ಬೆಂಗಳೂರು(ಜು.18): ‘ಮಾಸ್ಕ್‌ ಧರಿಸದೆ ಹಾಗೂ ಸಾಮಾಜಿಕ ಅಂತರ ಪಾಲಿಸದೆ ಕೋವಿಡ್‌-19 ಮಾರ್ಗಸೂಚಿಗಳನ್ನು (ಎಸ್‌ಓಪಿ) ಉಲ್ಲಂಘಿಸಿದ ರಾಜಕಾರಣಿಗಳ ವಿರುದ್ಧ ವಿಪತ್ತು ನಿರ್ವಹಣಾ ಕಾಯ್ದೆಯಡಿ ಕಠಿಣ ಕ್ರಮ ಜರುಗಿಸಬೇಕು’ ಎಂದು ಹೈಕೋರ್ಟ್‌ ರಾಜ್ಯ ಸರ್ಕಾರಕ್ಕೆ ಸೂಚಿಸಿದೆ.

ಈ ಕುರಿತು ‘ ಕಿಡ್‌ ಫೌಂಡೇಷನ್‌’ ಹಾಗೂ ವಕೀಲೆ ಗೀತಾ ಮಿಶ್ರಾ ಸಲ್ಲಿಸಿದ್ದ ಅರ್ಜಿ ವಿಚಾರಣೆ ನಡೆಸಿದ ಮುಖ್ಯ ನ್ಯಾಯಾಧೀಶ ನ್ಯಾ| ಎ.ಎಸ್‌.ಓಕ ಅವರ ನೇತೃತ್ವದ ವಿಭಾಗೀಯ ನ್ಯಾಯಪೀಠ ಈ ಸೂಚನೆ ನೀಡಿತು.

100 ಸೋಂಕಿತರಿಗೆ ಹೆರಿಗೆ: ವಾಣಿವಿಲಾಸ ಆಸ್ಪತ್ರೆ ಸಾಧನೆ!

ಅರ್ಜಿದಾರರ ಪರ ವಕೀಲರು ವಾದ ಮಂಡಿಸಿ, ‘ಬಳ್ಳಾರಿಯಲ್ಲಿ ನಡೆದ ಶಾಸಕ ಪಿ.ಟಿ.ಪರಮೇಶ್ವರ್‌ ನಾಯ್‌್ಕ ಅವರ ಪುತ್ರನ ಮದುವೆ ಸಮಾರಂಭದಲ್ಲಿ ಆರೋಗ್ಯ ಸಚಿವ ಶ್ರೀರಾಮುಲು ಸೇರಿದಂತೆ ಭಾಗವಹಿಸಿದ ಇತರರು ಮಾಸ್ಕ್‌ ಧರಿಸಿರಲಿಲ್ಲ. ಸಾಮಾಜಿಕ ಅಂತರವೂ ಕಾಯ್ದುಕೊಂಡಿರಲಿಲ್ಲ. ಇನ್ನೂ ರಾಜಕೀಯ ಪಕ್ಷಗಳ ರಾರ‍ಯಲಿಯಲ್ಲಿ ಮತ್ತು ಇತ್ತೀಚೆಗೆ ನಡೆದ ಕೆಂಪೇಗೌಡ ಪುತ್ಥಳಿ ಶಂಕುಸ್ಥಾಪನೆ ಕಾರ್ಯಕ್ರಮದಲ್ಲಿ ರಾಜಕಾರಣಿಗಳು ಇದೇ ರೀತಿ ಮಾರ್ಗಸೂಚಿ ಉಲ್ಲಂಘಿಸಿದ್ದಾರೆ. ಆದರೆ, ಅವರ ವಿರುದ್ಧ ವಿಪತ್ತು ನಿರ್ವಹಣಾ ಕಾಯ್ದೆಯಡಿ ಎಫ್‌ಐಆರ್‌ ದಾಖಲಿಸಿಲ್ಲ’ ಎಂದು ದೂರಿದರು.

ಕೊರೋನಾ ನೆಗೆಟಿವ್ ಮಾಹಿತಿಯೇ ಇಲ್ಲ: ಟೆಸ್ಟ್‌ ಮಾಡಿಸಿಕೊಂಡವರಿಗೆ ಗೊಂದಲ!

ಅದನ್ನು ಪರಿಗಣಿಸಿದ ನ್ಯಾಯಪೀಠ, ‘ಮಾರ್ಗಸೂಚಿ ಉಲ್ಲಂಘಿಸಿದ ರಾಜಕಾರಣಿಗಳ ವಿರುದ್ಧ ಏಕೆ ವಿಪತ್ತು ನಿರ್ವಹಣಾ ಕಾಯ್ದೆಯಡಿ ಪ್ರಕರಣ ದಾಖಲಿಸಿಲ್ಲ? ರಾಜಕಾರಣಿಗಳ ಹಾಗೂ ವಿಐಪಿಗಳು ಎಂದ ಮಾತ್ರಕ್ಕೆ ಅವರ ವಿರುದ್ಧ ಕಠಿಣ ಕಾನೂನು ಕ್ರಮ ಜರುಗಿಸದೆ ಸರ್ಕಾರ ಕೈಕಟ್ಟಿಕೂರಬಾರದು. ಪ್ರಭಾವಿಗಳೆಂದು ತಾರತಮ್ಯ ಮಾಡುವುದು ಸರಿಯಲ್ಲ. ಎಷ್ಟೇ ಪ್ರಭಾವಿಯಾದರೂ ಮಾರ್ಗಸೂಚಿ ಉಲ್ಲಂಘಿಸಿದರೆ ಅವರ ವಿರುದ್ಧ ವಿಪತ್ತು ನಿರ್ವಹಣಾ ಕಾಯ್ದೆಯಡಿ ಕಟ್ಟುನಿಟ್ಟಿನ ಕ್ರಮ ಜರುಗಿಸಬೇಕು’ ಎಂದು ಸೂಚಿಸಿತು.

‘ಉಲ್ಲಂಘಿಸಿದ ರಾಜಕಾರಣಿಗಳ ವಿರುದ್ಧ ಏಕೆ ವಿಪತ್ತು ನಿರ್ವಹಣಾ ಕಾಯ್ದೆಯಡಿ ಕ್ರಮ ಜರುಗಿಸಿಲ್ಲ?’ ಎಂಬ ಬಗ್ಗೆ ವಿವರಣೆ ನೀಡುವಂತೆ ಸರ್ಕಾರಕ್ಕೆ ಸೂಚಿಸಿ ವಿಚಾರಣೆ ಮುಂದೂಡಿತು.