ರಾಜ್ಯದಲ್ಲಿ ಐದು ಸಂಪುಟ ದರ್ಜೆ ಸಚಿವ ಸ್ಥಾನಗಳು ಖಾಲಿ ಇವೆ. ಸಂಪುಟ ವಿಸ್ತರಣೆ ಬಗ್ಗೆ ವರಿಷ್ಠರೊಂದಿಗೆ ಈಗಾಗಲೇ ಪರೋಕ್ಷ ಪ್ರಸ್ತಾಪ ಮಾಡಿದ್ದರೂ ವರಿಷ್ಠರು ಈ ಬಗ್ಗೆ ಉತ್ಸುಕತೆ ತೋರಿಲ್ಲ. ಇದೀಗ ಯಡಿಯೂರಪ್ಪ ಅವರು ಎಂಟಿಬಿ ನಾಗರಾಜ್‌ ಹಾಗೂ ಆರ್‌. ಶಂಕರ್‌ ಅವರನ್ನಾದರೂ ಅಧಿವೇಶನಕ್ಕೆ ಮೊದಲೇ ಸಂಪುಟಕ್ಕೆ ಸೇರಿಸಿಕೊಳ್ಳುವ ಬಗ್ಗೆ ಮನವಿ ಮಾಡುವ ಸಾಧ್ಯತೆ ಇದೆ. ಆದರೆ ವರಿಷ್ಠರು ಬಹುತೇಕ ಅಧಿವೇಶನದ ಬಳಿಕವೇ ಸಂಪುಟ ವಿಸ್ತರಣೆ ಪ್ರಕ್ರಿಯೆಗೆ ಚಾಲನೆ ನೀಡಲಿದ್ದಾರೆ ಎಂದು ಮೂಲಗಳು ತಿಳಿಸಿವೆ.

ಬೆಂಗಳೂರು (ಸೆ.8): ಕೊರೋನಾ ಲಾಕ್‌ಡೌನ್‌ ಹಿನ್ನೆಲೆಯಲ್ಲಿ ಏಳು ತಿಂಗಳ ಸುದೀರ್ಘ ಸಮಯದ ಬಳಿಕ ಮುಖ್ಯಮಂತ್ರಿ ಬಿ.ಎಸ್‌.ಯಡಿಯೂರಪ್ಪ ಸೆ.10ರ ನಂತರ ದೆಹಲಿಗೆ ಪ್ರಯಾಣ ಬೆಳೆಸುವ ಸಾಧ್ಯತೆಯಿದೆ.

ಈ ವೇಳೆ ರಾಜ್ಯದಲ್ಲಿನ ಆರ್ಥಿಕ ಸಂಕಷ್ಟಮನವರಿಕೆ ಮಾಡಿ ಕೇಂದ್ರದಿಂದ ಬರಬೇಕಿರುವ ನೆರೆ ಪರಿಹಾರ ಸೇರಿ ವಿವಿಧ ಅನುದಾನ ಹಾಗೂ ಯೋಜನೆಗಳ ಬಗ್ಗೆ ಕೇಂದ್ರ ಸಚಿವರೊಂದಿಗೆ ಮಾತುಕತೆ ನಡೆಸಲಿದ್ದಾರೆ. ಇದೇ ವೇಳೆ ಪಕ್ಷದ ವರಿಷ್ಠರನ್ನು ಭೇಟಿ ಮಾಡಿ ಸಂಪುಟ ವಿಸ್ತರಣೆಯ ಬಗ್ಗೆಯೂ ಚರ್ಚೆ ನಡೆಸುವ ಸಾಧ್ಯತೆ ಹಿನ್ನೆಲೆಯಲ್ಲಿ ಮುಖ್ಯಮಂತ್ರಿಗಳ ದೆಹಲಿ ಪ್ರವಾಸ ಮಹತ್ವ ಪಡೆದುಕೊಂಡಿದೆ.

ಯಡಿಯೂರಪ್ಪ ಅವರು ತಮ್ಮ ಪ್ರವಾಸದ ವೇಳೆ ಪ್ರಧಾನಮಂತ್ರಿ ನರೇಂದ್ರ ಮೋದಿ, ಗೃಹ ಸಚಿವ ಅಮಿತ್‌ ಶಾ ಅವರನ್ನು ಭೇಟಿ ಮಾಡಿ ಕ್ಷೇಮ ವಿಚಾರಿಸಲಿದ್ದಾರೆ. ಜತೆಗೆ ಕೇಂದ್ರದ ವಿವಿಧ ಇಲಾಖೆಗಳ ಸಚಿವರೊಂದಿಗೆ ಚರ್ಚೆ ನಡೆಸಲಿದ್ದಾರೆ. ಪಕ್ಷದ ವರಿಷ್ಠರನ್ನು ಭೇಟಿ ಮಾಡಿ ರಾಜ್ಯದಲ್ಲಿನ ಬೆಳವಣಿಗೆ ಜತೆಗೆ ಸಚಿವ ಸಂಪುಟ ವಿಸ್ತರಣೆ ಬಗ್ಗೆಯೂ ಪ್ರಸ್ತಾಪ ಮಾಡಲಿದ್ದಾರೆ. ಆದರೆ, ಹೈಕಮಾಂಡ್‌ ಸಂಪುಟ ವಿಸ್ತರಣೆ ಬಗ್ಗೆ ಹೆಚ್ಚು ಉತ್ಸಾಹ ತೋರದಿರುವ ಹಿನ್ನೆಲೆಯಲ್ಲಿ ತರಾತುರಿಯಲ್ಲಿ ಪ್ರಕ್ರಿಯೆ ಶುರುವಾಗುವ ಸಾಧ್ಯತೆ ಕಾಣುತ್ತಿಲ್ಲ. ಸೆಪ್ಟೆಂಬರ್‌ 21ರಂದು ಆರಂಭವಾಗಲಿರುವ ಅಧಿವೇಶನದ ಬಳಿಕವೇ ಈ ಬಗ್ಗೆ ಅಂತಿಮ ಪ್ರಕ್ರಿಯೆ ಶುರುವಾಗುವ ಸಾಧ್ಯತೆ ಇದೆ ಎಂದು ಮೂಲಗಳು ತಿಳಿಸಿವೆ.

ಡ್ರಗ್ಸ್ ಮಾಫಿಯಾಕ್ಕೆ ಸಿಎಂ ಖಡಕ್ ವಾರ್ನಿಂಗ್

ಕಾಂಗ್ರೆಸ್‌-ಜೆಡಿಎಸ್‌ ತೊರೆದ 10 ನಾಯಕರನ್ನು ಬಿಜೆಪಿಗೆ ಸೇರಿಸಿಕೊಳ್ಳಲು ಅನುಮೋದನೆ ಪಡೆಯುವುದಕ್ಕಾಗಿ ಜನವರಿಯಲ್ಲಿ ಯಡಿಯೂರಪ್ಪ ದೆಹಲಿಗೆ ಭೇಟಿ ನೀಡಿದ್ದರು. ಬಳಿಕ ಮಾಚ್‌ರ್‍ ನಂತರ ಕೊರೋನಾ ಅಟ್ಟಹಾಸದ ಹಿನ್ನೆಲೆಯಲ್ಲಿ ಕಳೆದ ಏಳು ತಿಂಗಳಿಂದ ದೆಹಲಿಯತ್ತ ಹೋಗಿರಲಿಲ್ಲ. ಇದೀಗ ಸ್ವತಃ ತಾವೂ ಕೊರೋನಾದಿಂದ ಗುಣಮುಖರಾಗಿರುವ ಯಡಿಯೂರಪ್ಪ ಅಧಿವೇಶನಕ್ಕೆ ಮೊದಲು ದೆಹಲಿಗೆ ಭೇಟಿ ನೀಡಿ ವಿವಿಧ ಇಲಾಖೆಗಳ ಕೇಂದ್ರ ಸಚಿವರನ್ನು ಭೇಟಿ ಮಾಡಲಿದ್ದಾರೆ. ಈ ವೇಳೆ ಜಿಲ್ಲಾ ಉಸ್ತುವಾರಿ ಸಚಿವರ ವರದಿ ಮಂಡಿಸಿ ನೆರೆಯ ಭೀಕರತೆಯನ್ನು ಮನದಟ್ಟು ಮಾಡಿಕೊಡುವ ಮೂಲಕ ಸೂಕ್ತ ಪರಿಹಾರಕ್ಕೆ ಮನವಿ ಮಾಡಲಿದ್ದಾರೆ ಎಂದು ತಿಳಿದುಬಂದಿದೆ.