Asianet Suvarna News Asianet Suvarna News

Building Map: ಹಳ್ಳಿಗಳಲ್ಲಿ ಕಟ್ಟಡ ನಕ್ಷೆಗೆ ಅನುಮೋದನೆ ಬೇಕಿಲ್ಲ

  • ಹಳ್ಳಿಗಳಲ್ಲಿ ಕಟ್ಟಡ ನಕ್ಷೆಗೆ ಅನುಮೋದನೆ ಬೇಕಿಲ್ಲ
  •  ಮುನ್ಸಿಪಾಲಿಟಿ ವಿಧೇಯಕಕ್ಕೆ ವಿಧಾನಸಭೆಯಲ್ಲಿ ಅಸ್ತು, ಇ-ಸ್ವತ್ತು ಸಮಸ್ಯೆಗೆ ಪರಿಹಾರ
Building map approval is not required in villages says gvt rav
Author
First Published Sep 21, 2022, 11:23 AM IST

ವಿಧಾನಸಭೆ (ಸೆ.21) : ಪಟ್ಟಣ ಮತ್ತು ಗ್ರಾಮಾಂತರ ಯೋಜನೆ ಇಲಾಖೆಯಿಂದ ಗ್ರಾಮಾಂತರ ಪ್ರದೇಶದಲ್ಲಿ ಕಟ್ಟಡದ ನಕ್ಷೆಗಳಿಗೆ ಅನುಮೋದನೆ ಪಡೆಯುವುದರಿಂದ ವಿನಾಯಿತಿ ನೀಡುವ ಸಂಬಂಧ ಮಂಡಿಸಲಾದ ಕರ್ನಾಟಕ ಮುನ್ಸಿಪಾಲಿಟಿಗಳ (ತಿದ್ದುಪಡಿ) ವಿಧೇಯಕವನ್ನು ಸುದೀರ್ಘ ಚರ್ಚೆಯ ಬಳಿಕ ಧ್ವನಿಮತದ ಮೂಲಕ ಅಂಗೀಕರಿಸಲಾಯಿತು.

ಬೆಂಗಳೂರು: ಕಟ್ಟಡ ನಕ್ಷೆ ಮಂಜೂರಾತಿ ಶುಲ್ಕ ಹೆಚ್ಚಳ

ಮಂಗಳವಾರ ಸದನದಲ್ಲಿ ಪೌರಾಡಳಿತ ಸಚಿವ ಎಂ.ಟಿ.ಬಿ.ನಾಗರಾಜ್‌ ವಿಧೇಯಕಕ್ಕೆ ಅಂಗೀಕಾರ ಪಡೆದುಕೊಂಡರು. ಕಳೆದ ವಾರ ಇ-ಸ್ವತ್ತು ಸಮಸ್ಯೆಗೆ ಸರ್ಕಾರದಿಂದ ಸ್ಪಷ್ಟಉತ್ತರ ಸಿಗದ ಕಾರಣ ಸಭಾಧ್ಯಕ್ಷ ವಿಶ್ವೇಶ್ವರ ಹೆಗಡೆ ಕಾಗೇರಿ ಅವರು ತಡೆ ಹಿಡಿದಿದ್ದರು. ಕಾನೂನು ಸಚಿವ ಜೆ.ಸಿ.ಮಾಧುಸ್ವಾಮಿ ಅವರು ಸದಸ್ಯರ ಪ್ರಶ್ನೆಗಳಿಗೆ ಉತ್ತರ ನೀಡಿದ ಬಳಿಕ ವಿಧೇಯಕವನ್ನು ಅಂಗೀಕರಿಸಲಾಯಿತು.

ಇದಕ್ಕೂ ಮುನ್ನ ವಿಧೇಯಕ ಅಂಗೀಕಾರಕ್ಕೆ ಕಾಂಗ್ರೆಸ್‌ ಸದಸ್ಯ ಯು.ಟಿ.ಖಾದರ್‌ ಸೇರಿದಂತೆ ಇತರೆ ಸದಸ್ಯರು, ಈ ಕುರಿತು ಗೊಂದಲಗಳಿವೆ ಎಂದು ಹೇಳಿದರು. ನಗರ ಪ್ರದೇಶಗಳನ್ನು ಯೋಜನೆಬದ್ಧವಾಗಿ ನಿರ್ಮಿಸದಿದ್ದರೆ ಅವು ಭವಿಷ್ಯದ ಕೊಳಗೇರಿಗಳಾಗಲಿವೆ. ಹೀಗಾಗಿ ಸರ್ಕಾರದ ಉದ್ದೇಶಿತ ಮುನ್ಸಿಪಾಲಿಟಿಗಳ ತಿದ್ದುಪಡಿ ವಿಧೇಯಕ ಎಲ್ಲೋ ಒಂದು ಕಡೆ ರಿಯಲ್‌ ಎಸ್ಟೇಟ್‌ನವರಿಗೆ ಪರೋಕ್ಷವಾಗಿ ಅನುಕೂಲ ಕಲ್ಪಿಸುವಂತಿದೆ. ಈಗಾಗಲೇ ಬಡಾವಣೆಗಳನ್ನು ನಿರ್ಮಿಸಿರುವ ಕಡೆಗಳಲ್ಲಿ ಮೂಲಸೌಲಭ್ಯಗಳನ್ನು ಕಲ್ಪಿಸಲು ಆಗುತ್ತಿಲ್ಲ ಎಂದು ಯು.ಟಿ.ಖಾದರ್‌ ತಿಳಿಸಿದರು.

ಆಡಳಿತ ಪಕ್ಷ ಬಿಜೆಪಿ ಮತ್ತು ಪ್ರತಿಪಕ್ಷ ಕಾಂಗ್ರೆಸ್‌ ನಡುವೆ ತೀವ್ರ ಮಾತಿನ ಚಕಮಕಿ ನಡೆಯುತ್ತಿದ್ದ ಕಾರಣ ಮಧ್ಯಪ್ರವೇಶಿಸಿದ ಮುಖ್ಯಮಂತ್ರಿ ಬಸವರಾಜ ಬೊಮ್ಮಾಯಿ, ಇದು ಬಹಳ ವರ್ಷದ ಸಮಸ್ಯೆಯಾಗಿದ್ದು, ಕಗ್ಗಂಟಾಗಿದೆ. ಒಂದೊಂದೇ ಗಂಟನ್ನು ತೆಗೆಯಬೇಕಿದೆ. 2006ಕ್ಕೂ ಮುಂಚೆ ಖಾತೆಗಳನ್ನು ಕೈಬರಹದಲ್ಲಿ ಬರೆದುಕೊಡಬೇಕಿತ್ತು. ಆದರೆ, ಈಗ ಇ-ಖಾತೆ ಜಾರಿಯಾಗಿದೆ. ಇ-ಖಾತಾ ಇಲ್ಲ ಎಂಬ ಕಾರಣಕ್ಕಾಗಿ ಸಮಸ್ಯೆಯಾಗುತ್ತಿದ್ದು, ಯೋಜನೆಗೆ ಅನುಮೋದನೆ ಆಗುತ್ತಿರಲಿಲ್ಲ ಎಂದರು.

ಇ-ಖಾತಾ ಸಮಸ್ಯೆಯಾಗಿದ್ದರಿಂದ ಗ್ರಾಮೀಣ ಭಾಗದಲ್ಲಿನ ಜನರು ಸಮಸ್ಯೆ ಎದುರಿಸುವಂತಾಗಿದೆ. ಈ ವಿಧೇಯಕ ಅನುಷ್ಠಾನದಿಂದ ಇ-ಖಾತೆ ಮಾಡಿಸಲು ಅನುಕೂಲವಾಗಲಿದೆ. ಇದಕ್ಕಾಗಿ ವಿಧೇಯಕವನ್ನು ಜಾರಿಗೊಳಿಸಲಾಗುತ್ತಿದೆ. ಅಕ್ರಮ-ಸಕ್ರಮ ವಿಚಾರವು ಸುಪ್ರೀಂಕೋರ್ಚ್‌ನಲ್ಲಿದ್ದು, ಒಂದು ವರ್ಷದಿಂದ ಬೆನ್ನು ಹತ್ತಿದ್ದೇನೆ. ಸಾಕಷ್ಟುಪ್ರಗತಿಯಾಗಿದೆ. ಮುಂದಿನ ವಿಚಾರಣೆ ವೇಳೆಗೆ ರಿಲೀಫ್‌ ಸಿಗುವ ನಿರೀಕ್ಷೆ ಇದೆ ಎಂದರು.

ಅಕ್ರಮ ಆಸ್ತಿ: ಸಚಿವ ಸೋಮಣ್ಣ ವಿರುದ್ಧ ಸಮನ್ಸ್‌ ರದ್ದು

ಮಾರಾಟ, ನಿರ್ಮಾಣಕ್ಕೆ ಅನುಕೂಲ:

ವಿಧಾನಸಭೆಯಲ್ಲಿ ಕರ್ನಾಟಕ ಮುನ್ಸಿಪಾಲಿಟಿಗಳ (ತಿದ್ದುಪಡಿ) ವಿಧೇಯಕವನ್ನು ಅಂಗೀಕರಿಸಿರುವುದರಿಂದ ಲಕ್ಷಾಂತರ ಮಂದಿಗೆ ಅನುಕೂಲವಾಗಲಿದೆ. ನಿವೇಶನ ಮಾರಾಟ, ಮನೆ ನಿರ್ಮಿಸುವುದಕ್ಕಾಗಿ ಸುಲಭವಾಗಿ ಅನುಮತಿ ಸಿಗಲಿದ್ದು, ಪ್ರಯೋಜನವಾಗಲಿದೆ. ಈ ಮೊದಲು ಮನೆ ನಿರ್ಮಿಸಲು ಸಕ್ಷಮ ಪ್ರಾಧಿಕಾರದ ಮೂಲಕ ತಹಸೀಲ್ದಾರ್‌ ಅನುಮತಿ ನೀಡಬೇಕಿತ್ತು. ಇದನ್ನು 2017ರಲ್ಲಿ ರದ್ದು ಮಾಡಲಾಯಿತು. ಆಗಿನಿಂದ ಬಡಾವಣೆಗಳಿಗೆ ಗ್ರಾಮ ಪಂಚಾಯಿತಿಯಲ್ಲಿ ಇ-ಸ್ವತ್ತು ನೀಡಲು ಸಾಧ್ಯವಾಗುತ್ತಿಲ್ಲ. ಹೀಗಾಗಿ ಸಮಸ್ಯೆ ಪ್ರಾರಂಭವಾಯಿತು. ನಿವೇಶನ ಮಾರಾಟವಾಗಲಿ, ಮನೆ ನಿರ್ಮಿಸುವ ಪ್ರಕ್ರಿಯೆ ನಿಂತು ಸರ್ಕಾರದ ಬೊಕ್ಕಸಕ್ಕೆ ನಷ್ಟವುಂಟಾಗುತ್ತಿತ್ತು. ಈ ವಿಧೇಯಕ ಅಂಗೀಕಾರದಿಂದ ಲಕ್ಷಾಂತರ ಜನರು ನಿಟ್ಟಿಸಿರುಬಿಡುವಂತಾಗಿದೆ. ಸದನದಲ್ಲಿಯೂ ಎಲ್ಲ ಸದಸ್ಯರು ಸ್ವಾಗತ ಮಾಡಿದ್ದಾರೆ. ಇದರಿಂದ ಸರ್ಕಾರದ ಬೊಕ್ಕಸಕ್ಕೆ ಸಾವಿರಾರು ಕೋಟಿ ರು. ಆದಾಯ ಬರುತ್ತದೆ.

Follow Us:
Download App:
  • android
  • ios