ಬೆಂಗಳೂರು(ಸೆ.12): ನಗರದ ಡಿ.ಜೆ.ಹಳ್ಳಿ ಮತ್ತು ಕೆ.ಜಿ.ಹಳ್ಳಿ ಗಲಭೆ ಸಂಬಂಧ ಕಾನೂನು ಬಾಹಿರ ಅಪರಾಧ ಚಟುವಟಿಕೆಗಳ ತಡೆ ಕಾಯ್ದೆ (ಯುಎಪಿಎ) ಅಡಿ ದಾಖಲಿಸಲಾಗಿರುವ ಎರಡು ಪ್ರಕರಣಗಳನ್ನು ರಾಷ್ಟ್ರೀಯ ತನಿಖಾ ತಂಡಕ್ಕೆ (ಎನ್‌ಐಎ) ವಹಿಸಲು ಕೇಂದ್ರ ಸರ್ಕಾರ ತೀರ್ಮಾನಿಸಿದೆ ಎಂದು ಎನ್‌ಐಎ ಹೈಕೋರ್ಟ್‌ಗೆ ಶುಕ್ರವಾರ ಮಾಹಿತಿ ನೀಡಿದೆ.

ಪ್ರಕರಣಕ್ಕೆ ಸಂಬಂಧಿಸಿದಂತೆ ಕ್ಲೇಮ್‌ ಕಮಿಷನರ್‌ ನೇಮಕ ಮಾಡಬೇಕು ಎಂದು ರಾಜ್ಯ ಸರ್ಕಾರ ಸಲ್ಲಿಸಿದ್ದ ಅರ್ಜಿ ಹಾಗೂ ಪ್ರಕರಣವನ್ನು ಎನ್‌ಐಎಗೆ ವಹಿಸಬೇಕು ಎಂದು ಮನವಿ ಮಾಡಿ ಸಲ್ಲಿಸಿದ ಅರ್ಜಿಗಳು ಸೇರಿದಂತೆ ಇತರ ಅರ್ಜಿಗಳ ವಿಚಾರಣೆ ನಡೆಸಿದ ಮುಖ್ಯ ನ್ಯಾಯಮೂರ್ತಿ ಎ.ಎಸ್‌.ಓಕ ಅವರ ನೇತೃತ್ವದ ವಿಭಾಗೀಯ ನ್ಯಾಯಪೀಠಕ್ಕೆ ಎನ್‌ಐಎ ಪರ ವಕೀಲ ಪಿ.ಪ್ರಸನ್ನಕುಮಾರ್‌ ಈ ಮಾಹಿತಿ ನೀಡಿದರು.

ವಿಚಾರಣೆ ವೇಳೆ ಪ್ರಸನ್ನಕುಮಾರ್‌ ಹಾಜರಾಗಿ, ಗಲಭೆ ವೇಳೆ ಪೊಲೀಸ್‌ ಠಾಣೆ ಮೇಲೆ ದಾಳಿ ಮಾಡಲಾದ ಸಂಬಂಧ ಯುಎಪಿಎ ಕಾಯ್ದೆಯಡಿ ಡಿ.ಜೆ ಹಳ್ಳಿ ಮತ್ತು ಕೆ.ಜಿ ಹಳ್ಳಿ ಪೊಲೀಸ್‌ ಠಾಣೆಯಲ್ಲಿ ತಲಾ ಒಂದರಂತೆ ಎರಡು ಪ್ರತ್ಯೇಕ ಎಫ್‌ಐಆರ್‌ ದಾಖಲಿಸಿಕೊಳ್ಳಲಾಗಿದೆ. ಆ ಪ್ರಕರಣಗಳನ್ನು ಎನ್‌ಐಎಗೆ ವಹಿಸಲು ತೀರ್ಮಾನಿರುವ ಬಗ್ಗೆ ಕೇಂದ್ರ ಸರ್ಕಾರದಿಂದ ಮೌಖಿಕ ಸೂಚನೆ ಬಂದಿದ್ದು, ಒಂದೆರಡು ದಿನಗಳಲ್ಲಿ ಅಧಿಕೃತ ಆದೇಶ ಹೊರಬೀಳಲಿದೆ ಎಂದು ನ್ಯಾಯಪೀಠಕ್ಕೆ ತಿಳಿಸಿದರು.

ಡಿ.ಜೆ.ಹಳ್ಳಿ ಗಲಭೆ: ಸಿಎಂಗೆ ಸಲ್ಲಿಸಿದ ವರದಿಯಿಂದ ಸ್ಫೋಟಕ ಮಾಹಿತಿ ಬಹಿರಂಗ

ಇದೇ ವೇಳೆ ಅಡ್ವೋಕೇಟ್‌ ಜನರಲ್‌ ಪ್ರಭುಲಿಂಗ್‌ ಕೆ. ನಾವದಗಿ, ಗಲಭೆಯಲ್ಲಿ ಉಂಟಾದ ಸಾರ್ವಜನಿಕ ಹಾಗೂ ಖಾಸಗಿ ಆಸ್ತಿ-ಪಾಸ್ತಿ ನಷ್ಟದ ಅಂದಾಜು ಮಾಡಿ ಹೊಣೆಗಾರಿಕೆ ನಿಗದಿಪಡಿಸಲು ನ್ಯಾಯಾಲಯದ ನಿರ್ದೇಶನದಂತೆ ನ್ಯಾಯಮೂರ್ತಿ ಎಚ್‌.ಎಸ್‌.ಕೆಂಪಣ್ಣ ಅವರನ್ನು ಕ್ಲೇಮ್‌ ಕಮಿಷನರ್‌ ಆಗಿ ನೇಮಕ ಮಾಡಿರುವ ಆದೇಶದ ಪ್ರತಿ ಸಲ್ಲಿಸಿದರು.

ಸರ್ಕಾರದ ಪರ ವಕೀಲರು ಗಲಭೆ ಪ್ರಕರಣದ ಮೂರು ತನಿಖಾ ವರದಿಗಳನ್ನು ಮುಚ್ಚಿದ ಲಕೋಟೆಯಲ್ಲಿ ನ್ಯಾಯಪೀಠಕ್ಕೆ ಸಲ್ಲಿಸಿದರು. ವರದಿಗಳನ್ನು ಪರಿಶೀಲಿಸಿದ ನ್ಯಾಯಪೀಠ ತನಿಖೆಯು ಇನ್ನೂ ಪ್ರಾಥಮಿಕ ಹಂತದಲ್ಲಿದೆ. ಮುಂದಿನ ತನಿಖಾ ಪ್ರಗತಿ ಸಲ್ಲಿಸುವಂತೆ ಸರ್ಕಾರಕ್ಕೆ ಸೂಚಿಸಿ ವಿಚಾರಣೆಯನ್ನು ಸೆ.21ಕ್ಕೆ ಮುಂದೂಡಿತು.

ಪೊಲೀಸರಿಂದ ಲೋಪ: ಸರ್ಕಾರಕ್ಕೆ ನೋಟಿಸ್‌

ಗಲಭೆಯನ್ನು ನಿಯಂತ್ರಿಸುವ ಹಾಗೂ ನಿರ್ವಹಿಸುವ ವಿಚಾರದಲ್ಲಿ ಪೊಲೀಸರಿಂದ ಸಾಕಷ್ಟು ಲೋಪಗಳಾಗಿವೆ. ಆದ್ದರಿಂದ ಹೈಕೋರ್ಟ್‌ ಪ್ರಕರಣದ ತನಿಖೆಯ ಮೇಲ್ವಿಚಾರಣೆ ವಹಿಸಬೇಕು. ಕರ್ತವ್ಯಲೋಪ ಎಸಗಿದ ಪೊಲೀಸ್‌ ಅಧಿಕಾರಿಗಳ ವಿರುದ್ಧ ಇಲಾಖಾ ವಿಚಾರಣೆಗೆ ನಿರ್ದೇಶನ ನೀಡಬೇಕು ಎಂದು ಕೋರಿ ಆಲ್‌ ಇಂಡಿಯಾ ಮಿಲ್ಲಿ ಕೌನ್ಸಿಲ್‌ ಸಲ್ಲಿಸಿದ ಸಾರ್ವಜನಿಕ ಹಿತಾಸಕ್ತಿ ಅರ್ಜಿ ಸಂಬಂಧ ಸರ್ಕಾರಕ್ಕೆ ಹೈಕೋರ್ಟ್‌ ಇದೇ ವೇಳೆ ನೋಟಿಸ್‌ ಜಾರಿಗೊಳಿಸಿತು.