Asianet Suvarna News Asianet Suvarna News

ಆರ್‌ಎಸ್‌ಎಸ್- ಬಿಜೆಪಿ ನಾಯಕರ ಹೆಸರಲ್ಲಿ ಹಲವರಿಗೆ "ಟೋಪಿ" ಹಾಕಿದ್ದ ಚೈತ್ರಾ ಕುಂದಾಪುರ?

ಬೈಂದೂರು ಕ್ಷೇತ್ರದ ಟಿಕೆಟ್ ಕೊಡಿಸುವುದಾಗಿ ಉದ್ಯಮಿ ಗೋವಿಂದಬಾಬು ಪೂಜಾರಿ ಅವರಿಂದ 5 ಕೋಟಿ ರು ಪಡೆದು ಚೈತ್ರಾ ಗ್ಯಾಂಗ್ ವಂಚಿಸಿದೆ. ಈ ಕೃತ್ಯವು ವೃತ್ತಿಪರ ಕ್ರಿಮಿನಲ್‌ಗಳ ರೀತಿಯಲ್ಲೇ ಸಂಚು ರೂಪಿಸಿ ಆಕೆ ಕಾರ್ಯಗತಗೊಳಿಸಿದ್ದಳು. ಈ ಹಿನ್ನಲೆಯಲ್ಲಿ ಇದೇ ರೀತಿ ಹಲವು ಮಂದಿಗೆ ಆರೋಪಿಗಳು ಮೋಸ ಮಾಡಿರುವ ಬಗ್ಗೆ ಅನುಮಾನವಿದೆ ಎಂದು ಅಧಿಕಾರಿಗಳು ಹೇಳಿದ್ದಾರೆ.

Chaitra Kundapura Cheat to Some People in the Name of RSS BJP Leaders in Karnataka grg
Author
First Published Sep 14, 2023, 6:35 AM IST

ಬೆಂಗಳೂರು(ಸೆ.14):  ''''ಬಿಜೆಪಿ ಟಿಕೆಟ್‌ ಡೀಲ್‌'''' ಕೃತ್ಯ ಬೆಳಕಿಗೆ ಬಂದ ಬೆನ್ನಲ್ಲೇ ಆರ್‌ಎಸ್‌ಎಸ್ ಹಾಗೂ ಬಿಜೆಪಿ ನಾಯಕರ ಹೆಸರಿನಲ್ಲಿ ಹಲವು ಜನರಿಗೆ ಹಿಂದೂಪರ ಸಂಘಟನೆ ಕಾರ್ಯಕರ್ತೆ ಚೈತ್ರಾ ಗ್ಯಾಂಗ್ ವಂಚಿಸಿರುವ ಬಗ್ಗೆ ಪೊಲೀಸರು ಶಂಕಿಸಿದ್ದಾರೆ.

ಬೈಂದೂರು ಕ್ಷೇತ್ರದ ಟಿಕೆಟ್ ಕೊಡಿಸುವುದಾಗಿ ಉದ್ಯಮಿ ಗೋವಿಂದಬಾಬು ಪೂಜಾರಿ ಅವರಿಂದ 5 ಕೋಟಿ ರು ಪಡೆದು ಚೈತ್ರಾ ಗ್ಯಾಂಗ್ ವಂಚಿಸಿದೆ. ಈ ಕೃತ್ಯವು ವೃತ್ತಿಪರ ಕ್ರಿಮಿನಲ್‌ಗಳ ರೀತಿಯಲ್ಲೇ ಸಂಚು ರೂಪಿಸಿ ಆಕೆ ಕಾರ್ಯಗತಗೊಳಿಸಿದ್ದಳು. ಈ ಹಿನ್ನಲೆಯಲ್ಲಿ ಇದೇ ರೀತಿ ಹಲವು ಮಂದಿಗೆ ಆರೋಪಿಗಳು ಮೋಸ ಮಾಡಿರುವ ಬಗ್ಗೆ ಅನುಮಾನವಿದೆ ಎಂದು ಅಧಿಕಾರಿಗಳು ಹೇಳಿದ್ದಾರೆ. ಚೈತ್ರಾ ಗ್ಯಾಂಗ್‌ನಿಂದ ಮೋಸ ಹೋಗಿರುವ ಬಗ್ಗೆ ದೂರು ಬಂದರೆ ಕಾನೂನು ರೀತಿ ಕ್ರಮ ಜರುಗಿಸುತ್ತೇವೆ ಎಂದು ಅಧಿಕಾರಿಗಳು ತಿಳಿಸಿದ್ದಾರೆ.

ಕಬಾಬ್ ಮಾರಾಟಗಾರನನ್ನು ಕೇಂದ್ರ ಬಿಜೆಪಿ ನಾಯಕ ಎಂದು ಬಿಂಬಿಸಿದ್ದ ಚೈತ್ರಾ ಕುಂದಾಪುರ!

ಕಣ್ಣೀರು ಸುರಿಸಿ ಚೈತ್ರಾ ನಾಟಕ!

ಮೋಸದ ಜಾಲದ ಸುಳಿಯಲ್ಲಿ ಸಿಲುಕಿರುವ ಚೈತ್ರಾ, ಪೊಲೀಸರು ಹಾಗೂ ನ್ಯಾಯಾಲಯದಲ್ಲಿ ಕಣ್ಣೀರು ಸುರಿಸಿ ತಾನು ಅಮಾಯಕಳು ಎಂದು ಬಿಂಬಿಸಿಕೊಳ್ಳಲು ಯತ್ನಿಸಿರುವ ಸಂಗತಿ ನಡೆದಿದೆ. ಉಡುಪಿಯಲ್ಲಿ ಬಂಧಿಸುವ ವೇಳೆ ತಾನು ಮೋಸ ಮಾಡಿಲ್ಲ. ಸುಳ್ಳು ಆರೋಪ ಮಾಡಿದ್ದಾರೆ ಎಂದು ಸಿಸಿಬಿ ಪೊಲೀಸರ ಮುಂದೆ ಆಕೆ ಕಣ್ಣೀರಿಟ್ಟಿದ್ದಳು. ಅದೇ ರೀತಿ ನಗರದ ನ್ಯಾಯಾಲಯಕ್ಕೆ ಹಾಜರುಪಡಿಸಿದಾಗ ಆಕೆ ಅಳುತ್ತಲೇ ಇದ್ದಳು ಎಂದು ಮೂಲಗಳು ಹೇಳಿವೆ.

ಪತ್ರಿಕೋದ್ಯಮ ಸ್ನಾತಕೋತ್ತರ ಪದವಿಧರೆ, ಪ್ರಖರ ಭಾಷಣಗಾರ್ತಿ

ಉಡುಪಿ: ಚೈತ್ರಾ ಕುಂದಾಪುರ ಅವರು ಮೂಲತಃ ಕುಂದಾಪುರದವರು. ಮಂಗಳೂರು ವಿಶ್ವವಿದ್ಯಾನಿಲಯದಲ್ಲಿ 2013-2015ನೇ ಬ್ಯಾಚಿನಲ್ಲಿ ಸಮೂಹ ಸಂವಹನ ಮತ್ತು ಪತ್ರಿಕೋದ್ಯಮ ವ್ಯಾಸಂಗ ಪೂರೈಸಿದ್ದಾರೆ. ಸ್ನಾತಕೋತ್ತರ ಪದವಿ ಪಡೆದ ಬಳಿಕ ‘ಉದಯವಾಣಿ’ ಪತ್ರಿಕೆಯಲ್ಲಿ ಉಪಸಂಪಾದಕಿಯಾಗಿ, ಉಡುಪಿಯ ‘ಸ್ಪಂದನ’ ಸುದ್ದಿವಾಹಿನಿಯಲ್ಲಿ ನಿರೂಪಕಿಯಾಗಿ, ಉಡುಪಿಯ ಅಜ್ಜರಕಾಡು ಸರ್ಕಾರಿ ಪ್ರಥಮ ದರ್ಜೆ ಕಾಲೇಜಿನಲ್ಲಿ ಉಪನ್ಯಾಸಕಿಯಾಗಿ ಕಾರ್ಯ ನಿರ್ವಹಿಸಿದ ಅನುಭವ ಹೊಂದಿದ್ದಾರೆ.

ಮಾಧ್ಯಮ ಕ್ಷೇತ್ರದಲ್ಲಿನ ಸಾಧನೆಗಾಗಿ ‘ಯುವ ಮಾಧ್ಯಮ ರತ್ನ ಪ್ರಶಸ್ತಿ’ ಪಡೆದಿರುವ ಅವರು, ‘ಪ್ರೇಮ ಪಾಶ’ ಎಂಬ ಪುಸ್ತಕವನ್ನೂ ಪ್ರಕಟಿಸಿದ್ದಾರೆ. ವಿ.ವಿ. ವಿದ್ಯಾರ್ಥಿನಿಯಾಗಿದ್ದಾಗಲೂ ಹೋರಾಟಗಳಲ್ಲಿ ಪಾಲ್ಗೊಂಡಿದ್ದರು. ಅಖಿಲ ಭಾರತೀಯ ವಿದ್ಯಾರ್ಥಿ ಪರಿಷತ್‌ ಸಂಪರ್ಕದಿಂದ ಸಾಕಷ್ಟು ಹೋರಾಟಗಳಲ್ಲಿ ಪಾಲ್ಗೊಂಡಿದ್ದರು.

ಪ್ರಖರ ಭಾಷಣಗಾರ್ತಿಯಾಗಿರುವ ಇವರು, ಹಲವು ಹಿಂದೂಪರ ಸಮಾವೇಶಗಳಲ್ಲೂ ಭಾಷಣಗಳನ್ನು ಮಾಡಿ ಗಮನ ಸೆಳೆದಿದ್ದರು. ಇವರ ಭಾಷಣಗಳು ವಿವಾದದ ಕಿಡಿಗಳನ್ನೂ ಹೊತ್ತಿಸಿವೆ. ಸಾಮಾಜಿಕ ಚಟುವಟಿಕೆಗಳಲ್ಲೂ ತೊಡಗಿಸಿಕೊಂಡಿದ್ದರು. ತಮ್ಮ ಭಾಷಣ ಹಾಗೂ ಬರಹಗಳಿಂದಾಗಿ ಅವರು ಅಪಾರ ಅಭಿಮಾನಿಗಳನ್ನು ಹೊಂದಿದ್ದಾರೆ.

ಚೈತ್ರಾ ಮಾತಿಗೆ ಮರುಳಾಗಿ 5 ಕೋಟಿ ರೂ ಕಳೆದುಕೊಂಡ ಉದ್ಯಮಿ ಹಿಂದಿನ ರೋಚಕ ಕಹಾನಿ!

ಪೂಜಾರಿಗೆ ಚೈತ್ರಾ ಪರಿಚಯ ಮಾಡಿಸಿದ್ದೆ: ಪ್ರಸಾದ್‌ ಒಪ್ಪಿಗೆ

ಬೆಂಗಳೂರು: ಬಿಜೆಪಿ ಟಿಕೆಟ್ ವಿಚಾರವಾಗಿ ಉದ್ಯಮಿ ಗೋವಿಂದಬಾಬು ಪೂಜಾರಿ ಅವರಿಗೆ ಚೈತ್ರಾ ಕುಂದಾಪುರಳನ್ನು ಪರಿಚಯಿಸಿದ್ದನ್ನು ಬೈಂದೂರಿನ ಹಿಂದೂ ಪರ ಸಂಘಟನೆ ಕಾರ್ಯಕರ್ತ ಪ್ರಸಾದ್ ಒಪ್ಪಿಕೊಂಡಿದ್ದಾನೆ. ಆದರೆ ಚೈತ್ರಾ ಮೋಸದ ಬಗ್ಗೆ ಗೊತ್ತಿರಲಿಲ್ಲ ಎಂದು ಸ್ಪಷ್ಟಪಡಿಸಿದ್ದಾನೆ.

ಈ ವಂಚನೆ ಸಂಬಂಧ ಮಾಧ್ಯಮಗಳಿಗೆ ಪ್ರತಿಕ್ರಿಯಿಸಿದ ಪ್ರಸಾದ್‌, ತಾನೇ ಚೈತ್ರಾ ಕುಂದಾಪುರಳಿಗೆ ಪ್ರಸಾದ್ ಅವರನ್ನು ಪರಿಚಯಿಸಿದ್ದೆ. ಆದರೆ ನನ್ನನ್ನು ಸಹ ಪ್ರಕರಣದಲ್ಲಿ ಆರೋಪಿ ಮಾಡಿದ್ದಾರೆ ಎಂದು ಬೇಸರ ವ್ಯಕ್ತಪಡಿಸಿದ್ದಾರೆ.
ಬೈಂದೂರಿನಲ್ಲಿ ಸಾಮಾಜಿಕ ಸೇವೆ ಮೂಲಕ ಪೂಜಾರಿ ಹೆಸರು ಮಾಡಿದ್ದರು. ಹೀಗಾಗಿ ನಾವು ಅವರಿಗೆ ಮುಂದಿನ ವಿಧಾನಸಭಾ ಚುನಾವಣೆಯಲ್ಲಿ ಸ್ಪರ್ಧಿಸುವಂತೆ ಹೇಳಿದ್ದವು. ಆಗ ಬಿಜೆಪಿ ಟಿಕೆಟ್ ಪಡೆಯಲು ಆರ್‌ಎಸ್‌ಎಸ್ ಹಾಗೂ ಬಿಜೆಪಿ ನಾಯಕರ ಸಂಪರ್ಕ ಬಳಸಿಕೊಳ್ಳಲು ಯೋಚಿಸಿ ಚೈತ್ರಾಳಿಗೆ ಪೂಜಾರಿ ಅವರನ್ನು ಚೈತ್ರಾಳಿಗೆ ಪರಿಚಯ ಮಾಡಿಸಿದ್ದೆ. ಆದರೆ ನನಗೆ ಈ ಮೋಸದ ಬಗ್ಗೆ ಗೊತ್ತಿರಲಿಲ್ಲ ಎಂದು ಪ್ರಸಾದ್ ಹೇಳಿಕೊಂಡಿದ್ದಾರೆ.

Follow Us:
Download App:
  • android
  • ios