Asianet Suvarna News Asianet Suvarna News

ಕರ್ನಾಟಕಕ್ಕೆ ಮತ್ತೊಮ್ಮೆ ಕಾವೇರಿ ಸಂಕಷ್ಟ, ನ.23ರವರೆಗೆ ತಮಿಳುನಾಡಿಗೆ ನೀರು ಬಿಡುವಂತೆ ಆದೇಶ

ಕರ್ನಾಟಕದ ಸಂಕಷ್ಟದ ನಡುವೆಯೂ ತಮಿಳುನಾಡಿಗೆ ಮತ್ತೆ ನೀರು ಬಿಡುವಂತೆ ಕಾವೇರಿ ನದಿ ನೀರು ನಿರ್ವಹಣಾ ಪ್ರಾಧಿಕಾರ ಶುಕ್ರವಾರ ನಡೆದ ಸಭೆಯಲ್ಲಿ ಆದೇಶ ನೀಡಿದೆ.

Cauvery Water Management Authority Meeting directs karnataka to release 2600 cusec water to tamil nadu san
Author
First Published Nov 3, 2023, 5:12 PM IST

ನವದೆಹಲಿ (ನ.3): ಒಂದೆಡೆ ಕರ್ನಾಟಕ ಸರ್ಕಾರದ ದುರ್ಬಲ ವಾದದ ನಡುವೆ ಕಾವೇರಿ ನೀರು ತಮಿಳುನಾಡಿಗೆ ಸರಾಗವಾಗಿ ಹರಿದು ಹೋಗಲಾರಂಭಿಸಿದೆ. ಶುಕ್ರವಾರ ನಡೆದ ಸಭೆಯಲ್ಲಿ ಕಾವೇರಿ ನದಿ ನೀರು ನಿರ್ವಹಣಾ ಪ್ರಾಧಿಕಾರ, ನ.23ರವರೆಗೆ ತಮಿಳುನಾಡಿಗೆ ನಿತ್ಯ 2600 ಕ್ಯೂಸೆಕ್‌ ನೀರು ಬಿಡುವಂತೆ ಆದೇಶ ನೀಡಿದೆ. ಶುಕ್ರವಾರ ಮಧ್ಯಾಹ್ನ 2 ಗಂಟೆಗೆ ಸಭೆ ನಡೆಯಿತು. ಸಭೆಯಲ್ಲಿ ಖುದ್ದು ಭಾಗವಹಿಸಲು ಕರ್ನಾಟಕದ ಅಧಿಕಾರಿಗಳು ದೆಹಲಿಗೆ ತೆರಳಿದ್ದರು. ಸಿಡಬ್ಲ್ಯುಆರ್‌ಸಿ ಶಿಫಾರಸು ಆದೇಶ ರದ್ದು ಮಾಡುವಂತೆ ಕರ್ನಾಟಕದ ಅಧಿಕಾರಿಗಳು ಮನವಿ ಮಾಡಿದ್ದರು. ಸಿಡಬ್ಲ್ಯುಎಂಎ ಸಭೆಯಲ್ಲಿ ಹೆಚ್ಚುವರಿ ಮುಖ್ಯಕಾರ್ಯದರ್ಶಿ ರಾಕೇಶ್ ಸಿಂಗ್ ಭಾಗಿಯಾಗಿದ್ದರು. ಸಾಕಷ್ಟು ಚರ್ಚೆಯ ಬಳಿಕ ಕಾವೇರಿ ನದಿ ನೀರು ನಿರ್ವಹಣಾ ಪ್ರಾಧಿಕಾರ, ಸಿಡಬ್ಲ್ಯುಆರ್‌ಸಿ ನೀಡಿದ ಶಿಫಾರಸ್ಸನ್ನು ಎತ್ತಿ ಹಿಡಿದಿದೆ. ನವೆಂಬರ್ 23ರ ತನಕ ಪ್ರತಿ ದಿನ 2600 ಕ್ಯೂಸೆಕ್‌ ನೀರು ಬಿಡುವಂತೆ ಆದೇಶ ನೀಡಿದೆ. ಸಿಡಬ್ಲ್ಯುಎಂಎ ಇನ್ನೂ ಒಂದು ವಾರ ಹೆಚ್ಚು ನೀರು ಬಿಡುವಂತೆ ಸೂಚನೆ ನೀಡಿದೆ. ಸಿಡಬ್ಲ್ಯುಎಂಎ ಅಧ್ಯಕ್ಷ ಎಸ್ ಕೆ ಹಲ್ದಾರ್ ಜೊತೆ ಕರ್ನಾಟಕದ ಎಸಿಎಸ್ ರಾಕೇಶ್ ಸಿಂಗ್ ಮತ್ತು ತಮಿಳುನಾಡು ಪ್ರಧಾನ ಕಾರ್ಯದರ್ಶಿ ಚರ್ಚೆ ನಡೆಸಿದ್ದಾರೆ..

ಸಭೆಯ ಬಳಿಕ ಮಾತನಾಡಿದ ಎಸಿಎಸ್ ರಾಕೇಶ್ ಸಿಂಗ್, ನವೆಂಬರ್ 23 ರ ತನಕ 2600 ಕ್ಯೂಸೆಕ್ ನೀರು ಬಿಡಲು ಆದೇಶ ನೀಡಲಾಗಿದೆ. ತಮಿಳುನಾಡು 13,000 ಕ್ಯೂಸೆಕ್ ನೀರು ಬಿಡಲು ಆಗ್ರಹಿಸಿತು. ಇಂದು ಮತ್ತೊಂದು ಸಕಾರಾತ್ಮಕ ಬೆಳವಣಿಗೆ ಆಗಿದೆ. ಮೇಕೆದಾಟು ಯೋಜನೆ ಚರ್ಚೆಗೆ ಪ್ರತ್ಯೇಕ ದಿನಾಂಕ ನಿಗದಿ ಮಾಡಲು ಪ್ರಾಧಿಕಾರ ಒಪ್ಪಿದೆ. ಶೀಘ್ರದಲ್ಲೇ ದಿನಾಂಕ ನಿಗದಿ ಮಾಡಲಾಗುತ್ತದೆ ಎಂದು ಪ್ರಾಧಿಕಾರ ತಿಳಿಸಿದೆ. ಅದೇ ರೀತಿ ತಮಿಳುನಾಡು ಅವರು ಇಂಟರ್ ಲಿಂಕಿಂಗ್ ಯೋಜನೆ ಚರ್ಚೆ ಮಾಡಲು ಮುಂದಾಗಿದೆ. ಇದಕ್ಕೆ ಕರ್ನಾಟಕದ ಆಕ್ಷೇಪ ಇದೆ .ಪ್ರತ್ಯೇಕ ಸಭೆಯಲ್ಲಿ ಈ ಎರಡು ಯೋಜನೆಗಳು ಚರ್ಚೆಗೆ ಬರಬಹುದು ಎಂದು ತಿಳಿಸಿದ್ದಾರೆ.

ತಮಿಳುನಾಡಿಗೆ ಮತ್ತೆ ನಿತ್ಯ 2600 ಕ್ಯು ನೀರು ಬಿಡಲು ಆದೇಶ; ಕಾವೇರಿ ನದಿಗೆ ಇಳಿದು ರೈತ ಮುಖಂಡರು ಪ್ರತಿಭಟನೆ

ನವೆಂಬರ್ 1ರಿಂದ 15ರ ತನಕ ನಿತ್ಯ 2,600 ಕ್ಯೂಸೆಕ್‌ ಕಾವೇರಿ ನದಿ ನೀರನ್ನು ತಮಿಳುನಾಡಿಗೆ ಹರಿಸಬೇಕು ಎಂಬ ಕಾವೇರಿ ನೀರು ನಿಯಂತ್ರಣಾ ಸಮಿತಿ ಆದೇಶವನ್ನು ಒಪ್ಪದ ಕರ್ನಾಟಕ, ತಮಿಳುನಾಡಿಗೆ ನೀರು ಬಿಡುಗಡೆ ಸಾಧ್ಯವಿಲ್ಲ ಎಂದು ವಾದ ಮಾಡಿತ್ತು.  ಕೆಆರ್‌ಎಸ್‌ ಒಳಹರಿವು ಸಂಪೂರ್ಣ ಶೂನ್ಯವಾಗಿದೆ. ಎಲ್ಲ ಜಲಾಶಯಗಳು ಸೇರಿ 51 ಟಿಎಂಸಿ ನೀರು ಮಾತ್ರ ಲಭ್ಯವಿದೆ. ಕುಡಿಯುವುದಕ್ಕೂ ನೀರಿನ ಕೊರತೆ ಉಂಟಾಗಲಿರುವುದರಿಂದ ಮಿಕ್ಕಿರುವ ನೀರನ್ನು ಸಂರಕ್ಷಣೆ ಮಾಡಿಕೊಳ್ಳಲೇಬೇಕಾಗಿದ್ದು, ನೀರು ಬಿಡುಗಡೆ ಸಾಧ್ಯವಿಲ್ಲ ಎಂದು ವಾದಿಸಿತು.
ಆದರೆ, ನವೆಂಬರ್ 1 ರಿಂದ ನವೆಂಬರ್ 23ರವರೆಗೂ ನಿತ್ಯ 2,600 ಕ್ಯೂಸೆಕ್ಸ್ ನೀರನ್ನು ತಮಿಳುನಾಡಿಗೆ ಬಿಡುಗಡೆ ಮಾಡಬೇಕೆಂದು ಕರ್ನಾಟಕಕ್ಕೆ ಸೂಚಿಸಿದ ಪ್ರಾಧಿಕಾರ, ತಮಿಳುನಾಡು ವಿರೋಧದ ನಡುವೆ ಮೇಕೆದಾಟು ಯೋಜನೆ ಕುರಿತು ಚರ್ಚೆಯನ್ನು ಒಪ್ಪಿಕೊಂಡಿತು.

ಸರ್ಕಾರಗಳ ಎಡವಟ್ಟುಗಳಿಂದ ಕಾವೇರಿ ಸಮಸ್ಯೆ ಜೀವಂತ: ಎಚ್.ವಿಶ್ವನಾಥ್

Follow Us:
Download App:
  • android
  • ios