ಬೆಂಗಳೂರು(ಆ.02):ಕೊರೋನಾ ಸೋಂಕು ಹಿನ್ನೆಲೆಯಲ್ಲಿ ಬಿಎಂಟಿಸಿ ಬಸ್‌ ಏರಲು ಹಿಂದೇಟು ಹಾಕುತ್ತಿದ್ದ ಜನರು, ಇದೀಗ ನಿಧಾನವಾಗಿ ಬಸ್‌ ಪ್ರಯಾಣ ಆರಂಭಿಸಿರುವ ಸೂಚನೆಗಳಿವೆ. ಎರಡು ತಿಂಗಳ ಹಿಂದೆ ಎರಡು ಕೇವಲ 2 ಲಕ್ಷಕ್ಕೆ ಕುಸಿದಿದ್ದ ಪ್ರಯಾಣಿಕರ ಸಂಖ್ಯೆ ಇದೀಗ ಸುಮಾರು 8 ಲಕ್ಷಕ್ಕೆ ಏರಿಕೆಯಾಗಿದೆ.

ಕೊರೋನಾ ಸೋಂಕು ನಿಯಂತ್ರಣ ಸಂಬಂಧ ರಾಜ್ಯ ಸರ್ಕಾರ ಮಾರ್ಚ್‌ನಿಂದ ಮೇ ವರೆಗೆ ಲಾಕ್‌ಡೌನ್‌ ಜಾರಿ ಮಾಡಿದ್ದ ಪರಿಣಾಮ ಬಸ್‌ ಸೇವೆ ಸ್ಥಗಿತಗೊಳಿಸಲಾಗಿತ್ತು. ಲಾಕ್‌ಡೌನ್‌ ಸಡಿಲಿಕೆ ಬಳಿಕ ಮತ್ತೆ ಬಸ್‌ ಸೇವೆ ಪುನರಾರಂಭಿಸಿದ್ದ ಬಿಎಂಟಿಸಿಗೆ ಪ್ರಯಾಣಿಕರ ಕೊರತೆ ಎದುರಾಗಿತ್ತು. ಕೊರೋನಾ ಪೂರ್ವದಲ್ಲಿ ನಿತ್ಯ 35 ಲಕ್ಷ ಮಂದಿ ಬಿಎಂಟಿಸಿ ಬಸ್‌ಗಳಲ್ಲಿ ಸಂಚರಿಸುತ್ತಿದ್ದರು. ಬಸ್‌ ಸೇವೆ ಪುನರಾರಂಭದ ಬಳಿಕ ಜನರು ಕೊರೋನಾ ಸೋಂಕು ಹರಡುವ ಭೀತಿಯಲ್ಲಿ ಬಸ್‌ಗಳಿಂದ ದೂರು ಉಳಿದ್ದರು.

BMTC ನೌಕರರಿಗಾಗಿ ಶೀಘ್ರ ಕೊರೋನಾ ಆರೈಕೆ ಕೇಂದ್ರ

3 ಸಾವಿರ ಬಸ್‌ ಕಾರ್ಯಾಚರಣೆ: 

ಬಿಎಂಟಿಸಿಯು ಒಟ್ಟು 6,500 ಬಸ್‌ಗಳನ್ನು ಹೊಂದಿದ್ದು, 2,500 ಬಸ್‌ಗಳನ್ನು ಕಾರ್ಯಾಚರಣೆ ಮಾಡುತ್ತಿದೆ. ಇದರೊಂದಿಗೆ 500 ಬಸ್‌ಗಳನ್ನು ಕೊರೋನಾ ತುರ್ತು ಹಾಗೂ ಅಗತ್ಯ ಸೇವೆಗಳಿಗೆ ನಿಯೋಜಿಸಿದೆ. ಇದೀಗ ದಿನಗಳೆದಂತೆ ಬಸ್‌ಗಳಿಗೆ ಪ್ರಯಾಣಿಕರ ಸಂಖ್ಯೆ ಏರಿಕೆಯಾಗುತ್ತಿರುವುದು ಸಂಕಷ್ಟದಲ್ಲಿರುವ ನಿಗಮಕ್ಕೆ ಸಂಜೀವಿನಿ ಸಿಕ್ಕಂತಾಗಿದೆ.

ರಾತ್ರಿ 10ರವರೆಗೂ ಬಸ್‌ ಸೇವೆ ಲಭ್ಯ

ರಾಜ್ಯ ಸರ್ಕಾರ ಭಾನುವಾರ ಲಾಕ್‌ಡೌನ್‌ ಹಿಂಪಡೆದಿರುವುದರಿಂದ ಇನ್ನು ಮುಂದೆ ಭಾನುವಾರವೂ ನಗರದಲ್ಲಿ ಬಿಎಂಟಿಸಿ ಬಸ್‌ ಸೇವೆ ಲಭ್ಯವಾಗಲಿದೆ. ಅಂತೆಯೆ ರಾತ್ರಿ ಕರ್ಫ್ಯೂ ತೆರವುಗೊಳಿಸಿರುವುದರಿಂದ ರಾತ್ರಿ 10ರ ವರೆಗೂ ಬಸ್‌ ಸೇವೆ ಮುಂದುವರಿಸಲು ಬಿಎಂಟಿಸಿ ತೀರ್ಮಾನಿಸಿದೆ.