ಬೆಂಗಳೂರು :  ಭಾರತೀಯ ದೂರಸಂಪರ್ಕ ನಿಯಂತ್ರಣ ಪ್ರಾಧಿಕಾರ (ಟ್ರಾಯ್‌) ಜಾರಿಗೆ ಮುಂದಾಗಿರುವ ಗ್ರಾಹಕರೇ ತಮಗೆ ಬೇಕಾದ ಚಾನೆಲ್‌ಗಳನ್ನು ಆಯ್ಕೆ ಮಾಡುವ ಕೇಬಲ್‌ ಮತ್ತು ಡಿಟಿಎಚ್‌ ನೀತಿ ವಿರೋಧಿಸಿ ಕೇಬಲ್‌ ಟಿವಿ ಆಪರೇಟರ್‌ಗಳ ಒಕ್ಕೂಟ ಗುರುವಾರ ಬೆಳಗ್ಗೆ 6ರಿಂದ ರಾತ್ರಿ 10 ರವರೆಗೆ ದೇಶಾದ್ಯಂತ ‘ಕೇಬಲ್‌ ಟಿವಿ ಬಂದ್‌’ಗೆ ನೀಡಿರುವ ಕರೆಯ ಅನ್ವಯ ಬೆಂಗಳೂರು ನಗರದ 30 ಲಕ್ಷ ಸೇರಿ ರಾಜ್ಯಾದ್ಯಂತ 80 ಲಕ್ಷ ಕೇಬಲ್‌ ಟೀವಿಗಳು ಬಂದ್‌ ಆಗಲಿವೆ.

ಕೇಬಲ್‌ ಟೀವಿ ಬಂದ್‌ ಹಿನ್ನೆಲೆಯಲ್ಲಿ ರಾಜ್ಯದ 30 ಜಿಲ್ಲೆಗಳ ಜಿಲ್ಲಾಧಿಕಾರಿ ಕಚೇರಿ ಎದುರು ಕೇಬಲ್‌ ಟಿವಿ ಆಪರೇಟರ್‌ಗಳ ಸಂಘದಿಂದ ಪ್ರತಿಭಟನೆ ನಡೆಸಿ ಜಿಲ್ಲಾಧಿಕಾರಿಗಳಿಗೆ ಮನವಿ ಸಲ್ಲಿಸಲಾಗುವುದು. ಗುರುವಾರ ಒಂದು ದಿನದ ಮಟ್ಟಿಗೆ ಸಾಂಕೇತಿಕವಾಗಿ ಕೇಬಲ್‌ ಟಿವಿ ಬಂದ್‌ ಮಾಡಲಾಗುತ್ತಿದೆ. ಟ್ರಾಯ್‌ ಜ.31ರೊಳಗೆ ನೂತನ ಕೇಬಲ್‌ ಮತ್ತು ಡಿಟಿಎಚ್‌ ನೀತಿಯಲ್ಲಿ ಬದಲಾವಣೆ ತರಬೇಕು. ಇಲ್ಲವಾದರೆ, ಫೆ.1ರಿಂದ ದೇಶಾದ್ಯಂತ ಅನಿರ್ದಿಷ್ಟಾವಧಿ ಕೇಬಲ್‌ ಟಿವಿ ಬಂದ್‌ ಮಾಡಲಾಗುವುದು ಎಂದು ರಾಜ್ಯ ಕೇಬಲ್‌ ಟಿವಿ ಆಪರೇಟರ್‌ಗಳ ಸಂಘದ ಅಧ್ಯಕ್ಷ ಪ್ಯಾಟ್ರಿಕ್‌ ರಾಜು ತಿಳಿಸಿದರು.

ಆಕ್ಷೇಪ ಏನು?:  ಟ್ರಾಯ್‌ನ ಈ ನೂತನ ನೀತಿಯಿಂದ ಕೇಬಲ್‌ ಆಪರೇಟರ್‌ಗಳು ಹಾಗೂ ಗ್ರಾಹಕರಿಗೆ ತೊಂದರೆಯಾಗುತ್ತದೆ. ಪ್ರಸ್ತುತ ಗ್ರಾಹಕರು ಮಾಸಿಕ 300 ರು.ನಿಂದ 350 ರು. ಕೊಟ್ಟು 400ರಿಂದ 450 ಚಾನೆಲ್‌ಗಳನ್ನು ನೋಡುತ್ತಿದ್ದಾರೆ. ಈ ನೂತನ ನೀತಿಯ ಪ್ರಕಾರ ಗ್ರಾಹಕರು 130 ರು. ಜತೆಗೆ ಶೇ.18ರಷ್ಟುತೆರಿಗೆ ಸೇರಿ ಮಾಸಿಕ 154 ರು. ಪಾವತಿಸಿದರೆ 100 ಚಾನೆಲ್‌ಗಳನ್ನು ನೋಡಬಹುದು. ನಂತರ ತಮಗಿಷ್ಟದ ಪ್ರತಿ ಚಾನೆಲ್‌ಗೂ ಹಣ ಪಾವತಿಸಬೇಕು. ಇದು ಗ್ರಾಹಕರಿಗೆ ಹೊರೆಯಾಗುತ್ತದೆ. ಅಂತೆಯೇ ಕಡಿಮೆ ಹಣ ನೀಡಿ ಹೆಚ್ಚು ಚಾನೆಲ್‌ ನೋಡುವ ಬದಲು ಹೆಚ್ಚು ಹಣ ಕೊಟ್ಟು ಕಡಿಮೆ ಚಾನೆಲ್‌ ನೋಡುವ ಸ್ಥಿತಿ ನಿರ್ಮಾಣವಾಗಲಿದೆ ಎಂದು ರಾಜು ಹೇಳಿದರು.

ಈ ನೀತಿಯ ಪ್ರಕಾರ ಕೇಬಲ್‌ ಆಪರೇಟರ್‌ಗಳು ಕೆಲಸ ಮಾಡಿದರೆ ನಷ್ಟಅನುಭವಿಸಬೇಕಾಗುತ್ತದೆ. ಈಗ ಸಿಗುತ್ತಿರುವ ಅಲ್ಪ ಆದಾಯವೂ ಕೈತಪ್ಪಲಿದೆ. ಇದನ್ನೇ ನೆಚ್ಚಿಕೊಂಡಿರುವ ಕೋಟ್ಯಂತರ ಕೇಬಲ್‌ ಆಪರೇಟರ್‌ಗಳ ಕುಟುಂಬಗಳು ಬೀದಿಗೆ ಬೀಳಲಿವೆ. ಕೇಂದ್ರ ಸರ್ಕಾರ ಕಾರ್ಪೊರೇಟ್‌ ಕಂಪನಿಗಳಿಗೆ ಲಾಭ ಮಾಡಿಕೊಡುವ ಉದ್ದೇಶದಿಂದ ಈ ಅವೈಜಾನಿಕ ನೀತಿ ಜಾರಿಗೆ ಮುಂದಾಗಿದೆ. ಯಾವುದೇ ಕಾರಣಕ್ಕೂ ಈ ನೀತಿ ಜಾರಿಗೊಳಿಸಬಾರದು ಎಂದು ಆಗ್ರಹಿಸಿದರು.