ತಮಿಳುನಾಡಿಗೆ ನೀರು ಬಿಡುವಂತೆ ಕಾವೇರಿ ನೀರು ನಿರ್ವಹಣಾ ಪ್ರಾಧಿಕಾರದ ಆದೇಶವನ್ನು ಪ್ರಶ್ನಿಸಿ ಸುಪ್ರೀಂ ಕೋರ್ಟ್ ಮೊರೆ ಹೋಗುವುದಾಗಿ ಕರ್ನಾಟಕ ಉಪ ಮುಖ್ಯಮಂತ್ರಿ ಡಿಕೆ ಶಿವಕುಮಾರ್ ಹೇಳಿದರು.

ಬೆಂಗಳೂರು (ಸೆ.19): ತಮಿಳುನಾಡಿಗೆ ನೀರು ಬಿಡುವಂತೆ ಕಾವೇರಿ ನೀರು ನಿರ್ವಹಣಾ ಪ್ರಾಧಿಕಾರದ ಆದೇಶವನ್ನು ಪ್ರಶ್ನಿಸಿ ಸುಪ್ರೀಂ ಕೋರ್ಟ್ ಮೊರೆ ಹೋಗುವುದಾಗಿ ಕರ್ನಾಟಕ ಉಪ ಮುಖ್ಯಮಂತ್ರಿ ಡಿಕೆ ಶಿವಕುಮಾರ್ ಹೇಳಿದರು.

ಇಂದು ಕಾವೇರಿ ಜಲವಿವಾದ ಕುರಿತಂತೆ ಮಾಧ್ಯಮದವರು ಕೇಳಿದ ಪ್ರಶ್ನೆಗೆ ಪ್ರತಿಕ್ರಿಯಿಸಿದ ಅವರು, ತಮಿಳುನಾಡಿಗೆ ಇನ್ನೂ 15 ದಿನಗಳ ಕಾಲ 5,000 ಕ್ಯೂಸೆಕ್ ನೀರು ಬಿಡುವುದನ್ನು ಮುಂದುವರಿಸುವಂತೆ CWMA ಆದೇಶಿಸಿದೆ. ಈ ಆದೇಶ ಪ್ರಶ್ನಿಸಿ ಸುಪ್ರೀಂ ಕೋರ್ಟ್ ಮೊರೆ ಹೋಗಲು ನಮ್ಮ ಸರ್ಕಾರದ ಮುಂದಿನ ನಿರ್ಧಾರವಾಗಿದೆ ಎಂದರು.

ಕಾವೇರಿ ಜಲವಿವಾದ ಸಂಬಂಧ ಸುಪ್ರೀಂ ಕೋರ್ಟ್‌ನಲ್ಲಿ ವಾಸ್ತವ ಪರಿಸ್ಥಿತಿಯನ್ನು ಮನವರಿಕೆ ಮಾಡಿಕೊಡುತ್ತೇವೆ. ಯಾವುದೇ ಕಾರಣಕ್ಕೂ ನೀರು ಬಿಡುವುದಿಲ್ಲ. ಈ ವಿಚಾರವಾಗಿ ನಾವು ನಮ್ಮ ಕಾನೂನು ಹೋರಾಟವನ್ನು ಮುಂದುವರಿಸುತ್ತೇವೆ ಎಂದರು.

ದೆಹಲಿಯಲ್ಲಿ ಕುಳಿತು ಆದೇಶ ಮಾಡೋದು ಅಲ್ಲ, ಇಲ್ಲಿಗೆ ಬಂದು ಪರಿಸ್ಥಿತಿ ತಿಳಿಯಲಿ : CWMA ಆದೇಶಕ್ಕೆ ದರ್ಶನ ಪುಟ್ಟಣ್ಣಯ್ಯ ಗರಂ

ಇದಕ್ಕೂ ಮುನ್ನ ಮಾತನಾಡಿದ ಬಿಜೆಪಿಯ ಹಿರಿಯ ಮುಖಂಡ ಬಸವರಾಜ ಬೊಮ್ಮಾಯಿ, ತಮಿಳುನಾಡಿಗೆ ಕಾವೇರಿ ನೀರು ಬಿಡಲು ಅಸಾಧ್ಯ ಹೀಗಾಗಿ ರಾಜ್ಯ ಸರ್ಕಾರ ಸುಪ್ರೀಂ ಕೋರ್ಟ್‌ಗೆ ಮೊರೆ ಹೋಗಿ ಮನವರಿಕೆ ಮಾಡಿಕೊಡಬೇಕು. ಯಾವುದೇ ಕಾರಣಕ್ಕೂ CWMA ಯ ಆದೇಶವನ್ನು ಅನುಸರಿಸಲು ಸಾಧ್ಯವಿಲ್ಲ ಎಂದರು.

ರಾಜ್ಯ ಸರ್ಕಾರ ಮೊದಲು ತಮಿಳುನಾಡಿಗೆ ನೀರು ಬಿಡುವುದನ್ನು ತಕ್ಷಣವೇ ನಿಲ್ಲಿಸಬೇಕು ಮತ್ತು ಜನರಿಗೆ ನ್ಯಾಯ ಒದಗಿಸಲು ಎಸ್‌ಸಿಯಲ್ಲಿ ಕಾನೂನು ಹೋರಾಟ ನಡೆಸಬೇಕು ಎಂದು ಒತ್ತಾಯಿಸಿದರು. 

ಬೊಮ್ಮಾಯಿ ಹೇಳಿಕೆಗೆ ಡಿಕೆಶಿ ತಿರುಗೇಟು:

ಯಾವುದೇ ಕಾರಣಕ್ಕೂ ತಮಿಳುನಾಡಿಗೆ ನೀರು ಬಿಡಬಾರದು ಕಾನೂನು ಹೊರಾಟ ಮಾಡಬೇಕು ಎಂಬ ಮಾಜಿ ಸಿಎಂ ಬೊಮ್ಮಾಯಿ ಹೇಳಿಕೆ ಪ್ರಸ್ತಾಪಿಸಿ ಡಿಸಿಎಂ ಡಿಕೆ ಶಿವಕುಮಾರ ತಿರುಗೇಟು ನೀಡಿದರು.

ನಾವು ಬಸವರಾಜ ಬೊಮ್ಮಾಯಿ ಅವರ ಸಲಹೆಯನ್ನು ಪಡೆದುಕೊಳ್ಳುತ್ತೇವೆ. ಹಾಗಾದ್ರೆ ಹಿಂದೆ ಅವರದೇ ಸರ್ಕಾರ ಇದ್ದಾಗ ಏನು ಮಾಡಿದ್ರ? ಬೊಮ್ಮಾಯಿಯವರೇ ನೀರಾವರಿ ಸಚಿವರಾಗಿದ್ರು, ಸಿಎಂ ಆಗಿದ್ರು. ಎಲ್ಲ ಅವರ ಸರಕಾರ ನೇಮಕ ಮಾಡಿದ ತಜ್ಞರೇ ಇರೋದು. ಹೀಗಿದ್ದೂ ರಾತ್ರೋ ರಾತ್ರಿ ತಮಿಳುನಾಡಿಗೆ ನೀರು ಬಿಡಲಿಲ್ಲವಾ? ಮೊದಲು ದೆಹಲಿಗೆ ನಡೀರಿ, ನಿಮ್ಮ ಅಧಿಕಾರ ಬಳಸಿ ರಾಜ್ಯದ ಹಿತ ಕಾಪಾಡಿ ಎಂದು ತಿರುಗೇಟು ನೀಡಿದರು.

ನಾಡಿದ್ದು ನಾವು ಸುಪ್ರೀಂ ಕೋರ್ಟ್‌ ಮುಂದೆ ಹೋಗಬೇಕು. ಯಾವ ಕಾರಣಕ್ಕೂ ನೀರು ಬಿಡೋಕೆ ಇಷ್ಟ ಇಲ್ಲ. ಆದರೆ ಕೋರ್ಟ್ ಸೂಚನೆಯನ್ನು ಗಮನದಲ್ಲಿಟ್ಟುಳ್ಳಬೇಕು. ಇದೇ ವಿಚಾರವಾಗಿ ನಾನು ದೆಹಲಿಗೆ ಹೋಗುತ್ತಿದ್ದೇನೆ. ಪಾರ್ಲಿಮೆಂಟ್ ಸದಸ್ಯರನ್ನು ಭೇಟಿ ಮಾಡಿ ಈ ವಿಚಾರವಾಗಿ ಚರ್ಚಿಸುತ್ತೇನೆ. ಕೇಂದ್ರ ಸರ್ಕಾರದ ಮೇಲೆ ನಾವೆಲ್ಲರೂ ಒತ್ತಡ ಹಾಕುವ ಕೆಲಸ ಮಾಡುತ್ತೇವೆ. ಇಷ್ಟೆಲ್ಲ ಪ್ರಯತ್ನದ ನಡುವೆ ಸುಪ್ರೀಂ ಕೋರ್ಟ್ ನೀರು ಬಿಡಿ ಅಂದ್ರೆ ನಾವೇನು ಮಾಡೋಕೆ ಆಗುತ್ತೆ? ಬೊಮ್ಮಾಯಿ ಏನು ಮಾಡೋಕೆ ಆಗುತ್ತೆ? ನಾವೆಲ್ಲರೂ ಸುಪ್ರೀಂ ಕೋರ್ಟ್‌ಗೆ ಗೌರವ ಕೊಡಲೇಬೇಕು. ಈ ವಿಚಾರದಲ್ಲಿ ರಾಜಕಾರಣವನ್ನು ಪಕ್ಕಕ್ಕಿಟ್ಟು ಜನರ ಹಿತ ಕಾಪಾಡಬೇಕು ಎಂದರು.

ತಮಿಳುನಾಡಿಗೆ ಕಾವೇರಿ ನೀರು ಹರಿಸಿದರೆ ಹೋರಾಟ ಅನಿವಾರ್ಯ: ಶಾಸಕ ದರ್ಶನ್ ಪುಟ್ಟಣ್ಣಯ್ಯ ಎಚ್ಚರಿಕೆ

ಪ್ರಧಾನಿ ಮೋದಿ ಮಧ್ಯೆಸ್ಥಿಕೆ ವಹಿಸಲಿ: ಡಿಕೆಶಿ

ಕಾವೇರಿ ಜಲವಿವಾದ ವಿಚಾರವಾಗಿ ಪ್ರಧಾನಿ ನರೇಂದ್ರ ಮೋದಿ ಮಧ್ಯೆಸ್ಥಿಕೆ ವಹಿಸಲಿ, ಸಲಹೆ ಸೂಚನೆಗಳನ್ನು ನೀಡಲಿ. ಇದರ ಜೊತೆಗೆ ದೇವೇಗೌಡರು ಪಾರ್ಲಿಮೆಂಟ್ ನಲ್ಲಿ ಇದ್ದಾರೆ. ಅವರ ಸಲಹೆ ಕೂಡ ಬಹಳ ಮುಖ್ಯ. ಅವರದು ಬಹಳ ಹಿರಿತನದ ಅನುಭವ ಇದೆ ಎಂದರು.