ಕರ್ನಾಟಕದ ಗ್ರಾಮೀಣಾಭಿವೃದ್ಧಿ ಮತ್ತು ಪಂಚಾಯತ್ ರಾಜ್ ಸಚಿವ ಪ್ರಿಯಾಂಕ್ ಖರ್ಗೆಯವರನ್ನು ನಾಯಿಗೆ ಹೋಲಿಸಿ ವಿವಾದಕ್ಕೆ ಕಾರಣವಾಗಿದ್ದ ವಿಪಕ್ಷ ನಾಯಕ ಛಲವಾದಿ ನಾರಾಯಣಸ್ವಾಮಿ ಅವರು ಕಡೆಗೂ ತಮ್ಮ ಹೇಳಿಕೆಗೆ ವಿಷಾದ ವ್ಯಕ್ತಪಡಿಸಿದ್ದಾರೆ. ಚಿತ್ತಾಪೂರದ ಅತಿಥಿ ಗೃಹದಲ್ಲಿ ಕಳೆದ ಮೂರೂವರೆ ಗಂಟೆಗಳಿಂದ ದಿಗ್ಬಂಧನಕ್ಕೆ ಒಳಗಾಗಿರುವ ಛಲವಾದಿ, ತಮ್ಮ ಹೇಳಿಕೆಯನ್ನು ವಾಪಸ್ ತೆಗೆದುಕೊಂಡಿದ್ದಾರೆ.
ಕಲಬುರಗಿ (ಮೇ.21) ಕರ್ನಾಟಕದ ಗ್ರಾಮೀಣಾಭಿವೃದ್ಧಿ ಮತ್ತು ಪಂಚಾಯತ್ ರಾಜ್ ಸಚಿವ ಪ್ರಿಯಾಂಕ್ ಖರ್ಗೆಯವರನ್ನು ನಾಯಿಗೆ ಹೋಲಿಸಿ ವಿವಾದಕ್ಕೆ ಕಾರಣವಾಗಿದ್ದ ವಿಪಕ್ಷ ನಾಯಕ ಛಲವಾದಿ ನಾರಾಯಣಸ್ವಾಮಿ ಅವರು ಕಡೆಗೂ ತಮ್ಮ ಹೇಳಿಕೆಗೆ ವಿಷಾದ ವ್ಯಕ್ತಪಡಿಸಿದ್ದಾರೆ. ಚಿತ್ತಾಪೂರದ ಅತಿಥಿ ಗೃಹದಲ್ಲಿ ಕಳೆದ ಮೂರೂವರೆ ಗಂಟೆಗಳಿಂದ ದಿಗ್ಬಂಧನಕ್ಕೆ ಒಳಗಾಗಿರುವ ಛಲವಾದಿ, ತಮ್ಮ ಹೇಳಿಕೆಯನ್ನು ವಾಪಸ್ ತೆಗೆದುಕೊಂಡಿದ್ದಾರೆ.
ಪ್ರಿಯಾಂಕ್ ಖರ್ಗೆಯವರ ಹೆಸರನ್ನು ತೆಗೆದುಕೊಂಡು ಹೇಳಬಾರದಿತ್ತು. ನಮ್ಮ ನಾಯಕರಾದ ಯಡಿಯೂರಪ್ಪನವರು ಸೂಚಿಸಿದಂತೆ ಆ ಹೆಸರನ್ನು ವಾಪಸ್ ತೆಗೆದುಕೊಳ್ಳುತ್ತೇನೆ. ಇದರಿಂದ ಅವರಿಗೆ ನೋವಾಗಿದ್ದರೆ ವಿಷಾದ ವ್ಯಕ್ತಪಡಿಸುತ್ತೇನೆ ಎಂದು ಛಲವಾದಿ ನಾರಾಯಣಸ್ವಾಮಿ ಹೇಳಿದ್ದಾರೆ. ಆದರೆ, ಈ ವಿಷಾದದ ನಡುವೆಯೂ ಪ್ರಿಯಾಂಕ್ ಖರ್ಗೆಯವರ ಬೆಂಬಲಿಗರು ತೀವ್ರ ಪ್ರತಿಭಟನೆಯನ್ನು ಮುಂದುವರೆಸಿದ್ದಾರೆ.
ಪ್ರಿಯಾಂಕ್ ವಿರುದ್ಧ ಛಲವಾದಿ ಕಿಡಿ:
ನನ್ನ ಹೇಳಿಕೆಯಲ್ಲಿ ತಪ್ಪಿದ್ರೆ ಹೋರಾಟ ಮಾಡಲಿ ಆದರೆ ಈ ರೀತಿ ಬೆಂಬಲಿಗರ ಮುಂದೆ ಇಟ್ಟುಕೊಂಡು ಪ್ರತಿಭಟನೆ ನಡೆಸುವುದು ಅತಿಯಾಯ್ತು. ಇದೇನು ಪ್ರಜಾಪ್ರಭುತ್ವನಾ? ಎಂದು ಆಕ್ರೋಶ ವ್ಯಕ್ತಪಡಿಸಿದರು. ಪ್ರಿಯಾಂಕ್ ಖರ್ಗೆ ಯಾವತ್ತೂ ನನ್ನ ವಿರುದ್ಧ ಮಾತನಾಡಿಲ್ವ? ಪ್ರಧಾನಿ ವಿರುದ್ಧ ಬಾಯಿಗೆ ಬಂದಂತೆ ಮಾತನಾಡಿಲ್ಲವಾ? ಇವರು ಪ್ರಧಾನಿ ವಿರುದ್ಧ ಮಾತನಾಡ್ತಾರೆ. ತಮ್ಮ ವಿರುದ್ಧದ ಟೀಕೆ ಸಹಿಸಿಕೊಳ್ಳೋಕೆ ಆಗಲ್ಲ. ಇವರು ತಮ್ಮನ್ನು ಏನು ಅಂದುಕೊಂಡಿದ್ದಾರೆ? ರಾಜಕೀಯದಲ್ಲಿ ಇದೆಲ್ಲ ಸಹಜ, ಇದಕ್ಕೆ ಪ್ರತಿಭಟೆನ ಮಾಡೋದು ಸರಿಯಲ್ಲ ಎಂದು ವಾಗ್ದಾಳಿ ನಡೆಸಿದರು.
ಇದನ್ನೂ ಓದಿ: ರಾಜೀನಾಮೆ ಕೊಟ್ಟು ಮಾತಾಡಿ! ಛಲವಾದಿಗೆ ಸಚಿವ Priyank Kharge ಟಾಂಗ್ Priyank Kharge Vs Chalavadi Narayanaswamy
ನಾನು ಗಾದೆ ಮಾತು ಹೇಳಿದ್ದೇನೆ. ನನ್ನ ಮಾತು ಅಸಂವಿಧಾನಾತ್ಮಕವಾಗಿದ್ದರೆ ಪ್ರಿಯಾಂಕ್ ಖರ್ಗೆ ನಾಳೆಯೇ ನನ್ನ ಮೇಲೆ ಕೇಸ್ ಹಾಕಲಿ. ಸ್ವತಃ ಪ್ರಿಯಾಂಕ್ ಖರ್ಗೆ ಮಾತನಾಡಿ ನಿಮ್ಮ ಹೇಳಿಕೆಯಿಂದ ನನಗೆ ನೋವಾಗಿದೆ ಎಂದಿದ್ದರೆ ನಾನೇ ನನ್ನ ಮಾತು ವಾಪಸ್ ತಗೊಳ್ತೇನೆ. ಅದು ಬಿಟ್ಟು ಈ ರೀತಿ ಬೆಂಬಲಿಗರನ್ನ ಕಳುಹಿಸಿ ಹೋರಾಟ ಮಾಡಿಸ್ತೇನೆ ಅಂದರೆ ನಾನು ಇಂಥದಕ್ಕೆಲ್ಲ ಹೆದರೋ ಮಗ ಅಲ್ಲ ಎಂದು ಕಿಡಿಕಾರಿದರು. ಸದ್ಯ ಐಬಿಯಲ್ಲಿಯೇ ಕುಳಿತಿದ್ದಾರೆ.
ಕ್ಷಮೆ ಕೇಳುವಂತೆ ಖರ್ಗೆ ಬೆಂಬಲಿಗರು ಪಟ್ಟು:
ಛಲವಾದಿ ನಾರಾಯಣಸ್ವಾಮಿ ಅವರು ಕ್ಷಮೆ ಕೇಳಿದ್ದು ಸಾಲದು, ನಮ್ಮ ಮುಂದೆ ಖುದ್ದಾಗಿ ಕ್ಷಮೆಯಾಚಿಸಿ ತೆರಳಬೇಕು ಎಂದು ಪ್ರಿಯಾಂಕ್ ಖರ್ಗೆಯ ಬೆಂಬಲಿಗರು ಬಿಗಿಪಟ್ಟು ಹಿಡಿದಿದ್ದಾರೆ. ಕಳೆದ ಮೂರೂವರೆ ಗಂಟೆಗಳಿಂದ ಚಿತ್ತಾಪೂರದ ಅತಿಥಿ ಗೃಹದಲ್ಲಿ ಛಲವಾದಿಯವರನ್ನು ದಿಗ್ಬಂಧನದಲ್ಲಿಟ್ಟು ಪ್ರತಿಭಟನೆ ನಡೆಸುತ್ತಿದ್ದಾರೆ.
ಈ ಘಟನೆಯು ರಾಜಕೀಯ ವಲಯದಲ್ಲಿ ಭಾರೀ ಚರ್ಚೆಗೆ ಕಾರಣವಾಗಿದ್ದು, ಕಾಂಗ್ರೆಸ್ ಕಾರ್ಯಕರ್ತರು ಛಲವಾದಿಯವರ ಹೇಳಿಕೆಯನ್ನು ತೀವ್ರವಾಗಿ ಖಂಡಿಸಿದ್ದಾರೆ. 'ಭ್ರಷ್ಟ ಮತ್ತು ಅಸಂಸ್ಕೃತ ಬಿಜೆಪಿ ರಾಜಕೀಯಕ್ಕೆ ದಿಕ್ಕಾರ' ಎಂದು ಕಾಂಗ್ರೆಸ್ ಬೆಂಬಲಿಗರು ಘೋಷಣೆ ಕೂಗಿದ್ದಾರೆ.
ಪ್ರತಿಭಟನೆಯಿಂದ ಉಂಟಾದ ಉದ್ವಿಗ್ನ ವಾತಾವರಣದ ನಡುವೆ ಛಲವಾದಿ ನಾರಾಯಣಸ್ವಾಮಿ ಅವರು ಇನ್ನೂ ಅತಿಥಿ ಗೃಹದಲ್ಲಿಯೇ ಇದ್ದಾರೆ. ಪರಿಸ್ಥಿತಿಯನ್ನು ಶಾಂತಗೊಳಿಸಲು ಸ್ಥಳೀಯ ಪೊಲೀಸರು ಮತ್ತು ಆಡಳಿತವು ಪ್ರಯತ್ನಿಸುತ್ತಿದ್ದು, ಮುಂದಿನ ಕೆಲವು ಗಂಟೆಗಳಲ್ಲಿ ಈ ವಿವಾದ ಯಾವ ರೀತಿ ಬಗೆಹರಿಯಲಿದೆ ಎಂಬುದು ಕಾದುನೋಡಬೇಕಾಗಿದೆ.


