ಅಕ್ಷಯ ತೃತೀಯದಂದು ಹಿಂದೂ ಅಂಗಡಿಗಳಲ್ಲೇ ಚಿನ್ನ ಖರೀದಿಸಿ, ಮುಸ್ಲಿಂ ವರ್ತಕರ ವಿರುದ್ಧ ಅಭಿಯಾನ!
* ದೇವಸ್ಥಾನಗಳಲ್ಲಿನ ಜಾತ್ರೆ, ಮಾವು ವ್ಯಾಪಾರದಲ್ಲಿ ಮುಸ್ಲಿಂ ವ್ಯಾಪಾರಿಗಳಿಗೆ ನಿರ್ಬಂಧ
* ಅಕ್ಷಯ ತೃತೀಯದಂದು ಖರೀದಿಸುವ ಚಿನ್ನದ ವಿಚಾರದಲ್ಲೂ ಹಿಂದೂಪರ ಸಂಘಟನೆಗಳು ಅಭಿಯಾನ
* ಎಲ್ಲ ಹಿಂದೂಗಳು ಹಿಂದೂ ಮಾಲೀಕತ್ವದ ಆಭರಣದ ಅಂಗಡಿಗಳಲ್ಲೇ ಚಿನ್ನ ಖರೀದಿಸಬೇಕು
ಬಾಗಲಕೋಟೆ(ಏ.25): ದೇವಸ್ಥಾನಗಳಲ್ಲಿನ ಜಾತ್ರೆ, ಮಾವು ವ್ಯಾಪಾರದಲ್ಲಿ ಮುಸ್ಲಿಂ ವ್ಯಾಪಾರಿಗಳಿಗೆ ನಿರ್ಬಂಧ, ಹಲಾಲ್-ಝಟ್ಕಾ ಕಟ್ ಮಾಂಸ ಖರೀದಿ ಅಭಿಯಾನಗಳ ಬಳಿಕ ಇದೀಗ ಅಕ್ಷಯ ತೃತೀಯದಂದು ಖರೀದಿಸುವ ಚಿನ್ನದ ವಿಚಾರದಲ್ಲೂ ಹಿಂದೂಪರ ಸಂಘಟನೆಗಳು ಅಭಿಯಾನ ಪ್ರಾರಂಭಿಸಿವೆ. ಎಲ್ಲ ಹಿಂದೂಗಳು ಹಿಂದೂ ಮಾಲೀಕತ್ವದ ಆಭರಣದ ಅಂಗಡಿಗಳಲ್ಲೇ ಚಿನ್ನ ಖರೀದಿಸಬೇಕು ಎಂದು ಕರೆ ನೀಡಿವೆ. ಮುಸ್ಲಿಮರ ಅಂಗಡಿಯಲ್ಲಿ ಖರೀದಿಸಿದ ಚಿನ್ನದ ಲಾಭಾಂಶದ ಪಾಲು ಕೇರಳದಲ್ಲಿ ಲವ್ ಜಿಹಾದ್, ಮತಾಂತರಗಳಿಗೆ ಬಳಕೆಯಾಗುತ್ತದೆ ಎಂದು ಆರೋಪಿಸಿವೆ.
ಈ ಬಗ್ಗೆ ಟ್ವೀಟರ್‌ನಲ್ಲಿ ಪ್ರಾರಂಭವಾಗಿರುವ ಅಭಿಯಾನಕ್ಕೆ ಶ್ರೀರಾಮಸೇನೆ ಬೆಂಬಲ ವ್ಯಕ್ತಪಡಿಸಿದೆ. ಬಾಗಲಕೋಟೆಯಲ್ಲಿ ಸುದ್ದಿಗಾರರೊಂದಿಗೆ ಮಾತನಾಡಿರುವ ಶ್ರೀರಾಮ ಸೇನೆಯ ಸಂಸ್ಥಾಪಕ ಪ್ರಮೋದ್ ಮುತಾಲಿಕ್, ಯಾವೊಬ್ಬ ಹಿಂದೂ ಕೂಡ ರಾಜ್ಯದಲ್ಲಿ ಇರುವ ಕೇರಳ ಮೂಲದ ಮುಸ್ಲಿಮರ ಜ್ಯುವೆಲ್ಲರಿ ಶಾಪ್‌ಗಳಲ್ಲಿ ಚಿನ್ನ ಖರೀದಿಸಬಾರದು. ಕೇರಳದಲ್ಲಿ 800 ಹಿಂದೂಗಳ ಕೊಲೆಯಾಗಿದೆ. ದಿನಬೆಳಗಾದರೆ ಲವ್ ಜಿಹಾದ್ ಪ್ರಕರಣಗಳು ನಡೆಯುತ್ತಿವೆ. ಕೇರಳದ 12 ಸಾವಿರ ಹಿಂದೂ ಹುಡುಗಿಯರನ್ನು ಮುಸ್ಲಿಂ ಧರ್ಮಕ್ಕೆ ಮತಾಂತರ ಮಾಡಲಾಗಿದೆ. ಇಂಥದರಲ್ಲಿ ಕೇರಳ ಮೂಲದ ಮುಸ್ಲಿಮರ ಅಂಗಡಿಯಲ್ಲಿ ಚಿನ್ನ ಖರೀದಿಸಿದರೆ, ನಮ್ಮ ತಲೆ ಮೇಲೆ ನಾವೇ ಚಪ್ಪಡಿ ಎಳೆದುಕೊಂಡಂತಾಗುತ್ತದೆ ಎಂದು ಹೇಳಿದರು.
ಕಲಬುರಗಿಯ ಆಳಂದದಲ್ಲಿ ಮಾತನಾಡಿರುವ ಶ್ರೀರಾಮಸೇನೆಯ ರಾಜ್ಯಾಧ್ಯಕ್ಷ ಆಂದೋಲಶ್ರೀ, ಅಕ್ಷಯ ತೃತೀಯದಂದು ಹಿಂದೂಗಳು ಸಾವಿರಾರು ಕೋಟಿ ರು. ವ್ಯವಹಾರ ಮಾಡುತ್ತಾರೆ. ಕರೀನಾ ಕಪೂರ್‌ರಂತವರನ್ನು ಇಟ್ಟುಕೊಂಡು ಜಾಹೀರಾತು ಮಾಡುತ್ತಿರುವ ಕೇರಳ ಮೂಲದ ಚಿನ್ನಾಭರಣ ಮಳಿಗೆ ಸಂಸ್ಥೆಯಲ್ಲಿ ವ್ಯಾಪಾರ ಮಾಡುವುದರಿಂದ ರಾಷ್ಟ್ರಕ್ಕೆ ಅಪಾಯ ಕಟ್ಟಿಟ್ಟಬುತ್ತಿ. ಕೇರಳದಲ್ಲಿ ಹಿಂದೂಧರ್ಮೀಯರ ಮೇಲೆ ನಡೆದಿರುವ ದೌರ್ಜನ್ಯಗಳಿಗೆ ಇಂತಹ ದೊಡ್ಡ ದೊಡ್ಡ ವ್ಯಾಪಾರಿಗಳು ಬೆಂಗಾವಲಾಗಿ ನಿಂತಿದ್ದಾರೆ ಎಂದು ಆರೋಪಿಸಿದ್ದಾರೆ. ಇದೇವೇಳೆ ಈ ಅಭಿಯಾನಕ್ಕೂ ಬಿಜೆಪಿಗೂ ಯಾವುದೇ ಸಂಬಂಧ ಇಲ್ಲ. ಇದು ನಮ್ಮ ಸಂಘಟನೆಯ ಹೋರಾಟ ಎಂದು ಅವರು ಸ್ಪಷ್ಟಪಡಿಸಿದ್ದಾರೆ.
ಒಳ್ಳೆಯ ರೇಟ್ ಇರುವೆಡೆ ಜನರು ಖರೀದಿಸ್ತಾರೆ: ಕತ್ತಿ
ಅಕ್ಷಯ ತೃತೀಯ ವೇಳೆ ಬಂಗಾರ ಯಾರಿಂದ ಖರೀದಿ ಮಾಡಬೇಕು ಎಂಬಿತ್ಯಾದಿ ವಿಚಾರ ಚರ್ಚೆ ಮಾಡುವ ಅವಶ್ಯಕತೆ ಇಲ್ಲ. ಯಾರು ಒಳ್ಳೆಯ ರೇಟ್ ಕೊಡುತ್ತಾರೆ, ಯಾರು ಒಳ್ಳೆಯದ್ದನ್ನು ಕೊಡುತ್ತಾರೋ ಅವರ ಬಳಿ ಜನ ತೆಗೆದುಕೊಳ್ಳುತ್ತಾರೆ ಎಂದು ಸಚಿವ ಉಮೇಶ್ ಕತ್ತಿ ವಿಜಯಪುರದಲ್ಲಿ ತಿಳಿಸಿದ್ದಾರೆ.