ಬಿ.ಕೆ. ಹರಿಪ್ರಸಾದ್ ಅವರ ಅರ್ಧನಾರೀಶ್ವರ ಹೇಳಿಕೆಗೆ ಬಿಜೆಪಿ ತೀವ್ರ ಆಕ್ಷೇಪ ವ್ಯಕ್ತಪಡಿಸಿದೆ. ಮಹಿಳೆಯರನ್ನು ಗೌರವಿಸುವುದು ಬಿಜೆಪಿಯ ಧ್ಯೇಯ ಎಂದು ಬಿ.ವೈ. ವಿಜಯೇಂದ್ರ ಹೇಳಿದ್ದಾರೆ. ಕಾಂಗ್ರೆಸ್ ಪಕ್ಷದಲ್ಲಿ ಮಹಿಳೆಯರಿಗೆ ಸ್ಥಾನಮಾನವಿಲ್ಲ ಎಂದು ಟೀಕಿಸಿದ್ದಾರೆ.
ಬೆಂಗಳೂರು (ಜುಲೈ.10): ಅರ್ಧನಾರೀಶ್ವರ ಹೇಳಿಕೆ ಸಂಬಂಧ ಕಾಂಗ್ರೆಸ್ ಮುಖಂಡ ಬಿ.ಕೆ.ಹರಿಪ್ರಸಾದ್ ಅವರು ಕೂಡಲೇ ಸ್ತ್ರೀ ಸಮುದಾಯ ಹಾಗೂ ತೃತೀಯ ಲಿಂಗಿ ಸಮುದಾಯಗಳ ಕ್ಷಮೆ ಯಾಚಿಸಬೇಕು ಎಂದು ಬಿಜೆಪಿ ರಾಜ್ಯಾಧ್ಯಕ್ಷ ಬಿ.ವೈ.ವಿಜಯೇಂದ್ರ ಒತ್ತಾಯಿಸಿದ್ದಾರೆ.
ನಮ್ಮ ಪಕ್ಷದ ಸ್ಥಾನಮಾನಗಳ ಬಗ್ಗೆ ನೀವು ತಲೆಕೆಡಿಸಿಕೊಳ್ಳುವುದು ಬೇಡ. ಬಿಜೆಪಿಯಲ್ಲಿ ‘ಕಾರ್ಯಕರ್ತ’ ಎಂಬುದೇ ಬಹುದೊಡ್ಡ ಹುದ್ದೆ. ಅದಕ್ಕಿಂತ ದೊಡ್ಡ ಸ್ಥಾನಮಾನ ಮತ್ತೊಂದು ಇಲ್ಲ ಎಂದು ಭಾವಿಸುವುದೇ ನಮ್ಮ ಪಕ್ಷ ನಮಗೆ ಕಲಿಸಿಕೊಟ್ಟಿರುವ ಶಿಸ್ತು ಹಾಗೂ ಸಂಸ್ಕಾರ. ಈ ಕಾರಣಕ್ಕಾಗಿಯೇ ನಮಗೆ ದೊರೆಯುವ ಪ್ರತಿಯೊಂದು ಅವಕಾಶಗಳನ್ನು ಜವಾಬ್ದಾರಿ ಎಂದು ಪರಿಗಣಿಸಿ ನಮ್ಮನ್ನು ಆ ನಿಟ್ಟಿನಲ್ಲಿ ಸಮರ್ಪಿಸಿಕೊಳ್ಳುತ್ತೇವೆ. ಪ್ರಧಾನ ಮಂತ್ರಿ ಸ್ಥಾನವನ್ನು ಪ್ರಧಾನ ಸೇವಕ ಎಂದು ಪರಿಗಣಿಸಿ ತಮನ್ನು ದೇಶಕ್ಕಾಗಿ ಸಮರ್ಪಿಸಿಕೊಂಡವರು ಹೆಮ್ಮೆಯ ಪ್ರಧಾನಿ ಮೋದಿ ಅವರು. ಇದು ನಮ್ಮ ಬಿಜೆಪಿಯ ಪರಮ ಧ್ಯೇಯ ಎಂದು ಅವರು ತಿರುಗೇಟು ನೀಡಿದ್ದಾರೆ.
‘ಮಂಜಮ್ಮ ಜೋಗತಿ’ ಅವರನ್ನು ಗುರುತಿಸಿ ಕರ್ನಾಟಕದ ಸಾಂಸ್ಕೃತಿಕ ಹಿರಿಮೆಯನ್ನು ಪ್ರತಿನಿಧಿಸುವ ಜಾನಪದ ಅಕಾಡೆಮಿಯ ಅಧ್ಯಕ್ಷರನ್ನಾಗಿಸಿ ‘ಪದ್ಮ ಶ್ರೀ’ ಪ್ರಶಸ್ತಿ ನೀಡಿ ಗೌರವಿಸಿ ಲಿಂಗ ತಾರತಮ್ಯ ಮೆಟ್ಟಿನಿಂತು ಒಟ್ಟು ಸಮಾಜದ ಕಲ್ಪನೆಯ ದೇಶ ಕಟ್ಟುವ ಸಂಕಲ್ಪ ಸಾಕ್ಷೀಕರಿಸಿದ ಪಕ್ಷ ನಮ್ಮದು. ಅರ್ಹತೆ ಇರುವ ಪ್ರತಿಯೊಬ್ಬರನ್ನು ಗುರುತಿಸಿ, ಗೌರವಿಸಿ ಜವಾಬ್ದಾರಿ ಸ್ಥಾನ ನೀಡುವ ಆದರ್ಶ ನಾವು ಅಳವಡಿಸಿಕೊಂಡಿದ್ದೇವೆ ಎಂದು ಹೇಳಿದ್ದಾರೆ.
ಆದಿವಾಸಿ ಬುಡಕಟ್ಟು ಮೂಲದ ದ್ರೌಪದಿ ಮುರ್ಮು ಅವರನ್ನು ರಾಷ್ಟ್ರಪತಿ ಹುದ್ದೆಯಲ್ಲಿ ಕೂರಿಸಿ ಸಂವಿಧಾನದ ಆಶಯ ಪ್ರಜಾಪ್ರಭುತ್ವದ ಸುಂದರತೆಯನ್ನು ವಿಶ್ವಕ್ಕೆ ಪಸರಿಸಿದ ಹೆಗ್ಗಳಿಕೆ ನಮ್ಮದು. ನಿರ್ಮಲಾ ಸೀತಾರಾಮನ್ ಅವರಂಥ ಸಮರ್ಥ ವಿತ್ತ ಸಚಿವೆಯನ್ನು ದೇಶಕ್ಕೆ ಕೊಟ್ಟ ಹೆಮ್ಮೆ ನಮ್ಮದು. ಇಂತಹ ಉದಾಹರಣೆಗಳು ಸಾಲು, ಸಾಲು ನಮ್ಮ ಮುಂದಿದೆ, ಭವಿಷ್ಯತ್ತಿನಲ್ಲಿ ನಾರಿಯರು, ಅರ್ಧನಾರಿಯರು ಯಾರೇ ಇರಲಿ ಅವರಿಗಾಗಿ ಅವಕಾಶದ ಬಾಗಿಲು ಬಿಜೆಪಿಯಲ್ಲಿ ಸದಾ ತೆರೆದಿರುತ್ತದೆ ಎಂದು ವಿಜಯೇಂದ್ರ ಸಾಮಾಜಿಕ ಜಾಲತಾಣದ ಮೂಲಕ ತಿಳಿಸಿದ್ದಾರೆ.
ನಾರಿಯರು, ಅರ್ಧ ನಾರಿಯರ ಸಾಮರ್ಥ್ಯದ ಬಗ್ಗೆ ವ್ಯಂಗ್ಯವಾಡಿರುವ ನಿಮ್ಮ ನಡೆ ದುಶ್ಯಾಸನ ಸಂಸ್ಕೃತಿ ನೆನಪಿಸುತ್ತದೆ. ಕಾಂಗ್ರೆಸ್ ಪಕ್ಷ ಎಂದೂ ಧರ್ಮರಾಯನಂತೆ ನಡೆದುಕೊಂಡಿಲ್ಲ. ಅದೇನಿದ್ದರೂ ದುರ್ಯೋಧನ, ದುಶ್ಯಾಸನರನ್ನು ಪೋಷಿಸುವ ದೃತರಾಷ್ಟ್ರನ ಸಂಸ್ಕೃತಿ ಎಂಬುದು ದೇಶಕ್ಕೆ ತಿಳಿದ ವಿಷಯ. ನೀವು ವ್ಯಂಗ್ಯವಾಡಿ ಅಪಮಾನಿಸಿದ ನಾರಿಯರು, ಅರ್ಧ ನಾರಿಯರು ಭವಿಷ್ಯತ್ತಿನಲ್ಲಿ ಅತ್ಯುನ್ನತ ಸ್ಥಾನಗಳನ್ನು ಅಲಂಕರಿಸುವ ಅವಕಾಶಗಳು ಇರುವುದು ಬಿಜೆಪಿಯಲ್ಲಿ ಮಾತ್ರ ಎಂದು ತೀಕ್ಷ್ಣವಾಗಿ ಹೇಳಿದ್ದಾರೆ.
