ಶಾಸ್ತ್ರೀಯ ಭಾಷೆ ಸ್ಥಾನಮಾನಕ್ಕೆ ಕೇಂದ್ರ ಸರ್ಕಾರ ಅನುದಾನ ನೀಡಿದೆ: ಸಿಎಂ ಬೊಮ್ಮಾಯಿ
ಶೀಘ್ರವೇ ಶಾಸ್ತ್ರೀಯ ಭಾಷೆ ಸ್ಥಾನಮಾನ ಅಧ್ಯಯನ ಕಚೇರಿ ಆರಂಭ ಆಗುತ್ತದೆ. ಅಧ್ಯಯನಕ್ಕಾಗಿ ದೊಡ್ಡ ದೊಡ್ಡ ಸಾಹಿತಿಗಳ ಸಮಿತಿ ಮಾಡುತ್ತೇವೆ. ಸಾಹಿತಿಗಳೇ ಸಂಶೋಧನೆ ಮಾಡಲಿ. ನಿಜವಾದ ಸಂಶೋಧನೆ, ಕನ್ನಡಕ್ಕೆ ನ್ಯಾಯ ಸಿಗುವ ಸಂಶೋಧನೆಯಾಗಬೇಕು: ಸಿಎಂ ಬಸವರಾಜ ಬೊಮ್ಮಾಯಿ
ಹಾವೇರಿ(ಜ.09): ಶಾಸ್ತ್ರೀಯ ಭಾಷೆ ಸ್ಥಾನಮಾನ ಸಂಶೋಧನೆಗೆ ಬೇಕಾದಷ್ಟು ಅನುದಾನ ಕೊಡುತ್ತೇವೆ. 13.30 ಕೋಟಿ ರೂ. ಕೇಂದ್ರ ಸರ್ಕಾರ ಶಾಸ್ತ್ರೀಯ ಭಾಷೆ ಸ್ಥಾನಮಾನಕ್ಕೆ ನೀಡಿದೆ. ಅದಕ್ಕಾಗಿ ಸಂಶೋಧನೆಗಳು ಆಗಬೇಕಿದೆ. ಅದಕ್ಕಾಗಿ ಕಟ್ಟಡ ಬೇಕಿದೆ. ಮೈಸೂರು ವಿವಿಯಲ್ಲಿ ಕಟ್ಟಡ ನೋಡಿದ್ದೇವೆ. ಅದರ ನವೀಕರಣಕ್ಕೆ ಅನುದಾನ ನೀಡಿದ್ದೇನೆ. ಶೀಘ್ರವೇ ಶಾಸ್ತ್ರೀಯ ಭಾಷೆ ಸ್ಥಾನಮಾನ ಅಧ್ಯಯನ ಕಚೇರಿ ಆರಂಭ ಆಗುತ್ತದೆ. ಅಧ್ಯಯನಕ್ಕಾಗಿ ದೊಡ್ಡ ದೊಡ್ಡ ಸಾಹಿತಿಗಳ ಸಮಿತಿ ಮಾಡುತ್ತೇವೆ. ಸಾಹಿತಿಗಳೇ ಸಂಶೋಧನೆ ಮಾಡಲಿ. ನಿಜವಾದ ಸಂಶೋಧನೆ, ಕನ್ನಡಕ್ಕೆ ನ್ಯಾಯ ಸಿಗುವ ಸಂಶೋಧನೆಯಾಗಬೇಕು. ಅತ್ಯಂತ ಪ್ರಾಚೀನ ಭಾಷೆ ನಮ್ಮದು ಎಂಬುದಕ್ಕೆ ಪುರಾವೆಗಳು ಬೇಕಿದೆ. ಆ ಸಂಶೋಧನೆಗೆ ಬೇಕಾದಷ್ಟು ಹಣ ಕೊಡಲು ನಮ್ಮ ಸರ್ಕಾರ ಬದ್ಧವಾಗಿದೆ ಅಂತ ಮುಖ್ಯಮಂತ್ರಿ ಬಸವರಾಜ ಬೊಮ್ಮಾಯಿ ತಿಳಿಸಿದ್ದಾರೆ.
ನಿನ್ನೆ(ಭಾನುವಾರ) ನಗರದಲ್ಲಿ ಹಾವೇರಿ ಸಾಹಿತ್ಯ ಸಮ್ಮೇಳನ ಸಮಾರೋಪದಲ್ಲಿ ಮಾತನಾಡಿದ ಸಿಎಂ ಬೊಮ್ಮಾಯಿ, ಹೊರ ನಾಡಿನಿಂದ ನಮ್ಮಲ್ಲಿ ಬಂದವರಿಗೆ ಕನ್ನಡ ಕಲೆಸುವ ಅಭಿಯಾನ ಮಾಡುತ್ತೇವೆ. ಅದಕ್ಕೆ ಬೇಕಾದ ಕೋರ್ಸ್ ತೆರೆಯುವ ಮೂಲಕ ಕಾಯ ಕಲ್ಪ ನೀಡಲಾಗುತ್ತದೆ. ಗಡಿಯಾಚೆಗಿನ ಕನ್ನಡಿಗರ ಕಳವಳ ನನಗೆ ಅರ್ಥ ಆಗಿದೆ. ಗಡಿ ಪ್ರಾಧಿಕಾರದ ಅಧ್ಯಕ್ಷರ ಜತೆ ಚರ್ಚಿಸಿ, ಹತ್ತಾರು ಯೋಜನೆಗಳನ್ನ ರೂಪಿಸಿದ್ದೇವೆ. ಗಡಿ ಸಲುವಾಗಿ ಹೋರಾಟ ಮಾಡಿವವರಿಗೆ ಪಿಂಚಣಿ ಯೋಜನೆ ಜಾರಿ ಮಾಡಲಾಗಿದೆ. ಗಡಿ ನಾಡಿನ ಶಾಲೆ, ಸಂಸ್ಕೃತಿ ಬೆಳೆಸುವ ಸಲುವಾಗಿ ಈಗಾಗಲೇ 25ಕೋಟಿ ನೀಡಿದ್ದೇವೆ. ಇನ್ನೂ 100 ಕೋಟಿ ರೂ. ಗಳನ್ನ ಇದೇ ವರ್ಷದಲ್ಲಿ ನೀಡುತ್ತಿದ್ದೇನೆ ಅಂತ ಸ್ಪಷ್ಟಪಡಿಸಿದ್ದಾರೆ.
ಮುಂದಿನ ಕನ್ನಡ ಸಾಹಿತ್ಯ ಸಮ್ಮೇಳನ ಸಕ್ಕರೆ ನಾಡು ಮಂಡ್ಯದಲ್ಲಿ: ಮಹೇಶ್ ಜೋಷಿ
ಇದೇ 19ರಂದು ಯಾದಗಿರಿಗೆ ಪ್ರಧಾನಿ ಮೋದಿ ಭೇಟಿ ಸಾಧ್ಯತೆ ಇದೆ. ಯಾದಗಿರಿಯಲ್ಲಿ ನಡೆಯಲಿರುವ ತಾಂಡಾಗಳನ್ನು ಕಂದಾಯ ಗ್ರಾಮಗಳಾಗಿ ಪರಿವರ್ತಿಸಿ ಘೋಷಣೆ ಕಾರ್ಯಕ್ರಮದಲ್ಲಿ ಪಾಲ್ಗೊಳ್ಳುವ ಸಾಧ್ಯತೆ ಇದೆ. ಸುಮಾರು ಒಂದೂವರೆ ಲಕ್ಷ ಜನರಿಗೆ ಹಕ್ಕು ಪತ್ರಗಳ ವಿತರಣೆ ಕಾರ್ಯಕ್ರಮ ನಡೆಯಲಿದೆ. ಲಕ್ಷಾಂತರ ಜನರಿಗೆ ಏಕಕಾಲಕ್ಕೆ ಸರ್ಕಾರದ ಆದೇಶ ಪತ್ರಗಳನ್ನು ನೀಡುವ, ಇದನ್ನು ದಾಖಲೆಯನ್ನಾಗಿಸುವ ಉದ್ದೇಶದಿಂದ ಆಯೋಜಿಸಲಾಗುತ್ತಿರುವ ಈ ಕಾರ್ಯಕ್ರಮಕ್ಕೆ ಪ್ರಧಾನಿ ಮೋದಿ ಹಾಗೂ ಕೇಂದ್ರ ಗೃಹ ಸಚಿವ ಅಮಿತ್ ಶಾ ಅವರಿಗೆ ಆಹ್ವಾನ ನೀಡಿದ್ದೇವೆ. 19 ರಂದು ಸಂಜೆ ಯಾದಗಿರಿಯಲ್ಲಿ ಕಾರ್ಯಕ್ರಮ ಹಮ್ಮಿಕೊಳ್ಳಲಾಗುತ್ತಿದೆ ಎಂದು ಯಾದಗಿರಿ ಶಾಸಕ ವೆಂಕಟರೆಡ್ಡಿ ಮುದ್ನಾಳ ತಿಳಿಸಿದ್ದಾರೆ. ಹೆಚ್ಚಿನ ಮಾಹಿತಿ ನಿರೀಕ್ಷಿಸಲಾಗುತ್ತಿದೆ, ಅಧಿಕೃತವಾಗಿ ಯಾವುದೇ ಆದೇಶ ಹೊರ ಬಿದ್ದಿಲ್ಲವಾದರೂ, ನಾಳೆ ಜಿಲ್ಲಾಧಿಕಾರಿಗಳ ಕಚೇರಿಯಲ್ಲಿ ನಡೆಯಲಿರುವ ಮುಖ್ಯ ಕಾರ್ಯದರ್ಶಿಗಳ ಜೊತೆಗಿನ ವಿಡಿಯೋ ಕಾನ್ಫರೆನ್ಸ್ ನಲ್ಲಿ ಇದು ಪ್ರಕಟವಾಗಬಹುದು ಅಂತ ಸಿಎಂ ಬೊಮ್ಮಾಯಿ ತಿಳಿಸಿದ್ದಾರೆ.
ಕಳೆದ ವರ್ಷ ನವೆಂಬರ್ ಕೊನೆಯ ವಾರದಲ್ಲಿ ನಡೆಯಬೇಕಿದ್ದ ಈ ಕಾರ್ಯಕ್ರಮವನ್ನು, ಪ್ರಧಾನಿ ಭೇಟಿಯ ಕಾರಣಕ್ಕಾಗಿ ಈವರೆಗೆ ಮುಂದೂಡಲಾಗುತ್ತಿತ್ತು ಎನ್ನಲಾಗುತ್ತಿದೆ.