ಬೆಂಗಳೂರು (ಡಿ.9): ಹದಿನೈದು ವಿಧಾನಸಭಾ ಕ್ಷೇತ್ರಗಳ ಉಪಚುನಾವಣೆಯ ಫಲಿತಾಂಶ ಸೋಮವಾರ ಹೊರಬೀಳುತ್ತಿದ್ದಂತೆಯೇ ಗೆದ್ದ ಅನರ್ಹ ಶಾಸಕರಿಗೆ ಸಚಿವ ಸ್ಥಾನ ನೀಡಲು ಮುಖ್ಯಮಂತ್ರಿ ಬಿ.ಎಸ್‌.ಯಡಿಯೂರಪ್ಪ ಉತ್ಸುಕರಾಗಿದ್ದು, ಅದಕ್ಕಾಗಿ ಸಂಪುಟ ವಿಸ್ತರಣೆ ಮಾಡುತ್ತಾರೊ ಅಥವಾ ಪುನಾರಚನೆಯನ್ನೇ ಕೈಗೊಳ್ಳುತ್ತಾರೊ ಎಂಬುದು ಕುತೂಹಲಕರವಾಗಿದೆ.

ಯಡಿಯೂರಪ್ಪ ಅವರ ಪ್ರಕಾರ, ಬಿಜೆಪಿ 13 ಸ್ಥಾನಗಳಲ್ಲಿ ಗೆಲುವು ಸಾಧಿಸಲಿದೆ. ಹೀಗಾಗಿ, ಹಿಂದೆ ನೀಡಿದ ವಾಗ್ದಾನದಂತೆ ಅನರ್ಹ ಶಾಸಕರಿಗೆ ಸಚಿವ ಸ್ಥಾನ ನೀಡುವುದಾಗಿ ಪುನರುಚ್ಛರಿಸಿದ್ದಾರೆ. 

ವಿಸ್ತರಣೆಯೊ ಅಥವಾ ಪುನಾರಚನೆಯೊ ಎಂಬುದರ ಬಗ್ಗೆ ಈವರೆಗೆ ಗಂಭೀರ ಮಾತುಕತೆ ನಡೆದಿಲ್ಲ. ಆದರೆ, ಸೋಮವಾರದ ಫಲಿತಾಂಶ ನೋಡಿಕೊಂಡು ಈ ಬಗ್ಗೆ ಮುಂದಿನ ತೀರ್ಮಾನ ಕೈಗೊಳ್ಳಲಾಗುವುದು. ಎಷ್ಟು ಮಂದಿ ಅನರ್ಹ ಶಾಸಕರು ಗೆಲ್ಲುತ್ತಾರೆ ಎಂಬುದನ್ನು ಅವಲೋಕಿಸಿ ಹೈಕಮಾಂಡ್‌ ಜೊತೆ ಮಾತುಕತೆ ನಡೆಸಲು ಯಡಿಯೂರಪ್ಪ ಅವರು ಬಯಸಿದ್ದಾರೆ ಎಂದು ಉನ್ನತ ಮೂಲಗಳು ತಿಳಿಸಿವೆ.

ಉಪ ಚುನಾವಣೆ: ಲೈವ್ ಅಪ್‌ಡೇಟ್ಸ್

ಈಗಾಗಲೇ ಮೊದಲ ಹಂತದಲ್ಲಿ ಪಕ್ಷದ ಸಚಿವರಿಗೆ ಖಾತೆಗಳನ್ನು ಹಂಚಿಕೆ ಮಾಡುವಾಗಲೇ ಅಳೆದು ತೂಗಿಯೇ ನೀಡಲಾಗಿದೆ. ಅನರ್ಹರಿಗಾಗಿ ಮೀಸಲಿರಿಸಿದ್ದ ಹೆಚ್ಚುವರಿ ಖಾತೆಗಳನ್ನು ಕೆಲವು ದಿನಗಳ ಬಳಿಕ ಎಲ್ಲ ಸಚಿವರಿಗೂ ಹಂಚಿಕೆ ಮಾಡಲಾಯಿತು. ಇದೀಗ ಆ ಹೆಚ್ಚುವರಿ ಖಾತೆಗಳನ್ನು ಗೆದ್ದ ಅನರ್ಹ ಶಾಸಕರಿಗೆ ನೀಡುವ ಸಾಧ್ಯತೆಯಿದೆ. ಒಂದಿಬ್ಬರು ಹಾಲಿ ಸಚಿವರ ಖಾತೆಗಳೂ ಬದಲಾಗುವ ಸಾಧ್ಯತೆಯನ್ನು ಅಲ್ಲಗಳೆಯುವಂತಿಲ್ಲ ಎನ್ನಲಾಗಿದೆ.

ಭಾನುವಾರ ಶಿವಮೊಗ್ಗ ಜಿಲ್ಲೆ ಸಾಗರ ಮತ್ತು ದಕ್ಷಿಣ ಕನ್ನಡ ಜಿಲ್ಲೆ ಉಜಿರೆಯಲ್ಲಿ ಪ್ರತ್ಯೇಕವಾಗಿ ಮಾತನಾಡಿದ ಮುಖ್ಯಮಂತ್ರಿಗಳು, ಉಪಚುನಾವಣೆಯಲ್ಲಿ ಬಿಜೆಪಿ 13 ಕ್ಷೇತ್ರಗಳಲ್ಲಿ ಗೆಲ್ಲಲಿದೆ. ಎಲ್ಲ ಅನರ್ಹ ಶಾಸಕರಿಗೂ ಮಂತ್ರಿ ಸ್ಥಾನ ನೀಡಲಾಗುವುದು. ಆದರೆ, ಆ ವೇಳೆ ಸಂಪುಟ ವಿಸ್ತರಣೆ ಮಾಡಬೇಕೋ ಅಥವಾ ಪುನಾರಚನೆ ಮಾಡಬೇಕೋ ಎನ್ನುವ ಕುರಿತು ಪಕ್ಷದ ಹೈಕಮಾಂಡ್‌ ಜೊತೆಗೆ ಚರ್ಚೆ ಮಾಡಲಾಗುವುದು ಎಂದು ತಿಳಿಸಿದರು.

ಬಿಎಸ್‌ವೈ ಸರಕಾರದ ಭವಿಷ್ಯ ಬರೆಯುತ್ತೆ ಉಪ ಚುನಾವಣೆ

ಎಲ್ಲರ ನಿರೀಕ್ಷೆ ಉಪಚುನಾವಣೆ ಫಲಿತಾಂಶದ ಮೇಲೆ ಇದೆ. ನಮ್ಮ ಲೆಕ್ಕಾಚಾರ ಉಲ್ಟಾಆಗಲ್ಲ. ನಾವು ಬಹುಮತ ಗಳಿಸುವ ನಿರೀಕ್ಷೆ ಇದೆ. 15 ಕ್ಷೇತ್ರಗಳ ಪೈಕಿ ಬಿಜೆಪಿ 13 ಸ್ಥಾನಗಳಲ್ಲಿ ಗೆಲ್ಲುವ ಎಲ್ಲ ಸೂಚನೆ ನಮಗೆ ಸಿಕ್ಕಿದೆ. ಜೆಡಿಎಸ್‌ ಮತ್ತು ಕಾಂಗ್ರೆಸ್‌ ತಲಾ ಒಂದು ಸ್ಥಾನ ಗೆಲ್ಲಲಿವೆ ಎಂದರು. ಜತೆಗೆ, ಉಪ ಚುನಾವಣೆ ಫಲಿತಾಂಶದ ಬಳಿಕ ರಾಜ್ಯದಲ್ಲಿ ರಾಜಕೀಯ ಅಸ್ಥಿರತೆ ಕೊನೆಯಾಗಲಿದೆ. ಕರ್ನಾಟಕ ಅಭಿವೃದ್ಧಿಯಲ್ಲಿ ಮಾದರಿಯಾಗಲಿದೆ ಎಂದು ಹೇಳಿದರು.

ಜನಪರ ಬಜೆಟ್‌ ಮಂಡನೆ:

ಫಲಿತಾಂಶಕ್ಕೂ ಮುನ್ನ ನಾನು ಪ್ರತಿಪಕ್ಷದ ಸ್ನೇಹಿತರಲ್ಲಿ ವಿನಂತಿ ಮಾಡುತ್ತಿದ್ದೇನೆ, ಅವರು ಮುಂದಿನ ಮೂರೂವರೆ ವರ್ಷ ರಾಜ್ಯದ ಜನರಿಗೆ ಉತ್ತಮ ಆಡಳಿತ ನೀಡಲು ಸಹಕಾರ ನೀಡಬೇಕು. ಈ ಬಾರಿ ಬಜೆಟ್‌ನಲ್ಲಿ ಒಂದಷ್ಟು ವಿಶೇಷ ಕಾರ್ಯಕ್ರಮಗಳನ್ನು ಜಾರಿಗೆ ತರುವ ಉದ್ದೇಶವಿದೆ. ಅಲ್ಪಸಂಖ್ಯಾತರು, ಹಿಂದುಳಿದವರು, ಪರಿಶಿಷ್ಟಜಾತಿ ಮತ್ತು ಪರಿಶಿಷ್ಟ ವರ್ಗದವರೂ ಸೇರಿ ಸರ್ವರ ಕಲ್ಯಾಣಕ್ಕೆ ಪೂರಕವಾದ ಕಾರ್ಯಕ್ರಮಗಳನ್ನು ಹೊಂದಿರುವ ಜನಪರ ಬಜೆಟ್‌ ಘೋಷಣೆ ಮಾಡಲಾಗುತ್ತದೆ ಎಂದು ಇದೇ ವೇಳೆ ಯಡಿಯೂರಪ್ಪ ಹೇಳಿದರು.

ಮುಂದಿನ ಮೂರೂವರೆ ವರ್ಷ ನಾವು ಅಭಿವೃದ್ಧಿ ಪರ, ಮಾದರಿ, ಸ್ಥಿರ ಸರ್ಕಾರ ನೀಡಲಿದ್ದೇವೆ. ಮುಂದಿನ ವಿಧಾನಸಭಾ ಚುನಾವಣೆಯಲ್ಲಿ ಬಿಜೆಪಿ 150 ಸ್ಥಾನಗಳನ್ನು ಗೆಲ್ಲಬೇಕು ಎನ್ನುವ ನಿಟ್ಟಿನಲ್ಲಿ ಉಳಿದ ಅವಧಿಯಲ್ಲಿ ಸರ್ಕಾರ ಅಭಿವೃದ್ಧಿ ಕಾರ್ಯಗಳನ್ನು ಹಮ್ಮಿಕೊಳ್ಳಲಿದೆ ಎಂದರು.

ನಮ್ಮ ಲೆಕ್ಕಾಚಾರ ಉಲ್ಟಾಆಗಲ್ಲ. ನಾವು ಬಹುಮತ ಗಳಿಸುವ ನಿರೀಕ್ಷೆ ಇದೆ. 15 ಕ್ಷೇತ್ರಗಳ ಪೈಕಿ ಬಿಜೆಪಿ 13 ಸ್ಥಾನಗಳಲ್ಲಿ ಗೆಲ್ಲುವ ಎಲ್ಲ ಸೂಚನೆ ನಮಗೆ ಸಿಕ್ಕಿದೆ. ಜೆಡಿಎಸ್‌ ಮತ್ತು ಕಾಂಗ್ರೆಸ್‌ ತಲಾ ಒಂದು ಸ್ಥಾನ ಗೆಲ್ಲಲಿವೆ.

- ಬಿ.ಎಸ್‌.ಯಡಿಯೂರಪ್ಪ, ಮುಖ್ಯಮಂತ್ರಿ