11 ‘ಅಮೃತ’ ಯೋಜನೆಗೆ ಸಂಪುಟ ಅಸ್ತು: ಸಚಿವ ಮಾಧುಸ್ವಾಮಿ
* ಸ್ವಾತಂತ್ರ್ಯ ದಿನದಂದು ಬೊಮ್ಮಾಯಿ ಘೋಷಣೆ ಮಾಡಿದ್ದ 800 ಕೋಟಿ ರು. ವೆಚ್ಚದ ಯೋಜನೆ
* ನಗರ, ಹಳ್ಳಿ ಅಭಿವೃದ್ಧಿ, ಶಿಕ್ಷಣ, ರೈತರು, ಆರೋಗ್ಯ ಕ್ಷೇತ್ರಕ್ಕೆ ಸಂಬಂಧಿಸಿದ ಯೋಜನೆಗಳು ಇವು
* 7,500 ಸ್ವಸಹಾಯ ಸಂಘಗಳಿಗೆ 1 ಲಕ್ಷ ರು
ಬೆಂಗಳೂರು(ಆ.20): ಸ್ವಾತಂತ್ರ್ಯ ದಿನಾಚರಣೆಯ ಅಮೃತ ಮಹೋತ್ಸವ ಪ್ರಯುಕ್ತ ಮುಖ್ಯಮಂತ್ರಿ ಬಸವರಾಜ ಬೊಮ್ಮಾಯಿ ಅವರು ಘೋಷಿಸಿದ್ದ 800 ಕೋಟಿ ರು.ಗೂ ಹೆಚ್ಚು ಮೊತ್ತದ ಹನ್ನೊಂದು ‘ಅಮೃತ ಯೋಜನೆ’ ಅನುಷ್ಠಾನಕ್ಕೆ ಗುರುವಾರ ನಡೆದ ಸಚಿವ ಸಂಪುಟ ಸಭೆಯಲ್ಲಿ ಅನುಮೋದನೆ ನೀಡಲಾಗಿದೆ.
ಸಚಿವ ಸಂಪುಟ ಸಭೆ ಬಳಿಕ ಮಾಹಿತಿ ನೀಡಿದ ಸಚಿವ ಜೆ.ಸಿ. ಮಾಧುಸ್ವಾಮಿ, ಮುಖ್ಯಮಂತ್ರಿಗಳು 75ನೇ ವರ್ಷದ ಸ್ವಾತಂತ್ರ್ಯೋತ್ಸವ ಆಚರಣೆಯನ್ನು ವರ್ಷ ಪೂರ್ತಿ ಅರ್ಥಪೂರ್ಣವಾಗಿ ಆಚರಿಸುವ ಉದ್ದೇಶದಿಂದ ಸ್ವಾತಂತ್ರ್ಯ ದಿನ ಹಲವು ಯೋಜನೆಗಳನ್ನು ಘೋಷಿಸಿದ್ದರು. ಅವುಗಳಿಗೆ ಸಚಿವ ಸಂಪುಟದ ಅನುಮೋದನೆ ನೀಡಲಾಗಿದೆ ಎಂದರು.
‘ಅಮೃತ್ ನಿರ್ಮಲ ನಗರ’ ಯೋಜನೆ ಅಡಿ 75 ನಗರ ಸ್ಥಳೀಯ ಸಂಸ್ಥೆಗಳನ್ನು ಸ್ವಚ್ಛ ಹಾಗೂ ಸುಂದರವಾಗಿ ಕಾಣುವಂತೆ ಮಾಡಲು ತಲಾ 1 ಕೋಟಿ ರು.ಗಳಂತೆ 75 ಕೋಟಿ ರು.ಗಳನ್ನು ಒದಗಿಸಲು ಅನುಮೋದನೆ ನೀಡಲಾಗಿದೆ. ‘ಅಮೃತ ಆರೋಗ್ಯ ಮೂಲಸೌಕರ್ಯ ಉನ್ನತೀಕರಣ’ ಯೋಜನೆ ಅಡಿ ಆರೋಗ್ಯ ಇಲಾಖೆ ವತಿಯಿಂದ 150 ಕೋಟಿ ರು. ವೆಚ್ಚದಲ್ಲಿ 750 ಪ್ರಾಥಮಿಕ ಆರೋಗ್ಯ ಕೇಂದ್ರಗಳ ಮೂಲಸೌಕರ್ಯಗಳ ಅಭಿವೃದ್ಧಿಗೆ ಕ್ರಮ ಕೈಗೊಳ್ಳಲಾಗುವುದು. ಪ್ರತಿ ಆರೋಗ್ಯ ಕೇಂದ್ರಕ್ಕೆ ತಲಾ 20 ಲಕ್ಷ ರು. ಒದಗಿಸಲು ಸಂಪುಟ ಸಭೆಯಲ್ಲಿ ನಿರ್ಧರಿಸಲಾಗಿದೆ ಎಂದು ಮಾಹಿತಿ ನೀಡಿದರು.
ರಾಜ್ಯ ಸಂಪುಟ ಸಭೆ : ವಿದ್ಯಾರ್ಥಿನಿಯರಿಗೆ ಸ್ಯಾನಿಟರಿ ನ್ಯಾಪ್‌ಕಿನ್ ವಿತರಣೆ ಸೇರಿ ಹಲವು ತೀರ್ಮಾನ
ಇನ್ನು ‘ಅಮೃತ ರೈತ ಉತ್ಪಾದಕರ ಸಂಸ್ಥೆ’ ಯೋಜನೆ ಅಡಿ 225 ಕೋಟಿ ರು. ವೆಚ್ಚದಲ್ಲಿ 750 ಅಮೃತ ರೈತ ಉತ್ಪಾದಕ ಸಂಘಗಳನ್ನು ಸ್ಥಾಪಿಸಲಾಗುವುದು. 500 ರೈತ ಹಾಗೂ 250 ನೇಕಾರ ಹಾಗೂ ಮೀನುಗಾರರ ಉತ್ಪಾದಕ ಸಂಸ್ಥೆಗಳನ್ನು ಸ್ಥಾಪಿಸಿ ಮೂರು ವರ್ಷಗಳಲ್ಲಿ ಅನುದಾನ ಬಿಡುಗಡೆ ಮಾಡಲಾಗುವುದು. ‘ಅಮೃತ ಶಾಲಾ ಸೌಲಭ್ಯ ಯೋಜನೆ’ ಹೆಸರಿನಲ್ಲಿ 750 ಸರ್ಕಾರಿ ಶಾಲೆಗಳನ್ನು ಗುರುತಿಸಿ ಆದ್ಯತಾ ಸೌಲಭ್ಯ ಕಲ್ಪಿಸಲಾಗುವುದು. 75 ಕೋಟಿ ರು. ವೆಚ್ಚದಲ್ಲಿ ಪ್ರತಿ ಶಾಲೆಗೆ 10 ಲಕ್ಷ ರು. ವೆಚ್ಚ ಮಾಡಿ ಡಿಜಿಟಲ್ ಗ್ರಂಥಾಲಯ ಸೇರಿದಂತೆ ಆಧುನಿಕ ಸೌಲಭ್ಯ ಕಲ್ಪಿಸಲಾಗುವುದು ಎಂದು ಜೆ.ಸಿ. ಮಾಧುಸ್ವಾಮಿ ಮಾಹಿತಿ ನೀಡಿದರು.
7,500 ಸ್ವಸಹಾಯ ಸಂಘಗಳಿಗೆ 1 ಲಕ್ಷ ರು.:
ಉಳಿದಂತೆ ‘ಅಮೃತ ಸ್ವ ಸಹಾಯ ಕಿರು ಉದ್ದಿಮೆ’ ಯೋಜನೆ ಅಡಿ ರಾಜ್ಯದಲ್ಲಿರುವ 7500 ಅತ್ಯುತ್ತಮ ಸ್ವ ಸಹಾಯ ಸಂಘಗಳನ್ನು ಆಯ್ಕೆ ಮಾಡಿ ತಲಾ 1 ಲಕ್ಷ ರು.ಗಳಂತೆ 75 ಕೋಟಿ ರು. ಒದಗಿಸಿ ಉದ್ದಿಮೆಗಳ ಸ್ಥಾಪನೆಗೆ ಉತ್ತೇಜನ ನೀಡಲಾಗುವುದು. ‘ಅಮೃತ್ ಗ್ರಾಮ ಪಂಚಾಯಿತಿ’ ಯೋಜನೆ ಅಡಿ 750 ಪಂಚಾಯಿತಿಗಳಿಗೆ ಮೂಲಸೌಕರ್ಯ ಅಭಿವೃದ್ಧಿಪಡಿಸಲು ತಲಾ 25 ಲಕ್ಷ ರು. ಅನುದಾನ (187 ಕೋಟಿ ರು.) ಒದಗಿಸಲಾಗುವುದು ಎಂದು ಹೇಳಿದರು.
ಹಣಕಾಸು ಸಮಸ್ಯೆಇಲ್ಲ
ಅಮೃತ ಹೆಸರಿನ ಎಲ್ಲಾ ಯೋಜನೆಗಳಿಗೂ ರಾಜ್ಯ ಸರ್ಕಾರದ ಅನುದಾನದಿಂದಲೇ ಹಣ ವಿನಿಯೋಗಿಸಲಾಗುವುದು. ಎಲ್ಲಾ ಯೋಜನೆಗಳಿಗೂ ಹಣಕಾಸು ಇಲಾಖೆಯ ಒಪ್ಪಿಗೆ ಇದೆ. ಹಣಕಾಸು ಇಲಾಖೆಯ ಒಪ್ಪಿಗೆ ಬಳಿಕವೇ ಸಚಿವ ಸಂಪುಟದಲ್ಲಿ ಅನುಷ್ಠಾನಕ್ಕೆ ನಿರ್ಧರಿಸಲಾಗಿದೆ ಎಂದು ಕಾನೂನು ಮತ್ತು ಸಂಸದೀಯ ವ್ಯವಹಾರಗಳ ಸಚಿವ ಜೆ.ಸಿ. ಮಾಧುಸ್ವಾಮಿ ತಿಳಿಸಿದ್ದಾರೆ.