ಬ್ಯಾಡಗಿ ಮೆಣಸಿನಕಾಯಿ ಮಾರುಕಟ್ಟೆ ಪ್ರತಿಭಟನೆ: ಕೈಗೆ ಸಿಕ್ಕ ರೈತರನ್ನು ಎಳೆದೊಯ್ಯುತ್ತಿರುವ ಪೊಲೀಸರು!
ಬ್ಯಾಡಗಿ ಮೆಣಸಿನಕಾಯಿ ಮಾರುಕಟ್ಟೆಯಲ್ಲಿ ದರ ಕುಸಿತ ವಿರೋಧಿಸಿ ರೈತರು ಮಾಡುತ್ತಿದ್ದ ಪ್ರತಿಭಟನೆ ವಿಕೋಪಕ್ಕೆ ತಿರುಗಿದೆ. ಪರಿಸ್ಥಿತಿ ನಿಯಂತ್ರಣಕ್ಕಾಗಿ ಪೊಲೀಸರು ಕೈಗೆ ಸಿಕ್ಕ ರೈತರನ್ನು ವಶಕ್ಕೆ ಪಡೆಯುತ್ತಿದ್ದಾರೆ.
ಹಾವೇರಿ (ಮಾ.11): ಬ್ಯಾಡಗಿ ಮೆಣಸಿನಕಾಯಿ ಮಾರುಕಟ್ಟೆಯಲ್ಲಿ ದರ ಕುಸಿತ ವಿರೋಧಿಸಿ ರೈತರು ಮಾಡುತ್ತಿದ್ದ ಪ್ರತಿಭಟನೆ ವಿಕೋಪಕ್ಕೆ ತಿರುಗಿದೆ. ಪರಿಸ್ಥಿತಿ ನಿಯಂತ್ರಣಕ್ಕಾಗಿ ಪೊಲೀಸರು ಕೈಗೆ ಸಿಕ್ಕ ರೈತರನ್ನು ವಶಕ್ಕೆ ಪಡೆಯುತ್ತಿದ್ದಾರೆ.
ನಮ್ಮ ರಾಜ್ಯದ ಹಾವೇರಿ ಜಿಲ್ಲೆಯಲ್ಲಿರುವ ಬ್ಯಾಡಗಿ ಒಣ ಮೆಣಸಿನಕಾಯಿ ಮಾರುಕಟ್ಟೆ ಅಂತಾರಾಷ್ಟ್ರೀಯ ಮಟ್ಟದ ಮಾರುಕಟ್ಟೆಯಾಗಿದೆ. ಆದರೆ, ಮಾರುಕಟ್ಟೆಯಲ್ಲಿ ಮೆಣಸಿನಕಾಯಿ ದರ ದಿಢೀರನೆ 8,000 ರೂ. ಕುಸಿತವಾದ್ದರಿಂದ (20 ಸಾವಿರ ರೂ.ನಿಂದ 12 ಸಾವಿರ ರೂ.ಗೆ ಇಳಿಕೆ) ರೈತರು ಆಕ್ರೋಶ ವ್ಯಕ್ತಪಡಿಸಿ ಎಪಿಎಂಸಿ ಕಟ್ಟಡ ಹಾಗೂ ಕಾರುಗಳಿಗೆ ಬೆಂಕಿ ಹಚ್ಚಿದ ಘಟನೆ ನಡೆದಿದೆ. ಇದರ ಬೆನ್ನಲ್ಲಿಯೇ ಸ್ಥಳಕ್ಕಾಗಮಿಸಿದ ಪೊಲೀಸರು ಕೈಗೆ ಸಿಕ್ಕ ರೈತರನ್ನೆಲ್ಲಾ ವಶಕ್ಕೆ ಪಡೆಯುತ್ತಿದ್ದಾರೆ.
ಬ್ಯಾಡಗಿ ಮೆಣಸಿನಕಾಯಿ ದರ ಕುಸಿತಕ್ಕೆ ರೊಚ್ಚಿಗೆದ್ದ ರೈತರು; ಎಪಿಎಂಸಿ ಕಚೇರಿಗೆ ಕಲ್ಲುತೂರಿ, ಕಾರಿಗೆ ಬೆಂಕಿಯಿಟ್ಟರು
ಬ್ಯಾಡಗಿ ಮೆಣಸಿನಕಾಯಿ ಮಾರುಕಟ್ಟೆ ಅಂತಾರಾಷ್ಟ್ರೀಯ ಮಟ್ಟದ ಮಾರುಕಟ್ಟೆಯಾಗಿದೆ. ಈ ಮಾರುಕಟ್ಟೆಗೆ ರಾಜ್ಯದ ಮೂಲೆ ಮೂಲೆಗಳಿಂದ ಮಾತ್ರವಲ್ಲದೇ, ಆಂಧ್ರಪ್ರದೇಶ, ಮಹಾರಾಷ್ಟ್ರ ರಾಜ್ಯಗಳಿಂದಲೂ ಮೆಣಸಿನಕಾಯಿಯನ್ನು ತಂದು ಮಾರಾಟ ಮಾಡುತ್ತಿದ್ದಾರೆ. ಮಾರುಕಟ್ಟೆಗೆ ಏಕಾಏಕಿ ಒಣಮೆಣಸಿನಕಾಯಿ ನಿರೀಕ್ಷೆಗಿಂತ ಹೆಚ್ಚಾಗಿ ಆವಕವಾಗಿದ್ದರಿಂದ ಎಪಿಎಂಸಿಯಿಂದ ಬೆಲೆ ಇಳಿಕೆ ಮಾಡಲಾಗಿದೆ. ಆದರೆ, ಇದರಿಂದ ಆಕ್ರೋಶಗೊಂಡ ರೈತರು ಎಪಿಎಂಸಿಗೆ ಸಂಬಂಧಿಸಿದ ಮೂರು ಕಾರುಗಳು, ಒಂದು ಅಗ್ನಿಶಾಮಕ ದಳದ ವಾಹನ ಹಾಗೂ 10 ಬೈಕ್‌ಗಳಿಗೆ ಬೆಂಕಿ ಹಚ್ಚಿ ಆಕ್ರೋಶ ಹೊರಹಾಕಿದ್ದಾರೆ.
ಬ್ಯಾಡಗಿ ಎಪಿಎಂಸಿ ಮಾರುಕಟ್ಟೆಯ ಆಸ್ತಿ-ಪಾಸ್ತಿಗಳಿಗೆ ಹಾನಿಯಾದ ಬೆನ್ನಲ್ಲಿಯೇ ಸ್ಥಳಕ್ಕೆ ಆಗಮಿಸಿದ ಪೊಲೀಸರು ರೈತರನ್ನು ಮನವೊಲಿಸುವ ಪ್ರಯತ್ನ ಮಾಡಿದ್ದಾರೆ. ಆದರೆ, ಇದಕ್ಕೆ ಬಗ್ಗದೇ ಪೊಲೀಸರ ವಿರುದ್ಧವೇ ಧಿಕ್ಕಾರ ಕೂಗುತ್ತಾ ಆಕ್ರೋಶ ವ್ಯಕ್ತಪಡಿಸಿದ್ದಾರೆ. ಇನ್ನು ರೈತರ ಪ್ರತಿಭಟನೆ ದೊಡ್ಡ ಮಟ್ಟದಲ್ಲಿ ನಡೆಯುತ್ತಿದ್ದರಿಂದ ಎಚ್ಚೆತ್ತುಕೊಂಡ ಪೊಲೀಸ್ ಇಲಾಖೆ ಜಿಲ್ಲಾಕೇಂದ್ರ ಹಾವೇರಿ ಹಾಗೂ ಇತರೆ ತಾಲೂಕುಗಳಿಂದ ಹೆಚ್ಚಿವರಿ ಪೊಲೀಸ್ ಸಿಬ್ಬಂದಿಯನ್ನು ನಿಯೋಜನೆ ಮಾಡಿಕೊಂಡಿದ್ದಾರೆ. ನಂತರ, ಆಕ್ರೋಶಭರಿತ ಪರಿಸ್ಥಿತಿ ನಿಯಂತ್ರಣ ಮಾಡುವ ನಿಟ್ಟಿನಲ್ಲಿ ರೈತರ ಮೇಲೆ ಲಾಠಿ ಬೀಸಿದ್ದಾರೆ. ಈ ವೇಳೆ ರೈತರು ಚದುರಿ ಓಡಿ ಹೋಗಿದ್ದಾರೆ. ಆಗ, ಕೈಗೆ ಸಿಕ್ಕ ರೈತರನ್ನು ಪೊಲೀಸರು ವಶಕ್ಕೆ ಪಡೆಯುತ್ತಿದ್ದಾರೆ.
ಬ್ಯಾಡಗಿ ಮೆಣಸಿನಕಾಯಿ ದರ ಕುಸಿತಕ್ಕೆ ರೊಚ್ಚಿಗೆದ್ದ ರೈತರು; ಎಪಿಎಂಸಿ ಕಚೇರಿಗೆ ಕಲ್ಲುತೂರಿ, ಕಾರಿಗೆ ಬೆಂಕಿಯಿಟ್ಟರು
ಪೊಲೀಸರು, ಮಾಧ್ಯಮದವರನ್ನು ಅಟ್ಟಾಡಿಸಿಕೊಂಡು ಹೋದ ರೈತರು: ಬ್ಯಾಡಗಿ ಮೆಣಸಿನಕಾಯಿ ಮಾರುಕಟ್ಟೆಯಲ್ಲಿ ನಡೆಯುತ್ತಿದ್ದ ರೈತರ ಪ್ರತಿಭಟನೆ ತಡೆಯಲು ಮುಂದಾದ ಕೆಲವೇ ಸ್ಥಳೀಯ ಪೊಲೀಸರನ್ನು ರೈತರು ಹಿಮ್ಮೆಟ್ಟಿಸಿದ್ದಾರೆ. ಪೊಲೀಸರು ಹಾಗೂ ಪ್ರತಿಭಟನಾ ದೃಶ್ಯಗಳನ್ನು ವರದಿ ಮಾಡಲು ಸ್ಥಳಕ್ಕೆ ಬಂದ ಮಾಧ್ಯಮ ಸಿಬ್ಬಂದಿಯ ಮೇಲೆಯೂ ಆಕ್ರೋಶಭರಿತ ರೈತರು ಹಲ್ಲೆ ಮಾಡಿದ್ದಾರೆ. ದೊಡ್ಡ ಮಟ್ಟದಲ್ಲಿ ಗುಂಪಾಗಿ ಸೇರಿದ್ದ ರೈತರು ಪೊಲೀಸರ ಮೇಲೆ ಕಲ್ಲು, ದೊಣ್ಣೆಗಳನ್ನು ಬೀಸಾಡಿದ್ದಾರೆ. ಇನ್ನು ಬೆರಳೆಣಿಕೆಯಷ್ಟಿದ್ದ ಪೊಲೀಸರು ರೈತರ ಹಲ್ಲೆಯಿಂದ ತಪ್ಪಿಸಿಕೊಳ್ಳಲು ಅಲ್ಲಿಂದ ವಾಪಸ್ ಓಡಿ ಬಂದಿದ್ದಾರೆ. ಇನ್ನು ಖಾಸಗಿ ಮಾಧ್ಯಮವೊಂದರ ಕ್ಯಾಮೆರಾಮೆನ್ ಒಬ್ಬರಿಗೆ ಹಲ್ಲೆ ಮಾಡಿದ್ದು, ಆಸ್ಪತ್ರೆಗೆ ದಾಖಲಾಗಿದ್ದಾರೆ.