Asianet Suvarna News Asianet Suvarna News

Bengaluru: ಸಿಎಜಿ ‘ರಾಜಕಾಲುವೆ ವರದಿ’ ಜಾರಿಗೆ ಸಮಿತಿ ರಚಿಸಿ: ಹೈಕೋರ್ಟ್

  • ಸಿಎಜಿ ‘ರಾಜಕಾಲುವೆ ವರದಿ’ ಜಾರಿಗೆ ಸಮಿತಿ ರಚಿಸಿ: ಹೈಕೋರ್ಟ್
  • -ಬಿಬಿಎಂಪಿಗೆ ನಿರ್ದೇಶನ
  • ಸಿಎಜಿ ಶಿಫಾರಸು ಜಾರಿಗೆ ಪಾಲಿಕೆ ನಿರ್ಲಕ್ಷ್ಯಕ್ಕೆ ತೀವ್ರ ಅಸಮಾಧಾನ
CAG Form a committee to implement the  Rajkaluve Report rav
Author
First Published Sep 20, 2022, 6:02 AM IST

ಬೆಂಗಳೂರು (ಸೆ.20) : ನಗರದಲ್ಲಿ ರಾಜಕಾಲುವೆ ನಿರ್ವಹಣೆಗೆ ಸಂಬಂಧಿಸಿದಂತೆ ಮಹಾಲೇಖಪಾಲರ (ಸಿಎಜಿ) ವರದಿಯ ಶಿಫಾರಸು ಅನುಷ್ಠಾನ ಮಾಡಲು ಮೂವರು ಅಧಿಕಾರಿಗಳ ಸಮಿತಿ ರಚಿಸಬೇಕು ಎಂದು ಹೈಕೋರ್ಚ್‌ ಬಿಬಿಎಂಪಿಗೆ ನಿರ್ದೇಶಿಸಿದೆ. ನಗರದಲ್ಲಿ ರಸ್ತೆಗಳ ಗುಂಡಿ ಸಮರ್ಪಕವಾಗಿ ಮುಚ್ಚುವುದಕ್ಕೆ ಸಂಬಂಧಿಸಿದಂತೆ ವಿಜಯನ್‌ ಮೆನನ್‌ ಮತ್ತಿತರರು ಸಲ್ಲಿಸಿರುವ ಸಾರ್ವಜನಿಕ ಹಿತಾಸಕ್ತಿ ಅರ್ಜಿ ವಿಚಾರಣೆ ನಡೆಸಿದ ಹಂಗಾಮಿ ಮುಖ್ಯ ನ್ಯಾಯಮೂರ್ತಿ ಅಲೋಕ್‌ ಅರಾಧೆ ಅವರ ನೇತೃತ್ವದ ವಿಭಾಗೀಯ ಪೀಠ ಈ ಸೂಚನೆ ನೀಡಿತು.

ನೆರೆ ಪರಿಹಾರಕ್ಕೆ 3600 ಕೋಟಿ: ವಿಧಾನಸಭೆಯಲ್ಲಿ ಸಿಎಂ ಬೊಮ್ಮಾಯಿ ಘೋಷಣೆ

ನಗರದ ರಾಜಕಾಲುವೆ ನಿರ್ವಹಣೆ ಸಂಬಂಧ ಶಿಫಾರಸ್ಸು ಮಾಡಿ 2021ರ ಸೆಪ್ಟೆಂಬರ್‌ನಲ್ಲಿ ನೀಡಿರುವ ಸಿಎಜಿ ವರದಿ ಆಧರಿಸಿ ಬಿಬಿಎಂಪಿ ಈವರೆಗೆ ಯಾವುದೇ ಕ್ರಮ ಕೈಗೊಳ್ಳದ ಬಗ್ಗೆ ಅಸಮಾಧಾನ ವ್ಯಕ್ತಪಡಿಸಿದ ಹೈಕೋರ್ಚ್‌, ಸೆ.20ರೊಳಗೆ ಸಮಿತಿ ರಚಿಸಬೇಕು, ಸಮಿತಿಯು ಸಿಎಜಿ ವರದಿಯ ಶಿಫಾರಸ್ಸುಗಳ ಜಾರಿಗೆ ಕ್ರಮ ಕೈಗೊಂಡು 15 ದಿನಕ್ಕೊಮ್ಮೆ ನ್ಯಾಯಾಲಯಕ್ಕೆ ವರದಿ ಸಲ್ಲಿಸಬೇಕು. ಈ ನಿರ್ದೇಶನಗಳನ್ನು ಪಾಲಿಸದಿದ್ದರೆ ಗಂಭೀರವಾಗಿ ಪರಿಗಣಿಸಲಾಗುವುದು ಎಂದು ಎಚ್ಚರಿಕೆ ನೀಡಿತು.

ಅಲ್ಲದೆ, ರಾಜಕಾಲುವೆ ಒತ್ತುವರಿ ಸೇರಿದಂತೆ ಅರ್ಜಿಯಲ್ಲಿ ಎತ್ತಲಾಗಿರುವ ಇತರ ವಿಚಾರಗಳ ಸಂಬಂಧ ಹೈಕೋರ್ಚ್‌ ವಿಚಾರಣೆ ನಡೆಸುತ್ತಿದೆ. ಹೀಗಾಗಿ ಈ ವಿಚಾರಗಳ ಕುರಿತು ಯಾವುದೇ ಪ್ರಾಧಿಕಾರ ಪರ್ಯಾಯ ತನಿಖೆ ಅಥವಾ ಆದೇಶ ಮಾಡುವಂತಿಲ್ಲ. ಈ ಆದೇಶ ಎಲ್ಲ ಪ್ರಾಧಿಕಾರಗಳಿಗೂ ಅನ್ವಯಿಸುತ್ತದೆ ಎಂದು ನ್ಯಾಯಪೀಠ ಇದೇ ವೇಳೆ ಸ್ಪಷ್ಟಪಡಿಸಿದೆ. ಇದಕ್ಕೂ ಮುನ್ನ ವಿಚಾರಣೆ ವೇಳೆ ಬಿಬಿಎಂಪಿ ಪರ ವಕೀಲರು ಪ್ರಮಾಣ ಪತ್ರ ಸಲ್ಲಿಸಿ, ಬೆಂಗಳೂರಿನಲ್ಲಿ ಸೆ.16ರವರೆಗೆ ಒಟ್ಟು 2,626 ಕಡೆ ರಾಜಕಾಲುವೆ ಒತ್ತುವರಿ ಗುರುತಿಸಲಾಗಿದೆ. ಆ ಪೈಕಿ 2,024 ಕಡೆ ತೆರವುಗೊಳಿಸಲಾಗಿದೆ. ಉಳಿದ 602 ಒತ್ತುವರಿಗಳ ತೆರವು ಕಾರ್ಯ ಪ್ರಗತಿಯಲ್ಲಿದೆ ಎಂದು ತಿಳಿಸಿದರು. ಅದನ್ನು ಪರಿಗಣಿಸಿದ ನ್ಯಾಯಪೀಠ, 602 ಒತ್ತುವರಿಗಳನ್ನು ಬಿಬಿಎಂಪಿ ತೆರವುಗೊಳಿಸಿ ವರದಿ ಸಲ್ಲಿಸಬೇಕು ಎಂದು ನಿದೇಶಿಸಿತು.

ಚಾಟಿ ಬೀಸಿದ ನ್ಯಾಯಪೀಠ:

ಮಳೆ ನೀರು ಪ್ರವಾಹದಿಂದ ನಗರದಲ್ಲಿ ಸಾರ್ವಜನಿಕರು ಎದುರಿಸುತ್ತಿರುವ ಸಮಸ್ಯೆ ಬಗೆಹರಿಸಲು ಕುಂದುಕೊರತೆ ನಿವಾರಣೆಗೆ ಪಾಲಿಕೆ ಆರಂಭಿಸಿರುವ ವೆಬ್‌ಸೈಟ್‌ನಲ್ಲಿ ನೀಡಲಾಗಿರುವ ಕೆಲವು ದೂರುವಾಣಿ ಸಂಖ್ಯೆಯಲ್ಲಿ 9 ಸಂಖ್ಯೆ ಮಾತ್ರ ಇದೆ. ಕೆಲವು ದೂರವಾಣಿ ಸಂಖ್ಯೆ ಕಾರ್ಯ ನಿರ್ವಹಿಸುತ್ತಿಲ್ಲ. ಕುಂದು ಕೊರತೆ ಪರಿಹರಿಸುವ ರೀತಿ ಹೀಗೇನಾ ಎಂದು ನ್ಯಾಯಪೀಠ ಚಾಟಿ ಬೀಸಿತು.

ರಸ್ತೆ ಗುಂಡಿ ಮುಚ್ಚಿದ ವರದಿ ವೆಬ್‌ನಲ್ಲಿ ಅಪ್ಲೋಡ್‌ ಮಾಡಿ:

ನಗರದಲ್ಲಿ ಸೆ.14ರವರೆಗೆ ಪ್ರಮುಖ ರಸ್ತೆಗಳ ಒಟ್ಟು 2,010 ರಸ್ತೆ ಗುಂಡಿ ಮುಚ್ಚಲಾಗಿದ್ದು, ಬಾಕಿ ಇರುವ 221 ಗುಂಡಿಗಳನ್ನು ಮುಂದಿನ ಹತ್ತು ದಿನಗಳಲ್ಲಿ ಹಾಟ್‌ ಮಿಕ್ಸ್‌ ಬಳಸಿ ಮುಚ್ಚಲಾಗುವುದು. ನಗರದ ಪ್ರಮುಖ ರಸ್ತೆಗಳು 427.12 ಕಿ.ಮೀ. ರಸ್ತೆ ರಿಪೇರಿ ಮತ್ತು ಡಾಂಬರೀಕರಣ ಕಾರ್ಯಕ್ಕೆ ಟೆಂಡರ್‌ ನೀಡಲಾಗಿದ್ದು, 2023ರ ಜ.31ರೊಳಗೆ ಕೆಲವು ಕಾಮಗಾರಿ ಪೂರ್ಣಗೊಳ್ಳಲಿದೆ. ಪಾಲಿಕೆಯ ಎಂಟು ವಲಯಗಳ ವಾರ್ಡ್‌ ಮಟ್ಟದಲ್ಲಿ ಒಟ್ಟು 2,500 ಕಿ.ಮೀ. ರಸ್ತೆಗಳ ಗುಂಡಿ ಮುಚ್ಚುವ, ರಸ್ತೆ ರಿಪೇರಿ ಮತ್ತು ಡಾಂಬರೀಕರಣ ಕಾರ್ಯವನ್ನು 2023ರ ಮಾ.31ರ ಒಳಗೆ ಪೂರ್ಣಗೊಳಿಸಲಾಗುವುದು ಎಂದು ಬಿಬಿಎಂಪಿ ಪರ ವಕೀಲರು ವಿವರಿಸಿದರು.

ಬೆಂಗಳೂರಲ್ಲಿ ಲೇಔಟ್‌ಗಾಗಿ 42 ಕೆರೆ ಸ್ವಾಹ: ಸದನದಲ್ಲಿ ಪಟ್ಟಿ ತೆರೆದಿಟ್ಟ ಸಚಿವ ಆರ್.ಅಶೋಕ್

ಇದಕ್ಕೆ ನ್ಯಾಯಪೀಠ, 221 ಗುಂಡಿಗಳನ್ನು ಮುಚ್ಚುವ ಕಾಮಗಾರಿ ಬಗ್ಗೆ ಅನುಪಾಲನಾ ವರದಿ ಮತ್ತು ಫೋಟೋಗಳನ್ನು ಮುಂದಿನ ವಿಚಾರಣೆಯ ವೇಳೆ ಸಲ್ಲಿಸಬೇಕು. ರಸ್ತೆ ಗುಂಡಿಗಳ ಬಗ್ಗೆ ಸ್ವೀಕರಿಸಿದ ದೂರುಗಳನ್ನು ಪರಿಹರಿಸಿದ ನಂತರ ಆ ಬಗ್ಗೆ ಫೋಟೋಗಳನ್ನು ವೆಬ್‌ಸೈಟ್‌ನಲ್ಲಿ ಅಪ್‌ಲೋಡ್‌ ಮಾಡಬೇಕು. ದೂರು ಪರಿಹಾರ ವ್ಯವಸ್ಥೆಯ ಬಗ್ಗೆ ವ್ಯಾಪಕ ಪ್ರಚಾರ ನೀಡಬೇಕು ಎಂದು ಬಿಬಿಎಂಪಿಗೆ ನಿರ್ದೇಶಿಸಿ ವಿಚಾರಣೆಯನ್ನು ಸೆ.30ಕ್ಕೆ ಮುಂದೂಡಿತು.

Follow Us:
Download App:
  • android
  • ios