-ಕಾರಾಗೃಹ ಸುಧಾರಣೆಗೆ ಎಡಿಜಿಪಿ ಸಮಿತಿ ಶಿಫಾರಸು । ಜೈಲು ಸುಧಾರಣೆಗೆ ಸಮಿತಿಯಿಂದ 30 ಅಂಶದ ಸಲಹೆ-ಪರಂಗೆ ಹಿತೇಂದ್ರ ನೇತೃತ್ವ ಸಮಿತಿ ವರದಿ । ಉಗ್ರ, ವಿಕೃತಕಾಮಿ ಕೈಲಿ ಮೊಬೈಲ್ ಬಳಿಕ ರಚಿತವಾಗಿದ್ದ ಕಮಿಟಿ
ಗಿರೀಶ್ ಮಾದೇನಹಳ್ಳಿ
ಬೆಂಗಳೂರು : ಮೂರು ವರ್ಷಗಳಿಗೆ ಅಧಿಕಾರಿ-ಸಿಬ್ಬಂದಿ ವರ್ಗಾವಣೆ, ಬ್ಯಾರಕ್‌ಗೊಳಗೆ ಸಿಸಿಟಿವಿ ಕ್ಯಾಮೆರಾಗಳ ಅಳವಡಿಕೆ, ಸಿಬ್ಬಂದಿಗೆ ಬಾಡಿ ವೋರ್ನ್ ಕ್ಯಾಮೆರಾ ಕಡ್ಡಾಯ ಹಾಗೂ ಹೊರಗಿನ ಹಣ್ಣು-ಆಹಾರ ನಿಷೇಧ ಸೇರಿ ಕಾರಾಗೃಹಗಳ ಸುಧಾರಣೆಗೆ ಸರ್ಕಾರಕ್ಕೆ ಎಡಿಜಿಪಿ (ಕಾನೂನು ಮತ್ತು ಸುವ್ಯವಸ್ಥೆ) ನೇತೃತ್ವದ ಉನ್ನತ ಮಟ್ಟದ ಸಮಿತಿ ಶಿಫಾರಸು ಮಾಡಿದೆ.
ದೇಶದ ಅತಿದೊಡ್ಡ ಕಾರಾಗೃಹ ದೆಹಲಿಯ ತಿಹಾರ್ ಹಾಗೂ ತೆಲಂಗಾಣದ ಚಂಚಲಗುಡ ಹಾಗೂ ರಾಜ್ಯದ ಪರಪ್ಪನ ಅಗ್ರಹಾರ ಸೇರಿ ಎಲ್ಲ ಜೈಲುಗಳಿಗೆ ಭೇಟಿ ನೀಡಿ ಕಾನೂನು ಮತ್ತು ಸುವ್ಯವಸ್ಥೆ ವಿಭಾಗದ ಎಡಿಜಿಪಿ ಆರ್.ಹಿತೇಂದ್ರ ನೇತೃತ್ವದ ನಾಲ್ವರು ಐಪಿಎಸ್ ಅಧಿಕಾರಿಗಳ ಸಮಿತಿ ಅವಲೋಕಿಸಿತು. ಎರಡು ತಿಂಗಳು ಕಾರಾಗೃಹ ವ್ಯವಸ್ಥೆ ಪರಾಮರ್ಶೆ ನಂತರ ಸೆರೆಮನೆಗಳ ಸುಧಾರಣೆಗೆ 30 ಅಂಶಗಳ ಶಿಫಾರಸು ಮಾಡಿ ಸರ್ಕಾರಕ್ಕೆ ಎಡಿಜಿಪಿ ನೇತೃತ್ವದ ಸಮಿತಿ ವರದಿ ಸಲ್ಲಿಸಿದೆ.
ಈ ವರದಿ ಸ್ವೀಕರಿಸಿದ ರಾಜ್ಯ ಗೃಹಮಂತ್ರಿ ಡಾ। ಜಿ.ಪರಮೇಶ್ವರ್ ಅವರು, ಸಮಿತಿ ಶಿಫಾರಸುಗಳ ಅನುಷ್ಠಾನಕ್ಕೆ ಕಾರಾಗೃಹ ಮತ್ತು ಸುಧಾರಣಾ ಸೇವಾ ಇಲಾಖೆಯ ಡಿಜಿಪಿ ಅಲೋಕ್ ಕುಮಾರ್ ಅವರಿಗೆ ಜವಾಬ್ದಾರಿ ನೀಡಿದ್ದಾರೆ.
ವಿಶೇಷ ಸೌಲಭ್ಯ ವಿವಾದ:
ಕಳೆದ ನವೆಂಬರ್‌ನಲ್ಲಿ ಪರಪ್ಪನ ಅಗ್ರಹಾರ ಕೇಂದ್ರ ಕಾರಾಗೃಹದ ಶಂಕಿತ ಉಗ್ರ ಶಕೀಲ್ ಹಾಗೂ ಕುಖ್ಯಾತ ಪಾತಕಿ ಉಮೇಶ್ ರೆಡ್ಡಿ ಸೇರಿ ಕೆಲವರಿಗೆ ವಿಶೇಷ ಸೌಲಭ್ಯ ನೀಡಿದ ವಿವಾದದ ವಿಡಿಯೋ ಬಯಲಾಗಿ ಬಿರುಗಾಳಿ ಎಬ್ಬಿಸಿತ್ತು. ಈ ಹಿನ್ನೆಲೆಯಲ್ಲಿ ಕಾರಾಗೃಹಗಳ ಸುಧಾರಣೆಗೆ ಎಡಿಜಿಪಿ ನೇತೃತ್ವದಲ್ಲಿ ಐಜಿಪಿ ಸಂದೀಪ್ ಪಾಟೀಲ್ ಹಾಗೂ ಎಸ್ಪಿಗಳಾದ ರಿಷ್ಯಂತ್ ಹಾಗೂ ಅಮರನಾಥ್ ರೆಡ್ಡಿ ಒಳಗೊಂಡ ಸಮಿತಿ ರಚಿಸಲಾಗಿತ್ತು.
ಸಮಿತಿ ಶಿಫಾರಸಿನ ಪ್ರಮುಖಾಂಶಗಳು
ಸಿಬ್ಬಂದಿ ವರ್ಗ ಹೆಚ್ಚಳ
ರಾಜ್ಯ ಕಾರಾಗೃಹಗಳಲ್ಲಿ ಶೇ.40-47 ರಷ್ಟು ಸಿಬ್ಬಂದಿ ಕೊರತೆ ಇದೆ. ಪರಪ್ಪನ ಅಗ್ರಹಾರ ಕೇಂದ್ರ ಕಾರಾಗೃಹದಲ್ಲಿ 4,834 ಕೈದಿಗಳಿದ್ದರೆ 571 ಸಿಬ್ಬಂದಿ ಮಾತ್ರ ಇದ್ದಾರೆ. ಕಾರಾಗೃಹ ನಿಯಮಾವಳಿ ಅನುಸಾರ 6 ಕೈದಿಗಳಿಗೆ ಓರ್ವ ಸಿಬ್ಬಂದಿ ಇರಬೇಕು. ಜೈಲಿನ ಭದ್ರತೆ, ಸುರಕ್ಷತೆ ಹಾಗೂ ಉತ್ತಮ ಆಡಳಿತದ ದೃಷ್ಟಿಯಿಂದ ತಕ್ಷಣವೇ ಸಿಬ್ಬಂದಿ ಬಲವರ್ಧನೆಯ ಅಗತ್ಯವಿದೆ.
ಒಂದೇ ಜೈಲಿನಲ್ಲಿ ದೀರ್ಘಾವಧಿ ಬೇಡ:
ಮೂರು ವರ್ಷಗಳಿಗೊಮ್ಮೆ ಅಧಿಕಾರಿ-ಸಿಬ್ಬಂದಿ ವರ್ಗಾವಣೆ ಮಾಡಬೇಕು. ಒಂದೇ ಜೈಲಿನಲ್ಲಿ ಕನಿಷ್ಠ 2 ವರ್ಷ ಮಾತ್ರ ಸೇವಾವಧಿ ನಿಗದಿಪಡಿಸಬೇಕು. ಅಲ್ಲದೆ, ಅಧಿಕಾರಿ ವರ್ಗಕ್ಕೆ ಆಧುನಿಕ ಯುಗದ ಸುರಕ್ಷತಾ ಹಾಗೂ ಆಡಳಿತ ಕುರಿತು ತರಬೇತಿ ನೀಡಬೇಕು. ಈ ತರಬೇತಿ ಕಾರ್ಯಾಗಾರ ಪ್ರತಿ ವರ್ಷ ನಡೆಯಬೇಕು.
ಜೈಲು ಗೋಡೆ 30 ಅಡಿ ಎತ್ತರ, ಸುತ್ತ ಬಲೆ ಇರಲಿ:
ಜೈಲಿನ ತಡೆಗೋಡೆ ಕನಿಷ್ಠ 30 ಅಡಿ ಎತ್ತರ ಹಾಗೂ ಅದರ ಸುತ್ತ ಬಲೆ ವ್ಯವಸ್ಥೆ ಕಲ್ಪಿಸಬೇಕು. ಈ ಗೋಡೆಗಳ ಮೇಲೆ ಸಿಸಿಟಿವಿ ಕಣ್ಗಾವಲಿರಬೇಕು. ಇದರಿಂದ ಜೈಲಿನ ಹೊರಗಿನಿಂದ ಗಾಂಜಾ ಸೇರಿ ಇತರೆ ವಸ್ತುಗಳನ್ನು ಎಸೆಯುವುದನ್ನು ತಪ್ಪಿಸಬಹುದು. ಅಲ್ಲದೆ, ಜೈಲು ಸುತ್ತ ಮಾನವ ಪ್ರವೇಶ ನಿರ್ಬಂಧಿತ ವಲಯ ನಿರ್ಮಿಸಬೇಕು.
ಕೈದಿಗಳ ಬ್ಲ್ಯಾಕ್‌ಮೇಲ್‌ಗೆ ಕಡಿವಾಣ:
ಕಾರಾಗೃಹದ ಅಧಿಕಾರಿ-ಸಿಬ್ಬಂದಿಗೆ ಬೆದರಿಸಿ ಕೈದಿಗಳು ಬ್ಲ್ಯಾಕ್‌ಮೇಲ್ ಮಾಡುವ ಕೃತ್ಯಗಳಿಗೆ ಕಡಿವಾಣ ಹಾಕಬೇಕು. ವಿಡಿಯೋ ಅಥವಾ ಪೋಟೋ ಮುಂದಿಟ್ಟು ಸಿಬ್ಬಂದಿಗೆ ಕೆಲ ಕೈದಿಗಳು ಬೆದರಿಸುತ್ತಿದ್ದಾರೆ. ಈ ಕೃತ್ಯಗಳು ಬೆಳಕಿಗೆ ಬಂದಾಗ ಪ್ರಾಥಮಿಕ ಹಂತದ ವಿಚಾರಣೆ ನಡೆಸಿ ಮುಂದಿನ ಕ್ರಮ ಜರುಗಿಸಬೇಕು.
ಎಲ್ಲ ಬ್ಯಾರಕ್‌ಗಳು, ಸೆಲ್‌ನಲ್ಲಿ ಸಿಸಿಟಿವಿ ಕ್ಯಾಮೆರಾ:
ದೇಶದ ಅತಿದೊಡ್ಡ ತಿಹಾರ್ ಜೈಲು ಮಾದರಿಯಲ್ಲಿ ರಾಜ್ಯದ ಎಲ್ಲ ಕಾರಾಗೃಹಗಳ ಬ್ಯಾರಕ್ ಹಾಗೂ ಸೆಲ್‌ಗಳಲ್ಲಿ ಸಿಸಿಟಿವಿ ಕ್ಯಾಮೆರಾ ಅಳವಡಿಸಬೇಕು. ಈವರೆಗೆ ಬ್ಯಾರಕ್ ಹೊರಗೆ ಮಾತ್ರ ಕ್ಯಾಮೆರಾ ಅಳವಡಿಸಲಾಗಿದೆ. ಈ ಕ್ಯಾಮೆರಾಗಳು ದಿನದ 24*7 ತಾಸು ನಿರ್ವಹಣೆ ಮಾಡಬೇಕು. ತಿಹಾರ್ ಜೈಲಿನಲ್ಲಿ 16 ಸಾವಿರ ಕೈದಿಗಳಿದ್ದು, 8,600 ಸಿಸಿಟಿವಿಗಳಿವೆ. ಆದರೆ ಪರಪ್ಪನ ಅಗ್ರಹಾರ ಕೇಂದ್ರ ಕಾರಾಗೃಹದಲ್ಲಿ 5 ಸಾವಿರ ಕೈದಿಗಳಿಗೆ ಕೇವಲ 332 ಸಿಸಿಟಿವಿಗಳಿವೆ. ವೈಫೈ ಸಿಗ್ನಲ್ ಬಗ್ಗೆ ಸಹ ಆಗಾಗ್ಗೆ ಪರೀಕ್ಷೆ ನಡೆಸಬೇಕು. ಬ್ಯಾರಕ್, ಸೆಲ್ ಹಾಗೂ ಶೌಚಾಲಯಗಳಲ್ಲಿ ಲೋಹ ಪರೀಕ್ಷಕ ಯಂತ್ರ ಬಳಸಿ ತಪಾಸಣೆ ನಡೆಸಬೇಕು.
ಕೈದಿಗಳಿಗೆ ಕರೆ ವ್ಯವಸ್ಥೆ ಹೆಚ್ಚಳ:
ಕೈದಿಗಳಿಗೆ ದೂರವಾಣಿ ಕರೆಗಳ ವ್ಯವಸ್ಥೆ (ಪ್ರಿಸನರ್ ಕಾಲಿಂಗ್ ಸಿಸ್ಟಂ-ಸಿಪಿಎಸ್) ಸುಧಾರಿಸುವಂತೆಯೂ ವರದಿಯಲ್ಲಿ ಶಿಫಾರಸು ಮಾಡಲಾಗಿದೆ. ತಮ್ಮ ಕುಟುಂಬದವರ ಜತೆ ಕೈದಿಗಳಿಗೆ ಅವಕಾಶ ಕಲ್ಪಿಸಿದರೆ ಅಕ್ರಮವಾಗಿ ಮೊಬೈಲ್ ಬಳಕೆಗೆ ಕಡಿವಾಣ ಬೀಳಲಿದೆ. ಕೈದಿಗಳಿಗೆ ಬಯೋಮೆಟ್ರಿಕ್ ವ್ಯವಸ್ಥೆ ಜಾರಿಗೊಳಿಸಬೇಕು. ಎಲೆಕ್ಟ್ರಿಕಲ್ ಸ್ವಿಚ್ ಬೋರ್ಡ್‌ಗಳನ್ನು ಸೆಲ್‌ನಿಂದ ಹೊರಗಿಡಬೇಕು. ಎಫ್‌ಎಂ ರೇಡಿಯೋ ಸ್ಪೀಕರ್‌ಗಳನ್ನು ಬ್ಯಾರಕ್‌ಗಳಲ್ಲೂ ಅಳವಡಿಸಬೇಕು.
ಕಾರಾಗೃಹ ಅಭಿವೃದ್ಧಿ ಮಂಡಳಿ ಸಕ್ರಿಯ:
ಕಾರಾಗೃಹ ಪ್ರಗತಿಗೆ ರಚಿಸಲಾಗಿರುವ ಕಾರಾಗೃಹ ಅಭಿವೃದ್ಧಿ ಮಂಡಳಿ ಸಕ್ರಿಯವಾಗಿ ಕಾರ್ಯನಿರ್ವಹಿಸಬೇಕು. ನಿಯಮಿತ ಸಭೆಗಳು ನಡೆದು ಕಾರಾಗೃಹಗಳ ಆಂತರಿಕ ಪ್ರಗತಿಗೆ ಯೋಜನೆ ರೂಪಿಸಬೇಕು. ಅಲ್ಲದೆ, ಕೈದಿಗಳ ಕೌಶಲ್ಯ ಬಳಕೆಗೆ ಅವಕಾಶ ಕೊಡಬೇಕು. ಜೈಲಿನ ಗುಡಿ ಕೈಗಾರಿಕೆಗಳು, ಬೇಕರಿ ಸೇರಿ ಇತರೆ ಕೆಲಸಗಳಿಗೆ ಉತ್ತೇಜನ ಸಿಗಬೇಕು.
ಕೈದಿಗಳ ವರ್ಗೀಕರಣ
ಜೈಲಿನಲ್ಲಿ ಸಜಾ ಬಂಧಿಗಳು, ಕುಖ್ಯಾತ ಪಾತಕಿಗಳು, ಮೊದಲ ಬಾರಿ ಕ್ರಿಮಿನಲ್‌ಗಳು, ಯುವ ಕ್ರಿಮಿನಲ್‌ಗಳು, ಮಹಿಳಾ ಕೈದಿಗಳು ಹಾಗೂ ಪಾತಕಿಗಳಲ್ಲದ ಕೈದಿಗಳು (ಉದಾ.ವಂಚನೆ, ವರದಕ್ಷಿಣೆ ಕಿರುಕುಳ, ಹಲ್ಲೆ ಹೀಗೆ ಸಣ್ಣಪುಟ್ಟ ಪ್ರಕರಣಗಳಲ್ಲಿ ಬಂಧಿತರು) ಹೀಗೆ ವರ್ಗೀಕರಿಸಬೇಕು. ಇದರಿಂದ ಕೈದಿಗಳ ಸುಧಾರಣೆಗೂ ಅನುಕೂಲವಾಗಲಿದೆ. ಕುಖ್ಯಾತ ಪಾತಕಿಗಳ ಜತೆ ಸೇರಿಸಿದರೆ ಮೊದಲ ಬಾರಿ ಜೈಲಿಗೆ ಬಂದವರು ಪಾತಕಿಗಳಾಗುವ ಅಪಾಯವಿರುತ್ತದೆ.
ಹೊರಗಿನ ಊಟ, ತಿಂಡಿ ನಿಷೇಧ
ಹೊರಗಿನ ಆಹಾರ-ಹಣ್ಣುಗಳಿಗೆ ನಿರ್ಬಂಧಿಸಬೇಕು. ಜೈಲಿನ ಮಳಿಗೆಗಳಲ್ಲಿ ಕೈದಿಗಳಿಗೆ ಹಣ್ಣು, ತಿಂಡಿ ದೊರೆಯಬೇಕು. ಎರಡು ದಿನಗಳ ಬಳಿಕ ಹಣ್ಣುಗಳನ್ನು ಬಳಸಿ ವೈನ್ ತಯಾರಿಸುವ ಅವಕಾಶವಿರುತ್ತದೆ. ಕೈದಿಗಳಿಗೆ ಹೊರಗಿನಿಂದ ಪೂರೈಕೆಯಾಗುವ ಬಟ್ಟೆಗಳನ್ನು ಪರಿಶೀಲಿಸಬೇಕು. ಇದರಲ್ಲಿ ನಿಷೇಧಿತ ವಸ್ತು ಅಡಗಿಸಿ ರವಾನಿಸಬಹುದು. ಅದೇ ರೀತಿ ವೈದ್ಯಕೀಯ ತಪಾಸಣೆಗಳ ಮೇಲೆ ಗಮನವಿಡಬೇಕು.


