ತಮಿಳುನಾಡಿನಿಂದ ಅನಗತ್ಯವಾಗಿ ಮೇಕೆದಾಟು ಯೋಜನೆಗೆ ವಿರೋಧ: ಸಿಎಂ ಸಿದ್ದು
ವಯನಾಡಲ್ಲಿ ಮಳೆಯಾಗಿಲ್ಲ. ಹೀಗಾಗಿ, ಕಬಿನಿ ಜಲಾಶಯ ಭರ್ತಿಯಾಗಿಲ್ಲ. ಇರುವ ನೀರಿನಲ್ಲಿಯೇ ನಮ್ಮ ಬೆಳೆಗಳನ್ನು ರಕ್ಷಣೆ ಮಾಡಿಕೊಳ್ಳಬೇಕು. ಕುಡಿಯಲು ನೀರು ಕೊಡಬೇಕು. ತಮಿಳುನಾಡಿನವರು ಅನಗತ್ಯವಾಗಿ ಮೇಕೆದಾಟು ಯೋಜನೆಗೆ ವಿರೋಧ ಮಾಡುತ್ತಿದ್ದಾರೆ: ಮುಖ್ಯಮಂತ್ರಿ ಸಿದ್ದರಾಮಯ್ಯ
ಬಳ್ಳಾರಿ/ವಿಜಯಪುರ(ಸೆ.03): ನಮ್ಮಲ್ಲಿಯೇ ನೀರಿಲ್ಲ. ಹೀಗಿರುವಾಗ ತಮಿಳುನಾಡಿಗೆ ಹೇಗೆ ನೀರು ಬಿಡಲು ಸಾಧ್ಯ?. ತಮಿಳುನಾಡಿಗೆ ನೀರು ಕೊಡಬಾರದು ಎಂಬ ಉದ್ದೇಶ ನಮ್ಮದಲ್ಲ. ಆದರೆ, ನಮ್ಮಲ್ಲಿಯೇ ನೀರಿಲ್ಲ. ಹೀಗಾಗಿ, ನೀರು ಬಿಡಲು ಸಾಧ್ಯವಿಲ್ಲ ಎಂದು ಮುಖ್ಯಮಂತ್ರಿ ಸಿದ್ದರಾಮಯ್ಯ ಸ್ಪಷ್ಟಪಡಿಸಿದ್ದಾರೆ.
ಆಲಮಟ್ಟಿ ಜಲಾಶಯ ಭರ್ತಿಯಾದ ಹಿನ್ನೆಲೆಯಲ್ಲಿ ಶನಿವಾರ ವಿಜಯಪುರ ಜಿಲ್ಲೆಯ ಆಲಮಟ್ಟಿಗೆ ತೆರಳಿ, ಕೃಷ್ಣೆಯ ಜಲಧಿಗೆ ಬಾಗಿನ ಅರ್ಪಿಸಿದರು. ಆಲಮಟ್ಟಿಗೆ ತೆರಳುವ ಮಾರ್ಗ ಮಧ್ಯೆ ಬಳ್ಳಾರಿಯ ತೋರಣಗಲ್ ಜಿಂದಾಲ್ ವಿಮಾನ ನಿಲ್ದಾಣದಲ್ಲಿ ಸುದ್ದಿಗಾರರ ಜತೆ ಅವರು ಮಾತನಾಡಿದರು. ವಯನಾಡಲ್ಲಿ ಮಳೆಯಾಗಿಲ್ಲ. ಹೀಗಾಗಿ, ಕಬಿನಿ ಜಲಾಶಯ ಭರ್ತಿಯಾಗಿಲ್ಲ. ಇರುವ ನೀರಿನಲ್ಲಿಯೇ ನಮ್ಮ ಬೆಳೆಗಳನ್ನು ರಕ್ಷಣೆ ಮಾಡಿಕೊಳ್ಳಬೇಕು. ಕುಡಿಯಲು ನೀರು ಕೊಡಬೇಕು. ತಮಿಳುನಾಡಿನವರು ಅನಗತ್ಯವಾಗಿ ಮೇಕೆದಾಟು ಯೋಜನೆಗೆ ವಿರೋಧ ಮಾಡುತ್ತಿದ್ದಾರೆ. ಮೇಕೆದಾಟುವಿನಿಂದ 67 ಟಿಎಂಸಿ ನೀರು ಸಂಗ್ರಹಿಸಬಹುದು. ಇಂತಹ ಪರಿಸ್ಥಿತಿಯಲ್ಲಿ ಹೆಚ್ಚು ಅನುಕೂಲವಾಗುತ್ತದೆ. ಈ ವಿಚಾರದಲ್ಲಿ ಕೇಂದ್ರ ಸರ್ಕಾರ ಮಧ್ಯಪ್ರವೇಶ ಮಾಡಬೇಕು. ಕಾವೇರಿ ನದಿ ನೀರು ನಿರ್ವಹಣಾ ಪ್ರಾಧಿಕಾರ ಸೂಕ್ತ ತೀರ್ಮಾನ ತೆಗೆದುಕೊಳ್ಳಬೇಕು ಎಂದು ಒತ್ತಾಯಿಸಿದರು.
ರಾಜ್ಯದ 186 ತಾಲೂಕಲ್ಲಿ ಬರ, 113 ತಾಲೂಕಲ್ಲಿ ಸಮೀಕ್ಷೆ ಪೂರ್ಣ: ಸಿಎಂ ಸಿದ್ದರಾಮಯ್ಯ
ದೆಹಲಿಗೆ ಸರ್ವ ಪಕ್ಷ ನಿಯೋಗ:
ಕಾವೇರಿ ನೀರಿಗೆ ಸಂಬಂಧಿಸಿದಂತೆ ಸರ್ವಪಕ್ಷ ನಿಯೋಗವನ್ನು ದೆಹಲಿಗೆ ಕೊಂಡೊಯ್ಯಲು ಪ್ರಧಾನಮಂತ್ರಿ ನರೇಂದ್ರ ಮೋದಿ ಹಾಗೂ ಕೇಂದ್ರ ಜಲಸಂಪನ್ಮೂಲ ಸಚಿವರ ಸಮಯ ಕೋರಿದ್ದೇವೆ. ಈಗಾಗಲೇ ನಮ್ಮ ಜಲಸಂಪನ್ಮೂಲ ಸಚಿವರು ನಮ್ಮ ರಾಜ್ಯದ ಪರವಾಗಿ ವಾದ ಮಂಡಿಸುವ ವಕೀಲರನ್ನು ಭೇಟಿ ಮಾಡಿ ಅವರಿಗೆ ವಸ್ತುಸ್ಥಿತಿ ಮನವರಿಕೆ ಮಾಡಿಕೊಟ್ಟಿದ್ದಾರೆ. ಬುಧವಾರ ಪ್ರಕರಣ ವಿಚಾರಣೆಗೆ ಬರಲಿದ್ದು ನಮ್ಮ ವಾದ ಏನಿರಬೇಕು ಎಂದು ಸೂಕ್ತ ನಿರ್ದೇಶನ ನೀಡಲಾಗಿದೆ ಎಂದು ಹೇಳಿದರು.