ಬೆಂಗಳೂರು[ಫೆ.02]: ರಾಷ್ಟ್ರ ವಿರೋಧಿ ನೀತಿ ಮತ್ತು ಆಂದೋಲನಗಳನ್ನು ಹಮ್ಮಿಕೊಳ್ಳುತ್ತಿರುವವರನ್ನು ಹೊಸಕಿ ಹಾಕುವ ಸಾಮರ್ಥ್ಯ ಕೇಂದ್ರ ಸರ್ಕಾರಕ್ಕಿದೆ. ಆದರೆ, ಈ ಎಲ್ಲ ಬೆಳವಣಿಗೆಗಳ ಹಿಂದಿರುವ ಮೂಲ ಹೊರಕ್ಕೆ ಬರಲಿ (ಬಿಲದಲ್ಲಿನ ಕೊನೆಯ ಇಲಿ ಹೊರಬರಲಿ)ಎಂದು ಕಾಯುತ್ತಿದ್ದೇವೆ ಎಂದು ಕೇಂದ್ರದ ಮಾಜಿ ಸಚಿವ ಅನಂತ ಕುಮಾರ್‌ ಹೆಗಡೆ ತಿಳಿಸಿದ್ದಾರೆ.

ಸಮೃದ್ಧ ಸಾಹಿತ್ಯ ಸಂಸ್ಥೆ ನಗರದ ಕನ್ನಡ ಸಾಹಿತ್ಯ ಪರಿಷತ್‌ನಲ್ಲಿ ಶನಿವಾರ ಹಮ್ಮಿಕೊಂಡಿದ್ದ ‘ಮತ್ತೆ ಮತ್ತೆ ಸಾವರ್ಕರ್‌’ ಸಾವರ್ಕರ್‌ ಕುರಿತ ವಿಚಾರ ಸಂಕಿರಣದಲ್ಲಿ ಮಾತನಾಡಿದರು.

ಪೌರತ್ವ ತಿದ್ದುಪಡಿ ಕಾಯಿದೆ(ಸಿಎಎ)ಯಿಂದ ಈ ದೇಶದ ಯಾವುದೇ ಪ್ರಜೆಗೂ ತೊಂದರೆಯಾಗುವುದಿಲ್ಲ. ಅದು ಎಲ್ಲರಿಗೂ ಗೊತ್ತಿದೆ. ಆದರೂ ಬೀದಿಗೆ ಬಂದು ಹೋರಾಡುತ್ತಿದ್ದಾರೆ. ಅವರನ್ನು ಮಟ್ಟಹಾಕುವುದು ನಮ್ಮ ಸರ್ಕಾರಕ್ಕೆ ದೊಡ್ಡ ಸವಾಲಾಗಿಲ್ಲ. 120 ಕೋಟಿ ಎಲ್ಲಿಂದ ಹರಿದು ಬಂದಿದೆ ಎಂಬುದು ಎಲ್ಲರಿಗೂ ಗೊತ್ತಾಗಬೇಕಿದ್ದು, ಅದಕ್ಕಾಗಿ ಕಾಯುತ್ತಿದ್ದೇವೆ ಎಂದು ಅವರು ತಿಳಿಸಿದರು.

ಸಿಎಎಯಲ್ಲಿ ಏನೋ ಗೊಂದಲವಿಲ್ಲ. ಅದು ಯಾರ ವಿರುದ್ಧವೂ ಇಲ್ಲ. ಯಾರನ್ನೂ ನೋಯಿಸುತ್ತಿಲ್ಲ. ಆಶ್ರಯ ಕೋರಿ ಬಂದವರಿಗೆ ಸ್ವಾಭಾವಿಕವಾಗಿ ಅವಕಾಶ ಮಾಡಿಕೊಡುವುದಾಗಿದೆ. ಈ ಕಾಯಿದೆ ಜಾರಿಯಿಂದಾಗಿ ಯಾವ ಹುತ್ತದಲ್ಲಿ ಯಾವ ಹಾವು ಇದೆ ಎಂಬುದು ತಿಳಿಯುತ್ತಿದೆ. ಯಾವ ಶಿಕ್ಷಣ ಸಂಸ್ಥೆಗಳಲ್ಲಿ ಸೋಗಲಾಡಿ ಬುದ್ಧಿ ಜೀವಿಗಳು ಎಷ್ಟುಮಂದಿ ಇದ್ದಾರೆ. ದೇಶದ ಒಳಗೆ ಮತ್ತು ಹೊರಗೆ ಇರುವ ದೇಶ ದ್ರೋಹಿಗಳು ಯಾರು, ದೇಶ ಭಕ್ತರು ಯಾರು. ಯಾರಿಗೆ ರಾಷ್ಟ್ರೀಯತೆ ಅರಿವಿದೆ ಎಂಬುದು ತಿಳಿಯುತ್ತಿದೆ ಎಂದರು.

ಹಿಂದುತ್ವವನ್ನು ಕೆಲವರು ವಿಚಾರವೇ ಅಲ್ಲ ಎನ್ನುತ್ತಾರೆ. ಮತ್ತೆ ಕೆಲವರು ರಾಜಕೀಯ ಎಂದು ಭಾವಿಸಿದ್ದಾರೆ. ವೇದಗಳು ಪ್ರಾಚೀನವಾಗಿವೆ ಎಂದು ಇತಿಹಾಸಕಾರರು ಮತ್ತು ಪ್ರಪಂಚ ಒಪ್ಪಿಕೊಂಡಿದೆ. ಆದರೆ, ಕೆಲ ಮೂರ್ಖರು ಅವುಗಳಿಗೆ ಚೌಕಟ್ಟು ಹಾಕಲು ಮುಂದಾಗಿದ್ದಾರೆ. ಇತಿಹಾಸಕಾರರು ಇದಕ್ಕೆ ಕೈ ಜೋಡಿಸುತ್ತಿದ್ದು, ಅವರು ಹೇಳಿದ್ದನ್ನೇ ನಾವು ಓದುವಂತಾಗಿದೆ. ಹಿಂದೂ ಎನ್ನುವುದು ಸಂಪ್ರದಾಯವಲ್ಲ. ಇದು ಬದುಕಿನ ಸಿದ್ಧಾಂತ. ಇಡೀ ಜಗತ್ತು ಒಂದಾಗಿ ಬದುಕಬೇಕು. ಅದುವೇ ನಮ್ಮ ಪರಂಪರೆಯಾಗಿದೆ. ಇಡೀ ಪ್ರಪಂಚವೇ ಹಿಂದುತ್ವದ ರಾಜ್ಯಧಾನಿಯಾಗಿ ಹೊರಹೊಮ್ಮಬೇಕು ಎಂದರು.

ಸಾವರ್ಕರ್‌ ಬಂಧನಕ್ಕೆ ಅಂಬೇಡ್ಕರ್‌ ವಿರೋಧವಿತು:

ಮಹಾತ್ಮಾ ಗಾಂಧಿಯವರ ಹತ್ಯೆ ನಡೆದ ಸಂದರ್ಭ ಸಾವರ್ಕರನ್ನು ಬಂಧಿಸಲಾಗಿತ್ತು. ಇದಕ್ಕೆ ಡಾ

ಬಿ.ಆರ್‌.ಅಂಬೇಡ್ಕರ್‌ ಪ್ರಬಲವಾಗಿ ವಿರೋಧಿಸಿದ್ದರು. ಆದರೆ, ಪೂರ್ವಗ್ರಹ ಮನಸುಗಳು ಅವರ ಮಾತನ್ನು ಕೇಳರಲಿಲ್ಲ. ಅಂತಿಮವಾಗಿ ಸುಪ್ರೀಂಕೋರ್ಟ್‌ ಸೂಕ್ತ ತೀರ್ಪು ನೀಡಿತು ಎಂದು ಅನಂತಕುಮಾರ್‌ ಹೆಗಡೆ ಹೇಳಿದರು.

ಪ್ರಸ್ತುತ ಮತ್ಯಾವುದೇ ದೇಶದ ನಾಗರಿಕತ್ವ ಪಡೆದಿರುವವರು ಈ ದೇಶದ ಪ್ರಧಾನಮಂತ್ರಿ ಅಭ್ಯರ್ಥಿ ಆಗಬಹುದಾದ ಸ್ಥಿತಿ ನಿರ್ಮಾಣವಾಗಿದೆ. ಉದ್ದೇಶ ಪೂರ್ವಕವಾಗಿ ಮತ್ತೊಂದು ದೇಶದ ರಾಷ್ಟ್ರೀಯತೆಯನ್ನು ಮುಚ್ಚಿಡುವಂತಹ ಪ್ರಯತ್ನ ನಡೆಯುತ್ತಿದ್ದೆ. ಈ ಬೆಳವಣಿಗೆ ರಾಷ್ಟ್ರ ದ್ರೋಹದ ಪರಮಾವಧಿಯಾಗಿದೆ ಎಂದರು.

ಎಲ್ಲ ವರ್ಗದವರಿಗೂ ದೇವಾಲಯ

ಸಾವರ್ಕರ್‌ ದೇಶದಲ್ಲಿ ಮೊದಲ ಬಾರಿಗೆ ಪತಿಥ ಪಾವನ ದೇವಾಲಯ ನಿರ್ಮಿಸುವ ಮೂಲಕ ಎಲ್ಲ ವರ್ಗದವರಿಗೂ ಪೂಜೆ ಮಾಡಲು ಅವಕಾಶ ಕೊಟ್ಟಿದ್ದರು. ಇದಕ್ಕೆ ತನ್ನ ಸ್ವಂತ ಜಾತಿಯವರೇ ವಿರೋಧಿಸಿದರು. ದೇಶದಲ್ಲಿ ಎಂದೂ ಹುಟ್ಟಿನಿಂದ ಜಾತಿಯನ್ನು ಒಪ್ಪಿಕೊಂಡಿಲ್ಲ. ಶೂದ್ರನಾದವನೂ ಬ್ರಾಹ್ಮಣನಾಗಬಹುದಿತ್ತು. ಜಾತಿ ವ್ಯವಸ್ಥೆಯನ್ನು ಒಪ್ಪಿಕೊಂಡಿರುವುದು ನಮ್ಮ ಸಂಪ್ರದಾಯವೇ ಇಲ್ಲ. ಆದರೆ ಅದು ಇದೀಗ ಬದಲಾಗಿದೆ ಎಂದರು.

ವಿಮರ್ಶಕ ಜಿ.ಬಿ.ಹರೀಶ್‌, ಸಮೃದ್ಧ ಸಾಹಿತ್ಯದ ಪ್ರಕಾಶಕ ಕೆ.ಆರ್‌.ಹರ್ಷ ಮತ್ತಿತರರಿದ್ದರು.