ಏಳು ವಾರಗಳ ಹಿಂದೆ ಬೆಂಗಳೂರಿನ ದೊಡ್ಡ ಖಾಸಗಿ ಆಸ್ಪತ್ರೆಯೊಂದರಲ್ಲಿ ಮೊದಲ ಡೋಸ್‌ ಕೊರೋನಾ ಲಸಿಕೆ ಪಡೆದುಕೊಂಡಿದ್ದೆ. ನಂತರ ಮೊನ್ನೆ ಎರಡನೇ ಡೋಸ್‌ಗಾಗಿ ನಮ್ಮ ಜಾವಳಿ ಹಳ್ಳಿಯಿಂದ 300 ಕಿ.ಮೀ. ದೂರದ ಬೆಂಗಳೂರಿಗೆ ಹೋಗುವುದರ ಬದಲು ಇಲ್ಲೇ ಇರುವ ಸರ್ಕಾರಿ ಆಸ್ಪತ್ರೆಯಲ್ಲಿ ಲಸಿಕೆ ಪಡೆದುಕೊಂಡೆ. ಬೆಂಗಳೂರಿನ ಆಸ್ಪತ್ರೆಯಲ್ಲೇ ಎರಡನೇ ಡೋಸ್‌ ತೆಗೆದುಕೊಳ್ಳೋಣವೆಂದು ಅಲ್ಲಿನ ಒಬ್ಬರ ಜೊತೆ ಒಂದಷ್ಟುಚರ್ಚೆ ನಡೆಸಿದ್ದೆ.

ಮನೆಯವರ ಜೊತೆ ಆ ಬಗ್ಗೆ ಮಾತನಾಡುತ್ತಿದ್ದಾಗ ಕೇಳಿಸಿಕೊಂಡ ನಮ್ಮ ಅಡುಗೆಯ ವಿಶ್ವ ಈ ವಿಷಯವನ್ನು ಹಳ್ಳಿಯ ಆಸ್ಪತ್ರೆಯಲ್ಲಿ ಹೇಳಿದ್ದನಂತೆ. ಮೊನ್ನೆ ಇನ್ನೇನು ಮಧ್ಯಾಹ್ನದ ಊಟಕ್ಕೆ ಕುಳಿತುಕೊಳ್ಳಬೇಕು ಎನ್ನುವಷ್ಟರಲ್ಲಿ ವಿಶ್ವನೇ ಬಂದು ಆಸ್ಪತ್ರೆಯವರು ಈಗಷ್ಟೇ ಫೋನ್‌ ಮಾಡಿ ಜಿಲ್ಲಾ ಕೇಂದ್ರದಿಂದ ಹೊಸತಾಗಿ ಲಸಿಕೆ ಬಂದಿದೆ, ಒಂದೆರಡು ಗಂಟೆಯಲ್ಲೇ ತೆಗೆದುಕೊಳ್ಳಬೇಕಂತೆ ಎಂದು ಹೇಳಿದ್ದಾರೆ ಎಂದ. ನಾನು ಮರುಯೋಚನೆ ಮಾಡದೆ ಊಟದ ಟೇಬಲ್‌ ಬಿಟ್ಟು ಅಲ್ಲೇ ಸ್ವಲ್ಪ ದೂರದಲ್ಲಿದ್ದ ಆಸ್ಪತ್ರೆಗೆ ಧಾವಿಸಿದೆ. ಅಲ್ಲಿ ನನಗಾದ ಅನುಭವ ನಿಜಕ್ಕೂ ಬಹಳ ಖುಷಿ ಕೊಟ್ಟಿತು. ಚಿಕ್ಕಮಗಳೂರು ಜಿಲ್ಲೆಯ ಮೂಡಿಗೆರೆ ತಾಲೂಕು ಕೇಂದ್ರದಿಂದಲೂ 40 ಕಿ.ಮೀ. ದೂರದ, ಪಶ್ಚಿಮ ಘಟ್ಟದ ದಟ್ಟಾರಣ್ಯದ ಮಡಿಲಿನಲ್ಲಿರುವ ಮಲೆನಾಡಿನ ಪುಟ್ಟಊರಿನ ಆಸ್ಪತ್ರೆಯದು.

ಕೇವಲ 2 ಲಸಿಕೆ ಉತ್ಪಾದಕ ಕಂಪನಿಗಳ ಮೇಲೆ ಸರ್ಕಾರ ಅವಲಂಬಿತವಾಗಿದ್ದೇ ತಪ್ಪಾಯಿತೇ?

ಎಲ್ಲವೂ ಫಟಾಫಟ್‌

ಮಂಗಳೂರು ಹೆಂಚಿನ ಸಣ್ಣ ಆರೋಗ್ಯ ಕೇಂದ್ರಕ್ಕೆ ಪ್ರವೇಶಿಸುತ್ತಿದ್ದಂತೆ ಬಾಗಿಲಿನಲ್ಲೇ ಸಿಬ್ಬಂದಿ ನನ್ನ ಕೈಗೆ ಸ್ಯಾನಿಟೈಸರ್‌ ಹಾಕಿದರು. ಫ್ರಂಟ್‌ ಡೆಸ್ಕ್‌ನಲ್ಲಿದ್ದ ಒಬ್ಬರು ಆಧಾರ್‌ ನಂಬರ್‌ ತೆಗೆದುಕೊಂಡರು. ಕ್ಷಣಾರ್ಧದಲ್ಲಿ ಅವರ ಬಳಿ ನನ್ನ ಮೊದಲ ಡೋಸ್‌ ಲಸಿಕೆಯ ಎಲ್ಲಾ ವಿವರವೂ ಇತ್ತು. ನನಗೂ ಅದನ್ನು ಓದಿದರು. ನಾನು ಮೊದಲ ಡೋಸ್‌ ಪಡೆದ ದಿನಾಂಕವನ್ನು ಖಾತ್ರಿಪಡಿಸಿಕೊಳ್ಳುವುದರ ಜೊತೆಗೆ ಬೆಂಗಳೂರಿನಲ್ಲಿ ತೆಗೆದುಕೊಂಡ ಲಸಿಕೆಯ ಬ್ರ್ಯಾಂಡ್‌ ಕೂಡ ಅವರಿಗೆ ತಿಳಿದುಕೊಳ್ಳಬೇಕಿತ್ತು. ಏಕೆಂದರೆ ಈಗ ಅದೇ ಬ್ರ್ಯಾಂಡ್‌ನ ಎರಡನೇ ಡೋಸ್‌ ನೀಡಬೇಕಲ್ಲ. ನಾನು ನಿಜಕ್ಕೂ ವಿಸ್ಮಿತನಾಗಿದ್ದೆ.

ಎಲ್ಲಾ ವಿವರ ಪಡೆದುಕೊಂಡ ನಂತರ ಮಾಸ್ಕ್‌ ಧರಿಸಿದ್ದ, ಅಚ್ಚ ಬಿಳಿಯ ಸ್ವಚ್ಛ ಬಟ್ಟೆಯ ನರ್ಸ್‌ ಒಬ್ಬರು ಪಕ್ಕದ ಕೋಣೆಗೆ ನನ್ನನ್ನು ಕರೆದುಕೊಂಡು ಹೋಗಿ ಲಸಿಕೆ ನೀಡಿದರು. ಆಮೇಲೆ ಅವರೇ ಹಾಲ್‌ಗೆ ಕರೆದುಕೊಂಡು ಬಂದರು. ನಾನು ಲಸಿಕೆಯ ಪ್ರೋಟೋಕಾಲ್‌ ಮರೆತು ಅಲ್ಲಿಂದ ಹೊರಡುವವನಿದ್ದೆ. ಆದರೆ, ಅವರು ಮೂವತ್ತು ನಿಮಿಷ ಇರಲು ಹೇಳಿದರು. ನಂತರ ನಾಲ್ಕು ಪ್ಯಾರಾಸಿಟೆಮಾಲ್‌ ಮಾತ್ರೆ ಕೈಗತ್ತು ಜ್ವರ ಬಂದರೆ ತೆಗೆದುಕೊಳ್ಳಿ ಎಂದು ಮುಗುಳ್ನಕ್ಕರು. ಅಲ್ಲೇ ಇದ್ದ ಇನ್ನೊಬ್ಬರು ನರ್ಸ್‌ ಕೂಡ ನಗುಮೊಗದಲ್ಲೇ ‘ಆ್ಯಕ್ಚುವಲಿ ಲಸಿಕೆ ತೆಗೆದುಕೊಂಡ ಮೇಲೆ ನೋವು ಅಥವಾ ಜ್ವರದಂತಹ ಯಾವುದಾದರೂ ಲಕ್ಷಣ ಕಾಣಿಸಿದರೆ ಒಳ್ಳೇದು. ಆಗ ವ್ಯಾಕ್ಸೀನ್‌ ಕೆಲಸ ಮಾಡುತ್ತಿದೆ ಅಂತ ಅರ್ಥ’ ಎಂದರು. ನಾನು ತಲೆಯಾಡಿಸಿ, ದುಡ್ಡೇನಾದರೂ ಕೊಡಬೇಕೇ ಎಂದು ಕೇಳಿದೆ. ಆಕೆ ಇವೆಲ್ಲ ಫ್ರೀ ಅಂದರು.

ಮೋದಿಗೆ ಆಪ್ತರಾಗಿದ್ದ ಪ್ರಶಾಂತ್ ಕಿಶೋರ್ ವಿರೋಧ ಪಾಳಯ ಸೇರಿದ್ಹೇಗೆ..?

ಅಚ್ಚುಕಟ್ಟು ವ್ಯವಸ್ಥೆ

ಹಸಿರು ಬಣ್ಣದ, ಸುಂದರ, ಸ್ವಚ್ಛ ಹಾಗೂ ಚೆನ್ನಾಗಿ ಗಾಳಿಯಾಡುವ ಆ ಪುಟ್ಟಆರೋಗ್ಯ ಕೇಂದ್ರವನ್ನು ಮೆಟ್ರೋ ನಗರದ ಏರ್‌ ಕಂಡೀಶನ್‌ನ, ನೆಲ ಫಳಫಳ ಹೊಳೆಯುವ, ಒಂಥರಾ ಭೀತಿ ಹುಟ್ಟಿಸುವ ಬೃಹತ್‌ ಆಸ್ಪತ್ರೆಗೆ ಯಾವ ರೀತಿಯಲ್ಲೂ ಹೋಲಿಸುವಂತಿಲ್ಲ. ಹಳ್ಳಿಮೂಲೆಯ ಈ ಆಸ್ಪತ್ರೆಯಲ್ಲೂ ಎಷ್ಟುಚೆನ್ನಾಗಿ ತಿಳಿದುಕೊಂಡ, ಎಷ್ಟೊಂದು ಚೆನ್ನಾಗಿ ಮಾತನಾಡಿಸುವ ಸಿಬ್ಬಂದಿಯಿದ್ದಾರೆ. ಎಲ್ಲಿ ನೋಡಿದರೂ ಆತಂಕದ, ಬೇಸರದ, ಸಿನಿಕ ವಾತಾವರಣವೇ ಕಾಣಿಸುತ್ತಿರುವ ಈ ದಿನಗಳಲ್ಲಿ ನಿಜಕ್ಕೂ ಇದು ನಾವೆಲ್ಲ ಖುಷಿಪಡುವ ವಿಚಾರವೆಂದು ನನಗೆ ಅನ್ನಿಸುತ್ತದೆ. ಎಮರ್ಸನ್‌ ಹೇಳುವಂತೆ ಅನುಮಾನವೆಂಬುದು ನಿಧಾನ ಆತ್ಮಹತ್ಯೆಯಿದ್ದಂತೆ. ನಗರದ ಆಸ್ಪತ್ರೆಯಲ್ಲೇ ಲಸಿಕೆ ತೆಗೆದುಕೊಳ್ಳಬೇಕೆಂದು ಯೋಚಿಸುತ್ತಿದ್ದ ನನಗೆ ನನ್ನ ಬಗ್ಗೆಯೇ ಕೊಂಚ ನಾಚಿಕೆಯಾಗಿದ್ದು ಸುಳ್ಳಲ್ಲ.

ಲಸಿಕೆ ತೆಗೆದುಕೊಂಡಾದ ಮೇಲೆ ಹೊರಗೆ ಅರ್ಧ ಗಂಟೆ ಕಾಯುವಾಗ ಅಲ್ಲಿನ ಹೆಡ್‌ ನರ್ಸ್‌ ಸುಜಯಾ ಜೊತೆ ಮಾತನಾಡುತ್ತಿದ್ದೆ. ಆಕೆ ಅಲ್ಲಿ ಎರಡು ವರ್ಷದಿಂದ ಕೆಲಸ ಮಾಡುತ್ತಿದ್ದರು. ಸಣ್ಣ ಹಳ್ಳಿಯಿಂದ ಬಂದು ಚಿಕ್ಕಮಗಳೂರು ಜಿಲ್ಲಾ ಕೇಂದ್ರದಲ್ಲಿರುವ ನರ್ಸಿಂಗ್‌ ಕಾಲೇಜಿನಲ್ಲಿ ಆರೇಳು ವರ್ಷದ ಹಿಂದೆ ಪದವಿ ಪಡೆದಿದ್ದರು. ಆಕೆ ಎಷ್ಟೊಂದು ಅಪ್‌-ಟು-ಡೇಟ್‌ ಆಗಿದ್ದರು. ಇಲ್ಲಿ ಪದೇಪದೇ ಕರೆಂಟ್‌ ಹೋಗುತ್ತದೆಯಲ್ಲ, ನೀವು ಲಸಿಕೆಯನ್ನು ಹೇಗೆ ಫ್ರೀಜರ್‌ನಲ್ಲಿಡುತ್ತೀರಿ? ಇಲ್ಲಿನ ಪರಿಸ್ಥಿತಿಯಲ್ಲಿ ವ್ಯಾಕ್ಸೀನ್‌ ಸುರಕ್ಷಿತವೇ? ಲಸಿಕೆ ಸರಬರಾಜು ಹೇಗೆ ಮಾಡುತ್ತಾರೆ? ನನ್ನಲ್ಲಿ ಹಲವು ಪ್ರಶ್ನೆಗಳಿದ್ದವು. ಆಕೆ ಯಾವುದಕ್ಕೂ ತಡಕಾಡಲಿಲ್ಲ. ಪ್ರತಿಯೊಂದಕ್ಕೂ ಅವರಲ್ಲಿ ಸಮರ್ಪಕ ಉತ್ತರವಿತ್ತು. ನನ್ನನ್ನು ಕರೆದೊಯ್ದು ರೆಫ್ರಿಜರೇಟರ್‌ ಹಾಗೂ ಕೋಲ್ಡ್‌ ಸ್ಟೋರೇಜ್‌ ತೋರಿಸಿದರು. ಜಾಸ್ತಿ ಹೊತ್ತು ಕರೆಂಟ್‌ ಹೋದರೆ ಹೇಗೆ ಲಸಿಕೆಗಳನ್ನು ತೆಗೆದು ಡ್ರೈ ಐಸ್‌ ಇರುವ ಬಾಕ್ಸ್‌ಗೆ ಸ್ಥಳಾಂತರಿಸುತ್ತೇವೆಂದು ತೋರಿಸಿದರು. ನನಗೆ ಆಶ್ಚರ್ಯವಾಯಿತು.

ಸಮಸ್ಯೆ ಲಸಿಕೆಯದಲ್ಲ

ನಂತರ ಲಸಿಕೆ ಪೂರೈಕೆಯ ಸರಣಿ ಹೇಗೆ ಕೆಲಸ ಮಾಡುತ್ತದೆ ಹಾಗೂ ಲಸಿಕೆಗಳ ಕೊರತೆಯ ಬಗ್ಗೆ ಕೇಳಿದೆ. ‘ಜಿಲ್ಲಾ ಮುಖ್ಯಸ್ಥರು ಹಾಗೂ ತಾಲೂಕು ಮುಖ್ಯಸ್ಥರು ನಮ್ಮ ಜೊತೆ ನಿರಂತರ ಸಂಪರ್ಕದಲ್ಲಿದ್ದುಕೊಂಡು ಎಲ್ಲವನ್ನೂ ನಿಭಾಯಿಸುತ್ತಾರೆ. ಲಸಿಕೆಯ ಸ್ಟಾಕ್‌ ಮುಗಿದಕೂಡಲೇ ಅವರು ಎಲ್ಲರಿಗೂ ಮೊಬೈಲ್‌ನಲ್ಲಿ ಮೆಸೇಜ್‌ ಕಳಿಸುತ್ತಾರೆ. ಮತ್ತೆ ಯಾವಾಗ ಹೊಸ ಸ್ಟಾಕ್‌ ಬರುತ್ತದೆ, ಅದನ್ನು ಯಾವಾಗ, ಎಷ್ಟುಗಂಟೆಗೆ ಪೂರೈಸುತ್ತೇವೆ ಎಂಬುದನ್ನೂ ಹೇಳುತ್ತಾರೆ. ಹೀಗಾಗಿ ನಮಗೆ ಆ ಸಮಯಕ್ಕೆ ಸರಿಯಾಗಿ ಜನರನ್ನು ನೋಂದಣಿ ಮಾಡಿಕೊಳ್ಳಲು ಅನುಕೂಲವಾಗುತ್ತದೆ’ ಅಂದರು.

ಮಾರ್ಚ್‌ ಆರಂಭದಿಂದಲೇ ಇವರಿಗೆ ಲಸಿಕೆ ಬರಲು ಆರಂಭವಾಗಿದೆಯಂತೆ. ಆದರೆ ನಿಜವಾದ ಸಮಸ್ಯೆ ಶುರುವಾಗಿದ್ದು ನಂತರ. ಅದು ಲಸಿಕೆ ಪೂರೈಕೆಯ ಸಮಸ್ಯೆಯಲ್ಲ. ಹಳ್ಳಿಗರನ್ನು ಲಸಿಕೆ ಪಡೆಯಲು ಒಪ್ಪಿಸುವ ಸಮಸ್ಯೆ. ಇಲ್ಲಿನವರಲ್ಲಿ ಮೂಢನಂಬಿಕೆ ಜಾಸ್ತಿ. ಜೊತೆಗೆ ಲಸಿಕೆಯ ಬಗ್ಗೆ ಏನೇನೋ ವದಂತಿಗಳೂ ಹರಡಿದ್ದವು. ಬಹುತೇಕ ಜನರು ಸ್ಥಳೀಯ ಔಷಧಿಗಳ ಮೊರೆಹೋಗಿದ್ದರು. ಹೀಗಾಗಿ ಆರೋಗ್ಯ ಸಿಬ್ಬಂದಿಗೆ ವೃದ್ಧರನ್ನು ಲಸಿಕೆ ತೆಗೆದುಕೊಳ್ಳಲು ಕರೆದುಕೊಂಡು ಬರುವುದೇ ದೊಡ್ಡ ಸವಾಲಾಗಿತ್ತು. ಪರಿಹಾರ? ಅವರು ಮನೆಮನೆಗೇ ಹೋಗಿ ಜನರ ಮನವೊಲಿಸತೊಡಗಿದರು.

ರಾಜಕಾರಣಿಗಳಿಗೆ ಮಾತ್ರ ಕೊರೊನಾ ನಿಯಮವಿಲ್ಲ, ಕುಂಭ ಮೇಳ ಈಗ ಬೇಕಿತ್ತಾ?

ಲವಲವಿಕೆಯ ಆರೋಗ್ಯ ಸಿಬ್ಬಂದಿ

ವಿಶ್ವನ ಅಪ್ಪ ಲಸಿಕೆ ತೆಗೆದುಕೊಂಡಿದ್ದಾರೆಯೇ ಎಂದು ಕೇಳಿದೆ. ತೆಗೆದುಕೊಂಡಿದ್ದಾರೆ ಎಂದರು ನರ್ಸ್‌. ನನಗೆ ಆಶ್ಚರ್ಯ. ಈ ಆಸ್ಪತ್ರೆಯ ವ್ಯಾಪ್ತಿಗೆ ಎಷ್ಟುಹಳ್ಳಿಗಳು ಬರುತ್ತವೆಯೆಂದು ಕೇಳಿದೆ. ಮೂರು ಹಳ್ಳಿ ಮತ್ತು ಸುತ್ತಲಿನ ಕೆಲ ಪುಟ್ಟಊರುಗಳು ಬರುತ್ತವೆಯಂತೆ. ಒಟ್ಟು 4700 ಜನರಿದ್ದಾರಂತೆ. ಅವರಲ್ಲಿ 1200 ಜನರು 45 ವರ್ಷ ದಾಟಿದವರಂತೆ. ನನಗೆ ಮಾತೇ ಹೊರಡಲಿಲ್ಲ. ಇವರ ಕೆಲಸದ ಅಚ್ಚುಕಟ್ಟುತನಕ್ಕೆ ಮನಸ್ಸಿನಲ್ಲೇ ಭಲೇ ಅಂದೆ.

ನಾನು ಹೊರಡುವ ಹೊತ್ತಿಗೆ ಸರಿಯಾಗಿ ಬಣ್ಣದ ಬಟ್ಟೆಯ ಯುವತಿಯೊಬ್ಬಳು ಬೇಸಿಗೆಯ ತಂಪು ಗಾಳಿಯಂತೆ ಬಂದಳು. ಅವಳು ಬರುತ್ತಿದ್ದಂತೆ ಅಲ್ಲೊಂದು ಮಿಂಚಿನ ಸಂಚಾರ. ಪಟಪಟ ಅರಳು ಹುರಿದಂತೆ ಮಾತನಾಡುವ ಆ ಹುಡುಗಿ ಸೀನಿಯರ್‌ ನರ್ಸ್‌ ಬಳಿ ವರದಿ ಒಪ್ಪಿಸುತ್ತಿದ್ದಳು. ಅವರ ಮಾತಿನಿಂದ ನನಗೆ ಅರ್ಥವಾಗಿದ್ದೇನೆಂದರೆ, ಈಕೆ ಕೂಡ ಅಲ್ಲಿ ನರ್ಸ್‌. ಹಳ್ಳಿಹಳ್ಳಿಗೆ ಹೋಗಿ ವಯಸ್ಸಾದವರನ್ನು ಲಸಿಕೆ ಪಡೆಯಲು ನೋಂದಣಿ ಮಾಡಿಕೊಂಡು ಬರುವ ಕೆಲಸ ಮಾಡುತ್ತಿದ್ದಾಳೆ. ಅವರೆಲ್ಲ ಎಷ್ಟೊಂದು ಖುಷಿಯಾಗಿ ಕೆಲಸ ಮಾಡುತ್ತಿದ್ದಾರೆ!

ಆ ಲೋಕ ಈ ಲೋಕ ಬೇರೆ ಬೇರೆ

ಬೆಟ್ಟಗುಡ್ಡಗಳ ಹಾದಿಯಲ್ಲಿ ಡ್ರೈವ್‌ ಮಾಡಿಕೊಂಡು ಮನೆಗೆ ಬರುತ್ತಿದ್ದಾಗ ನನ್ನ ಮನಸ್ಸು ನಗರ ಪ್ರದೇಶಗಳ ತೋರುಗಾಣಿಕೆಯ ಬಿನ್ನಾಣ ಮತ್ತು ಒಳಗೊಳಗೇ ಇರುವ ಹುಳುಕುಗಳತ್ತ ತಿರುಗಿತು. ಏಕಮುಖದಲ್ಲಿ ಕಿರುಚುವ ಟೀವಿ ಪ್ಯಾನಲ್‌ ಚರ್ಚೆಗಳು, ಕುಂಭ ಮೇಳದಲ್ಲಿ ಅಂಗಿ ಬಿಚ್ಚಿಕೊಂಡು ಲಕ್ಷಾಂತರ ಸಂಖ್ಯೆಯಲ್ಲಿ ಒಂದೇ ಕಡೆ ರಾಶಿ ಹಾಕಿಕೊಂಡಂತೆ ನೆರೆದಿರುವ ಜನರ ಫೋಟೋಗಳು, ಅವರ ಹಿಂದೆ ಸಾಧು ಸನ್ಯಾಸಿಗಳು, ಒಬ್ಬರಿಂದೊಬ್ಬರಿಗೆ ಸ್ವಲ್ಪವೂ ಅಂತರವಿಲ್ಲದೆ ಮೈ ತಾಗಿಸಿಕೊಂಡು ಗಂಗೆಯಲ್ಲಿ ಮಾಡುವ ಸ್ನಾನ, ಮುಖಕ್ಕೆ ಮಾಸ್ಕ್‌ ಹಾಕದೆ ಸೊಂಟದ ಕೆಳಗಷ್ಟೇ ಒಂದು ಬಟ್ಟೆಯ ತುಂಡು ಕಟ್ಟಿಕೊಂಡು ಓಡಾಡುವುದು, ನರಮನುಷ್ಯರಿಗೆ ಹೇಳಿಮಾಡಿಸಿದ್ದಲ್ಲದ ಹಾಗೂ ದೇವರಿಗಷ್ಟೇ ಪ್ರೀತಿ ಅನ್ನಿಸುವ ದೃಶ್ಯಗಳು, ಲಕ್ಷಾಂತರ ಜನರು ಉನ್ಮತ್ತರಾಗಿ ಜಾತ್ರೆಗಳಲ್ಲಿ ಸೇರುವುದು, ಕೆನ್ನೆಗೆ ಕೆನ್ನೆ ತಾಗುವಂತೆ ಕಿಕ್ಕಿರಿದು ನೆರೆಯುವುದು, ಚುನಾವಣಾ ಪ್ರಚಾರದ ರ್ಯಾಲಿಗಳಲ್ಲಿ ತಮ್ಮ ನಾಯಕರ ಭಾಷಣ ಕೇಳಿ ಮಾಸ್ಕ್‌ ಹಾಕದ ಬಾಯಿಗಳು ಏಕಪ್ರಕಾರದಲ್ಲಿ ಮೊಳಗಿಸುವ ರಾಜಕೀಯ ಜೈಕಾರಗಳು... ಇವೆಲ್ಲ ಮನಸ್ಸಿನಲ್ಲಿ ಹಾದು ಹೋಗುತ್ತಿದ್ದಂತೆ ನನಗೆ ಜನ ಮರುಳೋ ಜಾತ್ರೆ ಮರುಳೋ ಅನ್ನಿಸಿತು.

ಜನಸಾಮಾನ್ಯರು ಹೀಗೆ ದೊಡ್ಡ ಗುಂಪು ಸೇರಿದಾಗ ಹೇಗೆ ಆ ಪರಿ ಹೊಣೆಗೇಡಿಗಳಾಗುತ್ತಾರೆಂದು ಯೋಚಿಸಿದರೆ ಆಶ್ಚರ್ಯವಾಗುತ್ತದೆ. ಕಂಡಕಂಡಲ್ಲಿ ಭಾಷಣ ಮಾಡುವ ರಾಜಕಾರಣಿಗಳು ಭೂಮಿಯನ್ನೇ ಸ್ವರ್ಗ ಮಾಡುತ್ತೇನೆ ಅನ್ನುವುದು ಹಾಗೂ ಹೋದಲ್ಲೆಲ್ಲ ಪ್ರವಚನ ನೀಡುವ ಸಾಧುಗಳು ಇನ್ನೊಂದು ಲೋಕದಲ್ಲಿರುವ ಸ್ವರ್ಗದ ಆಸೆ ತೋರಿಸುವುದು ನಮ್ಮ ಜನರನ್ನು ಬಹುಶಃ ಹೀಗೆ ಮಾಡಿರಬಹುದು.

ಆದರೆ ನನ್ನ ಅದೃಷ್ಟ. ಜಾವಳಿಯ ಹಳ್ಳಿ ಆಸ್ಪತ್ರೆಯಲ್ಲಿ ನಗುಮೊಗದ ಸರಳ ನರ್ಸ್‌ಗಳು ಮತ್ತು ಸಿಬ್ಬಂದಿಯ ನಿಸ್ವಾರ್ಥ ಸೇವೆ ಕಂಡು ಈ ಎಲ್ಲ ನಿಷ್ೊ್ರಯೋಜಕ ಸಂಗತಿಗಳೂ ಮರೆತುಹೋದವು. ಮನಸ್ಸು ಖುಷಿಯಾಯಿತು. ನಿತ್ಯಹರಿದ್ವರ್ಣ ಬೆಟ್ಟಗಳ ತಂಗಾಳಿಯಲ್ಲಿ ನರ್ತಿಸುವ ಹಸಿರು ಮರಗಳ ಕೊಂಬೆಯ ಜೊತೆ ನನ್ನ ಹೃದಯ ಕೂಡ ಜೋಕಾಲಿಯಾಯಿತು.

ವಿಶ್ವ ನನ್ನನ್ನೊಮ್ಮೆ ಹೆಮ್ಮೆಯಿಂದ ನೋಡಿದ. ಅವನ ಮುಖದಲ್ಲೂ ಖುಷಿಯಿತ್ತು.

- ಕ್ಯಾಪ್ಟನ್‌ ಗೋಪಿನಾಥ್‌, ಉದ್ಯಮಿ, ಲೇಖಕ