*   66.2 ಟಿಎಂಸಿ ಬದಲು 30.6 ಟಿಎಂಸಿ ಡ್ಯಾಂ ನಿರ್ಮಿಸಿ*   ಅದಕ್ಕೆ ತಮಿಳ್ನಾಡಿನ ಒಪ್ಪಿಗೆ ಬೇಕಿಲ್ಲ: ಸರ್ಕಾರಕ್ಕೆ ಸಲಹೆ*   ಕೇಂದ್ರದ ಸಂಧಾನಕ್ಕೆ ಆಕ್ಷೇಪ 

ಬೆಂಗಳೂರು(ಮಾ.10): ಪಾದಯಾತ್ರೆ(Padayatra) ಮಾಡಿ ಜಾತ್ರೆ ಮಾಡಿದರೆ ಮೇಕೆದಾಟು ಯೋಜನೆ(Mekedatu Project) ಅನುಷ್ಠಾನವಾಗುವುದಿಲ್ಲ. ಕಾನೂನು ರೀತಿ ಯೋಚಿಸಿ ರಾಜ್ಯವು 66.2 ಟಿಎಂಸಿ ಬದಲಿಗೆ ಮೊದಲ ಹಂತದಲ್ಲಿ 30.65 ಟಿಎಂಸಿ ಸಾಮರ್ಥ್ಯದ ಆಣೆಕಟ್ಟು ನಿರ್ಮಿಸಿಕೊಳ್ಳಬೇಕು. ಇದಕ್ಕೆ ತಮಿಳುನಾಡಿನ ಅನುಮತಿಯೂ ಬೇಕಿಲ್ಲ, ಕೇಂದ್ರವು ಮಧ್ಯಸ್ಥಿಕೆ ವಹಿಸುವ ಅಗತ್ಯವೂ ಇರುವುದಿಲ್ಲ ಎಂದು ಮಾಜಿ ಮುಖ್ಯಮಂತ್ರಿ ಎಚ್‌.ಡಿ.ಕುಮಾರಸ್ವಾಮಿ(HD Kumaraswamy) ಹೇಳಿದ್ದಾರೆ.

ಬುಧವಾರ ಬಜೆಟ್‌(Karnataka Budget) ಮೇಲಿನ ಚರ್ಚೆ ವೇಳೆ ಮಾತನಾಡಿದ ಅವರು, ಕೆಲವರು ಪಾದಯಾತ್ರೆ ಹೆಸರಿನಲ್ಲಿ ಜಾತ್ರೆ ನಡೆಸಿ ನಮಗೆ ಹೆದರಿ ಸರ್ಕಾರ 1 ಸಾವಿರ ಕೋಟಿ ರು. ಬಜೆಟ್‌ನಲ್ಲಿ ಘೋಷಿಸಿದೆ ಎಂದಿದ್ದಾರೆ. ಜೆಡಿಎಸ್‌(JDS) ಭದ್ರಕೋಟೆಯಲ್ಲಿ ಶಕ್ತಿ ಪ್ರದರ್ಶನ ಎಂದೆಲ್ಲಾ ವಿಶ್ಲೇಷಿಸಲಾಗಿದೆ ಎಂದು ಕಾಂಗ್ರೆಸ್‌ ಹಾಗೂ ಡಿ.ಕೆ. ಶಿವಕುಮಾರ್‌(DK Shivakumar) ವಿರುದ್ಧ ಪರೋಕ್ಷವಾಗಿ ಟೀಕಾಪ್ರಹಾರ ನಡೆಸಿದರು.

ಕೇಂದ್ರ ಸಚಿವ ವಿರುದ್ಧ ಪ್ರಧಾನಿ ಮೋದಿಗೆ ದೂರು ನೀಡಿದ ಸಿದ್ದರಾಮಯ್ಯ

ಕೇಂದ್ರ ಜಲವಿಜ್ಞಾನ ಇಲಾಖೆಯು(Central Hydrology Department) 30.65 ಟಿಎಂಸಿ ನೀರನ್ನು ಕರ್ನಾಟಕ(Karnataka) ರಾಜ್ಯ ಯಾವುದೇ ರೀತಿಯಲ್ಲಾದರೂ ಬಳಸಿಕೊಳ್ಳಬಹುದು, ಇದಕ್ಕೆ ಯಾರ ಅನುಮತಿಯೂ ಬೇಕಿಲ್ಲ ಎಂದು ಸ್ಪಷ್ಟವಾಗಿ ಹೇಳಿದೆ. ಹೀಗಾಗಿ ಎಚ್‌.ಡಿ. ದೇವೇಗೌಡರ ಸಲಹೆಯಂತೆ ಮೊದಲ ಹಂತದಲ್ಲಿ 30.65 ಟಿಎಂಸಿ ನೀರಿಗೆ ಆಣೆಕಟ್ಟು(Dam) ವಿನ್ಯಾಸ ಮಾಡಬೇಕು. ಇದಕ್ಕೆ ಬೇಕಿರುವುದು ಕೇಂದ್ರದ ಪರಿಸರ ಇಲಾಖೆಯ ಅನುಮತಿ ಮಾತ್ರ. ಉಳಿದಂತೆ ತಮಿಳುನಾಡಿನ ಒಪ್ಪಿಗೆ, ಕೇಂದ್ರದ ಮಧ್ಯಸ್ಥಿಕೆ ಎರಡೂ ಬೇಕಾಗಿಲ್ಲ ಎಂದು ಹೇಳಿದರು.

ತಮಿಳುನಾಡಿನ ಆಕ್ಷೇಪವಿಲ್ಲ:

ಸುಪ್ರೀಂಕೋರ್ಟ್‌ಗೆ(Supreme Court) ತಮಿಳುನಾಡು(Tamil Nadu) ರಾಜ್ಯದ ವಕೀಲರೇ ಪ್ರಮಾಣ ಪತ್ರವನ್ನು ಸಲ್ಲಿಸಿ, ಕಾವೇರಿ ನದಿಯಲ್ಲಿ ತನಗೆ ಹಂಚಿಕೆ ಆಗಿರುವ ನೀರನ್ನು ಕರ್ನಾಟಕ ಹೇಗೆ ಬೇಕಾದರೂ ಬಳಕೆ ಮಾಡಿಕೊಳ್ಳಬಹುದು. ಅದಕ್ಕೆ ನಮ್ಮ ತಕರಾರು ಏನೂ ಇಲ್ಲ. ಅವರು ಬೇಕಾದರೆ ಎರಡೂ ರಾಜ್ಯಗಳ ಗಡಿ ಪ್ರದೇಶದಲ್ಲಿ ಇನ್ನೊಂದು ಅಣೆಕಟ್ಟು ಕಟ್ಟಿಕೊಳ್ಳಲಿ ಎಂದು ಹಿಂದೆ ನ್ಯಾಯಾಲಯಕ್ಕೆ ತಿಳಿಸಿದ್ದಾರೆ. ಹೀಗಾಗಿ ನಮಗೆ ಕಾನೂನು ಹೋರಾಟ ಮುಖ್ಯವೇ ಹೊರತು ಪಾದಯಾತ್ರೆ ಹೆಸರಿನಲ್ಲಿ ಜಾತ್ರೆ ಮಾಡುವುದಲ್ಲ ಎಂದರು.

Mekedatu ಮಧ್ಯಪ್ರವೇಶಕ್ಕೆ ಕೇಂದ್ರ ಸಿದ್ಧ: ಕೇಂದ್ರ ಸಚಿವ ಶೆಖಾವತ್‌

ಕಾಂಗ್ರೆಸ್‌ ವಿರುದ್ಧ ಎಚ್‌ಡಿಕೆ ಕಿಡಿ:

75 ವರ್ಷದಲ್ಲಿ ಅನೇಕರು ಸರ್ಕಾರ ಮಾಡಿದ್ದಾರೆ, ಸುಮಾರು ಅಣೆಕಟ್ಟುಗಳು ಬಂದಿವೆ. ಆದರೆ ಎಲ್ಲಾ ಕ್ರೆಡಿಟ್ಟನ್ನು ಒಂದು ಪಕ್ಷವೇ ತೆಗೆದುಕೊಳ್ಳಲು ‘ನಮ್ಮ ನೀರು, ನಮ್ಮ ಹಕ್ಕು’ ಎನ್ನುತ್ತಿದ್ದಾರೆ ಎಂದು ಟೀಕಿಸಿದರು. ಈ ವೇಳೆ ಕಾಂಗ್ರೆಸ್‌ನ ಯು.ಟಿ. ಖಾದರ್‌, ನಮ್ಮ ಹಕ್ಕು ಎಂದರೆ ಜನರು ಹಕ್ಕು ಎಂದರ್ಥ. ಹೀಗಾಗಿಯೇ ಜನರು ಸ್ವಯಂ ಪ್ರೇರಿತವಾಗಿ ಪಾದಯಾತ್ರೆಯಲ್ಲಿ ಭಾಗವಹಿಸಿದ್ದರು ಎಂದು ಸ್ಪಷ್ಟನೆ ನೀಡಿದರು. ಅದಕ್ಕೆ ಕುಮಾರಸ್ವಾಮಿ, ಈಗ ಜನರ ಹಕ್ಕು ಎನ್ನುತ್ತಿದ್ದೀರಿ. ಹುಬ್ಬಳ್ಳಿಯಲ್ಲಿ ಕಾಂಗ್ರೆಸ್‌ನವರು ಮಹದಾಯಿ ಹೋರಾಟಗಾರರಿಗೆ ಪೊಲೀಸರನ್ನು ಬಿಟ್ಟು ಹೊಡೆಸುವಾಗ ನಮ್ಮ ನೀರು, ನಮ್ಮ ಹಕ್ಕು ನೆನಪಿಗೆ ಬರಲಿಲ್ಲವೇ? ಜನರು ಪೆಟ್ಟು ತಿಂದು ಊರು ಬಿಟ್ಟು ಹೋಗುವಾಗ ಅವರಿಗೆ ಜವಾಬ್ದಾರಿ ಇರಲಿಲ್ಲವೇ ಎಂದು ಎಂದು ಆಕ್ರೋಶ ವ್ಯಕ್ತಪಡಿಸಿದರು.

ಕೇಂದ್ರದ ಸಂಧಾನಕ್ಕೆ ಆಕ್ಷೇಪ

ಮೇಕೆದಾಟು ವಿಚಾರವಾಗಿ ಅಗತ್ಯವಾದರೆ ತಮಿಳುನಾಡು ಹಾಗೂ ಕರ್ನಾಟಕದ ನಡುವೆ ಸಂಧಾನ ನಡೆಸುವುದಾಗಿ ಕೇಂದ್ರ ಜಲಶಕ್ತಿ ಸಚಿವರು ನೀಡಿರುವ ಹೇಳಿಕೆ ಅಚ್ಚರಿ ಮೂಡಿಸಿದೆ. ಎರಡೂ ರಾಜ್ಯ ಮಾತುಕತೆ ನಡೆಸುವುದಾದರೆ ಕೇಂದ್ರ ಜಲ ಆಯೋಗ, ಕಾವೇರಿ ನೀರು ನಿರ್ವಹಣಾ ಪ್ರಾಧಿಕಾರ, ಕೇಂದ್ರ ಜಲಶಕ್ತಿ ಇಲಾಖೆ ಏಕೆ ಬೇಕು ಎಂದು ಎಚ್‌.ಡಿ. ಕುಮಾರಸ್ವಾಮಿ ಪ್ರಶ್ನಿಸಿದರು. ಕೇಂದ್ರ ಸಚಿವರ ಹೇಳಿಕೆ ಬಗ್ಗೆ ರಾಜ್ಯ ಸರ್ಕಾರ ಆಕ್ಷೇಪ ದಾಖಲಿಸಬೇಕು. ರಾಜ್ಯದ ಹಿತಾಸಕ್ತಿಗಳ ಬಗ್ಗೆ ಸರ್ಕಾರ ರಾಜಿ ಮಾಡಿಕೊಳ್ಳಬಾರದು ಎಂದರು.