Asianet Suvarna News Asianet Suvarna News

ಚೈತ್ರಾ ಕುಂದಾಪುರ ಗ್ಯಾಂಗ್‌ನ ಆರೋಪಿ ಅಭಿನವ ಹಾಲಶ್ರೀ ಸ್ವಾಮೀಜಿ ಓರಿಸ್ಸಾದಲ್ಲಿ ಬಂಧನ

ಬಿಜೆಪಿ ಟಿಕೆಟ್‌ ಕೊಡಿಸುವುದಾಗಿ 5 ಕೋಟಿ ರೂ. ವಂಚನೆ ಮಾಡಿದ ಚೈತ್ರಾ ಕುಂದಾಪುರ ನೇತೃತ್ವದ ತಂಡದ ಎ3 ಆರೋಪಿ ಅಭಿನವ ಹಾಲಶ್ರೀ ಸ್ವಾಮೀಜಿಯನ್ನು ಪೊಲೀಸರು ಓಡಿಶಾದಲ್ಲಿ ಬಂಧಿಸಿದ್ದಾರೆ. 

Chaitra Kundapura gang accused Abhinava Halashree Swamiji arrested in Odisha sat
Author
First Published Sep 19, 2023, 11:21 AM IST

ಬೆಂಗಳೂರು (ಸೆ.19): ಉಡುಪಿಯ ಉದ್ಯಮಿ ಗೋವಿಂದಬಾಬು ಪೂಜಾರಿಗೆ ಬಿಜೆಪಿ ಟಿಕೆಟ್‌ ಕೊಡಿಸುವ ನಿಟ್ಟಿನಲ್ಲಿ 5 ಕೋಟಿ ರೂ. ವಂಚನೆ ಮಾಡಿದ ಚೈತ್ರಾ ಕುಂದಾಪುರ ನೇತೃತ್ವದ ತಂಡದ ಎ3 ಆರೋಪಿ ಹಿರೇಹಡಗಲಿಯ ಹಾಲಸ್ವಾಮಿ ಮಠದ ಅಭಿನವ ಹಾಲಶ್ರೀ ಸ್ವಾಮೀಜಿಯನ್ನು ಸಿಸಿಬಿ ಪೊಲೀಸರು ಓರಿಸ್ಸಾದಲ್ಲಿ ಬಂಧಿಸಿದ್ದಾರೆ.

ಚೈತ್ರಾ ಕುಂದಾಪುರ ಗ್ಯಾಂಗ್‌ನಿಂದ ವಂಚನೆ ಮಾಡಲಾದ 5 ಕೋಟಿ ರೂ. ಹಣದಲ್ಲಿ 1.5 ಕೋಟಿ ರೂ. ಹಣವನ್ನು ಈ ಅಭಿನವ ಹಾಲಶ್ರೀ ಸ್ವಾಮೀಜಿ ಪಡೆದುಕೊಂಡಿದ್ದಾರೆನ್ನಲ್ಲಾಗಿದೆ. ಈ ಪ್ರಕರಣದ ಹೊರಗೆ ಬರುತ್ತಿದ್ದಂತೆ ಹಾಲಶ್ರೀ ಸ್ವಾಮೀಜಿ ಅಜ್ಞಾತ ಸ್ಥಳಕ್ಕೆ ತೆರಳಿದ್ದರು. ಈ ಪ್ರಕರಣದ ಒಟ್ಟು 10 ಆರೋಪಿಗಳ ಪೈಕಿ 7 ಮಂದಿಯನ್ನು ಸಿಸಿಬಿ ಪೊಲೀಸರು ಬಂಧಿಸಿದ್ದಾರೆ. ಅವರನ್ನು ಕೋರ್ಟ್‌ ನಿರ್ದೇಶದನದ ಮೇರೆಗೆ ವಿಚಾರಣೆ ಮಾಡಲಾಗುತ್ತದೆ. ಆದರೆ, ಪೊಲೀಸರ ಬಂಧನದಿಂದ ತಪ್ಪಿಸಿಕೊಂಡಿದ್ದ ಅಭಿನವ ಸ್ವಾಮೀಜಿ ಅಜ್ಞಾತ ಸ್ಥಳದಲ್ಲಿದ್ದುಕೊಂಡೇ ಜಾಮೀನಿಗಾಗಿ ನ್ಯಾಯಾಲಯ ಮೊರೆ ಹೋಗಿದ್ದರು. ಆದರೆ, ಬೇಲ್ ನೀಡಲು ಕೋರ್ಟ್‌ ನಿರಾಕರಣೆ ಮಾಡಿತ್ತು. ಇದಾದ ನಂತರ ಮೈಸೂರು, ಬೆಂಗಳೂರು, ವಿಜಯನಗರ ಜಿಲ್ಲೆಯ ಹಡಗಲಿ ಸೇರಿದಂತೆ ಎಲ್ಲೆಡೆ ಸ್ವಾಮೀಜಿಗಾಗಿ ಸಿಸಿಬಿ ಪೊಲೀಸರು ಶೋಧನೆ ಮಾಡಿದ್ದರು. 

ಹಣ ವಾಪಸ್ ಕೇಳಿದ ಗೋವಿಂದ ಬಾಬು ವಿರುದ್ದ ಚೈತ್ರಾ ಹೈಡ್ರಾಮ, ಐಟಿ ಇಡಿಗೆ ದೂರು!

ಟೀಶರ್ಟ್‌ ಧರಿಸಿ ರೈಲಿನಲ್ಲಿ ಹೋಗ್ತಿದ್ದ ಸ್ವಾಮೀಜಿ, ಸಿನಿಮೀಯ ಶೈಲಿಯಲ್ಲಿ ಬಂಧನ: ಇನ್ನು ಕರ್ನಾಟಕದ ಮೈಸೂರಿಗೆ ಹೋಗಿದ್ದ ಸ್ವಾಮೀಜಿ ಅಲ್ಲಿಂದ ಕಾರಿನಲ್ಲಿ ಆಂಧ್ರಪ್ರದೇಶಕ್ಕೆ ತೆರಳಿದ್ದರು. ಅಲ್ಲಿನ ಹೈದರಾಬಾದ್‌ ವಿಮಾನ ನಿಲ್ದಾಣದಿಂದ ಓಡಿಶಾದ ಕಟಕ್‌ಗೆ ತೆರಳಿದ್ದರು, ಸ್ವಾಮೀಜಿ ಟೀಶರ್ಟ್‌ ಧರಿಸಿ ಸಾಮಾನ್ಯ ವ್ಯಕ್ತಿಯಂತೆ ರೈಲಿನಲ್ಲಿ ಬೇರೊಬ್ಬನ ಜೊತೆಗೆ ಪ್ರಯಾಣ ಮಾಡುತ್ತಿದ್ದರು. ಒಡಿಶಾದ ಪೊಲೀಸರ ಸಹಾಯದಿಂದ ಕರ್ನಾಟಕದ ಸಿಸಿಬಿ ಪೊಲೀಸರು ಸ್ವಾಮೀಜಿಯನ್ನು ಸಿನಿಮೀಯ ಶೈಲಿಯಲ್ಲಿ ಓಡಿಸಿಕೊಂಡು ಹೋಗಿ ಬಂಧಿಸಿದ್ದಾರೆ. ಇನ್ನು ಒಡಿಶಾದ ಕಟಕ್‌ನಿಂದ ಈಶಾನ್ಯ ರಾಜ್ಯಗಳಿಗೆ ಹೋಗುವ ರೈಲಿನಲ್ಲಿ ಸ್ವಾಮೀಜಿ ಬಂಧನವಾಗಿದ್ದು, ಮಧ್ಯಾಹ್ನ 1.30ರ ವಿಮಾನದಲ್ಲಿ ಬೆಂಗಳೂರಿಗೆ ಕರೆತರಲಿದ್ದಾರೆ.

ಉಡುಪಿ ಕೇಸ್‌ ದಾಖಲಾಗುವ ಮೊದಲೇ ದೂರು ನೀಡಿದ್ದ ಅಭಿನವ ಸ್ವಾಮೀಜಿ: ಉಡುಪಿಯಲ್ಲಿ ವಂಚನೆಗೊಳಗಾದ ಉದ್ಯಮಿ ಗೋವಿಂದಬಾಬು ಪೂಜಾರಿ ದೂರು ನೀಡುವ ಮೊದಲೇ, ಅಭಿನವ ಹಾಲಶ್ರೀ ಸ್ವಾಮೀಜಿ ಬೆಂಗಳೂರಿನಲ್ಲಿ ದೂರು ದಾಖಲಿಸಿದ್ದರು.  ರಾಜರಾಜೇಶ್ವರಿ ನಗರ ಸಮೀಪದ ಕೆಂಚೇನಹಳ್ಳಿಯ ಪ್ರೀಮಿಯರ್‌ ಟೆಂಪಲ್ ಬೆಲ್ಸ್‌ ಅಪಾರ್ಟ್‌ಮೆಂಟ್‌ನಲ್ಲಿ ಹಾಲಶ್ರೀ ನೆಲೆಸಿದ್ದರು. ಜು.11ರಂದು ಆರ್‌.ಆರ್‌.ನಗರ ಠಾಣೆಗೆ ತೆರಳಿದ ಸ್ವಾಮೀಜಿ, ತಮ್ಮ ಮೇಲೆ ಸಾಮಾಜಿಕ ಜಾಲತಾಣಗಳಲ್ಲಿ ಬಿಜೆಪಿ ಟಿಕೆಟ್ ಕೊಡಿಸುವುದಾಗಿ ನಂಬಿಸಿ ವಂಚನೆ ಮಾಡಿದ್ದಾರೆ ಎಂದು ಇಲ್ಲಸಲ್ಲದ ಆರೋಪ ಮಾಡಿ ತೇಜೋವಧೆ ಮಾಡುತ್ತಿದ್ದಾರೆ ಎಂದು ದೂರು ನೀಡಿದ್ದರು. ಈ ದೂರಿನಲ್ಲಿ ಸಾಮಾಜಿಕ ಕಾರ್ಯಕರ್ತ ಸೀನಪ್ಪ ಶೆಟ್ಟಿ, ಉಡುಪಿಯ ಕಾಂಗ್ರೆಸ್ ಪಕ್ಷದ ಸೇವಾ ದಳ (ಸಾಮಾಜಿಕ ಜಾಲತಾಣ)ದ ಸಂಚಾಲಕ ಹರ್ಷ ಮೆಂಡನ್‌, ದಿನೇಶ್ ನಾಯ್ಕ್ ಹಳ್ಳಿಹೊಳಿ ಹಾಗೂ ಗೋವಿಂದ ಪೂಜಾರಿ ಅವರ ಹೆಸರು ಉಲ್ಲೇಖಿಸಿ ಕಾನೂನು ಕ್ರಮ ಜರುಗಿಸಬೇಕು ಎಂದು ಹಾಲಶ್ರೀ ಒತ್ತಾಯಿಸಿದ್ದರು.

Follow Us:
Download App:
  • android
  • ios