Asianet Suvarna News Asianet Suvarna News

ಸಿದ್ದು ಪತ್ನಿಗೆ ಸಿಗಬೇಕಾಗಿದ್ದು ಎರಡೇ ಸೈಟ್‌, ಕೊಟ್ಟಿರುವುದು 14 ನಿವೇಶನ: ಬಿ.ವೈ.ವಿಜಯೇಂದ್ರ

ಈಗ ವಿವಾದಕ್ಕೀಡಾಗಿರುವ ಭೂಮಿ ಕುರಿತಂತೆ ಮುಖ್ಯಮಂತ್ರಿ ಸಿದ್ದರಾಮಯ್ಯ ಅವರು ಅನೇಕ ತಪ್ಪು ಮಾಹಿತಿ ನೀಡಿದ್ದಾರೆ. ಜತೆಗೆ ಸಿದ್ದರಾಮಯ್ಯ ಅವರ ಪತ್ನಿಗೆ ಸೇರಿದ ಭೂ ಸ್ವಾಧೀನಕ್ಕೆ ಪ್ರತಿಯಾಗಿ ಎರಡು ನಿವೇಶನಗಳನ್ನು ಮಾತ್ರ ನೀಡಬೇಕಿತ್ತು. ಆದರೆ, ಕಾನೂನುಬಾಹಿರವಾಗಿ 14 ನಿವೇಶನಗಳನ್ನು ನೀಡಲಾಗಿದೆ ಎಂದೂ ಅವರು ಕಿಡಿಕಾರಿದ ಬಿಜೆಪಿ ರಾಜ್ಯಾಧ್ಯಕ್ಷ ಬಿ.ವೈ. ವಿಜಯೇಂದ್ರ 

by vijayendra talks over muda site to cm siddaramaiah's wife  in mysuru grg
Author
First Published Jul 11, 2024, 4:28 AM IST | Last Updated Jul 11, 2024, 9:03 AM IST

ಬೆಂಗಳೂರು(ಜು.11):  ಮೈಸೂರಿನ ಮುಡಾ ಅವ್ಯವಹಾರಕ್ಕೆ ಸಂಬಂಧಿಸಿದಂತೆ ಶುಕ್ರವಾರ ಬಿಜೆಪಿ ವತಿಯಿಂದ ಮೈಸೂರಿನಲ್ಲಿ ಬೃಹತ್ ಪ್ರತಿಭಟನೆ ನಡೆಸಲಾಗುವುದು ಎಂದು ಬಿಜೆಪಿ ರಾಜ್ಯಾಧ್ಯಕ್ಷ ಬಿ.ವೈ.ವಿಜಯೇಂದ್ರ ತಿಳಿಸಿದ್ದಾರೆ. ಅಲ್ಲದೆ, ಸಿಎಂ ರಾಜೀನಾಮೆಗೆ ಒತ್ತಾಯಿಸಿದ್ದಾರೆ.

ಈಗ ವಿವಾದಕ್ಕೀಡಾಗಿರುವ ಭೂಮಿ ಕುರಿತಂತೆ ಮುಖ್ಯಮಂತ್ರಿ ಸಿದ್ದರಾಮಯ್ಯ ಅವರು ಅನೇಕ ತಪ್ಪು ಮಾಹಿತಿ ನೀಡಿದ್ದಾರೆ. ಜತೆಗೆ ಸಿದ್ದರಾಮಯ್ಯ ಅವರ ಪತ್ನಿಗೆ ಸೇರಿದ ಭೂ ಸ್ವಾಧೀನಕ್ಕೆ ಪ್ರತಿಯಾಗಿ ಎರಡು ನಿವೇಶನಗಳನ್ನು ಮಾತ್ರ ನೀಡಬೇಕಿತ್ತು. ಆದರೆ, ಕಾನೂನುಬಾಹಿರವಾಗಿ 14 ನಿವೇಶನಗಳನ್ನು ನೀಡಲಾಗಿದೆ ಎಂದೂ ಅವರು ಕಿಡಿಕಾರಿದ್ದಾರೆ.

ಮುಡಾದಲ್ಲಿ ಹಗರಣವೇ ಆಗಿಲ್ಲ: ಎಚ್‌ಡಿಕೆಗೆ ಸಚಿವ ಬೈರತಿ ಸುರೇಶ್ ತಿರುಗೇಟು

ಬುಧವಾರ ಪಕ್ಷದ ಕಚೇರಿಯಲ್ಲಿ ಪತ್ರಿಕಾಗೋಷ್ಠಿ ಉದ್ದೇಶಿಸಿ ಮಾತನಾಡಿದ ಅವರು, ಖುಷಿ ಬಂದಂತೆ ನಿವೇಶನ ನೀಡಿದ ಹಿನ್ನೆಲೆಯಲ್ಲಿ ಬಿಜೆಪಿ ಈ ಹಗರಣವನ್ನು ಬಹಳ ಗಂಭೀರವಾಗಿ ಪರಿಗಣಿಸಿದೆ. ಮೈಸೂರಿನಲ್ಲಿ ನಡೆಯುವ ಪ್ರತಿಭಟನೆಯಲ್ಲಿ ನಾನು, ಪ್ರತಿಪಕ್ಷದ ನಾಯಕ ಆರ್.ಅಶೋಕ್, ಮಾಜಿ ಉಪಮುಖ್ಯಮಂತ್ರಿ ಡಾ.ಸಿ.ಎನ್‌.ಅಶ್ವತ್ಥನಾರಾಯಣ್ ಸೇರಿದಂತೆ ಪಕ್ಷದ ಶಾಸಕರು, ಕಾರ್ಯಕರ್ತರು ಭಾಗವಹಿಸಲಿದ್ದೇವೆ ಎಂದು ತಿಳಿಸಿದರು.

ಮುಖ್ಯಮಂತ್ರಿಗಳ ಪರಮಾಪ್ತರು ಪತ್ರಿಕಾಗೋಷ್ಠಿ ನಡೆಸಿ ಅವ್ಯವಹಾರದ ಕುರಿತಂತೆ ಸಮಜಾಯಿಷಿ ನೀಡಿದ್ದಾರೆ. 1992ರಲ್ಲಿ ಭೂಮಿ ವಶಕ್ಕೆ ಪಡೆಯುವ ಕೆಲಸ ಶುರುವಾಗಿದೆ. 2004ರಲ್ಲಿ ಸಿದ್ದರಾಮಯ್ಯ ಅವರ ಪತ್ನಿ ಪಾರ್ವತಮ್ಮ ಅವರ ಅಣ್ಣ ಮಲ್ಲಿಕಾರ್ಜುನ ಸ್ವಾಮಿ ಜಮೀನು ಖರೀದಿ ಮಾಡಿದ್ದಾರೆ. ಮುಡಾ ಸ್ವಾಧೀನದಲ್ಲಿದ್ದ ಜಾಗವನ್ನು ಮಲ್ಲಿಕಾರ್ಜುನ ಸ್ವಾಮಿ ಅವರು ಖರೀದಿ ಮಾಡಿದ್ದು ಹೇಗೆ? 2009-10ರಲ್ಲಿ ಗಿಫ್ಟ್ ಡೀಡ್ ಆದಾಗಲೂ ಸಹ ಈ ಜಾಗ ಮುಡಾ ಆರ್‌ಟಿಸಿಯಲ್ಲಿ ನಮೂದಾಗಿತ್ತು. ಭೂಮಿ ಖರೀದಿ ಆಗಿ ಪರಿವರ್ತನೆ ಆಗಿತ್ತು. ಗಿಫ್ಟ್ ಡೀಡ್ ಎಂದು ಮಾಹಿತಿ ಕೊಡುವಾಗಲೂ ಅದು ಕೃಷಿ ಭೂಮಿ ಆಗಿರಲಿಲ್ಲ’ ಎಂದರು.

‘2022ರ ಜ.12ರಂದು ಕ್ರಯಪತ್ರ ಆಗಿದೆ. ಇದರಲ್ಲಿ ಗಮನಿಸಬೇಕಾದ ಅಂಶ ಏನೆಂದರೆ ಮುಡಾ, ಪ್ರೋತ್ಸಾಹದಾಯಕ ಯೋಜನೆಯಡಿಯಲ್ಲಿ 1991ರ ನಿಯಮದ ಮೇರೆಗೆ ಎಂದು ಉಲ್ಲೇಖಿಸಿ 14 ನಿವೇಶನಗಳನ್ನು ಕೊಟ್ಟಿದೆ. ಇದು ಕ್ರಯಪತ್ರದಲ್ಲಿ ಉಲ್ಲೇಖವಾಗಿದೆ. ಆದರೆ, 1991ರ ಕಾನೂನು ಪ್ರಕಾರ ಅವರಿಗೆ ಸ್ವಾಧೀನಗೊಂಡ ಜಮೀನು 1 ಎಕರೆ ಆದರೆ ಅದಕ್ಕೆ ಪರಿಹಾರವಾಗಿ 40x60 ಅಳತೆಯ 1 ನಿವೇಶನ ಮಾತ್ರ ಕೊಡಬೇಕು. 3ರಿಂದ 4 ಎಕರೆ ಆಗಿದ್ದರೆ 40x60ರ 2 ನಿವೇಶನ ಕೊಡಬೇಕಿತ್ತು. ಆದರೆ, ಮುಖ್ಯಮಂತ್ರಿಗಳ ಪತ್ನಿ ಪಾರ್ವತಮ್ಮ ಅವರಿಗೆ ಎರಡು ನಿವೇಶನಗಳ ಬದಲು 14 ನಿವೇಶನಗಳನ್ನು ಕೊಟ್ಟಿದ್ದು ಸಂಪೂರ್ಣ ಕಾನೂನುಬಾಹಿರ’ ಎಂದು ಆಕ್ಷೇಪ ವ್ಯಕ್ತಪಡಿಸಿದರು.

‘ಮುಡಾ ಭೂಮಿ ಸಂಬಂಧ ದೊಡ್ಡ ಹಗರಣ ಅಲ್ಲಿ ನಡೆದಿದೆ. ಈ ಪ್ರಕರಣದಲ್ಲಿ ಸಿದ್ದರಾಮಯ್ಯನವರು ಅನೇಕ ತಪ್ಪು ಮಾಹಿತಿ ನೀಡಿದ್ದಾರೆ. ಮಾನ್ಯ ಮುಖ್ಯಮಂತ್ರಿಗಳ ಮುಖವಾಡ ಕಳಚಿಬಿದ್ದಿದೆ. ಹೇಗಾದರೂ ಬೆಲೆಬಾಳುವ ನಿವೇಶನ ಕಬಳಿಸಬೇಕು ಎಂದುಕೊಂಡು ನಿಯಮ ಗಾಳಿಗೆ ತೂರಿ ಅಕ್ರಮ ನಡೆಸಿದ್ದಾರೆ. ಈ ವಿಷಯದಲ್ಲಿ ಮುಖ್ಯಮಂತ್ರಿಗಳು ಜನತೆಗೆ ಉತ್ತರಿಸಬೇಕು. ಈ ಹಗರಣಕ್ಕೆ ಹೊಣೆ ಹೊರಬೇಕು’ ಎಂದು ವಿಜಯೇಂದ್ರ ಒತ್ತಾಯಿಸಿದರು.

ಪ್ರಕರಣ ಮುಚ್ಚಿ ಹಾಕಲು ಬೈರತಿ ಯತ್ನ:

ಮುಡಾ ಹಗರಣದಲ್ಲಿ ಎರಡು ಪ್ರಕರಣಗಳಿವೆ. ಮುಖ್ಯಮಂತ್ರಿಗಳ ಪತ್ನಿಗೆ ಕೊಟ್ಟ 14 ನಿವೇಶನಗಳದ್ದು ಒಂದು ಪ್ರಕರಣ. ನಗರಾಭಿವೃದ್ಧಿ ಸಚಿವ ಬೈರತಿ ಸುರೇಶ್ ಅವರು ಓಡೋಡಿ ತರಾತುರಿಯಲ್ಲಿ ಮೈಸೂರಿಗೆ ಹೋಗಿ ಮುಡಾ ಅಧಿಕಾರಿಗಳ ಸಭೆ ನಡೆಸಿದ್ದು ಮತ್ತೊಂದು ಪ್ರಕರಣ. ಸಭೆಯಲ್ಲಿ ಮಾಹಿತಿ ಪಡೆದು ತಪ್ಪಿತಸ್ಥ ಅಧಿಕಾರಿಗಳ ಮೇಲೆ ಕ್ರಮ ಜರುಗಿಸುವ ಬದಲು ಎಲ್ಲ ಅಧಿಕಾರಿಗಳನ್ನೂ ಏಕಾಏಕಿ ವರ್ಗಾವಣೆ ಮಾಡಿ, ಹಗರಣ ಮುಚ್ಚಿಹಾಕಲು ಯತ್ನಿಸಿದ್ದಾರೆ ಎಂದು ಇದೇ ವೇಳೆ ವಿಜಯೇಂದ್ರ ಹರಿಹಾಯ್ದರು.

5 ಸಾವಿರ ಕೋಟಿ ರು.ಗೂ ಹೆಚ್ಚು ಮೌಲ್ಯದ ನಿವೇಶನಗಳನ್ನು ಅಕ್ರಮವಾಗಿ ಹಂಚಿಕೆ ಮಾಡಿದ್ದಾರೆ. ಹಗರಣದಲ್ಲಿ ಒಳಗೊಂಡವರನ್ನು ಶಿಕ್ಷಿಸುವುದನ್ನು ತಪ್ಪಿಸಲು ಹಾಗೂ ರಕ್ಷಿಸಲು ಭೈರತಿ ಸುರೇಶ್ ಮುಂದಾಗಿದ್ದಾರೆ. ಮುಡಾ ಭ್ರಷ್ಟಾಚಾರದ ಬಗ್ಗೆ ತನಿಖೆ ಮಾಡಿ ವರದಿ ಕೊಟ್ಟ ಜಿಲ್ಲಾಧಿಕಾರಿಯನ್ನೂ ತರಾತುರಿಯಲ್ಲಿ ವರ್ಗಾವಣೆ ಮಾಡಿದ್ದಾರೆ ಎಂದು ಆಕ್ಷೇಪಿಸಿದರು.

‘ಬೈರತಿ ಸುರೇಶ್ ಅವರು ಈ ಹಗರಣ ಮುಚ್ಚಿ ಹಾಕಲು ಎಲ್ಲ ಕಡತಗಳನ್ನು ಬೆಂಗಳೂರಿಗೆ ಒಯ್ದಿದ್ದಾರೆ. ಹಗರಣ ಮುಚ್ಚಿ ಹಾಕುವ ಕೆಲಸ ನಡೆಯುತ್ತಲೇ ಇದೆ. ಮುಖ್ಯಮಂತ್ರಿಗಳು ಕೂಡ ಮೈಸೂರು ಜಿಲ್ಲೆಯವರು. ಅತಿ ದೊಡ್ಡ ಭ್ರಷ್ಟಾಚಾರ ಹಗರಣವಿದು. ಎಲ್ಲ ಕಡತ ಮುಚ್ಚಿಡಲು ಬೈರತಿ ಸುರೇಶ್ ಮುಂದಾಗಿದ್ದಾರೆ’ ಎಂದು ಆರೋಪಿಸಿದರು.

MUDA scam: 'ಏಯ್ ಯಾರ್ರೀ ಅವ್ನು ವಿಶ್ವನಾಥ್..' ಹಳ್ಳಿಹಕ್ಕಿ ವಿರುದ್ಧ ರೊಚ್ಚಿಗೆದ್ದ ಬೈರತಿ ಸುರೇಶ್!

ಮುಡಾ ಅವ್ಯವಹಾರಕ್ಕೆ ಸಂಬಂಧಿಸಿ ಜಿಲ್ಲಾಧಿಕಾರಿಗಳ ವರದಿಯ ಬಳಿಕವೂ ಕಳೆದ ಜೂ.15ರಂದು ಸುಮಾರು 42 ಸೈಟ್‍ಗಳನ್ನು ಒಬ್ಬರಿಗೆ ಬದಲಿಯಾಗಿ ಕೊಟ್ಟಿದ್ದಾರೆ. ಇಂಥ ಸಾವಿರಾರು ನಿವೇಶನಗಳನ್ನು ಈ ಸರ್ಕಾರ ಕಾನೂನುಬಾಹಿರವಾಗಿ ಕೊಟ್ಟಿದೆ. ಬಡವರು, ದಲಿತರು, ಪರಿಶಿಷ್ಟ ಸಮುದಾಯಕ್ಕೆ ಮೀಸಲಿಟ್ಟ ನಿವೇಶನಗಳನ್ನು ತಮಗೆ ಬೇಕಾದಂತೆ ಹಂಚಿದ್ದಾರೆ. ಸಿಬಿಐ ತನಿಖೆ ಮಾತ್ರವಲ್ಲದೆ ಮುಖ್ಯಮಂತ್ರಿಗಳು ತಮ್ಮ ಹುದ್ದೆಗೆ ರಾಜೀನಾಮೆ ಕೊಡಬೇಕು ಎಂದು ಒತ್ತಾಯಿಸಿದರು.

ಕಾನೂನುಬಾಹಿರ ರೀತಿ ಸೈಟ್‌ ಹಂಚಿಕೆ

1991ರ ಕಾನೂನು ಪ್ರಕಾರ ಸ್ವಾಧೀನಗೊಂಡ ಜಮೀನು 1 ಎಕರೆ ಆದರೆ ಅದಕ್ಕೆ ಪರಿಹಾರವಾಗಿ 40x60 ಅಳತೆಯ 1 ನಿವೇಶನ ಮಾತ್ರ ಕೊಡಬೇಕು. 3ರಿಂದ 4 ಎಕರೆ ಆಗಿದ್ದರೆ 40x60ರ 2 ನಿವೇಶನ ಕೊಡಬೇಕಿತ್ತು. ಆದರೆ, ಮುಖ್ಯಮಂತ್ರಿಗಳ ಪತ್ನಿ ಪಾರ್ವತಮ್ಮ ಅವರಿಗೆ ಎರಡು ನಿವೇಶನಗಳ ಬದಲು 14 ನಿವೇಶನಗಳನ್ನು ಕೊಟ್ಟಿದ್ದು ಸಂಪೂರ್ಣ ಕಾನೂನುಬಾಹಿರ ಎಂದು ಬಿಜೆಪಿ ರಾಜ್ಯಾಧ್ಯಕ್ಷ ಬಿ.ವೈ. ವಿಜಯೇಂದ್ರ ತಿಳಿಸಿದ್ದಾರೆ. 

Latest Videos
Follow Us:
Download App:
  • android
  • ios