ಬೆಂಗಳೂರು[ಡಿ.31]: ಕನಕಪುರದ ಕಪಾಲ ಬೆಟ್ಟದಲ್ಲಿ 114 ಅಡಿಯ ಏಸು ಕ್ರಿಸ್ತನ ಪ್ರತಿಮೆ ನಿರ್ಮಿಸುವ ವಿಚಾರದಲ್ಲಿ ಮಾಜಿ ಸಚಿವ ಡಿ.ಕೆ. ಶಿವಕುಮಾರ್‌ ಅವರನ್ನು ಗುರಿಯಾಗಿಸಿಕೊಂಡು ರಾಜಕೀಯ ಟೀಕೆ ಮಾಡುವುದು ಬೇಡ ಎಂದು ಮುಖ್ಯಮಂತ್ರಿ ಬಿ.ಎಸ್‌. ಯಡಿಯೂರಪ್ಪ ಅವರು ತಮ್ಮ ಸಂಪುಟದ ಸಚಿವರಿಗೆ ಸಲಹೆ ನೀಡಿದ್ದಾರೆ.

ಸಂಪುಟ ಸಭೆಯಲ್ಲಿ ವಿಷಯ ಪ್ರಸ್ತಾಪಿಸಿದ ಅವರು, ಮಾಜಿ ಸಚಿವ ಡಿ.ಕೆ. ಶಿವಕುಮಾರ್‌ ಅವರನ್ನು ಈ ವಿಷಯದಲ್ಲಿ ಗುರಿಯಾಗಿಸಿಕೊಂಡು ಟೀಕೆ ಮಾಡುವುದು ಬೇಡ. ಇದರಿಂದ ಒಂದು ಧರ್ಮವನ್ನು ಸಂಪೂರ್ಣವಾಗಿ ಬಿಜೆಪಿಯಿಂದ ದೂರ ಮಾಡಿಕೊಂಡಂತಾಗಲಿದೆ. ಜತೆಗೆ ಇದು ಪರೋಕ್ಷವಾಗಿ ಡಿ.ಕೆ. ಶಿವಕುಮಾರ್‌ಗೆ ನೆರವಾಗುವ ಸಾಧ್ಯತೆಯೂ ಇದೆ. ಹೀಗಾಗಿ ಬಹಿರಂಗವಾಗಿ ರಾಜಕೀಯ ಟೀಕೆ ಮಾಡುವ ಬದಲು ಕಾನೂನುಬಾಹಿರವಾಗಿ ಜಮೀನು ಮಂಜೂರಾಗಿದ್ದರೆ ಕಂದಾಯ ಇಲಾಖೆಯಿಂದ ಕ್ರಮ ಕೈಗೊಳ್ಳಬಹುದು. ಇದನ್ನು ರಾಜಕೀಯವಾಗಿ ಬಳಸಿಕೊಂಡರೆ ಅದು ತಿರುಗು ಬಾಣವಾಗಬಹುದು ಎಂದು ಯಡಿಯೂರಪ್ಪ ಹೇಳಿದ್ದಾರೆ ಎಂದು ಮೂಲಗಳು ತಿಳಿಸಿವೆ.

ಕನಕಪುರ ತಾಲೂಕಿನ ಹಾರೋಬೆಲೆ ಗ್ರಾಮದ ಕಪಾಲ ಬೆಟ್ಟದಲ್ಲಿ 114 ಅಡಿಯ ಏಕಶಿಲಾ ಏಸು ಕ್ರಿಸ್ತನ ಪ್ರತಿಮೆ ನಿರ್ಮಾಣಕ್ಕೆ ಶಿವಕುಮಾರ್‌ ಡಿ.25ರ ಕ್ರಿಸ್‌ಮಸ್‌ ದಿನ ಶಂಕುಸ್ಥಾಪನೆ ಮಾಡಿದ್ದರು. ಅಲ್ಲದೆ ಹಿಂದಿನ ಸರ್ಕಾರದಲ್ಲಿ ಸರ್ಕಾರದಿಂದ ಮಂಜೂರಾಗಿದ್ದ 10 ಎಕರೆ ಜಾಗಕ್ಕೆ ಡಿ.ಕೆ. ಶಿವಕುಮಾರ್‌ ಅವರೇ ಹಣ ಪಾವತಿಸಿದ್ದರು. ಈ ಬಗ್ಗೆ ಬಿಜೆಪಿ ನಾಯಕರು ತೀವ್ರ ಅಸಮಾಧಾನ ವ್ಯಕ್ತಪಡಿಸಿ ಇಟಲಿಯಮ್ಮನ (ಸೋನಿಯಾ ಗಾಂಧಿ) ಮೆಚ್ಚಿಸುವ ಸಲುವಾಗಿ ಡಿ.ಕೆ. ಶಿವಕುಮಾರ್‌ ಏಸು ಕ್ರಿಸ್ತನ ಪ್ರತಿಮೆ ನಿರ್ಮಾಣ ಮಾಡಲು ಹೊರಟಿದ್ದಾರೆ ಎಂದು ಸಂಸದ ಅನಂತಕುಮಾರ್‌ ಹೆಗಡೆ, ಸಚಿವರಾದ ಸಿ.ಟಿ. ರವಿ, ಆರ್‌. ಅಶೋಕ್‌ ಟೀಕಿಸಿದ್ದರು. ಈ ಬಗ್ಗೆ ಬಹಿರಂಗ ಹೇಳಿಕೆ ನೀಡದಂತೆ ಸೋಮವಾರ ಯಡಿಯೂರಪ್ಪ ಸೂಚಿಸಿದ್ದಾರೆ ಎಂದು ತಿಳಿದುಬಂದಿದೆ.

ಧರ್ಮದ ಹೆಸರು ದುರುಪಯೋಗ ಸಲ್ಲ

ಏಸು, ಕೃಷ್ಣ, ಅಲ್ಲಾಹು ಹಾಗೂ ನಮ್ಮ ಧರ್ಮಗುರುಗಳು ಎಲ್ಲರೂ ಒಂದೇ. ರಾಜಕೀಯ ಕಾರಣಗಳಿಗೆ ದೇವರು, ಧರ್ಮದ ಹೆಸರು ದುರುಪಯೋಗಪಡಿಸಿಕೊಳ್ಳುವುದು ಸರಿಯಲ್ಲ. ಪೌರತ್ವ ಕಾಯಿದೆ ವಿವಾದ ಹಾಗೂ ಈಗ ಉಂಟಾಗಿರುವ ಏಸು ಪ್ರತಿಮೆ ವಿವಾದ ಎರಡಕ್ಕೂ ಸಂಬಂಧ ಇದೆ.

- ಬಿ. ಶ್ರೀರಾಮುಲು, ಆರೋಗ್ಯ ಸಚಿವ