ಕುರುಬ ಸ್ವಾಮಿ ಪ್ರವೇಶ ಮಾಡಿದ್ದಕ್ಕೆ ದೇವಾಲಯ ತೊಳೆದ್ರು ; ಜಾತಿ ವ್ಯವಸ್ಥೆ ಬಗ್ಗೆ ಈಶ್ವರಾನಂದಪುರಿಶ್ರೀ ಬೇಸರ
ಇಂದಿಗೂ ಜಾತಿ ವ್ಯವಸ್ಥೆ, ಅಸಮಾನತೆ ಜೀವಂತ ಇದೆ ಎಂದು ಹೊಸದುರ್ಗ ಕೆಲ್ಲೋಡಿನ ಕನಕ ಶಾಖಾ ಮಠ ಗುರುಪೀಠದ ಶ್ರೀ ಈಶ್ವರಾನಂದಪುರಿ ಸ್ವಾಮೀಜಿ ಬೇಸರ ವ್ಯಕ್ತಪಡಿಸಿದರು.
ಚಿತ್ರದುರ್ಗ (ಫೆ.3) ಇಂದಿಗೂ ಜಾತಿ ವ್ಯವಸ್ಥೆ, ಅಸಮಾನತೆ ಜೀವಂತ ಇದೆ ಎಂದು ಹೊಸದುರ್ಗ ಕೆಲ್ಲೋಡಿನ ಕನಕ ಶಾಖಾ ಮಠ ಗುರುಪೀಠದ ಶ್ರೀ ಈಶ್ವರಾನಂದಪುರಿ ಸ್ವಾಮೀಜಿ ಬೇಸರ ವ್ಯಕ್ತಪಡಿಸಿದರು.
ಏಷ್ಯಾನೆಟ್ ಸುವರ್ಣ ಪ್ರತಿನಿಧಿಯೊಂದಿಗೆ ಮಾತನಾಡಿದ ಶ್ರೀಗಳು, ಕಳೆದ ತಿಂಗಳು ಏಕಾದಶಿ ಪ್ರಯುಕ್ತ ದೇವರ ದರ್ಶನಕ್ಕೆ ಭಗೀರಥ ಶ್ರೀ, ಕುಂಚಿಟಿಗ ಶ್ರೀಗಳು ಜೊತೆ ಹೊಸದುರ್ಗ ತಾಲ್ಲೂಕಿನ ಬಾಗೂರಿನ ಚನ್ನಕೇಶವ ದೇವಾಲಯಕ್ಕೆ ತೆರಳಿದ್ದೆವು. ಆ ದೇಗುಲದಲ್ಲಿ ಗರ್ಭಗುಡಿಗೆ ಪೂಜಾರಿ ಹೆಣ್ಣು ಮಕ್ಕಳು ಪ್ರವೇಶ ಮಾಡ್ತಾರೆ. ಆದರೆ ಮಠಾಧಿಪತಿಗಳನ್ನು ಹೊರಗಡೆ ನಿಲ್ಲಿಸುವ ಜಾತಿ ವ್ಯವಸ್ಥೆ ಇರುವುದು ಕಂಡು ಬೇಸರವಾಯ್ತು. ಮಠಾಧೀಶರಿಗೆ ಅಸ್ಪೃಶ್ಯತೆಯಾದ್ರೆ ಇನ್ನು ಜನ ಸಾಮಾನ್ಯರ ಗತಿ ಏನು ಎಂದು ನೋವಾಯ್ತು. ಅಂದು ಸಹಸ್ರಾರು ಜನ ಬಂದಿದ್ದರಿಂದ ವಿವಾದ ಮಾಡಬಾರದು ಎಂದು ವಾಪಸ್ ಮಠಕ್ಕೆ ಬಂದೆವು ಎಂದರು.
ನಿನ್ನೆ ಸಾಹಿತ್ಯ ಸಮ್ಮೇಳನದಲ್ಲೂ ಈ ಬಗ್ಗೆ ಪ್ರಸ್ತಾಪ ಮಾಡಿದೆವು. ಇವತ್ತಿಗೂ ಜಾತಿ ವ್ಯವಸ್ಥೆ ಇರುವುದು ಗಮನಿಸಿದ್ರೆ ಇದು ಬದಲಾಗಬೇಕಿದೆ ಅನಿಸ್ತಿದೆ. ಸಮ ಸಮಾಜದ ಕನಸು ಕಂಡಂತವರು ಬಸವಾದಿ ಶರಣರು. ಶರಣರ ನಾಡಿನಲ್ಲಿ ಇಂದಿಗೂ ಜಾತಿ ವ್ಯವಸ್ಥೆ ಇರುವುದು ಬೇಸರವಾಗಿದೆ. ಇನ್ಯಾವತ್ತೂ ಆ ದೇವಸ್ಥಾನಕ್ಕೆ ಹೋಗಬಾರದು ಎಂದು ಹೇಳಿದ್ವಿ. ಆಗ ಅಲ್ಲೇ ಇದ್ದ ಸಭಿಕರು ನೀವು ಹೋಗಬೇಕು, ನೀವು ಹೋದಾಗೆಲ್ಲ ದೇವಸ್ಥಾನ ತೊಳಿತಾರೆ ಎಂದರು. ಆಗ ಒಳ್ಳೆಯದಾಗುತ್ತೆ ಎಂದು ಅಭಿಪ್ರಾಯ ವ್ಯಕ್ತಪಡಿಸಿದರು.
ದಲಿತ ಸಿಎಂಗೆ ಜಾತಿ ವ್ಯವಸ್ಥೆಯೇ ಅಡ್ಡಗಾಲು: ಡಾ.ಪಿ.ಮೂರ್ತಿ ಬೇಸರ
ಎಲ್ಲಾ ಮಠ ಮಾನ್ಯಗಳು ಈ ಅಸಮಾನತೆ, ಜಾತಿ ವ್ಯವಸ್ಥೆ ವಿರುದ್ಧ ಧ್ವನಿಗೂಡಿಸಬೇಕು. ಯಾವುದೇ ಮಂದಿರ, ಮಠ ಇರಬಹುದು ಯಾರನ್ನೂ ಹೊರಗೆ ನಿಲ್ಲಿಸಬಾರದು. ಎಲ್ಲಾ ಕಡೆ ಮುಕ್ತ ಅವಕಾಶ ಇದ್ದಾಗ ಸಮಾನತೆ ಮೂಡುತ್ತದೆ. ನಾವು ಯಾರೂ ಗರ್ಭಗುಡಿ ಪ್ರವೇಶ ಮಾಡುವ ಚಿಂತನೆ ಇಲ್ಲ ಆದರೆ ಆ ತಾರತಮ್ಯ ಯಾರೂ ಕೂಡ ಮಾಡಬಾರದು. ಪೂಜಾರಿ ಹೆಣ್ಣ ಮಕ್ಕಳಿಗೆ ಅವಕಾಶ ಇದೆ, ಬೇರೆಯವರಿಗೆ ಅವಕಾಶ ಇಲ್ಲ ಅಂದರೆ ಹೇಗೆ? ಎಲ್ಲರನ್ನೂ ಪ್ರೀತಿಸುವ, ಗೌರವಿಸುವ ಪದ್ಧತಿ, ಸಂಸ್ಕಾರ ಜನರಲ್ಲಿ ಮೂಡಬೇಕು ಎಂದರು.
ಸುಮಾರು ಹತ್ತಾರು ವರ್ಷಗಳ ಹಿಂದೆ ಅದೇ ದೇವಲಯಕ್ಕೆ ಅಕಸ್ಮಾತ್ ಗರ್ಭಗುಡಿ ಪ್ರವೇಶ ಮಾಡಿದ್ದೆ. ಅಲ್ಲಿನ ಭಕ್ತರು ಕರೆ ಮಾಡಿ ನೀವು ಹೋದ ಬಳಿಕ ದೇವಾಲಯ ಸ್ವಚ್ಚ ಮಾಡಿದ್ರು ಅಂತ ಹೇಳಿದ್ರು. ಆದರೆ ತೊಳೆಯದೇ ಬಹಳ ವರ್ಷ ಆಗಿರಬೇಕು ಅದ್ಕೆ ತೊಳಿದಿರಬೇಕು ಎಂದು ಭಾವಿಸಿದ್ದೆ. ಕುರುಬ ಸ್ವಾಮಿ ಪ್ರವೇಶ ಮಾಡಿದ್ದಕ್ಕೆ ದೇವಾಲಯ ತೊಳೆದ್ರು ಎಂಬುದು ಆಮೇಲೆ ತಿಳಿಯಿತು.
ಮುಜರಾಯಿ ದೇವಾಲಯಗಳಲ್ಲೇ ಶೋಚನೀಯ ಸ್ಥಿತಿ:
ಇನ್ನೂ ಜಾತಿ ವ್ಯವಸ್ಥೆ ಪೋಷಿಸುವ ಜನರು ಇದ್ದಾರಲ್ಲ ಇಂಥದ್ದು ಬದಲಾಗಬೇಕು. ಜಾತಿ ಪದ್ದತಿ ಮುಜರಾಯಿ ಇಲಾಖೆ ದೇವಾಲಯಗಳಲ್ಲಿ ಇರುವುದು ಶೋಚನೀಯವಾಗಿದೆ. ಇಂಥ ಅಸಮಾನತೆ, ಜಾತಿವ್ಯವಸ್ಥೆ ಕಂಡು ಬಂದಲ್ಲಿ. ಅಧಿಕಾರಿಗಳು ಕೂಡಲೇ ಭೇಟಿ ನೀಡಿ ಪರಿಶೀಲನೆ ನಡೆಸಿ, ಸರಿಪಡಿಸಬೇಕು, ಇನ್ಮುಂದೆ ಯಾವುದೇ ಕಾರಣಕ್ಕೂ ಇದು ಮರುಳಿಸಬಾರದು ಎಂದು ಅಧಿಕಾರಿಗಳ ಗಮನಕ್ಕೆ ತರುತ್ತೇನೆ. ಈ ಅನುಭವ ನನ್ನಂತೆ ಎಲ್ಲ ಸ್ವಾಮೀಜಿಗಳಿಗೆ ಆಗಿದೆ. ಯಾರೂ ಮುಂದೆ ಬಂದು ಬಹಿರಂಗವಾಗಿ ಮಾತನಾಡುತ್ತಿಲ್ಲ. ನಾನು ಎಲ್ಲರ ಪರವಾಗಿ ನಿನ್ನೆ ಧ್ವನಿ ಎತ್ತಿರುವಂತದ್ದು. ಎಲ್ಲಾ ಜನ ಸಾಮಾನ್ಯರಿಗೆ ಜಾತಿ ಪದ್ದತಿ, ಅಸ್ಪೃಶ್ಯತೆ ಅನೇಕ ಕಡೆ ಇರುವುದು ಒಳ್ಳೆಯ ಬೆಳವಣಿಗೆ ಅಲ್ಲ ಎಂದರು.
ಅಂತರ್ಜಾತಿ ವಿವಾಹದಿಂದ ಅಸಮಾನತೆ, ಜಾತಿ ವ್ಯವಸ್ಥೆ ತೊಡೆದು ಹಾಕಲು ಸಾಧ್ಯ: ಸಿಎಂ
ಜಾತಿವ್ಯವಸ್ಥೆ ವಿರುದ್ಧ ಕನಕದಾಸರು:
600 ವರ್ಷಗಳ ಹಿಂದೆಯೇ ಸಮಾಜದಲ್ಲಿನ ಜಾತಿವ್ಯವಸ್ಥೆ ವಿರುದ್ಧ ಸಂತ ಶ್ರೇಷ್ಠ ಕನಕದಾಸರು ಹೋರಾಡಿದರು. ಕುಲದ ನೆಲೆಯನ್ನು ಯಾರಾದರೂ ಬಲ್ಲೀರ ಎಂದು ಅಂದೇ ಕನಕದಾಸರು ಪ್ರಶ್ನಿಸಿದ್ದರು. ಎಲ್ಲಾ ಸಮಾಜಗಳು ಪರಿವರ್ತನೆ ಆಗಬೇಕಿದೆ. ಸಮ ಸಮಾಜ, ಸೌಹಾರ್ದತೆ ಮೂಡಲು ಎಲ್ಲರೂ ಒಂದೇ ಎಂದು ಎಲ್ಲರೂ ಭಾವಿಸಬೇಕು ಎಲಾ ಮಠ ಮಾನ್ಯಗಳು, ಮಂದಿರಗಳು ಸಹಬಾಳ್ವೆ ಯಿಂದ ನಡೆದುಕೊಂಡು ಹೋಗಬೇಕಿದೆ ಎಂದರು.