ಖಾಸಗಿ ಸಂಸ್ಥೆಯೊಂದು ಅಶ್ಲೀಲ ಚಿತ್ರವಿರುವ ಕಾಮಿಕ್ ಪುಸ್ತಕಗಳನ್ನು ಮಕ್ಕಳಿಗೆ ವಿತರಿಸಿರುವುದು ಇದೀಗ ಬಾರಿ ವಿವಾದಕ್ಕೀಡಾಗಿದೆ. ಈ ಸಂಬಂಧ ಇದೀಗ ಪ್ರಕರಣ ದಾಖಲು ಮಾಡಿಕೊಳ್ಳಲಾಗಿದೆ.
ಬೆಂಗಳೂರು : ಖಾಸಗಿ ಸಂಸ್ಥೆಯೊಂದು ಅಶ್ಲೀಲ ಚಿತ್ರವಿರುವ ‘ಕಾಮಿಕ್’ ಪುಸ್ತಕಗಳನ್ನು ಮಕ್ಕಳಿಗೆ ವಿತರಿಸಿರುವುದು ವಿವಾದಕ್ಕೀಡಾಗಿದೆ. ಮಕ್ಕಳ ಬ್ಯಾಗ್‌ನಲ್ಲಿದ್ದ ಪುಸ್ತಕ ನೋಡಿ ಪೋಷಕರು ಬೆಚ್ಚಿಬಿದ್ದಿದ್ದಾರೆ.
ಹದಿಹರೆಯದ ಮಕ್ಕಳ ಬ್ಯಾಗ್‌ನಲ್ಲಿದ್ದ ಕಾಮಿಕ್ ಪುಸ್ತಕದಲ್ಲಿನ ಕಾಮದ ಚಿತ್ರಗಳನ್ನು ನೋಡಿದ ಪೋಷಕರೊಬ್ಬರು ಈ ಸಂಬಂಧ ಬೈಯಪ್ಪನಹಳ್ಳಿ ಠಾಣೆಗೆ ದೂರು ನೀಡಿದ್ದಾರೆ.
ನಗರದ ವೈಟ್‌ಫೀಲ್ಡ್‌ನ ಕೆಟಿಪಿಒ ಸಭಾಂಗಣದಲ್ಲಿ ನವೆಂಬರ್ 17 ಮತ್ತು 18 ರಂದು ಕಾಮಿಕ್ ಕಾನ್ ಇಂಡಿಯಾ (ಸಿಸಿಬಿಐ) ಸಂಸ್ಥೆ 7ನೇ ಆವೃತ್ತಿಯ ವಾರ್ಷಿಕೋತ್ಸವ ಸಮಾರಂಭ ಏರ್ಪಡಿಸಿತ್ತು.
ಈ ಕಾರ್ಯಕ್ರಮದಲ್ಲಿ ಆರು ವರ್ಷದಿಂದ 18 ವರ್ಷದ ನೂರಾರು ಮಕ್ಕಳು ಪಾಲ್ಗೊಂಡಿದ್ದರು. ಟಿಕೆಟ್ ಪಡೆದು ಭಾಗವಹಿಸಿದ್ದ ಪ್ರತಿಯೊಬ್ಬ ವಿದ್ಯಾರ್ಥಿಗೆ ಸಂಸ್ಥೆಯ ವತಿಯಿಂದ ಕಾಮಿಕ್ ಪುಸ್ತಕ, ಬ್ಯಾಡ್ಜ್, ಟಿ-ಶರ್ಟ್ ಹಾಗೂ ಪೋಸ್ಟರ್ ಇರುವ ಕಿಟ್ ನೀಡಲಾಗಿತ್ತು. ಮಕ್ಕಳಿಗೆ ವಿತರಿಸಲಾಗಿದ್ದ ಅಮೆರಿಕದ ಲೇಖಕ ಬ್ರಿಯಾನ್ ಕೆ. ವೌಘನ್ ಅವರು ಬರೆದಿರುವ ಕಾಮಿಕ್ ಪುಸ್ತಕದಲ್ಲಿ ಇಂತಹ ಆಕ್ಷೇಪಾರ್ಹ ಚಿತ್ರಗಳಿವೆ.
ಇಂದಿರಾನಗರ ನಿವಾಸಿ 16 ವರ್ಷದ ಬಾಲಕಿಯೊಬ್ಬಳು ಕಾರ್ಯಕ್ರಮದಲ್ಲಿ ಭಾಗವಹಿಸಿದ್ದಳು. ಗುರುವಾರ ಬೆಳಗ್ಗೆ ಬಾಲಕಿ ತಾಯಿ ಮನೆ ಶುಚಿಗೊಳಿಸುವಾಗ ಕುತೂಹಲದಿಂದ ಅಲ್ಲಿಯೇ ಇದ್ದ ಕಾಮಿಕ್ ಕಾನ್ ಇಂಡಿಯಾ ಸಂಸ್ಥೆ ನೀಡಿದ್ದ ಕಿಟ್ ತೆಗೆದು ನೋಡಿದ್ದಾರೆ. ಈ ವೇಳೆ ಪುಸ್ತಕದಲ್ಲಿನ ಅಶ್ಲೀಲ ಚಿತ್ರಗಳನ್ನು ನೋಡಿ ಕೂಡಲೇ ಸಂಸ್ಥೆಗೆ ಅಪ್ರಾಪ್ತ ಮಕ್ಕಳಿಗೆ ವಿತರಿಸಲಾಗಿರುವ ಇಂತಹ ಚಿತ್ರಗಳಿರುವುದಕ್ಕೆ ಆಕ್ಷೇಪ ವ್ಯಕ್ತಪಡಿಸಿ ಸಂದೇಶ ಕಳುಹಿಸಿ ಸ್ಪಷ್ಟನೆ ಕೇಳಿದ್ದಾರೆ. ಸಂಸ್ಥೆಯಿಂದ ಯಾವುದೇ ಪ್ರತಿಕ್ರಿಯೆ ಬಾರದಿದ್ದಾಗ ತಕ್ಷಣವೇ ಠಾಣೆಗೆ ತೆರಳಿ ದೂರು ನೀಡಿದ್ದಾರೆ.
ಈ ಬಗ್ಗೆ ಪ್ರತಿಕ್ರಿಯಿಸಿರುವ ಕಾಮಿಕ್ ಕಾನ್ ಇಂಡಿಯಾ ಸಂಸ್ಥೆ ಕ್ಷಮೆಯಾಚಿಸಿದೆ. ಕಳೆದ ಏಳು ವರ್ಷದ ಕಾರ್ಯಕ್ರಮದಲ್ಲಿ ಈ ರೀತಿಯ ಘಟನೆ ಸಂಭವಿಸಿಲ್ಲ. ನಮಗೆ ತಿಳಿಯದೇ ಇಂತಹದೊಂದು ಚಿತ್ರಗಳು ಬಂದಿವೆ ಎಂದು ಕ್ಷಮೆಯಾಚಿಸಿದೆ. ಆದರೂ ಇಷ್ಟಕ್ಕೆ ಸುಮ್ಮನಾಗದ ಪೋಷಕರು ಠಾಣೆ ಮೆಟ್ಟಿಲೇರಿದ್ದಾರೆ.
ಈ ಸಂಬಂಧ ಬೈಯಪ್ಪನಹಳ್ಳಿ ಪೊಲೀಸ್ ಠಾಣೆಯಲ್ಲಿ ಪೋಕ್ಸೋ ಕಾಯ್ದೆ ಹಾಗೂ ಐಪಿಸಿ ಸೆಕ್ಷನ್ 293 (ಅಪ್ರಾಪ್ತರಿಗೆ ಅಶ್ಲೀಲ ಚಿತ್ರವಿರುವ ಪುಸ್ತಕ ಮಾರಾಟ) ಕಾಯ್ದೆಯಡಿ ದೂರು ದಾಖಲಿಸಿಕೊಳ್ಳಲಾಗಿದೆ ಎಂದು ಪೊಲೀಸರು ಹೇಳಿದ್ದಾರೆ.
