷಣೆ ಮಾಡುತ್ತೆ ಎಂಬ ಹುಂಬತನದಿಂದ ಹೀಗೆಲ್ಲ ಆಗುತ್ತಿದೆ ಎಂದು ವಾಗ್ದಾಳಿ ನಡೆಸಿದರು.
