ಬೆಂಗಳೂರು(ಸೆ.06): ಮದವೇರಿದ ಗೂಳಿಯೊಂದು ರಸ್ತೆಯಲ್ಲಿ ನಡೆದುಕೊಂಡು ಹೋಗುತ್ತಿದ್ದ ಸಾರ್ವಜನಿಕರಿಬ್ಬರಿಗೆ ತಿವಿದು ಗಂಭೀರವಾಗಿ ಗಾಯಗೊಳಿಸಿರುವ ಘಟನೆ ಎಚ್‌ಎಎಲ್‌ ಠಾಣಾ ವ್ಯಾಪ್ತಿಯಲ್ಲಿ ಶನಿವಾರ ಬೆಳಗ್ಗೆ ನಡೆದಿದೆ.

ಅನ್ನಸಂದ್ರಪಾಳ್ಯದ ಗುರಪ್ಪಾ (47) ಮತ್ತು ಸೆಲ್ವಕುಮಾರ್‌ (40) ಗಂಭೀರವಾಗಿ ಗಾಯಗೊಂಡಿದ್ದು, ಖಾಸಗಿ ಆಸ್ಪತ್ರೆಯಲ್ಲಿ ಚಿಕಿತ್ಸೆ ಪಡೆಯುತ್ತಿದ್ದಾರೆ. ಘಟನೆಯಲ್ಲಿ ಕಾರು, ಕೆಲ ದ್ವಿಚಕ್ರ ವಾಹನಗಳು ಹಾಗೂ ಅಂಗಡಿಗಳು ಜಖಂಗೊಂಡಿವೆ ಎಂದು ಎಚ್‌ಎಎಲ್‌ ಠಾಣೆ ಪೊಲೀಸರು ಹೇಳಿದ್ದಾರೆ.

ಶನಿವಾರ ಬೆಳಗ್ಗೆ ಗುರಪ್ಪಾ ಮತ್ತು ಸೆಲ್ವಕುಮಾರ್‌ ರಸ್ತೆಯಲ್ಲಿ ನಡೆದುಕೊಂಡು ಹೋಗುತ್ತಿದ್ದರು. ಈ ವೇಳೆ ಏಕಾಏಕಿ ಗೂಳಿ ಪಾದಚಾರಿಗಳ ಮೇಲೆ ಎರಗಿದೆ. ಗುರಪ್ಪಾ ಅವರನ್ನು ಕೊಂಬಿನಿಂದ ಎತ್ತಿ ಎಸೆದು, ತಿವಿದಿದೆ. ಕೆಳಗೆ ಬಿದ್ದ ಗುರಪ್ಪಾ ಅವರನ್ನು ಕೊಂಬಿನಿಂದ ತಿವಿಯುತ್ತಿತ್ತು. ಈ ವೇಳೆ ಗಾಯಾಳು ಸಂಪೂರ್ಣವಾಗಿ ಅಸ್ವಸ್ಥರಾಗಿ ಬಿದ್ದಿದ್ದರು. ಸಾರ್ವಜನಿಕರು ಗೂಳಿಯನ್ನು ದೊಣ್ಣೆಯಿಂದ ಹೊಡೆದು ತಡೆದು ನಿಲ್ಲಿಸುವ ಪ್ರಯತ್ನ ಮಾಡಿದ್ದಾರೆ. ಆದರೂ ಗೂಳಿ ನಿಯಂತ್ರಣಕ್ಕೆ ಬಂದಿಲ್ಲ. ಇದೇ ರೀತಿ ಸೆಲ್ವಕುಮಾರ್‌ ಅವರಿಗೂ ತಿವಿದು ಗಾಯಗೊಳಿಸಿದೆ. ಗುರಪ್ಪಾ ಅವರ ಭುಜ ಮುರಿದಿದ್ದು, ಹೊಟ್ಟೆ ಭಾಗದಲ್ಲಿ ತಿವಿದು ಗಾಯಗೊಳಿಸಿದೆ. 

ಲಾಕ್‌ಡೌನ್‌ ಎಫೆಕ್ಟ್‌: ನಾಡಿನತ್ತ ಮುಖ ಮಾಡಿದ ಪ್ರಾಣಿಗಳು, ವಾಹನಗಳ ಹಾರ್ನ್‌ಗೆ ಬೆದರಿ ಪ್ರಾಣ ಬಿಟ್ಟ ಕಾಡುಕೋಣ..!

ಸ್ಥಳಕ್ಕೆ ಬಂದ ಪೊಲೀಸರಿಗೆ ಕೂಡ ಗೂಳಿಯನ್ನು ನಿಯಂತ್ರಿಸಲು ಸಾಧ್ಯವಾಗಿಲ್ಲ. ಅನ್ನಸಂದ್ರಪಾಳ್ಯ, ಲಾಲ್‌ ಬಹೂದ್ದೂರ್‌ ಶಾಸ್ತ್ರಿ, ಇಸ್ಲಾಂಪುರ, ವಿನಾಯಕ್‌ ನಗರದೆಲ್ಲೆಲ್ಲಾ ಸುತ್ತಾಡಿ ದಾಂಧಲೆ ನಡೆಸಿದೆ. ಸಾರ್ವಜನಿಕರೇ ದೂರದಿಂದ ಗೂಳಿಗೆ ಹಗ್ಗ ಹಾಕಿ ನಿಯಂತ್ರಿಸಿದ್ದಾರೆ. ಕುತ್ತಿಗೆ ಹಗ್ಗ ಹಾಕಿ ಬಿಗಿದ ಪರಿಣಾಮ ಗೂಳಿ ಸ್ಥಳದಲ್ಲಿಯೇ ಮೃತಪಟ್ಟಿದೆ.

ಮದವೇರಿದ ಗೂಳಿ ಶುಕ್ರವಾರ ರಾತ್ರಿಯಿಂದ ರಸ್ತೆ ಬದಿ ನಿಲ್ಲಿಸಿದ್ದ ವಾಹನಗಳಿಗೆ ತಿವಿಯುವುದನ್ನು ಮಾಡುತ್ತಿತ್ತು. ಸಾರ್ವಜನಿಕರು ಇದನ್ನು ಸಾಮಾನ್ಯ ಎಂದು ಸುಮ್ಮನಾಗಿದ್ದರು. ಆದರೆ ಬೆಳಗ್ಗೆ ಇದ್ದಕ್ಕಿದ್ದ ಹಾಗೇ ಸಾರ್ವಜನಿಕರ ಮೇಲೆ ಹೇರಗಿದೆ. ಅದೃಷ್ಟವಶಾತ್‌ ಯಾವುದೇ ಪ್ರಾಣ ಹಾನಿ ಸಂಭವಿಸಿಲ್ಲ. ಈ ಸಂಬಂಧ ಸಾರ್ವಜನಿಕರು ದೂರು ನೀಡಿದ್ದು, ಪ್ರಕರಣ ದಾಖಲಿಸಿಕೊಳ್ಳಲಾಗಿದೆ. ಗೂಳಿ ಸುಮಾರು ಮೂರ್ನಾಲ್ಕು ವರ್ಷಗಳಿಂದ ಇದೇ ಪ್ರದೇಶದಲ್ಲಿ ಓಡಾಡಿಕೊಂಡಿತ್ತು. ಸಾರ್ವಜನಿಕರು ಅದಕ್ಕೆ ಆಹಾರ ನೀಡುತ್ತಿದ್ದರು. ದೇವರಿಗೆ ಎಂದು ಚಿಕ್ಕಂದಿನಿಂದಲೇ ಈ ಗೂಳಿಯನ್ನು ಬಿಡಲಾಗಿತ್ತು. ಇದರ ಮಾಲೀಕರು ಯಾರು ಎಂಬುದು ಪತ್ತೆಯಾಗಿಲ್ಲ ಎಂದು ಪೊಲೀಸರು ತಿಳಿಸಿದರು.

ಗೂಳಿಯ ಮರಣೋತ್ತರ ಪರೀಕ್ಷೆ ನಡೆಸಲಾಗಿದ್ದು, ನಾಯಿ ಕಚ್ಚಿ, ರೇಬಿಸ್‌ನಿಂದಾಗಿ ಮದವೇರಿ ದಾಂಧಲೆ ನಡೆಸಿರುವ ಸಾಧ್ಯತೆ ಇದೆ. ವರದಿ ಬಂದ ಬಳಿಕ ಖಚಿತವಾಗಿ ತಿಳಿಯಲಿದೆ ಎಂದು ಅಧಿಕಾರಿಯೊಬ್ಬರು ಮಾಹಿತಿ ನೀಡಿದರು.