ವಾರದೊಳಗೆ ಜಾತಿಗಣತಿ ವರದಿ ಸಿಎಂಗೆ ಸಲ್ಲಿಕೆ: ಜಯಪ್ರಕಾಶ್ ಹೆಗ್ಡೆ
ರಾಜ್ಯದಲ್ಲಿ ಸಾಕಷ್ಟು ರಾಜಕೀಯ ಸಂಚಲನ ಮೂಡಿಸಿರುವ ಸಾಮಾಜಿಕ, ಶೈಕ್ಷಣಿ ಹಾಗೂ ಆರ್ಥಿಕ ಸಮೀಕ್ಷಾ ವರದಿಯನ್ನು (ಜಾತಿ ಗಣತಿ ವರದಿ) ಈ ತಿಂಗಳ ಅಂತ್ಯದೊಳಗೆ ಸರ್ಕಾರಕ್ಕೆ ಸಲ್ಲಿಸುವುದಾಗಿ ಹಿಂದುಳಿದ ವರ್ಗಗಳ ಶಾಶ್ವತ ಆಯೋಗದ ಅಧ್ಯಕ್ಷ ಜಯಪ್ರಕಾಶ ಹೆಗ್ಡೆ ತಿಳಿಸಿದ್ದಾರೆ.
ಬೆಂಗಳೂರು (ಜ.25) : ರಾಜ್ಯದಲ್ಲಿ ಸಾಕಷ್ಟು ರಾಜಕೀಯ ಸಂಚಲನ ಮೂಡಿಸಿರುವ ಸಾಮಾಜಿಕ, ಶೈಕ್ಷಣಿ ಹಾಗೂ ಆರ್ಥಿಕ ಸಮೀಕ್ಷಾ ವರದಿಯನ್ನು (ಜಾತಿ ಗಣತಿ ವರದಿ) ಈ ತಿಂಗಳ ಅಂತ್ಯದೊಳಗೆ ಸರ್ಕಾರಕ್ಕೆ ಸಲ್ಲಿಸುವುದಾಗಿ ಹಿಂದುಳಿದ ವರ್ಗಗಳ ಶಾಶ್ವತ ಆಯೋಗದ ಅಧ್ಯಕ್ಷ ಜಯಪ್ರಕಾಶ ಹೆಗ್ಡೆ ತಿಳಿಸಿದ್ದಾರೆ.
ಸುದ್ದಿಗಾರರ ಜೊತೆ ಮಾತನಾಡಿದ ಅವರು ಜ.31ಕ್ಕೆ ತಮ್ಮ ಅಧ್ಯಕ್ಷೀಯ ಅವಧಿ ಮುಗಿಯುವ ಹಿನ್ನೆಲೆಯಲ್ಲಿ ಅಷ್ಟರೊಳಗೆ ಪೂರ್ಣ ವರದಿ ಸಲ್ಲಿಸಲಾಗುವುದು. ಮಧ್ಯಂತರ ವರದಿ ಎಂಬ ಗೊಂದಲಕ್ಕೆ ಅವಕಾಶ ಇಲ್ಲ ಎಂದು ಹೇಳಿದರು.
ಜಾತಿ ಗಣತಿ ವರದಿ ನೋಡದೇ ವಿರೋಧ ಏಕೆ?: ಸಚಿವ ತಂಗಡಗಿ
ವರದಿಯ ಪುಸ್ತಕ ಮುದ್ರಣವಾಗುತ್ತಿದ್ದು, ವರದಿ ಸಲ್ಲಿಕೆಗೆ ಮುಖ್ಯಮಂತ್ರಿ ಸಿದ್ದರಾಮಯ್ಯ ಅವರಿಗೆ ಸಮಯ ಕೇಳಲಾಗುವುದು. ಸಮಯ ನೀಡಿದರೆ ಜ.30ರೊಳಗೆ ವರದಿ ಸಲ್ಲಿಸಲು ಉದ್ದೇಶಿಸಲಾಗಿದೆ ಎಂದರು.
ವರದಿಯನ್ನು ಜಾತಿ ಜನಗಣತಿ ವರದಿ ಎಂದಾಗಲಿ, ಕಾಂತರಾಜು ಅಥವಾ ಜಯಪ್ರಕಾಶ್ ಹೆಗ್ಡೆ ವರದಿ ಎಂದಾಗಲಿ ಭಾವಿಸದೇ, ಹಿಂದುಳಿದ ವರ್ಗಗಳ ಆಯೋಗದಿಂದ ನಡೆಸಲಾದ ಸಾಮಾಜಿಕ, ಶೈಕ್ಷಣಿಕ ಹಾಗೂ ಆರ್ಥಿಕ ಸಮೀಕ್ಷಾ ವರದಿಯಾಗಿರಲಿದೆ. ಸರ್ಕಾರಕ್ಕೆ ವರದಿ ಸಲ್ಲಿಕೆಯಾದ ಬಳಿಕ ಅದನ್ನು ಸಂಪುಟದಲ್ಲಿ ಚರ್ಚಿಸಿ, ನಂತರ ವಿಧಾನ ಮಂಡಲ ಅಧಿವೇಶದಲ್ಲಿ ಮಂಡಿಸಬೇಕಾಗುತ್ತದೆ ಎಂದು ಅವರು ಪ್ರಶ್ನೆಯೊಂದಕ್ಕೆ ಉತ್ತರಿಸಿದರು.
ಹಲವು ಶಿಫಾರಸು ಸಾಧ್ಯತೆ:
ಆಯೋಗದ ಹಿಂದಿನ ಅಧ್ಯಕ್ಷರಾಗಿದ್ದ ಕಾಂತರಾಜು ಅವರು ವರದಿ ನೀಡಿ ಎಂಟು ವರ್ಷಗಳಾಗಿವೆ. ವರದಿಯಲ್ಲಿನ ದತ್ತಾಂಶ ಆಧರಿಸಿ ಈಗಿನ ಸಂದರ್ಭಕ್ಕೆ ತಕ್ಕಂತೆ ಬದಲಾವಣೆ ಮಾಡಿ ಹೊಸ ವರದಿಯನ್ನು ಆಯೋಗ ಸಲ್ಲಿಸಲಿದೆ. ವಿಶೇಷವಾಗಿ ಹಿಂದುಳಿದ ವರ್ಗಕ್ಕೆ ಈಗಿರುವ ಮೀಸಲಾತಿಯ ಪ್ರಮಾಣವನ್ನು ಹೆಚ್ಚು ಕಡಿಮೆ ಮಾಡುವ ಶಿಫಾರಸು ಹಾಗೂ ಇಂತಹ ಗಣತಿಯನ್ನು ಪ್ರತಿ 10 ವರ್ಷಕ್ಕೆ ಕಡ್ಡಾಯವಾಗಿ ಮಾಡುವಂತೆ ಶಿಫಾರಸು ಮಾಡುವ ಸಾಧ್ಯತೆ ಇದೆ.
ಸಾಕಷ್ಟು ವಿರೋಧ:
ಜಾತಿ ಗಣತಿ ವರದಿ ಸರಿಯಾಗಿಲ್ಲ, ಮನೆ ಮನೆಗಳ ಸಮೀಕ್ಷೆ ಮಾಡಿಲ್ಲ, ಉಪಜಾತಿಗಳನ್ನು ಪ್ರತ್ಯೇಕವಾಗಿ ಪರಿಗಣಿಸಿ ಸಮೀಕ್ಷೆ ಮಾಡಿರುವುದರಿಂದ ಪ್ರಮುಖ ಸಮುದಾಯಗಳ ಒಟ್ಟಾರೆ ಸಂಖ್ಯೆ ಕಡಿಮೆಯಾಗಿದೆ ಎಂಬ ಆರೋಪವನ್ನು ವೀರಶೈವ-ಲಿಂಗಾಯತ, ಒಕ್ಕಲಿಗ ಸಮುದಾಯಗಳ ಸಂಘಟನೆಗಳು ಮಾಡಿವೆ. ವರದಿಯನ್ನು ಅಂಗೀಕರಿಸದೇ ಹೊಸದಾಗಿ ವೈಜ್ಞಾನಿಕವಾಗಿ ಸಮೀಕ್ಷೆ ಮಾಡಬೇಕು ಎಂಬ ಒತ್ತಾಯ ಮಾಡಿವೆ.
ಇಂತಹ ಒತ್ತಡಗಳ ನಡುವೆಯೂ ಮುಖ್ಯಮಂತ್ರಿ ಸಿದ್ದರಾಮಯ್ಯ ಅವರು ಆಯೋಗ ಸಲ್ಲಿಸುವ ವರದಿ ಸ್ವೀಕರಿಸುತ್ತೇನೆ. ಪರಿಶೀಲನೆ ನಂತರ ಸರ್ಕಾರ ನಿರ್ಧಾರ ತೆಗೆದುಕೊಳ್ಳಲಿದೆ ಎಂದು ಹೇಳಿದ್ದಾರೆ.
ಸಿಎಂ ಸಮಯ ಕೊಟ್ಟರೆ ಸಲ್ಲಿಕೆ
ಜ.31ಕ್ಕೆ ನನ್ನ ಅಧ್ಯಕ್ಷೀಯ ಅವಧಿ ಮುಗಿಯುತ್ತದೆ. ಅಷ್ಟರೊಳಗೆ ಪೂರ್ಣ ವರದಿ ಸಲ್ಲಿಸಲಾಗುವುದು. ಮಧ್ಯಂತರ ವರದಿ ಎಂಬ ಗೊಂದಲಕ್ಕೆ ಅವಕಾಶ ಇಲ್ಲ. ವರದಿಯ ಪುಸ್ತಕ ಮುದ್ರಣವಾಗುತ್ತಿದೆ. ವರದಿ ಸಲ್ಲಿಕೆಗೆ ಮುಖ್ಯಮಂತ್ರಿ ಸಿದ್ದರಾಮಯ್ಯ ಅವರಿಗೆ ಸಮಯ ಕೇಳಲಾಗುವುದು. ಸಮಯ ನೀಡಿದರೆ ಜ.30ರೊಳಗೆ ವರದಿ ಸಲ್ಲಿಸುತ್ತೇನೆ.
ಜಯಪ್ರಕಾಶ್ ಹೆಗ್ಡೆ, ಹಿಂದುಳಿದ ವರ್ಗಗಳ ಶಾಶ್ವತ ಆಯೋಗದ ಅಧ್ಯಕ್ಷ