ಬೆಂಗಳೂರು (ಮಾ.01):  ರಮೇಶ್‌ ಜಾರಕಿಹೊಳಿ ವಿರುದ್ಧದ ಯುವತಿಯ ಆರೋಪ ದುರುದ್ದೇಶ ಹಾಗೂ ರಾಜಕೀಯ ಪ್ರೇರಿತ ಎಂಬ ಮುಖ್ಯಮಂತ್ರಿ ಯಡಿಯೂರಪ್ಪ ಹೇಳಿಕೆಗೆ ರಾಜ್ಯ ಕಾಂಗ್ರೆಸ್‌ ತೀವ್ರ ಆಕ್ಷೇಪ ವ್ಯಕ್ತಪಡಿಸಿದೆ.

ಮುಖ್ಯಮಂತ್ರಿ ಬಿ.ಎಸ್‌. ಯಡಿಯೂರಪ್ಪ ಅವರೇ ಅತ್ಯಾಚಾರ ಆರೋಪಿಗೆ ತನಿಖೆಗೆ ಮೊದಲೇ ಕ್ಲೀನ್‌ಚಿಟ್‌ ನೀಡುತ್ತಿದ್ದಾರೆ. ಬಂಧಿಸುವ ಬದಲು ಅತ್ಯಾಚಾರ ಆರೋಪಿಯನ್ನು ಚುನಾವಣಾ ಪ್ರಚಾರಕ್ಕೆ ಆಹ್ವಾನಿಸುತ್ತಿದ್ದಾರೆ. ಮುಖ್ಯಮಂತ್ರಿಗಳೇ ಅತ್ಯಾಚಾರ ಆರೋಪಿ ಪರ ನಿಂತಿರುವಾಗ ಜನಸಾಮಾನ್ಯರು ನ್ಯಾಯದ ಮೇಲೆ ನಂಬಿಕೆ ಇಡಬಹುದೇ ಎಂದು ಪ್ರಶ್ನಿಸಿದೆ.

ಎಕ್ಸ್‌ಕ್ಲೂಸಿವ್: ವಿಚಾರಣೆ ಬಳಿಕ ಸೀಡಿ ಲೇಡಿ ಬಳಸಿದ್ದು ಯಾರ ಕಾರು ಗೊತ್ತಾ.? ..

ಈ ಬಗ್ಗೆ ಸರಣಿ ಟ್ವೀಟ್‌ ಮಾಡಿರುವ ರಾಜ್ಯ ಕಾಂಗ್ರೆಸ್‌, ಮುಖ್ಯಮಂತ್ರಿಗಳು ಅತ್ಯಾಚಾರಿ ಆರೋಪಿಯನ್ನು ಸಮರ್ಥಿಸಿಕೊಳ್ಳಲು ಸಂತ್ರಸ್ತೆಯ ಆರೋಪವೇ ಸುಳ್ಳು ಎನ್ನುತ್ತಿದ್ದಾರೆ. ಪ್ರಧಾನಮಂತ್ರಿ ನರೇಂದ್ರ ಮೋದಿಯವರೇ ನಿಮ್ಮದು ಸ್ಲೋಗನ್‌ ಮಾತ್ರ, ಬೇಟಿ ಬಚಾವೋ ವಾಸ್ತವದಲ್ಲಿ ‘ರೇಪಿಸ್ಟ್‌ ಬಚಾವೋ’ ಅಜೆಂಡಾ ಅಲ್ಲವೇ ಎಂದು ಕಿಡಿ ಕಾರಿದೆ.

ಗೃಹ ಸಚಿವ ಬಸವರಾಜ ಬೊಮ್ಮಾಯಿ ಅವರ ಬಗ್ಗೆಯೂ ಟೀಕಿಸಿದ್ದು, ಬೊಮ್ಮಾಯಿ ಅವರೇ ಉಳ್ಳವರಿಗೆ ಒಂದು ಕಾನೂನು, ಜನ ಸಾಮಾನ್ಯರಿಗೆ ಒಂದು ಕಾನೂನು ಇದೆಯೇ ಎಂದು ರಾಜ್ಯದ ಜನ ಪ್ರಶ್ನಿಸುತ್ತಿದ್ದಾರೆ. ಜನತೆಯಲ್ಲಿದ್ದ ಕಾನೂನಿನ ಬಗೆಗಿನ ಭರವಸೆಯನ್ನು ಕುಗ್ಗಿಸುತ್ತಿರುವುದೂ ಅಲ್ಲದೆ ಅತ್ಯಾಚಾರ ಆರೋಪಿಯ ಬಗ್ಗೆ ಭಂಡತನದಲ್ಲಿ ಸಮರ್ಥನೆಗೆ ಇಳಿಯುವುದಕ್ಕೆ ಸ್ವಲ್ಪವೂ ನಾಚಿಕೆ ಎನಿಸುವುದಿಲ್ಲವೇ ಎಂದು ಟೀಕಿಸಿದೆ.