ಬೆಂಗಳೂರು [ಅ.26]:  ರಾಜ್ಯದ ಅಂಗನವಾಡಿ ಕಾರ್ಯಕರ್ತೆಯರು, ಮಿನಿ ಅಂಗನವಾಡಿ ಕಾರ್ಯಕರ್ತೆಯರು ಹಾಗೂ ಸಹಾಯಕಿಯರಿಗೆ ಗೌರವ ಧನ ಹೆಚ್ಚಳ ಮಾಡುವ ಮೂಲಕ ಮಹಿಳಾ ಮತ್ತು ಮಕ್ಕಳ ಕಲ್ಯಾಣ ಇಲಾಖೆಯು ದೀಪಾವಳಿ ಹಬ್ಬಕ್ಕೆ ಕೊಡುಗೆ ನೀಡಿದೆ. ಅಂಗನವಾಡಿ ಕಾರ್ಯಕರ್ತೆಯರಿಗೆ 2 ಸಾವಿರ ರು., ಮಿನಿ ಅಂಗನವಾಡಿ ಕಾರ್ಯಕರ್ತೆಯರಿಗೆ 1,250 ರು. ಮತ್ತು ಸಹಾಯಕರಿಗೆ 1 ಸಾವಿರ ರು. ಗೌರವ ಧನ ಹೆಚ್ಚಳ ಮಾಡಲಾಗಿದೆ.

ಮಾಸಿಕ ಗೌರವ ಧನ ಹೆಚ್ಚಳ ಮಾಡುವಂತೆ ಹಲವು ದಿನಗಳಿಂದ ಅಂಗನವಾಡಿ ಕಾರ್ಯಕರ್ತೆಯರು ಬೇಡಿಕೆ ಇಟ್ಟಿದ್ದರು. ಅವರ ಬೇಡಿಕೆಗಳಿಗೆ ಸರ್ಕಾರವು ಸಕಾರಾತ್ಮಕವಾಗಿ ಸ್ಪಂದಿಸಿದ್ದು, 2018ರ ಅ.1ರಿಂದ ಪೂರ್ವಾನ್ವಯವಾಗುವಂತೆ ಹೆಚ್ಚಳ ಮಾಡಲಾಗಿದೆ ಎಂದು ಮಹಿಳಾ ಮತ್ತು ಮಕ್ಕಳ ಕಲ್ಯಾಣ ಸಚಿವೆ ಶಶಿಕಲಾ ಜೊಲ್ಲೆ ತಿಳಿಸಿದ್ದಾರೆ.

ವಿಕಾಸಸೌಧದಲ್ಲಿ ಶುಕ್ರವಾರ ಸುದ್ದಿಗೋಷ್ಠಿಯಲ್ಲಿ ಮಾತನಾಡಿದ ಅವರು, ಅಂಗನವಾಡಿ ಕಾರ್ಯಕರ್ತೆಯರಿಗೆ ಪ್ರಸ್ತುತ 8 ಸಾವಿರ ರು. ಮಾಸಿಕ ಗೌರವಧನ ನೀಡಲಾಗುತ್ತಿದೆ. ಪರಿಷ್ಕರಣೆ ಬಳಿಕ ಅವರು 10 ಸಾವಿರ ರು. ಗೌರವ ಧನ ಪಡೆದುಕೊಳ್ಳಲಿದ್ದಾರೆ. ಮಿನಿ ಅಂಗನವಾಡಿ ಕಾರ್ಯಕರ್ತೆಯರು 4750 ರು. ಗೌರವಧನ ಪಡೆಯುತ್ತಿದ್ದು, ಈಗ 6 ಸಾವಿರ ರು.ಗೆ ಹೆಚ್ಚಳವಾಗಿದೆ. ಸಹಾಯಕಿಯರಿಗೆ 4 ಸಾವಿರ ರು.ನಿಂದ 5 ಸಾವಿರ ರು.ಗೆ ಗೌರವಧನ ಹೆಚ್ಚಳವಾಗಲಿದೆ. 2018ರ ಅ.1ರಿಂದ ಪೂರ್ವಾನ್ವಯವಾಗುವಂತೆ ಹೆಚ್ಚಳ ಮಾಡಲಾಗಿದೆ ಎಂದು ಹೇಳಿದರು.

2018ರಲ್ಲಿ ಪ್ರಧಾನಿ ನರೇಂದ್ರ ಮೋದಿ ಅವರು ಅಂಗನವಾಡಿ ಕಾರ್ಯಕರ್ತೆಯರ ಗೌರವ ಧನ 1500 ರು. ಹೆಚ್ಚಿಸಿ ಘೋಷಣೆ ಮಾಡಿದ್ದರು. ರಾಜ್ಯ ಸರ್ಕಾರವು ಸಹ ಬಜೆಟ್‌ನಲ್ಲಿ 500 ರು. ಗೌರವ ಧನ ಹೆಚ್ಚಿಸಿತ್ತು. ಆದರೆ, ಅದು ಅನುಷ್ಠಾನಕ್ಕೆ ಬಂದಿರಲಿಲ್ಲ. ಎಲ್ಲವನ್ನೂ ಸೇರಿಸಿ ಇದೀಗ ದೀಪಾವಳಿ ಕೊಡುಗೆಯಾಗಿ ಅನುಷ್ಠಾನಕ್ಕೆ ತಂದು ಗೌರವಧನ ತಲುಪಿಸುವ ಕಾರ್ಯ ಮಾಡಲಾಗುತ್ತಿದೆ. ಹೆಚ್ಚಳ ಮಾಡಿರುವ ಗೌರವಧನದ ಬಾಕಿ ಮೊತ್ತವನ್ನು ಒಂದೇ ಕಂತಿನಲ್ಲಿ ಪಾವತಿ ಮಾಡಬೇಕೇ? ಅಥವಾ ಹಂತ ಹಂತವಾಗಿ ನೀಡಬೇಕೇ? ಎಂಬುದರ ಕುರಿತು ಚರ್ಚಿಸಿ ತೀರ್ಮಾನ ಕೈಗೊಳ್ಳಲಾಗುವುದು ಎಂದರು.

ರಾಜ್ಯದಲ್ಲಿ 1,28,491 ಮಂದಿ ಅಂಗನವಾಡಿಯಲ್ಲಿ ಕೆಲಸ ಮಾಡುತ್ತಿದ್ದು, 62,580 ಅಂಗನವಾಡಿ ಕಾರ್ಯಕರ್ತೆಯರು, 3,331 ಮಿನಿ ಅಂಗನವಾಡಿ ಕಾರ್ಯಕರ್ತೆಯರು ಮತ್ತು 62,580 ಸಹಾಯಕಿಯರು ಕಾರ್ಯ ನಿರ್ವಹಿಸುತ್ತಿದ್ದಾರೆ. ಗೌರವ ಧನ ಹೆಚ್ಚಳ ಮಾಡಿರುವುದರಿಂದ ಇಷ್ಟುಮಂದಿಗೆ ಆರ್ಥಿಕ ಸಹಾಯ ಲಭಿಸಿದಂತಾಗಿದೆ. ಸಚಿವೆಯಾದ ಬಳಿಕ ಅಧಿಕಾರಿಗಳೊಂದಿಗೆ ನಡೆಸಿದ ಸಭೆಯಲ್ಲಿ ಹಲವು ಸಮಸ್ಯೆಗಳ ಕುರಿತು ಚರ್ಚಿಸಲಾಗಿದ್ದು, ಹಂತ ಹಂತವಾಗಿ ಅವುಗಳನ್ನು ಬಗೆಹರಿಸುವ ನಿಟ್ಟಿನಲ್ಲಿ ಕೆಲಸ ಮಾಡಲಾಗುತ್ತಿದೆ ಎಂದು ಮಾಹಿತಿ ನೀಡಿದರು.

ಖಾಲಿ ಹುದ್ದೆಗಳ ಭರ್ತಿ:

ಮಹಿಳಾ ಮತ್ತು ಮಕ್ಕಳ ಕಲ್ಯಾಣ ಇಲಾಖೆಯಲ್ಲಿ ಖಾಲಿ ಇರುವ ಹಲವು ಹುದ್ದೆಗಳನ್ನು ಕೆಪಿಎಸ್‌ಸಿ ಮೂಲಕ ಭರ್ತಿ ಮಾಡಿಕೊಂಡಿದ್ದರೂ ಹುದ್ದೆಗೆ ನಿಯೋಜನೆ ಮಾಡಿಕೊಂಡಿರಲಿಲ್ಲ. ಅಲ್ಲದೇ, ಬಡ್ತಿ ಸೇರಿದಂತೆ ಇತರೆ ಸಮಸ್ಯೆಗಳನ್ನು ನಿವಾರಿಸಿ ಕ್ರಮ ಕೈಗೊಳ್ಳಲಾಗಿದೆ. 48 ಶಿಶು ಅಭಿವೃದ್ಧಿ ಯೋಜನಾಧಿಕಾರಿಗಳು (ಸಿಡಿಪಿ) ತರಬೇತಿ ಮುಗಿಸಿ ಒಂಬತ್ತು ತಿಂಗಳು ಕಳೆದರೂ ಹುದ್ದೆಗೆ ನಿಯೋಜನೆ ಆಗಿರಲಿಲ್ಲ. ವೇತನ ಇಲ್ಲದೆ ಕಷ್ಟಪಡುತ್ತಿದ್ದರು. ಇದೀಗ ಹುದ್ದೆಗೆ ಎಲ್ಲರನ್ನೂ ನಿಯೋಜನೆ ಮಾಡಲಾಗಿದೆ. ಅಂತೆಯೇ, 33 ಸಹಾಯಕ ಶಿಶು ಅಭಿವೃದ್ಧಿ ಯೋಜನಾಧಿಕಾರಿಗಳು ತರಬೇತಿ ಪೂರ್ಣಗೊಳಿಸಿದ್ದು, ಎರಡು ದಿನದಲ್ಲಿ ಸ್ಥಳ ನಿಯೋಜನೆ ಮಾಡಲಾಗುವುದು ಎಂದು ವಿವರಿಸಿದರು.

628 ಮೇಲ್ವಿಚಾರಕಿಯರು ಪರೀಕ್ಷೆ ಬರೆದಿದ್ದರೂ ಅವರಿಗೆ ತರಬೇತಿ ನೀಡಿರಲಿಲ್ಲ. ಇದೀಗ 374 ಮಂದಿಗೆ ಉಜಿರೆಯಲ್ಲಿ ತರಬೇತಿ ನೀಡಲಾಗುತ್ತಿದ್ದು, ಇನ್ನುಳಿದ 254 ಮಂದಿಗೆ ತರಬೇತಿ ನೀಡಲಾಗುವುದು. ಇದಲ್ಲದೇ, ಬಹಳ ವರ್ಷಗಳಿಂದ ಇಲಾಖೆಯಲ್ಲಿ ಬಡ್ತಿ ನೀಡಿರಲಿಲ್ಲ. ಇದೀಗ 104 ಮಂದಿಗೆ ಬಡ್ತಿ ನೀಡುವ ಕಾರ್ಯ ಪೂರ್ಣಗೊಂಡಿದೆ. ಚಾಲಕ ಹುದ್ದೆಯಿಂದ ಉಪನಿರ್ದೇಶಕರ ಹುದ್ದೆಯವರಿಗೆ ವಿವಿಧ ಹಂತದಲ್ಲಿ ಬಡ್ತಿ ಪ್ರಕ್ರಿಯೆ ಮುಗಿಸಲಾಗಿದೆ. ಇನ್ನೂ 84 ಮಂದಿಗೆ ಬಡ್ತಿ ನೀಡುವ ಪ್ರಕ್ರಿಯೆ ನಡೆಯುತ್ತಿದೆ ಎಂದು ಮಾಹಿತಿ ನೀಡಿದರು.