ಬೆಂಗಳೂರು, (ಡಿ.22):  ಪೌರತ್ವ ಕಾಯ್ದೆ ವಿರೋಧಿಸಿ ಮೊನ್ನೆ ಮಂಗಳೂರಿನಲ್ಲಿ ನಡೆದಿದ್ದ ಹಿಂಸಾತ್ಮಕ ಪ್ರತಿಭಟನೆಯಲ್ಲಿ ಪೊಲೀಸರ ಗುಂಡಿನ ದಾಳಿಗೆ ಮೃತಪಟ್ಟ ಇಬ್ಬರ ಕುಟುಂಬಕ್ಕೆ ತಲಾ 10 ಲಕ್ಷ ರೂಪಾಯಿ ಪರಿಹಾರವನ್ನು ಮುಖ್ಯಮಂತ್ರಿ ಬಿ.ಎಸ್. ಯಡಿಯೂರಪ್ಪ ಘೋಷಿಸಿದ್ದಾರೆ.

ಬೆಂಗಳೂರಿನಲ್ಲಿ ಇಂದು (ಭಾನುವಾರ) ಸುದ್ದಿಗಾರರೊಂದಿಗೆ ಮಾತನಾಡಿದ ಅವರು, ಮಂಗಳೂರು ಶಾಂತವಾಗಿದ್ದು, ಅಲ್ಲಿಗೆ ಭೇಟಿ ನೀಡಲು ನಾವು ಯಾರಿಗೂ ತಡೆ ಒಡ್ಡಿಲ್ಲ. ಈಗ ಅಲ್ಲಿ ಕರ್ಫ್ಯೂ ಸಡಿಸಲಿಸಲಾಗಿದೆ. ಮಂಗಳೂರು ಘಟನೆಯ ಬಗ್ಗೆ ತನಿಖೆಯನ್ನೂ ನಡೆಸುತ್ತೇವೆ. ಸಿದ್ದರಾಮಯ್ಯ ಯಾವಾಗ ಬೇಕಾದರೂ ಮಂಗಳೂರಿಗೆ ಭೇಟಿ ನೀಡಬಹುದು ಎಂದು ಹೇಳಿದರು.

ಮಂಗಳೂರು ಗೋಲಿಬಾರ್ ಸಮರ್ಥಿಸಿಕೊಂಡ ಸಿಎಂ ಯಡಿಯೂರಪ್ಪ!

ಗುರುವಾರ ಮಂಗಳೂರಿನಲ್ಲಿ ಪೌರತ್ವ ತಿದ್ದುಪಡಿ ವಿರೋಧಿಸಿ ಬೃಹತ್ ಪ್ರತಿಭಟನೆ ನಡೆದಿತ್ತು. ಆದ್ರೆ, ದು ಹಿಂಸಾತ್ಮಕಕ್ಕೆ ತಿರುಗಿದರಿಂದ ಪೊಲೀಸರು ಗುಂಡು ಹಾರಿಸಿದ್ದರು. ಘಟನೆಯಲ್ಲಿ ಕಂದಕ್‌ ನಿವಾಸಿ ಅಬ್ದುಲ್ ಜಲೀಲ್ ಹಾಗೂ ನೌಶೀನ್ ಸಾವನ್ನಪ್ಪಿದ್ದರು.

ನಿನ್ನೆ (ಶನಿವಾರ) ಯಡಿಯೂರಪ್ಪ ಖುದ್ದು ಮಂಗಳೂರಿಗೆ ತೆರಳಿ ಸಂತ್ರಸ್ತ ಕುಟುಂಬವನ್ನು ಭೇಟಿಯಾಗಿ ಸಾಂತ್ವನ ಹೇಳಿದ್ದರು. ಮತ್ತೊಂದೆಡೆ ಮೃತ ಕುಟುಂಬಸ್ಥರು ಮಾತ್ರ ಯಾವುದೇ ಪರಿಹಾರ ಬೇಕಿಲ್ಲ. ತಪ್ಪಿತಸ್ಥರಿಗೆ ಶಿಕ್ಷೆಯಾಗಬೇಕೆಂದು ಆಗ್ರಹಿಸಿದ್ದಾರೆ.