CM Basavaraj Bommai: ಕನ್ನಡಕ್ಕೆ ಭರ್ಜರಿ ಕೊಡುಗೆ: ಕನ್ನಡ ಹೋರಾಟಗಾರರ ವಿರುದ್ಧದ ಕೇಸ್ ವಾಪಸ್: ಸಿಎಂ
- ಕನ್ನಡ ಹೋರಾಟಗಾರರ ವಿರುದ್ಧದ ಕೇಸ್ ವಾಪಸ್: ಸಿಎಂ
- ಶಾಸ್ತ್ರೀಯ ಭಾಷೆ ಅಧ್ಯಯನಕ್ಕೆ ಸಾಹಿತಿಗಳ ಸಮಿತಿ
- ಗಡಿ ಪ್ರಾಧಿಕಾರಕ್ಕೆ .100 ಕೋಟಿ
- ವಲಸೆ ಬರುವವರಿಗೆ ಕನ್ನಡ ಕಲಿಕೆ
- ಹಾವೇರಿ ಸಮ್ಮೇಳನದಲ್ಲಿ ಬೊಮ್ಮಾಯಿ ಘೋಷಣೆ
- ಹಾವೇರಿ ಸಾಹಿತ್ಯ ಸಮ್ಮೇಳನಕ್ಕೆ ತೆರೆ
ಶಿವಾನಂದ ಗೊಂಬಿ
ಕನಕ, ಶರೀಫ, ಸರ್ವಜ್ಞ ವೇದಿಕೆ (ಹಾವೇರಿ) (ಜ.9) : ಶಾಸ್ತ್ರೀಯ ಭಾಷೆ ಸ್ಥಾನಮಾನದÜ ಸಂಶೋಧನೆಗೆ ಸಲಹೆ ನೀಡಲು ಸಾಹಿತಿಗಳ ಸಮಿತಿ ರಚನೆ, ಗಡಿನಾಡು ಅಭಿವೃದ್ಧಿ ಪ್ರಾಧಿಕಾರಕ್ಕೆ .100 ಕೋಟಿ ಅನುದಾನ, ಕನ್ನಡಕ್ಕಾಗಿ ಹೋರಾಟ ಮಾಡಿದವರ ಮೇಲಿನ ಕೇಸ್ ಶೀಘ್ರ ವಾಪಸ್, ಹೊರ ರಾಜ್ಯಗಳಿಂದ ಕರ್ನಾಟಕಕ್ಕೆ ವಲಸೆ ಬಂದವರಿಗೆ ಕನ್ನಡ ಕಲಿಸುವ ಅಭಿಯಾನ ಸೇರಿದಂತೆ ಕನ್ನಡ ಅಭಿವೃದ್ಧಿಗೆ ಮುಖ್ಯಮಂತ್ರಿ ಬಸವರಾಜ ಬೊಮ್ಮಾಯಿ ಅವರು ಹಲವು ಮಹತ್ವದ ಘೋಷಣೆ ಮಾಡಿದ್ದಾರೆ. ಹಾವೇರಿಯಲ್ಲಿ ನಡೆದ 86ನೇ ಅಖಿಲ ಭಾರತ ಸಾಹಿತ್ಯ ಸಮ್ಮೇಳನದ ಸಮಾರೋಪ ಸಮಾರಂಭದಲ್ಲಿ ಭಾನುವಾರ ಕಿಕ್ಕಿರಿದು ತುಂಬಿದ್ದ ಸಭಿಕರನ್ನುದ್ದೇಶಿಸಿ ಮಾತನಾಡಿದ ಅವರು ಈ ಘೋಷಣೆ ಮಾಡಿದರು.
ಸಮ್ಮೇಳನದ ಸರ್ವಾಧ್ಯಕ್ಷ ಡಾ.ದೊಡ್ಡರಂಗೇಗೌಡರು(Dr Doddarangegowda) ಮೊದಲ ದಿನವೇ ಶಾಸ್ತ್ರೀಯ ಭಾಷೆ ಮತ್ತು ಕನ್ನಡಕ್ಕಾಗಿ ಹೋರಾಟ(Kannada fighters) ಮಾಡಿದವರ ಮೇಲಿನ ಕೇಸ್(Police case)ಗೆ ಸಂಬಂಧಿಸಿ ಸರ್ಕಾರದ ತಿದಿಯೊತ್ತಿದ್ದರು. ಅವರ ಮಾತುಗಳನ್ನು ಗಂಭೀರವಾಗಿ ಪರಿಗಣಿಸಿದ ಮುಖ್ಯಮಂತ್ರಿ ಬೊಮ್ಮಾಯಿ(CM Basavaraj Bommai) ಅವರು ಈ ನಿಟ್ಟಿನಲ್ಲಿ ಸಮಾರೋಪ ಭಾಷಣದಲ್ಲಿ ಮಹತ್ವದ ನಿರ್ಧಾರಗಳನ್ನು ಪ್ರಕಟಿಸಿದರು. ಅಲ್ಲದೆ ಹಾವೇರಿ ಸಮ್ಮೇಳನದ ನಿರ್ಣಯಗಳನ್ನು ಪರಿಶೀಲಿಸಿ ಅನುಷ್ಠಾನಕ್ಕೆ ತರುವುದಾಗಿ ಹೇಳಿದರು.
ಹೊಸ ರಥ ಯಾತ್ರೆಗೆ ನಾವೂ ಸಿದ್ಧತೆ ನಡೆಸಿದ್ದೇವೆ: ಸಿಎಂ ಬೊಮ್ಮಾಯಿ
ಸಾಹಿತಿಗಳ ಸಮಿತಿ:
ಕನ್ನಡ ಶಾಸ್ತ್ರೀಯ ಭಾಷೆ(Kannada is a classical language)ಯ ಅಧ್ಯಯನ ವಿಚಾರವಾಗಿ ಉದ್ಘಾಟನಾ ಭಾಷಣದಲ್ಲೇ ಸಮ್ಮೇಳನದ ಸರ್ವಾಧ್ಯಕ್ಷ ಡಾ.ದೊಡ್ಡರಂಗೇಗೌಡ ಅವರು ನೇರವಾಗಿ ಸರ್ಕಾರದ ವಿರುದ್ಧ ಅಸಮಾಧಾನ ಹೊರಹಾಕಿದ್ದರು. ಸಮ್ಮೇಳನಾಧ್ಯಕ್ಷರ ಆಕ್ಷೇಪವನ್ನು ಸಲಹೆಯಾಗಿ ಸ್ವೀಕರಿಸಿದ ಬೊಮ್ಮಾಯಿ ಅವರು ಶಾಸ್ತ್ರೀಯ ಭಾಷೆ ಕುರಿತು ಸಂಶೋಧನೆ, ಗ್ರಂಥಾಲಯ, ಚರ್ಚೆಗಳಿಗೆ ಮಾರ್ಗದರ್ಶನ ಮಾಡಲು ಸಮ್ಮೇಳನಾಧ್ಯಕ್ಷರ ಮಾರ್ಗದರ್ಶನದಲ್ಲಿ ನಾಡಿನ ಹಿರಿಯ ಸಾಹಿತಿಗಳ ಸಮಿತಿ ರಚಿಸಲಾಗುವುದು ಎಂದು ಘೋಷಿಸಿದರು. ಜತೆಗೆ, ಸಮಿತಿ ಸೂಚಿಸುವ ಕಾರ್ಯಗಳಿಗೆ ಎಷ್ಟುಅನುದಾನ ಬೇಕೋ ಅಷ್ಟುಕೊಡಲು ಸರ್ಕಾರ ಸಿದ್ಧವಿದೆ. ಅತ್ಯಂತ ಪ್ರಾಚೀನ ಭಾಷೆ ಎಂಬುದರ ಪುರಾವೆ ನೀಡಬೇಕಿದೆ. ಈ ನಿಟ್ಟಿನಲ್ಲಿ ಸಮಿತಿ ಸಂಶೋಧನೆಗೆ ಸಲಹೆ ಮಾಡಲಿ ಎಂದು ತಿಳಿಸಿದರು.
2008ರಲ್ಲಿ ಕನ್ನಡಕ್ಕೆ ಶಾಸ್ತ್ರೀಯ ಸ್ಥಾನಮಾನ ಸಿಕ್ಕಿದೆ. ಈವರೆಗೆ ಕೇಂದ್ರ ಸರ್ಕಾರದಿಂದ ಇದಕ್ಕೆ .13.30 ಕೋಟಿ ನೆರವು ದೊರೆತಿದೆ. ಇದರಡಿ ಪ್ರಾಚೀನ ಕನ್ನಡ, ಮಧ್ಯಕನ್ನಡ ಹಾಗೂ ನವ್ಯ ಕನ್ನಡದ ಬಗ್ಗೆ ಸಂಶೋಧನೆಗಳು ನಡೆಯಬೇಕಿದೆ. ಮೈಸೂರು ವಿಶ್ವ ವಿದ್ಯಾಲಯವು ಈಗಾಗಲೇ ಅಧ್ಯಯನ ಕೇಂದ್ರ ತೆರೆಯಲು ದೊಡ್ಡ ಕಟ್ಟಡ ನೀಡಿದೆ ಎಂದು ಇದೇ ವೇಳೆ ಹೇಳಿದರು.
ಹಾವೇರಿ ಸಾಹಿತ್ಯ ಸಮ್ಮೇಳನಕ್ಕೆ ತೆರೆ:
ಏಲಕ್ಕಿ ನಾಡು ಹಾವೇರಿಯಲ್ಲಿ ನಡೆದ 86ನೇ ಅಖಿಲ ಭಾರತ ಸಾಹಿತ್ಯ ಸಮ್ಮೇಳನ(Kannada sahitya sammelana)ಕ್ಕೆ ಭಾನುವಾರ ಅದ್ಧೂರಿ ತೆರೆ ಬಿತ್ತು. ಸಮ್ಮೇಳನದ ಕೊನೆ ದಿನವೇ ಸರಿಸುಮಾರು 2 ಲಕ್ಷಕ್ಕೂ ಅಧಿಕ ಜನಸಾಗರ ಹರಿದು ಬಂದಿದ್ದರೆ, 3 ದಿನ ಕಾಲ ಸುಮಾರು 5ರಿಂದ 5.5 ಲಕ್ಷ ಸಾಹಿತ್ಯಾಸಕ್ತರು ಆಗಮಿಸಿದ್ದರು. ಧೂಳಿನ ಕಿರಿಕಿರಿ ಇಲ್ಲದೆ, ಅಚ್ಚುಕಟ್ಟಾಗಿ ಸಮ್ಮೇಳನ ಆಯೋಜಿಸುವ ಮೂಲಕ ಹಾವೇರಿ ಸಾಹಿತ್ಯಾಸಕ್ತರ ಮೆಚ್ಚುಗೆಗೆ ಪ್ರಾಪ್ತವಾಯಿತು.
ಮಂಡ್ಯದಲ್ಲಿ 87ನೇ ಸಾಹಿತ್ಯ ಸಮ್ಮೇಳನ
ಹಾವೇರಿ: ಹಲವು ಜಿಲ್ಲೆಗಳ ಭಾರಿ ಪೈಪೋಟಿ ನಡುವೆ ಸಕ್ಕರೆ ನಾಡು ಮಂಡ್ಯಕ್ಕೆ 87ನೇ ಅಖಿಲ ಭಾರತ ಸಾಹಿತ್ಯ ಸಮ್ಮೇಳನದ ಆತಿಥ್ಯ ದೊರೆಯಿತು. ಏಲಕ್ಕಿ ಕಂಪಿನ ನಾಡಿನಲ್ಲಿ ನಡೆಯುತ್ತಿರುವ 86ನೇ ಸಾಹಿತ್ಯ ಜಾತ್ರೆ ವೇಳೆ ಸಂಪ್ರದಾಯದಂತೆ ಮುಂದಿನ ಸಮ್ಮೇಳನದ ಸ್ಥಳ ಘೋಷಣೆ ಮಾಡಲಾಯಿತು. ಮುಂದಿನ ಸಮ್ಮೇಳನ ಎಲ್ಲಿ ನಡೆಸಬೇಕು ಎಂಬ ಕುರಿತು ಮತದಾನ ನಡೆಯಿತು. ಹೆಚ್ಚು ಮತ ಪಡೆದು ಮಂಡ್ಯ ಆಯ್ಕೆಯಾಯಿತು.
ಸಮ್ಮೇಳನದಲ್ಲಿ ಐದು ನಿರ್ಣಯ ಅಂಗೀಕಾರ
1. ಕನ್ನಡ ಸಮಗ್ರ ಭಾಷಾ ಅಭಿವೃದ್ಧಿ ವಿಧೇಯಕಕ್ಕೆ ಕೂಡಲೇ ಸುಗ್ರೀವಾಜ್ಞೆ ಮೂಲಕ ಕಾನೂನಿನ ರೂಪ ನೀಡಿ ಜಾರಿಗೆ ತರಬೇಕು
2. ಕರ್ನಾಟಕ-ಮಹಾರಾಷ್ಟ್ರ ಗಡಿ ವಿವಾದದ ಸಂಬಂಧ ಸರ್ವೋಚ್ಚ ನ್ಯಾಯಾಲಯದ ಅಂತಿಮ ತೀರ್ಪಿನಂತೆ ಕ್ರಮ ಕೈಗೊಳ್ಳಬೇಕು
3. ಕನ್ನಡಕ್ಕಾಗಿ ಹೋರಾಡಿದ ಕನ್ನಡ ಚಳವಳಿಗಾರರ ಮೇಲಿನ ಮೊಕದ್ದಮೆಗಳನ್ನು ರಾಜ್ಯ ಸರ್ಕಾರ ಕೂಡಲೇ ಹಿಂಪಡೆಯಬೇಕು.
4. ಕನ್ನಡ ಕರ್ನಾಟಕದ ಸಾರ್ವಭೌಮ ಭಾಷೆ. ಅದರ ಮೇಲೆ ಹಿಂದಿ ಅಥವಾ ಇನ್ಯಾವುದೇ ಭಾಷೆಯ ಆಕ್ರಮಣ, ಹೇರಿಕೆಗೆ ಖಂಡನೆ
5. ದಾವಣಗೆರೆಯಲ್ಲಿ ನಿಗದಿಯಾಗಿರುವ ವಿಶ್ವ ಕನ್ನಡ ಸಮ್ಮೇಳನ ಕನ್ನಡ ಸಾಹಿತ್ಯ ಪರಿಷತ್ತಿನ ಸಹಯೋಗದಲ್ಲಿ ನಡೆಯಬೇಕು
ಕೇಸ್ ಶೀಘ್ರ ವಾಪಸ್:
ಕನ್ನಡಕ್ಕಾಗಿ ಹೋರಾಟ ನಡೆಸಿದವರ ಮೇಲಿರುವ ಕೇಸ್‌ಗಳನ್ನು ವಾಪಸ್ ಪಡೆಯಲು ಸರ್ಕಾರ ಬದ್ಧವಾಗಿದೆ. ಈ ಹಿಂದೆ ತಾವು ಗೃಹ ಸಚಿವರಾಗಿದ್ದಾಗಲೇ ಕೇಸ್‌ಗಳನ್ನು ವಾಪಸ್ ಪಡೆಯಲಾಗಿತ್ತು. ಆದರೆ ಇದಕ್ಕೆ ಹೈಕೋರ್ಚ್ ತಡೆಯಾಜ್ಞೆ ನೀಡಿತ್ತು. ಅದೀಗ ತೆರವಾಗಿದೆ. ಹೀಗಾಗಿ ಶೀಘ್ರದಲ್ಲೇ ಕೇಸ್ ವಾಪಸ್ ಪಡೆಯಲು ಬೇಕಾದ ಕ್ರಮ ಕೈಗೊಳ್ಳಲಾಗುವುದು ಎಂದು ಮುಖ್ಯಮಂತ್ರಿ ಭರವಸೆ ನೀಡಿದರು.
ಗಡಿಯಾಚೆಗಿನವರಿಗೂ ಪಿಂಚಣಿ:
ಗಡಿಯಾಚೆಗಿರುವ ಕನ್ನಡಿಗರಲ್ಲೂ ಕರ್ನಾಟಕ ಏಕೀಕರಣ ಹೋರಾಟದಲ್ಲಿ ಪಾಲ್ಗೊಂಡವರಿದ್ದಾರೆ. ಅಂಥವರನ್ನು ನಮ್ಮ ಸರ್ಕಾರ ಗುರುತಿಸುವ ಕೆಲಸ ಮಾಡಲಿದೆ. ರಾಜ್ಯದಲ್ಲಿ ಏಕೀಕರಣಕ್ಕಾಗಿ ಕೆಲಸ ಮಾಡಿದವರಿಗೆ ಯಾವ ರೀತಿ ಪಿಂಚಣಿ ನೀಡಲಾಗುತ್ತಿದೆಯೋ ಅದೇ ರೀತಿ ಅಲ್ಲಿನ ಕನ್ನಡ ಹೋರಾಟಗಾರರಿಗೆ ಪಿಂಚಣಿ ನೀಡಲಾಗುವುದು. ಇದನ್ನು ಶೀಘ್ರ ಜಾರಿಗೊಳಿಸಲಾಗುವುದು. ಈ ಮೂಲಕ ಗಡಿಯಾಚೆಯಿರುವ ಕನ್ನಡ ಏಕೀಕರಣ ಹೋರಾಟಗಾರರನ್ನು ಸರ್ಕಾರ ಗುರುತಿಸಿ ಗೌರವಿಸಲಿದೆ ಎಂದು ಭರವಸೆ ನೀಡಿದರು.
ಜತೆಗೆ, ಗಡಿ ಅಭಿವೃದ್ಧಿ ಪ್ರಾಧಿಕಾರಕ್ಕೆ ಸದ್ಯ .25 ಕೋಟಿ ಅನುದಾನ ನೀಡಿದ್ದೇವೆ. ಇದಲ್ಲದೆ ಹೆಚ್ಚುವರಿಯಾಗಿ .100 ಕೋಟಿ ಅನುದಾನ ನೀಡಲಾಗುವುದು. ಗಡಿನಾಡಿನ ಶಿಕ್ಷಣ, ಆರೋಗ್ಯ, ಮೂಲಸೌಕರ್ಯ, ಸಂಸ್ಕೃತಿಗಳಿಗೆ ಈ ಅನುದಾನ ಬಳಕೆಯಾಗಲಿದೆ ಎಂದು ತಿಳಿಸಿದರು.
ಕನ್ನಡ ಕೋರ್ಸ್:
ಹೊರ ರಾಜ್ಯಗಳಿಂದ ಕರ್ನಾಟಕಕ್ಕೆ ವಲಸೆ ಬಂದು ನೆಲೆಸಿರುವವರಿಗೆ ಕನ್ನಡ ಕಲಿಸುವ ಅಭಿಯಾನ ಪ್ರಾರಂಭಿಸಲಾಗುವುದು. ವಲಸೆ ಬಂದು ನೆಲೆಸಿದವರು ಇಲ್ಲಿಂದ ಲಾಭ ಪಡೆಯುತ್ತಾರೆ. ಆದರೆ ಕನ್ನಡ ಮಾತ್ರ ಕಲಿಯುವುದಿಲ್ಲ. ಅದಕ್ಕಾಗಿ ಅಧಿಕಾರಿಗಳಿಗೆ ಹೇಗೆ ಕನ್ನಡ ಕಲಿಯಲು ಕಾಲ ಮಿತಿ ನೀಡಿ ಕಲಿಸಲಾಗುತ್ತಿದೆಯೋ ಅದೇ ರೀತಿ ವಲಸೆ ಬಂದ ಹೊರರಾಜ್ಯದವರಿಗೆ ಕನ್ನಡ ಕಲಿಸಲು ಅಭಿಯಾನ ಆರಂಭಿಸಲಾಗುವುದು. ಈ ನಾಡಿನಲ್ಲಿ ನೆಲೆಸಲು ಇಚ್ಛಿಸುವವರು ಕಡ್ಡಾಯವಾಗಿ ಕನ್ನಡ ಕಲಿಯಲೇಬೇಕೆಂಬ ನೀತಿ ಜಾರಿಗೊಳಿಸಲು ಕ್ರಮ ಕೈಗೊಳ್ಳಲಾಗುವುದು. ಇಂತಿಷ್ಟುವರ್ಷದಲ್ಲಿ ಕನ್ನಡ ಕಲಿಯಬೇಕು ಎಂಬ ಅಭಿಯಾನ ಪ್ರಾರಂಭಿಸುತ್ತೇವೆ ಎಂದು ಬೊಮ್ಮಾಯಿ ಮಾಹಿತಿ ನೀಡಿದರು.
Mandya: 30 ವರ್ಷ ಬಳಿಕ ಮಂಡ್ಯದಲ್ಲಿ ಮರುಕಳಿಸಲಿದೆ ಕನ್ನಡ ನುಡಿ ಸಡಗರ
ನೀರಾವರಿ ಯೋಜನೆ:
ಕಳಸಾ-ಬಂಡೂರಿ ನಾಲಾ ಜೋಡಣೆಗೆ ಈಗಾಗಲೇ ಕೇಂದ್ರ ಜಲಶಕ್ತಿ ಆಯೋಗದಿಂದ ಅನುಮೋದನೆ ದೊರೆತಿದೆ. ಶೀಘ್ರದಲ್ಲೇ ಯೋಜನೆ ಅನುಷ್ಠಾನಗೊಳಿಸಲು ಕ್ರಮ ಕೈಗೊಳ್ಳಲಾಗುವುದು ಎಂದ ಅವರು, ಕೃಷ್ಣಾ ಮೇಲ್ದಂಡೆ ಯೋಜನೆಯಡಿ ಆಲಮಟ್ಟಿಜಲಾಶಯದ ಎತ್ತರವನ್ನು 524 ಮೀಟರ್‌ಗೆ ಹೆಚ್ಚಿಸಲು ಶೀಘ್ರವೇ ಅನುಮೋದನೆ ದೊರೆಯಲಿದೆ ಎಂದರು. ಭದ್ರಾ ಮೇಲ್ದಂಡೆ ಯೋಜನೆಯನ್ನು ಕೇಂದ್ರ ಸರ್ಕಾರ ಶೀಘ್ರ ರಾಷ್ಟ್ರೀಯ ಯೋಜನೆಯಾಗಿ ಘೋಷಿಸುವ ಭರವಸೆ ಇದೆ. ಈ ಘೋಷಣೆಯಾದರೆ .13 ಸಾವಿರ ಕೋಟಿ ಈ ಯೋಜನೆಗೆ ಕೇಂದ್ರದಿಂದ ದೊರೆಯಲಿದೆ. ಇದರಿಂದ 2 ಲಕ್ಷ ಎಕರೆ ಪ್ರದೇಶ ನೀರಾವರಿಗೊಳಪಡಲಿದೆ ಎಂದ ಅವರು, ಇದಲ್ಲದೆ, ಮೇಕೆದಾಟು ಸೇರಿ ಎಲ್ಲ ನೀರಾವರಿ ಯೋಜನೆಗಳಿಗೆ ನಮ್ಮ ಸರ್ಕಾರದಿಂದ ಆದ್ಯತೆ ನೀಡಲಾಗುವುದು. ಪಶ್ಚಿಮ ಘಟ್ಟದ ನದಿ ಸಂಪತ್ತಿನ ಸಂಪೂರ್ಣ ಪ್ರಯೋಜನ ಪಡೆದರೆ ನಾಡು ಇನ್ನಷ್ಟುಶ್ರೀಮಂತವಾಗಲಿದೆ ಎಂದು ನುಡಿದರು.
ಸಂವಿಧಾನ ರಕ್ಷಣೆ:
ಎಲ್ಲ ಮಾತೃ ಭಾಷೆಗಳಿಗೆ ಸಂವಿಧಾನದ ರಕ್ಷಣೆ ನೀಡುವ ಅಗತ್ಯವಿದೆ. ಪ್ರಾಥಮಿಕ ಹಂತದ ಶಾಲಾ ಶಿಕ್ಷಣ ಮಾತೃಭಾಷೆಯಲ್ಲೇ ಆಗಬೇಕು ಎಂಬ ವಾದ ನ್ಯಾಯಾಲಯದಲ್ಲಿ ವಿಫಲವಾಗುತ್ತಿದೆ. ಬರುವ ದಿನಗಳಲ್ಲಿ ಸಂವಿಧಾನ ರಕ್ಷಣೆ ಪಡೆಯಲು ಶ್ರಮಿಸಲಾಗುವುದು. ಈ ನಿಟ್ಟಿನಲ್ಲಿ ಕೇಂದ್ರದ ಮೇಲೆ ಒತ್ತಡ ಹೇರುವ ಕೆಲಸ ಮಾಡಲಾಗುವುದು ಎಂದರು.
ತಾಯಿ ಕನ್ನಡ ಭುವನೇಶ್ವರಿಯ ಒಡಲು ಶ್ರೀಮಂತವಾದುದು. ಇಲ್ಲಿನ ಜ್ಞಾನ, ಸಾಹಿತ್ಯ, ತಂತ್ರಜ್ಞಾನ ಎಲ್ಲವೂ ಸಿರಿವಂತವಾಗಿದೆ. ಕನ್ನಡ ಭಾಷೆಯಲ್ಲಿ ಸ್ಪಷ್ಟತೆ, ನಿಖರತೆ, ಪ್ರಖರತೆಗಳಿವೆ. ಕನ್ನಡದ ಮನಸ್ಸುಗಳು ಸ್ವಚ್ಛ ಹಾಗೂ ಪಾರದರ್ಶಕವಾಗಿವೆ. ಮೆದುಳಿನಿಂದ ಬಂದ ಮಾತು ಬರೀ ಮಾತಾಗುತ್ತದೆ. ಆದರೆ ಹೃದಯದಿಂದ ಬಂದ ಮಾತು ಸತ್ಯದರ್ಶನವಾಗುತ್ತದೆ. ಹೀಗೆ ಕನ್ನಡ ಸಾಹಿತ್ಯವೆಲ್ಲ ಹೃದಯದಿಂದ ಬಂದಿರುವಂತಹದ್ದು. ಹೀಗಾಗಿ ಇಲ್ಲಿ ಸತ್ಯದರ್ಶನವಾಗಿದೆ. ಕನ್ನಡ ಭಾಷೆಗೆ ಉಜ್ವಲ ಭವಿಷ್ಯವಿದೆ. ಕಾಲಕಾಲಕ್ಕೆ ಎಲ್ಲ ಸವಾಲುಗಳನ್ನು ಮೆಟ್ಟಿನಿಂತು ಮುಂದೆ ಸಾಗುತ್ತಿದೆ ಎಂದು ತಿಳಿಸಿದರು.
ಕಲಬುರಗಿಗೆ ನಾಳೆ ಸಿಎಂ ಬೊಮ್ಮಾಯಿ ಪುತ್ರ ಭರತ್ ಆಗಮನ
ವಿಧಾನಸಭೆ ಸ್ಪೀಕರ್ ವಿಶ್ವೇಶ್ವರ ಹೆಗಡೆ ಕಾಗೇರಿ, ಕೇಂದ್ರ ಸಚಿವ ಪ್ರಹ್ಲಾದ್ ಜೋಶಿ, ವಿಧಾನ ಪರಿಷತ್ ವಿಪಕ್ಷ ನಾಯಕ ಬಿ.ಕೆ.ಹರಿಪ್ರಸಾದ್, ವಿಶ್ರಾಂತ ಕುಲಪತಿ ಡಾ.ಬಿ.ಎ.ವಿವೇಕ ರೈ, ಜಿಲ್ಲಾ ಉಸ್ತುವಾರಿ ಸಚಿವ ಅರೆಬೈಲು ಶಿವರಾಮ ಹೆಬ್ಬಾರ್, ಸಮ್ಮೇಳನಾಧ್ಯಕ್ಷ ಡಾ.ದೊಡ್ಡರಂಗೇಗೌಡ, ಸಚಿವರಾದ ಬಿ.ಸಿ.ಪಾಟೀಲ, ಬಿ.ಸಿ.ನಾಗೇಶ್, ಸಂಸದ ಶಿವಕುಮಾರ್ ಉದಾಸಿ ಇತರೆ ಗಣ್ಯರು ಭಾಗವಹಿಸಿದ್ದರು.