ಮಂಗಳೂರು[ಜ.27]: ಪೌರತ್ವ ತಿದ್ದುಪಡಿ ಕಾಯ್ದೆ (ಸಿಎಎ) ಬೆಂಬಲಿಸಿ ಹುಬ್ಬಳ್ಳಿಯ ಬಳಿಕ ಇದೀಗ ಅವಿಭಜಿತ ದ.ಕ. ಜಿಲ್ಲಾ ಮಟ್ಟದ ಬೃಹತ್‌ ‘ಜನಜಾಗೃತಿ ಸಮಾವೇಶ’ವನ್ನು ಬಿಜೆಪಿ ಹಮ್ಮಿಕೊಂಡಿದೆ. ಸೋಮವಾರ ನಡೆಯಲಿರುವ ಈ ಸಮಾವೇಶದಲ್ಲಿ ರಕ್ಷಣಾ ಸಚಿವ ರಾಜನಾಥ್‌ ಸಿಂಗ್‌ ಸೇರಿ ಹಲವು ಗಣ್ಯರು ಪಾಲ್ಗೊಳ್ಳಲಿದ್ದಾರೆ.

ಸುಮಾರು 105 ಎಕರೆ ವಿಶಾಲ ವ್ಯಾಪ್ತಿ ಹೊಂದಿರುವ ಗೋಲ್ಡ್‌ಫಿಂಚ್‌ ಸಿಟಿ ಮೈದಾನದಲ್ಲಿ ನಡೆಯಲಿರುವ ಈ ಸಮಾವೇಶದಲ್ಲಿ ದ.ಕ. ಮತ್ತು ಉಡುಪಿ ಜಿಲ್ಲೆಯಿಂದ ಸುಮಾರು ಒಂದು ಲಕ್ಷಕ್ಕೂ ಅಧಿಕ ಮಂದಿ ಭಾಗವಹಿಸುವ ನಿರೀಕ್ಷೆ ಇದೆ. ರಾಜನಾಥ್‌ ಸಿಂಗ್‌ ಮಾತ್ರವಲ್ಲದೆ ಕೇಂದ್ರ ಸಚಿವರಾದ ಪ್ರಹ್ಲಾದ ಜೋಶಿ, ಡಿ.ವಿ.ಸದಾನಂದ ಗೌಡ, ಬಿಜೆಪಿ ರಾಜ್ಯಾಧ್ಯಕ್ಷ ನಳಿನ್‌ ಕುಮಾರ್‌ ಕಟೀಲ್‌, ಸಂಸದೆ ಶೋಭಾ ಕರಂದ್ಲಾಜೆ, ಜಿಲ್ಲಾ ಉಸ್ತುವಾರಿ ಸಚಿವ ಕೋಟ ಶ್ರೀನಿವಾಸ ಪೂಜಾರಿ ಮತ್ತಿತರರು ಪಾಲ್ಗೊಳ್ಳಲಿದ್ದಾರೆ.

"

27ರಂದು ಕೇಂದ್ರ ಸಚಿವ ರಾಜ್‌ನಾಥ್‌ ಸಿಂಗ್‌ ಮಂಗಳೂರಿಗೆ

ಕೇಸರಿಮಯ:

ಜನಜಾಗೃತಿ ಸಮಾವೇಶ ಹಿನ್ನೆಲೆಯಲ್ಲಿ ರಾಷ್ಟ್ರೀಯ ಹೆದ್ದಾರಿ-66ರಲ್ಲಿ ಕುಂಟಿಕಾನದಿಂದ ಸಮಾವೇಶ ನಡೆಯುವ ಬಂಗ್ರಕೂಳೂರು ಮೈದಾನ ಹಾದು ಸುರತ್ಕಲ್‌ವರೆಗೆ ಇಕ್ಕೆಲಗಳಲ್ಲಿ ಬಿಜೆಪಿ ಬಾವುಟವನ್ನು ಹಾಕಲಾಗಿದೆ. ಇದಲ್ಲದೆ ಸಮಾವೇಶ ನಡೆಯುವ ಮೈದಾನವನ್ನು ಬಿಜೆಪಿ ಬಾವುಟಗಳಿಂದ ಕಂಗೊಳಿಸುವಂತೆ ಮಾಡಲಾಗಿದೆ.

ಪಾರ್ಕಿಂಗ್‌ ಸೂಚನೆ, ಸಂಚಾರ ಬದಲಾವಣೆ

ಉಡುಪಿ ಕಡೆಯಿಂದ ಹಾಗೂ ಮಂಗಳೂರು ನಗರದಿಂದ ಸಮಾವೇಶ ಪ್ರದೇಶಕ್ಕೆ ಆಗಮಿಸುವ ಎಲ್ಲ ರೀತಿಯ ವಾಹನಗಳು ಸಂಘಟಕರು ಸೂಚಿಸಿದ ನಿಗದಿತ ಜಾಗದಲ್ಲೇ ಪಾರ್ಕಿಂಗ್‌ ಮಾಡುವಂತೆ ನಗರ ಪೊಲೀಸ್‌ ಕಮಿಷನರ್‌ ಸೂಚನೆ ನೀಡಿದ್ದಾರೆ.

ಸಮಾವೇಶ ಹಿನ್ನೆಲೆಯಲ್ಲಿ ಜ.27ರಂದು ಬೆಳಗ್ಗೆ 9ರಿಂದ ಸಂಜೆ 5 ಗಂಟೆವರೆಗೆ ಮಂಗಳೂರು ನಗರ ವಾಹನ ಸಂಚಾರದಲ್ಲಿ ಆರು ಕಡೆಗಳಲ್ಲಿ ಮಾರ್ಪಾಟುಗೊಳಿಸಲಾಗಿದೆ.

-ಉಡುಪಿ ಕಡೆಯಿಂದ ಬೆಂಗಳೂರು ಕಡೆಗೆ ತೆರಳುವ ವಾಹನಗಳು ಪಡುಬಿದ್ರಿಯಿಂದ ಕಾರ್ಕಳ, ಧರ್ಮಸ್ಥಳ, ಶಿರಾಡಿ ಘಾಟ್‌ ಮೂಲಕ ಸಂಚರಿಸುವುದು.

-ಬೆಂಗಳೂರಿನಿಂದ ಮಂಗಳೂರಿಗೆ ಆಗಮಿಸುವ ವಾಹನಗಳು ಮೆಲ್ಕಾರ್‌ನಿಂದ ಬಿ.ಸಿ.ರೋಡ್‌ ವಯಾ ಕೊಣಾಜೆ, ತೊಕ್ಕೊಟ್ಟು ಮೂಲಕ ಮಂಗಳೂರು ತಲುಪುವುದು.

-ಬಿ.ಸಿ.ರೋಡ್‌ನಿಂದ ಮಂಗಳೂರಿಗೆ ಆಗಮಿಸುವ ವಾಹನಗಳು ವಯಾ ಬಿ.ಸಿ.ರೋಡ್‌-ಕೈಕಂಬ ಮೂಲಕ ಸಂಚರಿಸುವುದು.

-ಬಿ.ಸಿ.ರೋಡ್‌ ಮತ್ತು ಪಂಪ್‌ವೆಲ್‌ ಮೂಲಕ ಸಂಚರಿಸುವ ವಾಹನಗಳು ನಂತೂರು-ಕೈಕಂಬ-ಮೂಡುಬಿದಿರೆ ಮಾರ್ಗದಲ್ಲಿ ಸಂಚಾರ ಕೈಗೊಳ್ಳಲು ಅವಕಾಶ ಇದೆ.

-ಕೊಟ್ಟಾರ ಚೌಕಿ ಮೂಲಕ ಸಂಚರಿಸುವ ವಾಹನಗಳು ಕೊಟ್ಟಾರಚೌಕಿ, ಕೆಪಿಟಿ, ನಂತೂರು, ಮೂಡುಬಿದಿರೆಯಾಗಿ ಸಾಗುವುದು.

-ಮಂಗಳೂರು ನಗರ ವ್ಯಾಪ್ತಿಯಲ್ಲಿ ಸಂಚರಿಸುವ ವಾಹನಗಳು ಕೆಪಿಟಿ-ನಂತೂರು-ಮೂಡುಬಿದಿರೆ ಮೂಲಕ ಸಂಚರಿಸುವುದು.