ಚಿಕ್ಕಮಗಳೂರಿನ ಮುತ್ತೋಡಿ ಅಭಯಾರಣ್ಯದಲ್ಲಿ ಹುಲಿ ಗಣನೆಗೆ ಅಳವಡಿಸಿದ್ದ ಕ್ಯಾಮೆರಾಗಳನ್ನು ಕಳ್ಳರು ಕದ್ದೊಯ್ದಿದ್ದಾರೆ. ಈ ಘಟನೆಯು ಅರಣ್ಯ ಇಲಾಖೆಯ ಕಾರ್ಯವೈಖರಿ ಮತ್ತು ಕಾಡುಪ್ರಾಣಿಗಳ ಸುರಕ್ಷತೆಯ ಬಗ್ಗೆ ಗಂಭೀರ ಪ್ರಶ್ನೆಗಳನ್ನು ಹುಟ್ಟುಹಾಕಿದೆ. 

ವರದಿ : ಆಲ್ದೂರು‌ಕಿರಣ್ ಏಷ್ಯಾನೆಟ್ ಸುವರ್ಣ ನ್ಯೂಸ್ ಚಿಕ್ಕಮಗಳೂರು

Add Asianetnews Kannada as a Preferred SourcegooglePreferred

ಚಿಕ್ಕಮಗಳೂರು (ಮೇ.9): ಮುತ್ತೋಡಿ ಅಭಯಾರಣ್ಯದಲ್ಲಿ ಭದ್ರಾ ಹುಲಿ ಸಂರಕ್ಷಿತ ಪ್ರದೇಶದಲ್ಲಿ ಅರಣ್ಯ ಇಲಾಖೆ ಅಳವಡಿಸಿದ್ದ ಹುಲಿ ಗಣನೆ ಕ್ಯಾಮೆರಾಗಳನ್ನು ಕಳ್ಳರು ಕಳವು ಮಾಡಿರುವ ಘಟನೆ ನಡೆದಿದೆ.‌ನಾಡು ಮುಗೀತು.. ಕಾಡಲ್ಲೂ ಕಳ್ಳರ ಕಾಟ ಸ್ಪಾರ್ಟ್ ಆಯ್ತು ಎನ್ನುವ ಪ್ರಶ್ನೆ ಮೂಡಿಸಿದೆ. ಇದರ ಜೊತೆಗೆ ‌ ಈ ಘಟನೆ ಅರಣ್ಯ ಇಲಾಖೆಯ ಕಾರ್ಯಚಟುವಟಿಕೆಗಳ ಮೇಲೆ ಮಾತ್ರವಲ್ಲ, ಕಾಡುಪ್ರಾಣಿಗಳ ಸುರಕ್ಷತೆ ಮೇಲೂ ಪ್ರಶ್ನೆ ಎತ್ತಿದೆ.

ಅರಣ್ಯಾಧಿಕಾರಿಗಳಿಂದ‌ ದೂರು :

ಮುತ್ತೋಡಿ ಅರಣ್ಯದಲ್ಲಿ ಕಾರ್ಯನಿರ್ವಹಿಸುತ್ತಿದ್ದ ಈ ಕ್ಯಾಮೆರಾಗಳು ಮೇ 4ರವರೆಗೆ ಕಾರ್ಯನಿರ್ವಹಿಸುತ್ತಿದ್ದವು. ಆದರೆ ಮೇ 5ರಂದು ಈ ಕ್ಯಾಮೆರಾಗಳು ಅಳವಡಿಸಿದ್ದ ಸ್ಥಳದಿಂದ ನಾಪತ್ತೆಯಾಗಿವೆ. ಈ ಕ್ಯಾಮೆರಾಗಳ ಒಟ್ಟು ಮೌಲ್ಯ 40,000 ಆಗಿದೆ.ಉಪವಲಯ ಅರಣ್ಯಾಧಿಕಾರಿ ಯಾಸೀನ್ ಬಾಷಾ ಮಾಹಿತಿ ನೀಡಿದ್ದು, ಕಾರ್ಯಾಚರಣೆ ವೇಳೆ ಅರಣ್ಯ ಪಾಲಕ ನಂದೀಶ್ ಅವರೊಂದಿಗೆ ಗಸ್ತಿನ ವೇಳೆ ಕಳ್ಳತನ ಬೆಳಕಿಗೆ ಬಂದಿದೆ. ಈ ಕಳ್ಳತನ ಪ್ರಕರಣವು ತಕ್ಷಣವೇ ಮಲ್ಲಂದೂರು ಪೊಲೀಸ್ ಠಾಣೆಯಲ್ಲಿ ದಾಖಲಾಗಿದ್ದು, ಸ್ಥಳೀಯ ಪೊಲೀಸರು ತನಿಖೆ ಆರಂಭಿಸಿದ್ದಾರೆ.ಅರಣ್ಯ ಇಲಾಖೆ ಹುಲಿ ಗಣನೆ ಕಾರ್ಯಾಚರಣೆಗೆ ಈ ಕ್ಯಾಮೆರಾಗಳನ್ನು ಕಡ್ಡಾಯ ಅನುಮತಿಯೊಂದಿಗೆ ಅರಣ್ಯ ಪ್ರದೇಶದಲ್ಲಿ ಅಳವಡಿಸಿದ್ದರೂ, ಕಳ್ಳರು ಕ್ಯಾಮೆರಾಗಳನ್ನು ಹೊತ್ತೊಯ್ದಿರುವುದು ಭದ್ರತೆಯ ವ್ಯತ್ಯಯವನ್ನೂ ತೋರಿಸುತ್ತದೆ.

ಕಾಡು ಪ್ರಾಣಿಗಳ ಸಂರಕ್ಷಣೆಯ ಪ್ರಶ್ನೆ ಉದ್ಬವ :

ಈ ಘಟನೆ ಕಾಡುಪ್ರಾಣಿಗಳ ಸಂರಕ್ಷಣೆಯಲ್ಲಿ ಅರಣ್ಯ ಇಲಾಖೆಯ ನಿರಂತರ ಪರಿಶೀಲನೆಗೆ ತಡೆಯಾಗಿದೆ.ಸ್ಥಳೀಯ ವಾಸಿಗಳಿಗೆ ಈ ಕಳ್ಳತನವು ಆತಂಕದ ವಿಷಯವಾಗಿದೆ. ಕಾಡುಪ್ರಾಣಿ ಬೇಟೆಗಾರರು ಮತ್ತು ಮರಗಳ್ಳರು ಈ ಕಳ್ಳತನಕ್ಕೆ ಸಂಬಂಧ ಹೊಂದಿರುವ ಶಂಕೆಯಡಿಯಲ್ಲಿ ಪರಿಶೀಲನೆ ನಡೆಯುತ್ತಿದೆ. ತಕ್ಷಣದ ತನಿಖೆಯಲ್ಲಿ ಕಳ್ಳರು ಅನುಮತಿರಹಿತವಾಗಿ ಅಭಯಾರಣ್ಯಕ್ಕೆ ಪ್ರವೇಶ ಪಡೆದಿರುವ ಸಾಧ್ಯತೆಯೂ ಇದೆ.

ಅರಣ್ಯ ಇಲಾಖೆ ಈಗ ಕಾಡುಪ್ರಾಣಿಗಳ ನಿರೀಕ್ಷಿತ ಕಾರ್ಯಚಟುವಟಿಕೆಗಳನ್ನು ಕಾಪಾಡಲು ಮತ್ತು ಕಳ್ಳತನ ಪ್ರಕರಣವನ್ನು ಪತ್ತೆಮಾಡಲು ತ್ವರಿತ ಕ್ರಮ ಕೈಗೊಂಡಿದೆ. ಹುಲಿ ಗಣನೆ ಕಾರ್ಯಾಚರಣೆ ಮತ್ತು ಕಾಡು ಪ್ರಾಣಿಗಳ ಮೇಲಿನ ಅಧ್ಯಯನದ ಸುತ್ತಲೂ ಸಾರ್ವಜನಿಕರು ಮತ್ತು ಪರಿಸರ ಸಂರಕ್ಷಕರಲ್ಲಿ ಆತಂಕ ವ್ಯಕ್ತವಾಗಿದೆ.ಈ ಕಳ್ಳತನ ಘಟನೆ ಮುತ್ತೋಡಿ ಅಭಯಾರಣ್ಯದ ಭದ್ರತೆ, ಕಾಡುಪ್ರಾಣಿಗಳ ಮೇಲಿನ ನಿಗಾವಳಿ ಮತ್ತು ಅರಣ್ಯ ಇಲಾಖೆ ಕಾರ್ಯಕ್ಷಮತೆ ಬಗ್ಗೆ ಮಹತ್ವದ ಪ್ರಶ್ನೆಗಳನ್ನು ಎತ್ತಿದೆ.