ಮಹದಾಯಿ (ಕಳಸಾ ಬಂಡೂರಿ) ಕುಡಿವ ನೀರಿನ ಯೋಜನೆಗೆ ಕೇಂದ್ರ ಪರಿಸರ ಸಚಿವಾಲಯ ಅನುಮೋದನೆ ನೀಡಿದ್ದಕ್ಕೆ ಗೋವಾದಲ್ಲಿ ವ್ಯಾಪಕ ಆಕ್ರೋಶ ವ್ಯಕ್ತವಾಗಿದೆ. ಮುಖ್ಯಮಂತ್ರಿ (ಪ್ರಮೋದ್‌ ಸಾವಂತ್‌) ಈ ಬಗ್ಗೆ ಏನು ಹೇಳುತ್ತಾರೆ? ಅವರು ತಮ್ಮ ನಿಲುವು ಸ್ಪಷ್ಟಪಡಿಸಬೇಕು’ ಎಂದು ಗೋವಾ ಫಾರ್ವರ್ಡ್‌ ಪಕ್ಷ ಹೇಳಿಕೆ ಬಿಡುಗಡೆ ಮಾಡಿದೆ.

ಪಣಜಿ(ಅ.24):  ಮಹದಾಯಿ (ಕಳಸಾ ಬಂಡೂರಿ) ಕುಡಿವ ನೀರಿನ ಯೋಜನೆಗೆ ಕೇಂದ್ರ ಪರಿಸರ ಸಚಿವಾಲಯ ಅನುಮೋದನೆ ನೀಡಿದ್ದಕ್ಕೆ ಗೋವಾದಲ್ಲಿ ವ್ಯಾಪಕ ಆಕ್ರೋಶ ವ್ಯಕ್ತವಾಗಿದೆ. ‘ಮಹದಾಯಿ ಯೋಜನೆಯು ಕುಡಿವ ನೀರಿನ ಯೋಜನೆಯಲ್ಲ. ಇದು ಮಹದಾಯಿ ನದಿ ಕೊಲ್ಲುವ ಯೋಜನೆ. ಕೇಂದ್ರ ಸರ್ಕಾರದ ತೀರ್ಮಾನದಿಂದ ನಮಗೆ ಆಘಾತವಾಗಿದ್ದು, ಯೋಜನೆಗೆ ನಮ್ಮ ವ್ಯಾಪಕ ವಿರೋಧವಿದೆ’ ಎಂದು ಗೋವಾದ ಪ್ರಮುಖ ವಿಪಕ್ಷವಾದ ಗೋವಾ ಫಾರ್ವರ್ಡ್‌ ಹೇಳಿದೆ.

‘ಮಹದಾಯಿ ನದಿಗೆ ತಿರುವು ನೀಡುವುದರಿಂದ ಗೋವಾದ ಪರಿಸರದ ಮೇಲೆ ದುಷ್ಪರಿಣಾಮ ಉಂಟಾಗಲಿದೆ. ಹಿಂದಿನ ಮುಖ್ಯಮಂತ್ರಿ ಮನೋಹರ ಪರ್ರಿಕರ್‌ ಅವರೂ ಇದನ್ನೇ ಹೇಳಿದ್ದರು.

ಮಹದಾಯಿ ರೈತರ ಕೂಗಿಗೆ ರಾಜ್ಯಪಾಲ ಡೋಂಟ್ ಕೇರ್: ಗುಜರಾತಿ ಫಂಕ್ಷನ್‌ನಲ್ಲಿ ಬ್ಯುಸಿ

ಈಗಿನ ಮುಖ್ಯಮಂತ್ರಿ (ಪ್ರಮೋದ್‌ ಸಾವಂತ್‌) ಈ ಬಗ್ಗೆ ಏನು ಹೇಳುತ್ತಾರೆ? ಅವರು ತಮ್ಮ ನಿಲುವು ಸ್ಪಷ್ಟಪಡಿಸಬೇಕು’ ಎಂದು ಗೋವಾ ಫಾರ್ವರ್ಡ್‌ ಪಕ್ಷ ಹೇಳಿಕೆ ಬಿಡುಗಡೆ ಮಾಡಿದೆ. ಆದರೆ ಗೋವಾದ ಬಿಜೆಪಿ ಸರ್ಕಾರ ಬುಧವಾರ ಸಂಜೆಯವರೆಗೂ ಈ ಬಗ್ಗೆ ಯಾವುದೇ ಪ್ರತಿಕ್ರಿಯೆ ನೀಡಿರಲಿಲ್ಲ.

ಜೋಶಿ ಆಗ್ರಹದ ಮೇರೆಗೆ ಮಹದಾಯಿಗೆ ಅನುಮತಿ: ಜಾವಡೇಕರ್‌

ನವದೆಹಲಿ: ಮಹದಾಯಿ (ಕಳಸಾ-ಬಂಡೂರಿ) ಕುಡಿವ ನೀರಿನ ಯೋಜನೆಗೆ ಕೇಂದ್ರ ಪರಿಸರ ಸಚಿವಾಲಯ ಅನುಮೋದನೆ ನೀಡಿದೆ ಎಂದು ಕೇಂದ್ರ ಪರಿಸರ ಸಚಿವ ಪ್ರಕಾಶ ಜಾವಡೇಕರ್‌ ಬುಧವಾರ ಸಂಜೆ ಟ್ವೀಟ್‌ ಮಾಡಿದ್ದಾರೆ.

‘ನಮ್ಮ ಸಹೋದ್ಯೋಗಿ ಪ್ರಹ್ಲಾದ ಜೋಶಿ ಅವರ ಆಗ್ರಹದ ಮೇರೆಗೆ ಯೋಜನೆಗೆ ಅನುಮೋದನೆ ನೀಡಿದ್ದೇವೆ’ ಎಂದು ಜಾವಡೇಕರ್‌ ಅವರು ಹೇಳಿದ್ದಾರೆ. ಕೆಲವು ದಿನಗಳ ಹಿಂದೆ ಕರ್ನಾಟಕ ನೀರಾವರಿ ನಿಗಮಕ್ಕೆ ಪತ್ರ ಬರೆದಿದ್ದ ಕೇಂದ್ರ ಪರಿಸರ ಸಚಿವಾಲಯವು, ಕುಡಿವ ನೀರಿನ ಯೋಜನೆಗೆ ಕೆಲವು ಷರತ್ತು ವಿಧಿಸಿ ಅನುಮೋದನೆ ನೀಡಿತ್ತು. ಈ ಬಗ್ಗೆ ಮಾಧ್ಯಮಗಳಲ್ಲಿ ಬುಧವಾರ ವರದಿ ಪ್ರಕಟಗೊಂಡಿತ್ತು.

ಮಹ​ದಾಯಿ ರೈತರಿಗೆ ಡಿಸೆಂಬರಲ್ಲಿ ಶುಭ ಸುದ್ದಿ?