ಮೋದಿಗೆ ಆಪ್ತರಾಗಿದ್ದ ಪ್ರಶಾಂತ್ ಕಿಶೋರ್ ವಿರೋಧ ಪಾಳಯ ಸೇರಿದ್ಹೇಗೆ..?
ಈಗ ಪಶ್ಚಿಮ ಬಂಗಾಳದಲ್ಲಿ ನಿಜಕ್ಕೂ ನಡೆಯುತ್ತಿರುವುದು ಮೋದಿಯವರ ರಣನೀತಿಕಾರ ಅಮಿತ್ ಶಾ ಮತ್ತು ಮಮತಾ ಅವರ ರಣತಂತ್ರಗಾರ ಪ್ರಶಾಂತ್ ಕಿಶೋರ್ ನಡುವಿನ ವ್ಯೂಹತಂತ್ರದ ಯುದ್ಧ.
ನವದೆಹಲಿ (ಏ. 16): ಈಗ ಪಶ್ಚಿಮ ಬಂಗಾಳದಲ್ಲಿ ನಿಜಕ್ಕೂ ನಡೆಯುತ್ತಿರುವುದು ಮೋದಿಯವರ ರಣನೀತಿಕಾರ ಅಮಿತ್ ಶಾ ಮತ್ತು ಮಮತಾ ಅವರ ರಣತಂತ್ರಗಾರ ಪ್ರಶಾಂತ್ ಕಿಶೋರ್ ನಡುವಿನ ವ್ಯೂಹತಂತ್ರದ ಯುದ್ಧ. ಹಾಗೆ ನೋಡಿದರೆ ಪ್ರಶಾಂತ್ ಕಿಶೋರ್ ಅಮೆರಿಕದಿಂದ ಭಾರತಕ್ಕೆ ಬಂದಿದ್ದು ಮೋದಿ ಆಹ್ವಾನದ ಮೇಲೆ.
ಗುಜರಾತ್ ಮುಖ್ಯಮಂತ್ರಿಗೆ ಆರೋಗ್ಯ ಸಲಹೆಗಾರನಾಗಿ ಅವರು ಬಂದಿದ್ದರು. ಮುಂದೆ ಅಚಾನಕ್ಕಾಗಿ ಚೆನ್ನೈನಲ್ಲಿ ಪಿಕೆ ಸಲಹೆಯ ಮೇಲೆ ಮೋದಿ ಮಾಡಿದ ಒಂದು ಭಾಷಣಕ್ಕೆ ತುಂಬಾ ಪ್ರಶಂಸೆ ಬಂದಾಗ ಮೋದಿ ಕಿಶೋರ್ ಅವರನ್ನು ತನ್ನ ಕಾಯಂ ಭಾಷಣ ಬರೆಯಲು ಹೇಳಿ ಗಾಂಧಿನಗರದ ಅಧಿಕೃತ ನಿವಾಸದಲ್ಲಿ ಇಟ್ಟುಕೊಂಡರು. 2012ರಲ್ಲಿ ಮೋದಿ ಮಾಡಿದ ಸದ್ಭಾವನಾ ಉಪವಾಸ, 2014ರ ಅಚ್ಛೆ ದಿನ್, ಚಾಯ್ ಪೇ ಚರ್ಚಾ ಎಲ್ಲವೂ ಪ್ರಶಾಂತ್ ಕಿಶೋರ್ ಕೊಟ್ಟ ಐಡಿಯಾಗಳಂತೆ.
ಆದರೆ, ದಿಲ್ಲಿಯಲ್ಲಿ ಅಧಿಕಾರ ಬಂದ ಮೇಲೆ ಪಿಕೆ ಐಎಎಸ್ ಅಧಿಕಾರಿಗಳ ಬದಲಿಗೆ ಇಲಾಖಾ ಪರಿಣತರಾಗಿ ವಿದೇಶಿ ಭಾರತೀಯರನ್ನು ತಂದು ಜಂಟಿ ಕಾರ್ಯದರ್ಶಿ ಸ್ಥಾನಕ್ಕೆ ನೇರ ನೇಮಕ ಮಾಡಿಕೊಳ್ಳಬೇಕು ಎಂದು ಪಟ್ಟು ಹಿಡಿದರು. ಆದರೆ, ಮೋದಿ ಬೇಕಾದರೆ ಸಲಹೆಗಾರರಾಗಿ ತೆಗೆದುಕೊಳ್ಳಬಹುದು, ಇಲ್ಲವಾದರೆ ಬಾಬುಗಳು ತಿರುಗಿ ಬೀಳುತ್ತಾರೆ ಎಂದಾಗ ಪಿಕೆ ಸಿಟ್ಟಾಗಿ ಹೋಗಿ ನಿತೀಶ್ ಜೊತೆ ಸೇರಿಕೊಂಡರು. ಈಗ ಅವರ ಜೊತೆಗೂ ಜಗಳ ಆಡಿ ಮಮತಾ ಸೋತರೆ ಚುನಾವಣಾ ಕೆಲಸ ಬಿಟ್ಟು ಬಿಡುತ್ತೇನೆ ಎಂಬಲ್ಲಿಗೆ ಬಂದು ನಿಂತಿದ್ದಾರೆ.
ರಾಜಕಾರಣಿಗಳಿಗೆ ಮಾತ್ರ ಕೊರೊನಾ ನಿಯಮವಿಲ್ಲ, ಕುಂಭ ಮೇಳೆ ಬೇಕಿತ್ತಾ?
ಗಡ್ಕರಿ ಸಾಹೇಬರ ಸಿಟ್ಟು
ಸದಾ ನಗುತ್ತಾ ತಮಾಷೆ ಮಾಡುವ ಕೇಂದ್ರ ಸಚಿವ ನಿತಿನ್ ಗಡ್ಕರಿ ಇತ್ತೀಚೆಗೆ ಭಾರೀ ಸಿಟ್ಟುಗೊಂಡಿದ್ದರಂತೆ. ಸಿಟ್ಟಿಗೆ ಕಾರಣ ಕಿರಿಯ ಕೇಂದ್ರ ಸಚಿವರ ಕಾರ್ಯಾಲಯದಿಂದ ಬಂದ ಫೋನು. ರೈತರ ವಿಷಯ ಇರಲಿ, ಆರ್ಥಿಕತೆ ಬಗ್ಗೆ ಇರಲಿ ಗಡ್ಕರಿ ಮಾಧ್ಯಮಗಳ ಜೊತೆ ಜಾಸ್ತಿ ಬಿಂದಾಸ್ ಆಗಿ ಮಾತನಾಡುತ್ತಾರೆ. ಇಷ್ಟೊಂದು ಮಾತನಾಡಬಾರದು, ಕಡಿಮೆ ಮಾಡಿ ಎಂದು ಗಡ್ಕರಿ ಅವರ ಕಚೇರಿಗೆ ಕಿರಿಯ ಮಂತ್ರಿಯೊಬ್ಬರು ಫೋನ್ ಮಾಡಿ ಹೇಳಿದರಂತೆ. ತಗೊಳ್ಳಿ ಸಿಟ್ಟುಗೊಂಡ ನಿತಿನ್ ಗಡ್ಕರಿ ಒಂದು ತಿಂಗಳು ಯಾವುದೇ ವಿಷಯ ಬರಲಿ ತುಟಿ ಬಿಚ್ಚಲಿಲ್ಲ.
ಎಷ್ಟೇ ಹೇಳಿದರೂ ಉದ್ಧವ್ ಠಾಕ್ರೆ ಸರ್ಕಾರದ ವಿರುದ್ಧ ಕೂಡ ಮಾತಾಡಲಿಲ್ಲ. ಕೊನೆಗೆ ಕೇಂದ್ರ ವಾರ್ತಾ ಮತ್ತು ಪ್ರಸಾರ ಖಾತೆ ಸಚಿವ ಪ್ರಕಾಶ್ ಜಾವಡೇಕರ್ ಫೋನ್ ಮಾಡಿದಾಗ ಗಡ್ಕರಿ ಸಾಹೇಬರು ನಾನು ಮಾತನಾಡೋದಿಲ್ಲ ಎಂದರಂತೆ. ಕೊನೆಗೆ ಸ್ವತಃ ಜೆ.ಪಿ.ನಡ್ಡಾ ಮತ್ತು ಪ್ರಧಾನಿ ಕಾರ್ಯಾಲಯ ವಿನಂತಿ ಮಾಡಿ ಮನವೊಲಿಸಿದ ನಂತರ ಗಡ್ಕರಿ ಸಿಟ್ಟು ಕಡಿಮೆ ಆಯಿತಂತೆ. ಬಿಜೆಪಿ ಮೂಲಗಳು ಹೇಳುವ ಪ್ರಕಾರ ಗಡ್ಕರಿಗೂ ಹೈಕಮಾಂಡ್‌ಗೂ ಅಷ್ಟಕ್ಕಷ್ಟೆ. ಹೀಗಾಗಿ ಸಣ್ಣ ಪುಟ್ಟಕಿರಿಕಿರಿಗಳು ಒಳಗೊಳಗೇ ನಡೆಯುತ್ತಿರುತ್ತವೆ.
ಸೆಟೆದು ಕುಳಿತ ವಸುಂಧರಾ
ರಾಜಸ್ಥಾನದಲ್ಲಿ ರಾಜಸಮದ್ ಸೇರಿ ಮೂರು ಉಪ ಚುನಾವಣೆಗಳು ನಡೆಯುತ್ತಿವೆ. ಆದರೆ, ಬಿಜೆಪಿ ದಿಲ್ಲಿ ನಾಯಕರು ಎಷ್ಟೇ ಕೇಳಿಕೊಂಡರೂ ಕೂಡ ಅಲ್ಲಿನ ಬಿಜೆಪಿಯ ಏಕೈಕ ಜನನಾಯಕಿ ವಸುಂಧರಾ ರಾಜೇ ಪ್ರಚಾರಕ್ಕೆ ಬರುತ್ತಿಲ್ಲ. ಪ್ರಚಾರಕ್ಕೆ ಬರದೇ ಸ್ಥಳೀಯ ಸಂಘ ಮತ್ತು ದಿಲ್ಲಿ ನಾಯಕರ ವಿರುದ್ಧದ ಸಿಟ್ಟನ್ನು ವಸುಂಧರಾ ತೋರಿಸಿಕೊಳ್ಳುತ್ತಿದ್ದಾರೆ. ಕೊನೆಗೆ ಬೇರೆ ದಾರಿ ಕಾಣದೆ ಬಿಜೆಪಿಯ ನಾಯಕರು ಮಧ್ಯಪ್ರದೇಶದಿಂದ ವಸುಂಧರಾ ಅಳಿಯ ಜ್ಯೋತಿರಾದಿತ್ಯ ಸಿಂಧಿಯಾರನ್ನು ರಾಜಸ್ಥಾನಕ್ಕೆ ಕರೆದುಕೊಂಡು ಹೋಗಿ ಪ್ರಚಾರ ನಡೆಸುತ್ತಿದ್ದಾರೆ. ಈ ಹಳೆಯ ರಾಜಮನೆತದವರ ಸಿಟ್ಟು ಸೆಡವುಗಳನ್ನು ಈಗಿನ ರಾಜಕೀಯದಲ್ಲಿ ಸಂಭಾಳಿಸುವುದು ಬಹಳ ತ್ರಾಸದ ಕೆಲಸ.
- ಪ್ರಶಾಂತ್ ನಾತು, ಸುವರ್ಣ ನ್ಯೂಸ್ ದೆಹಲಿ ಪ್ರತಿನಿಧಿ
- ಇಂಡಿಯಾ ಗೇಟ್, ದೆಹಲಿಯಿಂದ ಕಂಡ ರಾಜಕಾರಣ