Asianet Suvarna News Asianet Suvarna News

ಕೇಂದ್ರ-ರಾಜ್ಯ ಮತ್ತೆ ಮಹದಾಯಿ ಸಂಘರ್ಷ: ಸುಪ್ರೀಂ ಮೆಟ್ಟಿಲೇರಲೂ ಸಂಪುಟ ಚಿಂತನೆ

ರಾಜ್ಯ ಸರ್ಕಾರದ ಪ್ರಸ್ತಾವನೆಯನ್ನು ಮುಂದೂಡಿರುವ ಮಂಡಳಿಯು ಗೋವಾ ರಾಜ್ಯವು ಹುಲಿ ಸಂರಕ್ಷಿತ ಅರಣ್ಯದಲ್ಲಿ ನಿರ್ಮಿಸಲು ಉದ್ದೇಶಿಸಿರುವ 400 ಕೆ.ವಿ. ವಿದ್ಯುತ್‌ ಸ್ಥಾವರ ಹಾಗೂ ಮಾರ್ಗಕ್ಕೆ ಒಪ್ಪಿಗೆ ನೀಡಿದೆ. ಈ ಬಗ್ಗೆ ಸಚಿವ ಸಂಪುಟ ಸಭೆಯಲ್ಲಿ ತೀವ್ರ ಕಳವಳ ವ್ಯಕ್ತವಾಗಿದೆ. 

Central Government and Karnataka Government conflict again on Mahadayi grg
Author
First Published Sep 6, 2024, 6:26 AM IST | Last Updated Sep 6, 2024, 6:26 AM IST

ಬೆಂಗಳೂರು(ಸೆ.06): ರಾಷ್ಟ್ರೀಯ ವನ್ಯಜೀವಿ ಮಂಡಳಿಯು ಮಹದಾಯಿ ಯೋಜನೆಗೆ ಅನುಮೋದನೆ ನೀಡದೆ, 400 ಕೆ.ವಿ. ವಿದ್ಯುತ್‌ ಸ್ಥಾವರ ನಿರ್ಮಿಸಲು ಗೋವಾ ರಾಜ್ಯಕ್ಕೆ ಅನುಮತಿ ನೀಡುವ ಮೂಲಕ ಮಲತಾಯಿ ಧೋರಣೆ ಅನುಸರಿಸಿದೆ. ಈ ಹಿನ್ನೆಲೆಯಲ್ಲಿ ಶೀಘ್ರ ಸರ್ವ ಸಭೆ ಕರೆದು, ಪ್ರಧಾನಮಂತ್ರಿಗಳ ಬಳಿ ಸರ್ವಪಕ್ಷಗಳ ನಿಯೋಗ ಕರೆದೊಯ್ಯುವ ಬಗ್ಗೆ ನಿರ್ಧರಿಸಲು ಗುರುವಾರ ನಡೆದ ಸಚಿವ ಸಂಪುಟ ಸಭೆಯಲ್ಲಿ ಚರ್ಚಿಸಲಾಗಿದೆ. ಅಲ್ಲದೆ, ಮಂಡಳಿಯ ನಿರ್ಧಾರದ ವಿರುದ್ಧ ಸುಪ್ರೀಂ ಕೋರ್ಟ್‌ ಮೆಟ್ಟಿಲೇರುವ ಬಗ್ಗೆ ಕಾನೂನು ತಜ್ಞರ ಅಭಿಪ್ರಾಯ ಸಂಗ್ರಹಿಸಲೂ ತೀರ್ಮಾನಿಸಲಾಗಿದೆ.

ರಾಜ್ಯ ಸರ್ಕಾರವು ಹುಲಿ ಸಂರಕ್ಷಿತಾರಣ್ಯ ಪ್ರದೇಶದಲ್ಲಿ ಮಹದಾಯಿ ಯೋಜನೆಯಡಿ ಕಳಸಾ ನಾಲಾ ತಿರುವು ಸೇರಿದಂತೆ ವಿವಿಧ ಕಾಮಗಾರಿಗಳ ಅನುಮತಿಗಾಗಿ ರಾಷ್ಟ್ರೀಯ ವನ್ಯಜೀವಿ ಮಂಡಳಿ ಬಳಿ ಪ್ರಸ್ತಾವನೆ ಸಲ್ಲಿಸಿತ್ತು. ಆದರೆ, ರಾಜ್ಯ ಸರ್ಕಾರದ ಪ್ರಸ್ತಾವನೆಯನ್ನು ಮುಂದೂಡಿರುವ ಮಂಡಳಿಯು ಗೋವಾ ರಾಜ್ಯವು ಹುಲಿ ಸಂರಕ್ಷಿತ ಅರಣ್ಯದಲ್ಲಿ ನಿರ್ಮಿಸಲು ಉದ್ದೇಶಿಸಿರುವ 400 ಕೆ.ವಿ. ವಿದ್ಯುತ್‌ ಸ್ಥಾವರ ಹಾಗೂ ಮಾರ್ಗಕ್ಕೆ ಒಪ್ಪಿಗೆ ನೀಡಿದೆ. ಈ ಬಗ್ಗೆ ಸಚಿವ ಸಂಪುಟ ಸಭೆಯಲ್ಲಿ ತೀವ್ರ ಕಳವಳ ವ್ಯಕ್ತವಾಗಿದೆ ಎಂದು ತಿಳಿದುಬಂದಿದೆ.

ಮಹದಾಯಿ ಯೋಜನೆ ಜಾರಿಗೆ ಪಕ್ಷ ಭೇದ ಮರೆತು ಪ್ರಯತ್ನ; ಸಂಸದ ಬಸವರಾಜ ಬೊಮ್ಮಾಯಿ

ಸಚಿವ ಸಂಪುಟ ಸಭೆ ಬಳಿಕ ಸುದ್ದಿಗೋಷ್ಠಿ ನಡೆಸಿ ಮಾತನಾಡಿದ ಸಚಿವ ಎಚ್.ಕೆ. ಪಾಟೀಲ್‌, ರಾಷ್ಟ್ರೀಯ ವನ್ಯಜೀವಿ ಮಂಡಳಿಯ ತಾರತಮ್ಯ ಧೋರಣೆ ಬಗ್ಗೆ ಸಂಪುಟ ಸಭೆಯಲ್ಲಿ ತೀವ್ರ ಅಸಮಾಧಾನ ವ್ಯಕ್ತವಾಯಿತು. ಮಹದಾಯಿ ಯೋಜನೆಗೆ ನಾವು ಕಾತುರದಿಂದ ಕಾಯುತ್ತಿದ್ದೆವು. ಹಿಂದೆ ಕೆಲ ನಾಯಕರು ಚುನಾವಣೆ ಮುಗಿದ ತಕ್ಷಣ ಅನುಮತಿ ಕೊಡಿಸುತ್ತೇವೆ ಎಂದು ಚೀಟಿಗಳನ್ನು ಎತ್ತಿ ತೋರಿಸಿದ್ದರು. ಇದೀಗ ಮಂಡಳಿಯು ವಿಷಯವನ್ನು ಮುಂದೂಡಿರುವುದರಿಂದ ರಾಜ್ಯಕ್ಕೆ ತೀವ್ರ ಅನ್ಯಾಯವಾಗಿದೆ. ಈ ಬಗ್ಗೆ ಸಂಪುಟದಲ್ಲಿ ಚರ್ಚಿಸಲಾಗಿದೆ ಎಂದು ಹೇಳಿದರು.

ಕೇಂದ್ರದ ಮೇಲೆ ಒತ್ತಡ ಹೇರಲು ಕೂಡಲೇ ಸರ್ವಪಕ್ಷಗಳ ನಾಯಕರ ಸಭೆ ಕರೆಯಲು ನಿರ್ಧರಿಸಲಾಗಿದೆ. ಬಳಿಕ ಸರ್ವಪಕ್ಷಗಳ ನಿಯೋಗವನ್ನು ಪ್ರಧಾನಮಂತ್ರಿ ನರೇಂದ್ರ ಮೋದಿ ಅವರ ಬಳಿಗೆ ಕರೆದೊಯ್ದು ಒತ್ತಡ ಹೇರಲಾಗುವುದು. ಮಂಡಳಿ ಸಭೆಯು ಸಂಪುಟ ಸಭೆಯಂತೆ ಪ್ರತಿ ವಾರ ನಡೆಯುವುದಿಲ್ಲ. ಒಂದು ಬಾರಿ ನಡೆದರೆ ಮತ್ತೆ ಆರು ತಿಂಗಳು ಸಭೆ ನಡೆಯುವುದಿಲ್ಲ. ಹೀಗಿದ್ದರೂ ರಾಜ್ಯಕ್ಕೆ ಅನ್ಯಾಯ ಮಾಡಲಾಗಿದೆ ಎಂದು ದೂರಿದರು.

ಮಂಡಳಿಯು ಹುಲಿ ಸಂರಕ್ಷಿತ ಅರಣ್ಯ ಪ್ರದೇಶ ಎಂಬ ಕಾರಣ ನೀಡಿ ವಿನಾಕಾರಣ ಮುಂದೂಡಿದೆ. ಅದೇ ಹುಲಿ ಸಂರಕ್ಷಿತಾರಣ್ಯದಲ್ಲಿ 435 ಎಕರೆ ವ್ಯಾಪ್ತಿಯಲ್ಲಿ ಗೋವಾಗೆ ವಿದ್ಯುತ್‌ ಸ್ಥಾವರಕ್ಕೆ ಅನುಮತಿ ನೀಡಲಾಗಿದೆ. ಅವರು ಅನುಮತಿ ನೀಡಿದ ತಕ್ಷಣ ನಮ್ಮ ರಾಜ್ಯ ಸರ್ಕಾರಕ್ಕೆ ಪತ್ರ ಬರೆದು ಯೋಜನೆಗೆ ಅನುವು ಮಾಡಿಕೊಡುವಂತೆ ಕೋರಿದ್ದಾರೆ. ಇದೆಲ್ಲವೂ ರಾಜ್ಯಕ್ಕೆ ಆದ ಅನ್ಯಾಯವಲ್ಲವೇ? ಎಂದು ಕಿಡಿಕಾರಿದರು.

Latest Videos
Follow Us:
Download App:
  • android
  • ios