ಬೆಂಗಳೂರು(ಏ.07): ಸಾರಿಗೆ ನಿಗಮಗಳ ನೌಕರರನ್ನು ಸರ್ಕಾರಿ ನೌಕರರನ್ನಾಗಿ ಪರಿಗಣಿಸಬೇಕು ಹಾಗೂ ಆರನೇ ವೇತನ ಆಯೋಗದ ಶಿಫಾರಸು ಮಾದರಿಯಲ್ಲಿ ವೇತನ ಹೆಚ್ಚಳ ಮಾಡಬೇಕು ಎಂದು ಆಗ್ರಹಿಸಿ ರಾಜ್ಯದ ನಾಲ್ಕು ಸಾರಿಗೆ ನಿಗಮಗಳ ನೌಕರರು ಬುಧವಾರದಿಂದ ಸೇವೆ ಬಹಿಷ್ಕರಿಸಿ ಅನಿರ್ಧಿಷ್ಟಾವಧಿ ಮುಷ್ಕರ ಆರಂಭಿಸಲಿದ್ದಾರೆ. ತನ್ಮೂಲಕ 4 ತಿಂಗಳ ಬಳಿಕ ಮತ್ತೊಮ್ಮೆ ರಾಜ್ಯಾದ್ಯಂತ ಸಾರಿಗೆ ಬಂದ್‌ ಆಗುತ್ತಿದೆ.

6ನೇ ವೇತನ ಆಯೋಗದ ರೀತಿಯಲ್ಲಿ ವೇತನ ಏರಿಕೆ ಸಾಧ್ಯವಿಲ್ಲ. ಮಾತ್ರವಲ್ಲ, ಈ ಕುರಿತು ಸಾರಿಗೆ ನೌಕರರೊಂದಿಗೆ ಸಂಧಾನ ಮಾತುಕತೆಯನ್ನೂ ನಡೆಸುವುದಿಲ್ಲ ಎಂದು ಸರ್ಕಾರ ಸ್ಪಷ್ಟಪಡಿಸಿದೆ. ಈ ಹಿನ್ನೆಲೆಯಲ್ಲಿ ಬುಧವಾರದಿಂದ ಸಾರಿಗೆ ಮುಷ್ಕರ ಖಚಿತವಾಗಿದ್ದು, ಸಾರ್ವಜನಿಕ ಸಾರಿಗೆಯನ್ನೇ ನೆಚ್ಚಿಕೊಂಡಿರುವ ಸಾರ್ವಜನಿಕರು ಪರದಾಡಬೇಕಾದ ಪರಿಸ್ಥಿತಿ ಸೃಷ್ಟಿಯಾಗುವ ಸಾಧ್ಯತೆ ಇದೆ.

ಕಳೆದ ಡಿ.11ರಂದು ಏಕಾಏಕಿ ಮುಷ್ಕರ ನಡೆಸಿದ್ದ ಸಾರಿಗೆ ನೌಕರರು ಸರ್ಕಾರಕ್ಕೆ ನೀಡಿರುವ ಗಡುವು ಮುಕ್ತಾಯವಾಗಿದ್ದರೂ 6ನೇ ವೇತನ ಆಯೋಗ ಅನುಷ್ಠಾನ ಮಾಡಿಲ್ಲ. ಹೀಗಾಗಿ ರಾಜ್ಯಾದ್ಯಂತ ಎಲ್ಲಾ ನಿಗಮಗಳ ಸಾರ್ವಜನಿಕ ಸಾರಿಗೆ ಸಂಚಾರವನ್ನೂ ಸ್ಥಗಿತಗೊಳಿಸಿ ಮುಷ್ಕರ ಹೂಡುತ್ತಿದ್ದೇವೆ ಎಂದು ಕರ್ನಾಟಕ ರಾಜ್ಯ ರಸ್ತೆ ಸಾರಿಗೆ ನೌಕರರ ಕೂಟ ಸ್ಪಷ್ಟಪಡಿಸಿದೆ.

ಕ್ರಮಕ್ಕೆ ಸಿಎಂ ಸೂಚನೆ:

ಮಂಗಳವಾರ ಬೆಳಗ್ಗೆ ಮುಖ್ಯಮಂತ್ರಿ ಬಿ.ಎಸ್‌.ಯಡಿಯೂರಪ್ಪ ನೇತೃತ್ವದಲ್ಲಿ ಸಾರಿಗೆ ನೌಕರರ ಬೇಡಿಕೆಗಳ ಬಗ್ಗೆ ಮಹತ್ವದ ಸಭೆ ನಡೆಸಲಾಯಿತು. ಈ ವೇಳೆ ನೌಕರರ ಬೇಡಿಕೆಗಳ ಈಡೇರಿಕೆಗೆ ಮುಖ್ಯಮಂತ್ರಿಯವರು ಒಪ್ಪಿಲ್ಲ. ಬದಲಿಗೆ ಮುಷ್ಕರದಲ್ಲಿ ತೊಡಗುವ ನೌಕರರ ಮೇಲೆ ಕ್ರಮ ಕೈಗೊಳ್ಳುವಂತೆ ಸೂಚಿಸಿದ್ದಾರೆ ಎನ್ನಲಾಗಿದೆ.

ಈ ಹಿನ್ನೆಲೆಯಲ್ಲಿ ಸಭೆ ಬಳಿಕ ಮಾತನಾಡಿದ ಸರ್ಕಾರದ ಮುಖ್ಯ ಕಾರ್ಯದರ್ಶಿ ಪಿ. ರವಿಕುಮಾರ್‌, ವೇತನ ಆಯೋಗ ಶಿಫಾರಸಿನಂತೆ ವೇತನ ಹೆಚ್ಚಳ ಅಸಾಧ್ಯ. ಬದಲಿಗೆ ನೌಕರರಿಗೆ ಶೇ.8ರಷ್ಟುವೇತನ ಹೆಚ್ಚಳ ಮಾಡುತ್ತೇವೆ. ಈ ಬಗ್ಗೆ ನೌಕರರ ಕೂಟದೊಂದಿಗೆ ಸಂಧಾನ ಮಾತುಕತೆ ನಡೆಸುವುದಿಲ್ಲ. ನೌಕರರು ಮುಷ್ಕರ ಹೂಡಿದರೆ ‘ಅಗತ್ಯ ಸೇವೆ ಹಾಗೂ ಸಾರ್ವಜನಿಕ ಉಪಯುಕ್ತ ಸೇವಾ ಕಾಯ್ದೆ’ (ಎಸ್ಮಾ) ಅಡಿ ಕಠಿಣ ಕ್ರಮ ಕೈಗೊಳ್ಳುತ್ತೇವೆ ಎಂದು ಎಚ್ಚರಿಕೆ ನೀಡಿದರು.

ಇದರ ಬೆನ್ನಲ್ಲೇ ಸಾರಿಗೆ ಇಲಾಖೆ ಹಾಗೂ ವಿವಿಧ ನಿಮಗಳ ವ್ಯವಸ್ಥಾಪಕ ನಿರ್ದೇಶಕರು, ಖಾಸಗಿ ಬಸ್ಸುಗಳು ಹಾಗೂ ತರಬೇತಿ ನಿರತ ಚಾಲಕರ ಮೂಲಕ ಪರ್ಯಾಯ ಸಾರಿಗೆ ವ್ಯವಸ್ಥೆ ಮಾಡಲಾಗುವುದು. ಖಾಸಗಿ ಬಸ್ಸುಗಳು, ಟೆಂಪೋಟ್ರಾವಲರ್‌ ಸೇರಿದಂತೆ ಯಾವುದೇ ಖಾಸಗಿ ಬಸ್ಸುಗಳಿಗೂ ರಸ್ತೆ ಪರವಾನಗಿ ಕೇಳುವುದಿಲ್ಲ ಎಂದು ಘೋಷಿಸಿದೆ. ಈ ಹಿನ್ನೆಲೆಯಲ್ಲಿ ಸರ್ಕಾರ ಹಾಗೂ ನೌಕರರ ನಡುವಿನ ಸಂಘರ್ಷ ಕುತೂಹಲ ಕೆರಳಿಸಿದೆ.

ಮುಷ್ಕರ ಖಚಿತ- ಕೋಡಿಹಳ್ಳಿ:

ಕರ್ನಾಟಕ ರಾಜ್ಯ ರಸ್ತೆ ಸಾರಿಗೆ ನೌಕರರ ಕೂಟದ ಗೌರವಾಧ್ಯಕ್ಷ ಕೋಡಿಹಳ್ಳಿ ಚಂದ್ರಶೇಖರ್‌ ಮಾತನಾಡಿ, ಡಿಸೆಂಬರ್‌ನಲ್ಲೇ ಸರ್ಕಾರಕ್ಕೆ ಮೂರು ತಿಂಗಳ ಗಡುವು ನೀಡಿದ್ದೆವು. ಮಾ.15ಕ್ಕೆ ಗಡುವು ಮುಕ್ತಾಯಗೊಂಡಿದ್ದರಿಂದ ಮಾ.16ಕ್ಕೆ ಬೇಡಿಕೆ ಈಡೇರಿಸದಿದ್ದರೆ 22 ದಿನಗಳಲ್ಲಿ ಮುಷ್ಕರ ನಡೆಸುವುದಾಗಿ ನೋಟಿಸ್‌ ನೀಡಿದ್ದೆವು. ಹೀಗಿದ್ದರೂ ಬೇಡಿಕೆ ಈಡೇರಿಸದೆ ಚುನಾವಣಾ ನೀತಿ ಸಂಹಿತೆ ನೆಪವೊಡ್ಡುತ್ತಿದ್ದಾರೆ. ಶೇ.8ರಷ್ಟುವೇತನ ಹೆಚ್ಚಳ ಮಾಡುತ್ತೇವೆ ಎಂದು ಘೋಷಿಸಲು ಅಡ್ಡಿಯಾಗದ ನೀತಿ ಸಂಹಿತೆ, 6ನೇ ವೇತನ ಆಯೋಗದ ಜಾರಿಗೆ ಅಡ್ಡಿಯಾಗುತ್ತದೆಯೇ? ಮುಷ್ಕರ ಖಚಿತ ಎಂದು ಸ್ಪಷ್ಟಪಡಿಸಿದರು.

ಹಟ ಮಾಡದೆ ಮುಷ್ಕರ ಕೈಬಿಡಿ

ಸಾರಿಗೆ ನೌಕರರ 9 ಬೇಡಿಕೆಗಳ ಪೈಕಿ 8ನ್ನು ಈಡೇರಿಸಿದ್ದೇವೆ. ನೌಕರರು ಹಟ ಮಾಡದೆ ಮುಷ್ಕರ ಕೈಬಿಡಬೇಕು. ಸರ್ಕಾರ ಬಿಗಿ ಕ್ರಮ ಕೈಗೊಳ್ಳಲು ಅವಕಾಶ ನೀಡಬಾರದು. ಮುಷ್ಕರ ಮುಂದುವರಿಸಿದರೆ ಪರಾರ‍ಯಯ ವ್ಯವಸ್ಥೆ ಆಗಿದೆ.

- ಬಿ.ಎಸ್‌.ಯಡಿಯೂರಪ್ಪ, ಮುಖ್ಯಮಂತ್ರಿ

ನಿಮ್ಮ ಮಗನಾಗಿ ಕೇಳಿಕೊಳ್ಳುತ್ತೇನೆ

ನೀವು ಕೇಳುವುದರಲ್ಲಿ ನ್ಯಾಯವಿದೆ. ಆದರೆ, ಕೇಳುತ್ತಿರುವ ಸಮಯ ಸರಿಯಿಲ್ಲ. ನಿಮ್ಮ ಬೇಡಿಕೆ ಒಪ್ಪಿದ್ದೇವೆ. ಹಟದಿಂದ ಸರ್ಕಾರವನ್ನು ಬಗ್ಗಿಸುತ್ತೇವೆ ಎಂಬ ಧೋರಣೆ ಬಿಡಿ. ನಿಮ್ಮ ಮಗನಾಗಿ ಕೇಳಿಕೊಳ್ಳುತ್ತೇನೆ, ಕರ್ತವ್ಯಕ್ಕೆ ಹಾಜರಾಗಿ.

- ಲಕ್ಷ್ಮಣ ಸವದಿ, ಸಾರಿಗೆ ಸಚಿವ

ವೇತನ ಏರಿಕೆಗೆ ಕುಂಟು ನೆಪ

ಸರ್ಕಾರ ಚುನಾವಣೆ ನೀತಿ ಸಂಹಿತೆಯ ನೆಪ ಹೇಳುತ್ತಿದೆ. ಶೇ.8ರಷ್ಟುವೇತನ ಹೆಚ್ಚಳ ಮಾಡುತ್ತೇವೆ ಎಂದು ಘೋಷಿಸಲು ಅಡ್ಡಿಯಾಗದ ನೀತಿ ಸಂಹಿತೆ, 6ನೇ ವೇತನ ಆಯೋಗದ ಜಾರಿಗೆ ಅಡ್ಡಿಯಾಗುತ್ತದೆಯೇ? ಮುಷ್ಕರ ಖಚಿತ.

- ಕೋಡಿಹಳ್ಳಿ ಚಂದ್ರಶೇಖರ್‌ ಸಾರಿಗೆ ನೌಕರರ ಕೂಟದ ಗೌರವಾಧ್ಯಕ್ಷ

ಮುಷ್ಕರಕ್ಕೆ 1.3 ಲಕ್ಷ ನೌಕರರು

ರಾಜ್ಯದ 4 ಸಾರಿಗೆ ನಿಗಮಗಳಲ್ಲಿನ ರಾಜ್ಯದ 226 ಘಟಕಗಳಲ್ಲಿ ಕೆಲಸ ಮಾಡುತ್ತಿರುವ ಚಾಲಕ, ನಿರ್ವಾಹಕ ಸೇರಿ 1.3 ಲಕ್ಷ ನೌಕರರು ಮುಷ್ಕರದಲ್ಲಿ ಪಾಲ್ಗೊಂಡಿದ್ದಾರೆ. ಅಲ್ಲದೆ, ಬುಧವಾರ ಬೆಳಗ್ಗೆಯಿಂದಲೇ ಬಸ್‌ಗಳು ಡಿಪೋದಿಂದ ಕದಲದಂತೆ ಮಾಡಲು ನಿರ್ಧರಿಸಲಾಗಿದೆ.

ನೌಕರರ ಬೇಡಿಕೆಗಳೇನು?

ಸಾರಿಗೆ ನಿಗಮಗಳ ನೌಕರರನ್ನೂ ಸರ್ಕಾರಿ ನೌಕರರನ್ನಾಗಿ ಪರಿಗಣಿಸಬೇಕು ಎಂಬುದು ಸೇರಿ 10 ಬೇಡಿಕೆಗಳನ್ನು ಮುಂದಿಟ್ಟುಕೊಂಡು ಸಾರಿಗೆ ನೌಕರರು ಡಿಸೆಂಬರ್‌ನಲ್ಲಿ ಮುಷ್ಕರ ನಡೆಸಿದ್ದರು. ಈ ವೇಳೆ ಸರ್ಕಾರವು ನಿಗಮಗಳ ನೌಕರರನ್ನು ಸರ್ಕಾರಿ ನೌಕರರನ್ನಾಗಿಸಲು ಸಾಧ್ಯವಿಲ್ಲ ಎಂದು ಸ್ಪಷ್ಟಪಡಿಸಿತ್ತು. ಉಳಿದ 9 ಬೇಡಿಕೆಗಳನ್ನು ಈಡೇರಿಸಲು 3 ತಿಂಗಳ ಕಾಲಾವಕಾಶ ಕೇಳಿತ್ತು. ಅದರಂತೆ ಸರ್ಕಾರ ಕರೊನಾದಿಂದ ಮೃತಪಟ್ಟಸಾರಿಗೆ ನೌಕರರ ಕುಟುಂಬದವರಿಗೆ 30 ಲಕ್ಷ ರೂ. ಪರಿಹಾರ ನೀಡುವುದು, ವಿವಿಧ ಭತ್ಯೆಗಳನ್ನು ಕೊಡುವುದು, ಅಧಿಕಾರಿಗಳ ಕಿರುಕುಳ ತಪ್ಪಿಸಲು ಕ್ರಮ ಸೇರಿ 8 ಬೇಡಿಕೆಗಳನ್ನು ಈಗಾಗಲೆ ಈಡೇರಿಸಿ ಆದೇಶಿಸಿದೆ. ಆದರೆ, 6ನೇ ವೇತನ ಆಯೋಗದ ಶಿಫಾರಸು ಜಾರಿ ಮಾಡಲು ಕ್ರಮ ಕೈಗೊಂಡಿಲ್ಲ.

4 ಸಾವಿರ ಕೋಟಿ ಹೊರೆ

ನೌಕರರಿಗೆ 6ನೇ ವೇತನ ಆಯೋಗದ ಶಿಫಾರಸು ಜಾರಿ ಮಾಡಿದರೆ ನೌಕರರ ಈಗಿನ ಮೂಲ ವೇತನ ಶೇ. 70ರಿಂದ 80 ಹೆಚ್ಚಳವಾಗಲಿದೆ. ಅದರಿಂದ ಸಾರಿಗೆ ನಿಗಮಗಳಿಗೆ ವಾರ್ಷಿಕ 4 ಸಾವಿರ ಕೋಟಿ ರು. ನಷ್ಟವುಂಟಾಗುತ್ತದೆ. ಹೀಗಾಗಿ ವೇತನ ಆಯೋಗದ ಶಿಫಾರಸು ಜಾರಿ ಮಾಡಲು ಸರ್ಕಾರ ಹಿಂದೇಟು ಹಾಕುತ್ತಿದೆ ಎಂದು ಸಾರಿಗೆ ಇಲಾಖೆ ಮೂಲಗಳು ತಿಳಿಸಿವೆ.

ಜನತೆಗೆ ಸಲಹೆ

- ಸಾರ್ವಜನಿಕ ಸಾರಿಗೆ ನೆಚ್ಚಿಕೊಂಡು ಹೊರ ಬರುವ ಮೊದಲು ಯೋಚಿಸಿ

- ಸ್ವಂತ ವಾಹನ ಅಥವಾ ಪರ್ಯಾಯ ಸಾರಿಗೆ ವ್ಯವಸ್ಥೆ ಮಾಡಿಕೊಳ್ಳುವುದು ಉತ್ತಮ

- ಖಾಸಗಿ ವಾಹನ, ಆಟೋಗಳಿಂದ ದುಬಾರಿ ಶುಲ್ಕ ವಸೂಲಿ ಸಾಧ್ಯತೆ

- ನಿಯಮಬಾಹಿರವಾಗಿ ದುಬಾರಿ ಶುಲ್ಕ ವಸೂಲಿ ಮಾಡಿದರೆ ಪೊಲೀಸರಿಗೆ ದೂರು ನೀಡಿ