ಪೆಟ್ರೋಲ್, ಡೀಸೆಲ್‌ನಿಂದ ಕೇಂದ್ರ ಸರ್ಕಾರ 24 ಲಕ್ಷ ಕೋಟಿ ರು. ಸುಲಿಗೆ
- ಕೇಂದ್ರ ಸರ್ಕಾರ ಕೇವಲ 1.34 ಲಕ್ಷ ಕೋಟಿ ರು. ಆಯಿಲ್ ಬಾಂಡ್ ಸಾಲದ ಹೆಸರು ಹೇಳಿಕೊಂಡು ತೆರಿಗೆ ವಸೂಲಿ
- ದೇಶದ ಜನರಿಂದ ಇದುವರೆಗೆ 24 ಲಕ್ಷ ಕೋಟಿ ರು. ತೆರಿಗೆ ವಸೂಲಿ ಮಾಡಿದೆ
- ರಾಜ್ಯಸಭೆ ಪ್ರತಿಪಕ್ಷ ನಾಯಕ ಮಲ್ಲಿಕಾರ್ಜುನ ಖರ್ಗೆ ಆರೋಪ
ಬೆಂಗಳೂರು (ಸೆ.10): ಕೇಂದ್ರ ಸರ್ಕಾರ ಕೇವಲ 1.34 ಲಕ್ಷ ಕೋಟಿ ರು. ಆಯಿಲ್ ಬಾಂಡ್ ಸಾಲದ ಹೆಸರು ಹೇಳಿಕೊಂಡು ದೇಶದ ಜನರಿಂದ ಇದುವರೆಗೆ 24 ಲಕ್ಷ ಕೋಟಿ ರು. ತೆರಿಗೆ ವಸೂಲಿ ಮಾಡಿದೆ ಎಂದು ರಾಜ್ಯಸಭೆ ಪ್ರತಿಪಕ್ಷ ನಾಯಕ ಮಲ್ಲಿಕಾರ್ಜುನ ಖರ್ಗೆ ಆರೋಪಿಸಿದರು.
ಸುದ್ದಿಗಾರರ ಜತೆ ಮಾತನಾಡಿದ ಅವರು, ಪೆಟ್ರೋಲ್, ಡೀಸೆಲ್ ಬೆಲೆ ಮಿತಿ ಮೀರಿ ಏರಿಕೆ ಮಾಡಿ ಕೇಂದ್ರದ ನರೇಂದ್ರ ಮೋದಿ ಸರ್ಕಾರ ಜನರನ್ನು ಸಮಸ್ಯೆಗೆ ದೂಡಿದೆ. ಕೇವಲ 1.34 ಲಕ್ಷ ಕೋಟಿ ರು. ಮೊತ್ತದ ಆಯಿಲ್ ಬಾಂಡ್ ಹೆಸರು ಹೇಳಿಕೊಂಡು ಜನರಿಂದ ವಸೂಲಿ ಮಾಡಿದ ತೆರಿಗೆ ಮೊತ್ತ ಎಷ್ಟುಎಂಬುದನ್ನು ಕೇಂದ್ರ ಬಹಿರಂಗಪಡಿಸಲಿ.
ಕಲಬುರ್ಗಿ ಗದ್ದುಗೆ ಗುದ್ದಾಟ: ಜೆಡಿಎಸ್ ಜೊತೆ ಮೈತ್ರಿ ವಿಶ್ವಾಸದಲ್ಲಿ ಕಾಂಗ್ರೆಸ್
ಇದುವರೆಗೆ 24 ಲಕ್ಷ ಕೋಟಿ ರು. ತೆರಿಗೆ ವಸೂಲಿ ಮಾಡಿದ್ದಾರೆ. ಇದಕ್ಕಿಂತ ಸುಲಿಗೆ ಬೇಕಾ? ಜನರಿಗೆ ಎಲ್ಲ ಸತ್ಯಗಳೂ ಈಗ ಅರ್ಥವಾಗುತ್ತಿವೆ. ನಾವು ತೈಲ ಬೆಲೆ ಏರಿಕೆ ವಿರುದ್ಧ ಸಂಸತ್‌ನಲ್ಲಿ ದನಿ ಎತ್ತಿದ್ದೇವೆ. ನಮ್ಮ ದನಿಗೆ ಸಹಾಯ ಮಾಡುವವರು ಕಡಿಮೆ. ಏಕೆಂದರೆ ಪ್ರಧಾನಿ ಮೋದಿ ತಮ್ಮ ವಿರುದ್ಧ ದನಿ ಎತ್ತುವವರನ್ನು ಹೆದರಿಸುತ್ತಿದ್ದಾರೆ. ಮಾಧ್ಯಮದವರನ್ನೂ ಹೆದರಿಸಲಾಗುತ್ತಿದೆ ಎಂದು ದೂರಿದರು.