Asianet Suvarna News Asianet Suvarna News

ಲಾಕ್‌ಡೌನ್‌: ರಾಜ್ಯದ ವಲಸಿಗರಿಗಾಗಿ ಸೆಲ್ಕೋ ಫೌಂಡೇಶನ್‍ನಿಂದ 2 ಕೋಟಿ ರು. ಪ್ಯಾಕೇಜ್

ಬಡವರ ಬದುಕಿಗೆ ಭದ್ರತೆ ನೀಡುವ ಯೋಜನೆ| ಕನಿಷ್ಠ ಸಾವಿರ ಜನರಿಗೆ ನೆರವಾಗುವ ಭರವಸೆ|ಸ್ವಾವಲಂಬಿ ಬದುಕಿಗೆ ಆಧಾರವಾಗುವ ಯೋಜನೆ| ಉತ್ತರ ಕರ್ನಾಟಕದ ವಲಸಿಗರಲ್ಲಿ ಸುಮಾರು ನೂರಕ್ಕೂ ಹೆಚ್ಚು ಅತ್ಯಂತ ಅಗತ್ಯವಿರುವ ಹಳ್ಳಿಗಳ, ಕಿರು ಪಟ್ಟಣಗಳ, ಕೊಳಗೇರಿಗಳ, ಸಣ್ಣ ಸಣ್ಣ ಅಂಗಡಿಗಳ ಅಥವಾ ಕುಶಲಕರ್ಮಿಗಳನ್ನು ಈ ಯೋಜನೆಗೆ ಆಯ್ಕೆ ಮಾಡಲಾಗುತ್ತದೆ|

Chairman Of he Selco Firm Harish Hande says Two crore Package of Migrant Workers
Author
Bengaluru, First Published Jun 3, 2020, 2:06 PM IST | Last Updated Jun 3, 2020, 2:06 PM IST

ಬೆಂಗಳೂರು(ಜೂ.03): ಕೊರೋನಾ ಸೃಷ್ಟಿಸಿದ ಆತಂಕ, ಅಭದ್ರತೆಯಿಂದ ಕಂಗಾಲಾಗಿರುವ ರಾಜ್ಯದ ವಲಸಿಗರ ನೆರವಿಗೆ ಸೆಲ್ಕೋ ಫೌಂಡೇಶನ್ ಮುಂದಾಗಿದೆ. ಅವರವರ ಪರಿಣತಿಯ ಉದ್ಯೋಗದಲ್ಲೇ ಭರವಸೆ ಮೂಡಿಸಿ ಹಾಗೂ ನಿರಂತರ ಜೀವನೋತ್ಸಾಹ ತುಂಬಲು ಸೆಲ್ಕೋ ಎರಡು ಕೋಟಿ ರೂ.ಗಳ ವಿಶೇಷ ಯೋಜನೆಯೊಂದನ್ನು ರೂಪಿಸಿದೆ ಎಂದು  ಎಂದು ಸೆಲ್ಕೋ ಸಂಸ್ಥೆಯ ಚೇರ್ಮನ್ ಡಾ.ಹರೀಶ್ ಹಂದೆ ತಿಳಿಸಿದ್ದಾರೆ.

ಇಂದು(ಬುಧವಾರ) ನಗರದಲ್ಲಿ ಮಾಧ್ಯಮದವರ ಜೊತೆ ಮಾತನಾಡಿದ ಅವರು, ರಾಷ್ಟ್ರ ಮತ್ತು ರಾಜ್ಯದಲ್ಲಿ ಉಂಟಾದ ಪ್ರಕೃತಿ ವಿಕೋಪದ ಸಂದರ್ಭಗಳಲ್ಲೆಲ್ಲ ಸೆಲ್ಕೋ ಸಂಸ್ಥೆ ಸ್ಪಂದಿಸುತ್ತಲೇ ಬಂದಿದೆ. ಈಗ ಲಾಕ್‌ಡೌನ್‌ನಿಂದ ಸಂಕಷ್ಟದಲ್ಲಿರುವ ವಲಸಿಗರು, ಸಣ್ಣ ವ್ಯಾಪಾರಸ್ಥರು, ಕಿರು ಉದ್ದಿಮೆದಾರರು, ಕುಶಲಕರ್ಮಿಗಳಿಗೆ ನೆರವಾಗಲು ಈ ವಿಶೇಷ ನೆರವು ಯೋಜನೆ ರೂಪಿಸಿದೆ ಎಂದು ಅವರು ಹೇಳಿದ್ದಾರೆ.

ಲಾಕ್‌ಡೌನ್‌ ಎಫೆಕ್ಟ್‌: ಬಡವರ ನೋವಿಗೆ ಮಿಡಿದ ಹುಚ್ಚ ವೆಂಕಟ್‌, ದಿನಸಿ ಕಿಟ್‌ ವಿತರಣೆ

ರಾಜ್ಯದ ಅದರಲ್ಲೂ ವಿಶೇಷವಾಗಿ ಉತ್ತರ ಕರ್ನಾಟಕದ ವಲಸಿಗರಲ್ಲಿ ಸುಮಾರು ನೂರಕ್ಕೂ ಹೆಚ್ಚು ಅತ್ಯಂತ ಅಗತ್ಯವಿರುವ ಹಳ್ಳಿಗಳ, ಕಿರು ಪಟ್ಟಣಗಳ, ಕೊಳಗೇರಿಗಳ, ಸಣ್ಣ ಸಣ್ಣ ಅಂಗಡಿಗಳ ಅಥವಾ ಕುಶಲಕರ್ಮಿಗಳನ್ನು ಈ ಯೋಜನೆಗೆ ಆಯ್ಕೆ ಮಾಡಲಾಗುತ್ತದೆ. ಅವರಿಗೆ ಸುಮಾರು 50 ಸಾವಿರದಿಂದ ಎರಡು ಲಕ್ಷದವರೆಗೂ ಬಂಡವಾಳದ ಸಹಾಯ ಸೌಲಭ್ಯ ನೀಡುವುದಲ್ಲದೆ, ಕೋವಿಡ್ ನಂತರ ಅವರ ವೃತ್ತಿ ಹೇಗಿರಬೇಕೆಂದು ವಿನ್ಯಾಸಗೊಳಿಸಲಾಗುತ್ತದೆ. ಇದಕ್ಕಾಗಿಯೇ ವಿಶೇಷ ತಜ್ಞರ ತಂಡ ಅವರ ಅಗತ್ಯಗಳನ್ನು ಪರಿಶೀಲಿಸಿ ನೆರವು ನೀಡಲಿದೆ ಎಂದು ವಿವರಿಸಿದ್ದಾರೆ.

ಸ್ವಾವಲಂಬಿ ಬದುಕು:

ಕಿರು ವ್ಯವಹಾರ, ಗುಡಿ ಕೈಗಾರಿಕೆಗಳಿಗೆ ಹೊಸತನದ ಸ್ಪರ್ಶ ನೀಡುವ ಯೋಜನೆ ಇದಾಗಿದ್ದು, ಈ ಯೋಜನೆಯಿಂದ ದೃಢವಾದ ಉದ್ಯಮ , ಉದ್ಯಮಿ ಹಾಗೂ ಗ್ರಾಹಕರು ಸುರಕ್ಷಿತವಾಗಿರುವ ನಿಟ್ಟಿನಲ್ಲಿ ನಾವು ಕಾರ್ಯ ನಿರ್ವಹಿಸಲಿದ್ದೇವೆಂದು ಸೆಲ್ಕೋ ಫೌಂಡೇಶನ್‍ನ ನಿರ್ದೇಶಕಿ ಹುದಾ ಜಾಫರ್ ತಿಳಿಸಿದ್ದಾರೆ. 

ಯೋಜನೆಗೆ ಆಯ್ಕೆಯಾದವರು ಒಂದು ವರ್ಷ ಸಂಸ್ಥೆಯ ನಿರೀಕ್ಷಕರ ಮಾರ್ಗದರ್ಶನದಲ್ಲಿರುತ್ತಾರೆ. ಇದರಿಂದಾಗಿ ಸ್ವಾವಲಂಬಿ ಬದುಕಿಗೆ ಭದ್ರ ನೆಲೆ ಸಿಕ್ಕಂತಾಗುತ್ತದೆ. ಉದ್ಯಮದ ರಕ್ಷಣೆಯಾಗುತ್ತದೆ. ಗ್ರಾಹಕರಿಗೂ ಕೋವಿಡ್ ನಂತರದ ದಿನದ ಸುರಕ್ಷಾ ಕ್ರಮಗಳಿಂದಾಗಿ ಆ ವ್ಯಾಪಾರಸ್ಥರ ಮೇಲೆ ಭರವಸೆ ಉಂಟಾಗುತ್ತದೆ. ಅವರ ಆದಾಯವೂ ಹೆಚ್ಚುತ್ತದೆ. ಜೊತೆಗೆ ಇದನ್ನು ನೋಡಿ ಬ್ಯಾಂಕ್ ಗಳು, ಸರ್ಕಾರಿ ಸಂಸ್ಥೆಗಳು ಅಥವಾ ಸಹಕಾರಿ ಸಂಘ ಸಂಸ್ಥೆಗಳು ನೆರವಾದರೆ ಇನ್ನೂ ಹೆಚ್ಚು ಜನರಿಗೆ ಈ ಮಾದರಿಯನ್ನು  ವಿಸ್ತರಿಸಬಹುದಾಗಿದೆ ಎಂದೂ ಅವರು ಅಭಿಪ್ರಾಯಪಟ್ಟಿದ್ದಾರೆ.

ನಮ್ಮೊಂದಿಗೆ ಕೈಜೋಡಿಸಿ

ಕೊರೋನಾದಿಂದಾಗಿ ತಮ್ಮ ತಮ್ಮ ಗ್ರಾಮ, ಪಟ್ಟಣಗಳಿಗೆ ಹಿಂತಿರುಗಿದ ವಲಸಿಗರಿಗಾಗಿಯೇ ಯೋಜಿಸಿ ರೂಪಿಸಿದ ಈ ಯೋಜನೆ ಅವರ ಬದುಕಲ್ಲಿ ಹೊಸ ಭರವಸೆ ಮೂಡಬಹುದೆಂಬ ನಿರೀಕ್ಷೆಯಲ್ಲಿದ್ದೇವೆ. ಮುಖ್ಯಮಂತ್ರಿಗಳು, ಪ್ರತಿ ಸಚಿವರು, ಶಾಸಕರು, ಸರ್ಕಾರಿ ಅಧಿಕಾರಿಗಳು ನಮ್ಮೊಂದಿಗೆ ಸಕಾರಾತ್ಮಕವಾಗಿ ಸ್ಪಂದಿಸಿದರೆ ಈ ಯೋಜನೆಯಿಂದ ಇನ್ನಷ್ಟು ಸಾಧನೆ ಸಾಧ್ಯ. ಇದು ನಮ್ಮ ಪ್ರಯೋಗ ಮಾತ್ರ. ಹಾಗಾಗಿ, ಎರಡು ಕೋಟಿ ರೂ.ಗಳನ್ನು ಇದಕ್ಕಾಗಿ ತೆಗೆದಿರಿಸಿದ್ದೇವೆ. ಇದು ಭವಿಷ್ಯದ ಸಹಜ ಕ್ರಮ ಆಗಲಿ ಎಂಬುದು ನಮ್ಮ ಆಶಯವಾಗಿದೆ ಎಂದು ಛೇರ್ಮನ್ ಸೆಲ್ಕೋ ಫೌಂಡೇಶನ್‌ನ ಸೌರ ವಿಜ್ಞಾನಿ ಡಾ. ಹರೀಶ್ ಹಂದೆ ಅವರು ಹೇಳಿದ್ದಾರೆ. 
 

Latest Videos
Follow Us:
Download App:
  • android
  • ios