ಮಕ್ಕಳಿಂದ ಜಾತಿ ಗಣತಿ ತಯಾರಿಸಿಲ್ಲ: ಜಯಪ್ರಕಾಶ್ ಹೆಗ್ಡೆ ಸ್ಪಷ್ಟನೆ
ಸಾಮಾಜಿಕ, ಆರ್ಥಿಕ ಹಾಗೂ ಶೈಕ್ಷಣಿಕ ಸಮೀಕ್ಷೆಯನ್ನು (ಜಾತಿ ಜನಗಣತಿ) ಯಾವುದೇ ಶಾಲಾ ಮಕ್ಕಳಿಂದ ತಯಾರಿಸಿಲ್ಲ. ಸಮೀಕ್ಷೆ ಬಗ್ಗೆ ಹೇಳಿ ಬರುತ್ತಿರುವ ಆಪಾದನೆಗಳು ಸತ್ಯಕ್ಕೆ ದೂರವಾಗಿದ್ದು ವೈಜ್ಞಾನಿಕವಾಗಿ ಈ ಸಮೀಕ್ಷೆಯನ್ನು ನಡೆಸಲಾಗಿದೆ ಎಂದು ರಾಜ್ಯ ಶಾಶ್ವತ ಹಿಂದುಳಿದ ವರ್ಗಗಳ ಆಯೋಗದ ಅಧ್ಯಕ್ಷ ಜಯಪ್ರಕಾಶ್ ಹೆಗ್ಡೆ ಸ್ಪಷ್ಟಪಡಿಸಿದ್ದಾರೆ.

ಬೆಂಗಳೂರು (ನ.18): ಸಾಮಾಜಿಕ, ಆರ್ಥಿಕ ಹಾಗೂ ಶೈಕ್ಷಣಿಕ ಸಮೀಕ್ಷೆಯನ್ನು (ಜಾತಿ ಜನಗಣತಿ) ಯಾವುದೇ ಶಾಲಾ ಮಕ್ಕಳಿಂದ ತಯಾರಿಸಿಲ್ಲ. ಸಮೀಕ್ಷೆ ಬಗ್ಗೆ ಹೇಳಿ ಬರುತ್ತಿರುವ ಆಪಾದನೆಗಳು ಸತ್ಯಕ್ಕೆ ದೂರವಾಗಿದ್ದು ವೈಜ್ಞಾನಿಕವಾಗಿ ಈ ಸಮೀಕ್ಷೆಯನ್ನು ನಡೆಸಲಾಗಿದೆ ಎಂದು ರಾಜ್ಯ ಶಾಶ್ವತ ಹಿಂದುಳಿದ ವರ್ಗಗಳ ಆಯೋಗದ ಅಧ್ಯಕ್ಷ ಜಯಪ್ರಕಾಶ್ ಹೆಗ್ಡೆ ಸ್ಪಷ್ಟಪಡಿಸಿದ್ದಾರೆ. ಶುಕ್ರವಾರ ನಗರದಲ್ಲಿ ರಾಜ್ಯ ಒಕ್ಕಲಿಗರ ಸಂಘದ ನಿಯೋಗವು ತಮ್ಮನ್ನು ಭೇಟಿ ಮಾಡಿ ಎಚ್.ಕಾಂತರಾಜ್ ಆಯೋಗದ ಜಾತಿ ಜನಗಣತಿ ವರದಿ ತಿರಸ್ಕರಿಸುವಂತೆ ಸಲ್ಲಿಸಿದ ಮನವಿ ಸ್ವೀಕರಿಸಿ ಅವರು ಮಾತನಾಡಿದರು.
ಶಾಲಾ ಮಕ್ಕಳಿಂದ ವರದಿ ತಯಾರಿಸಲಾಗಿದೆ ಎಂಬುದು ಸತ್ಯಕ್ಕೆ ದೂರವಾಗಿದ್ದು, ಬಿಇಎಲ್ ಸಂಸ್ಥೆಯ ನೆರವಿನೊಂದಿಗೆ ವೈಜ್ಞಾನಿಕವಾಗಿ ಈ ವರದಿಯನ್ನು ಸಿದ್ಧಪಡಿಸಲಾಗಿದೆ. ಈ ವರದಿಯಲ್ಲಿ ಯಾವುದೇ ಸಮಾಜವನ್ನು ಒಡೆಯುವ ಕೆಲಸ ಮಾಡಿಲ್ಲ. ಕಾಂತರಾಜ್ ಆಯೋಗದ ವರದಿಯನ್ನು ಅಧಿಕಾರಿಗಳಿಂದ ಅಂಕಿ ಅಂಶಗಳನ್ನು ಕಲೆ ಹಾಕಿಸಿ ತಯಾರಿಸಲಾಗಿದೆ ಎಂದು ತಿಳಿಸಿದರು. ರಾಜ್ಯ ಒಕ್ಕಲಿಗರ ಸಂಘದ ಅಧ್ಯಕ್ಷ ಡಿ.ಹನುಮಂತಯ್ಯ ಮಾತನಾಡಿ, ಕಾಂತರಾಜ್ ಆಯೋಗ ವರದಿ ಅವೈಜ್ಞಾನಿಕವಾಗಿದೆ. ಶಾಲಾ ಮಕ್ಕಳಿಂದ ಈ ವರದಿಯನ್ನು ತಯಾರಿಸಲಾಗಿದೆ.
ಜೆಡಿಎಸ್‌ನ ಜಿಟಿಡಿ ಜತೆ ಡಿ.ಕೆ.ಶಿವಕುಮಾರ್ ರಹಸ್ಯ ಮಾತುಕತೆ ಸಂಚಲನ
ನ.25ರೊಳಗೆ ತಾವು ವರದಿ ಸಲ್ಲಿಸುವ ಸಾಧ್ಯತೆ ಇರುವ ಅನುಮಾನವಿದೆ. ಈ ವರದಿ ಸಲ್ಲಿಕೆಯಿಂದ ಒಕ್ಕಲಿಗ ಸಮುದಾಯಕ್ಕೆ ಭಾರೀ ದೊಡ್ಡ ಅನ್ಯಾಯ ಮಾಡಿದಂತಾಗುತ್ತದೆ. ಒಕ್ಕಲಿಗ ಜನಾಂಗದಲ್ಲೂ ಬಡವರು, ಕಾರ್ಮಿಕರು ಸವಲತ್ತು ವಂಚಿತರು ಇದ್ದಾರೆ. ವರದಿ ಸಲ್ಲಿಕೆಯಿಂದ ಕಟ್ಟಕಡೆಯ ಒಕ್ಕಲಿಗ ಸಮುದಾಯಕ್ಕೆ ಅನ್ಯಾಯವಾಗಲಿದೆ. ಇದರಲ್ಲಿ ಅನೇಕ ಗೊಂದಲಗಳು ಇರುವುದರಿಂದ ತಾವು ಸರ್ಕಾರಕ್ಕೆ ಯಥಾವತ್ತಾಗಿ ವರದಿಯನ್ನು ಸಲ್ಲಿಸಬಾರದು ಎಂದು ಮನವಿ ಮಾಡಿದರು.
ಕಾಂತರಾಜು ವರದಿ ಜಾತಿಗಣತಿಯಲ್ಲ: ರಾಜ್ಯ ಶಾಶ್ವತ ಹಿಂದುಳಿದ ವರ್ಗಗಳ ಆಯೋಗದ ಅಧ್ಯಕ್ಷರಾಗಿದ್ದಾಗ ಎಚ್.ಕಾಂತರಾಜು ಅವರ ನೇತೃತ್ವದ ಸಮಿತಿ ನೀಡಿರುವ ವರದಿ ಜಾತಿ ಜನ ಗಣತಿ ಸಮೀಕ್ಷೆ ಅಲ್ಲವೇ ಅಲ್ಲ. ಅಗತ್ಯ ಬಿದ್ದರೆ ನಮ್ಮ ಸರ್ಕಾರ ಹೊಸದಾಗಿ ಜಾತಿ ಜನಗಣತಿ ನಡೆಸಲಿದೆ ಎಂದು ಹಿಂದುಳಿದ ವರ್ಗಗಳ ಕಲ್ಯಾಣ ಸಚಿವ ಶಿವರಾಜ ತಂಗಡಗಿ ಹೇಳಿದರು.
ನಗರದ ಮಲ್ಲೇಶ್ವರಂನಲ್ಲಿ ಗುರುವಾರ ಭೋವಿ ಜನಜಾಗೃತಿ ಡಿಜಿಟಲ್ ರಥ ಯಾತ್ರೆಗೆ ಚಾಲನೆ ನೀಡಿದ ಬಳಿಕ ಸುದ್ದಿಗಾರರೊಂದಿಗೆ ಮಾತನಾಡಿದ ಅವರು, ಕಾಂತರಾಜು ವರದಿಯನ್ನು ಜಾತಿ ಗಣತಿ ಎಂದು ಕರೆಯಲಾಗುತ್ತಿದೆ. ಹಾಗೆ ಕರೆಯುವುದು ಸರಿಯಲ್ಲ. ಮೂಲತಃ ಇದು ಜಾತಿಗಣತಿ ಸಮೀಕ್ಷೆ ಅಲ್ಲವೇ, ಅಲ್ಲ. ಇದು ರಾಜ್ಯದ ಜನರ ಶೈಕ್ಷಣಿಕ, ಆರ್ಥಿಕ ಹಾಗೂ ಸಾಮಾಜಿಕವಾಗಿ ಸ್ಥಿತಿಗತಿ ಕುರಿತ ವರದಿ. ಈ ವರದಿಯಿಂದ ಯಾವುದೇ ಸಮುದಾಯಕ್ಕೂ ಅನ್ಯಾಯವಾಗುವುದಿಲ್ಲ ಎಂದರು.
ವಿದ್ಯುತ್ ಕಳ್ಳತನ ಪ್ರಕರಣ: ಕುಮಾರಸ್ವಾಮಿ-ಶಿವಕುಮಾರ್ ವಾಕ್ಸಮರ
ಈ ವರದಿಗೆ ಕೆಲ ಸಮುದಾಯಗಳು, ಮಠಾಧೀಶರು ವಿರೋಧ ವ್ಯಕ್ತಪಡಿಸುತ್ತಿದ್ದಾರೆ. ವರದಿ ಇನ್ನೂ ಸರ್ಕಾರಕ್ಕೆ ಸಲ್ಲಿಕೆಯೇ ಆಗಿಲ್ಲ. ಈ ಹಿಂದೆ ಸಿದ್ದರಾಮಯ್ಯ ಅವರು ಮುಖ್ಯಮಂತ್ರಿ ಆಗಿದ್ದ ಅವಧಿಯಲ್ಲೇ ವರದಿ ಸಿದ್ಧವಾಗಿತ್ತು. ಆದರೆ ತಾಂತ್ರಿಕ ಕಾರಣಗಳಿಂದಾಗಿ ವರದಿ ಸ್ವೀಕಾರವಾಗಿಲ್ಲ. ವರದಿ ಸಲ್ಲಿಕೆಯಾಗದೇ ವರದಿ ಬಗ್ಗೆ ಅಪಸ್ವರ ತೆಗೆಯುವುದು ಸರಿಯಲ್ಲ. ಯಾರ ರಾಜಕೀಯ ಹಿತಾಸಕ್ತಿ ಕೂಡ ಇದರಲ್ಲಿ ಇಲ್ಲ. ವರದಿ ಸ್ವೀಕರಿಸಿದರೆ ಅದನ್ನು ಸರ್ಕಾರ ಮೊದಲು ಪರಿಶೀಲಿಸಲಿದೆ. ಈ ವೇಳೆ ತಮ್ಮ ಆಕ್ಷೇಪಗಳನ್ನು ಯಾರು ಬೇಕಾದರೂ ಸರ್ಕಾರಕ್ಕೆ ಸಲ್ಲಿಸಬಹುದು ಎಂದು ಹೇಳಿದರು.