ಬೆಂಗಳೂರು(ಡಿ.26): ರೈತರ ಬೆಳೆಗಳಿಗೆ ಬೆಂಬಲ ಬೆಲೆ ನೀಡಿ ಅನ್ನದಾತರು ಸ್ವಾಭಿಮಾನದಿಂದ ಬದುಕು ಕಟ್ಟಿಕೊಳ್ಳುವಂತೆ ಮಾಡಲು ಸರ್ಕಾರ ಬದ್ಧವಿದ್ದು, ಎಪಿಎಂಸಿ ಕಾಯ್ದೆ ತಿದ್ದುಪಡಿಯು ರೈತರು ಗೌರವದಿಂದ ಬದುಕಲು ಸಹಕಾರಿಯಾಗಲಿದೆ ಎಂದು ಮುಖ್ಯಮಂತ್ರಿ ಬಿ.ಎಸ್‌.ಯಡಿಯೂರಪ್ಪ ಪ್ರತಿಪಾದಿಸಿದ್ದಾರೆ.

ಮಾಜಿ ಪ್ರಧಾನಿ ದಿವಂಗತ ಅಟಲ್‌ ಬಿಹಾರಿ ವಾಜಪೇಯಿ ಜನ್ಮದಿನದ ಪ್ರಯುಕ್ತ ಯಶವಂತಪುರದ ಎಪಿಎಂಸಿ ಆವರಣದಲ್ಲಿ ಶುಕ್ರವಾರ ನಡೆದ ಕಿಸಾನ್‌ ಸಮ್ಮಾನ್‌ ಯೋಜನೆ ದಿನಾಚರಣೆ ಕಾರ್ಯಕ್ರಮದಲ್ಲಿ ಮಾತನಾಡಿದ ಅವರು, ಎಪಿಎಂಸಿ ಕಾಯ್ದೆಗೆ ತಿದ್ದುಪಡಿ ಮಾಡಿರುವುದರಿಂದ ರೈತರಿಗೆ ಯಾವುದೇ ಸಮಸ್ಯೆಯಾಗುವುದಿಲ್ಲ. ಬದಲಿಗೆ ರೈತರಿಗೆ ವರವಾಗಲಿದೆ. ರೈತರ ಆದಾಯವು ದ್ವಿಗುಣವಾಗಲಿದ್ದು, ಗೌರವದಿಂದ ಬದುಕಲು ಸಹಕಾರಿಯಾಗಲಿದೆ. ಸ್ವಾಭಿಮಾನದಿಂದ ಬದುಕುವಂತೆ ಮಾಡುವುದು ಸರ್ಕಾರದ ಗುರಿಯಾಗಿದೆ ಎಂದು ಹೇಳಿದರು.

ರೈತರ ಒಳಿತಿಗಾಗಿ ಪ್ರಧಾನಿ ನರೇಂದ್ರ ಮೋದಿ ಅವರು ಹಲವು ಯೋಜನೆಗಳನ್ನು ಜಾರಿಗೊಳಿಸಿದ್ದಾರೆ. ಆದರೆ, ಕೃಷಿ ಕಾಯ್ದೆಗಳನ್ನು ವಿರೋಧ ಪ್ರತಿಪಕ್ಷಗಳು ಅನಗತ್ಯವಾಗಿ ವಿರೋಧಿಸುತ್ತಿವೆ. 50 ವರ್ಷಗಳ ಹಿಂದೆ ಶಿಕಾರಿಪುರದಲ್ಲಿ ಎಪಿಎಂಸಿ ಕಾಯ್ದೆ ತಿದ್ದುಪಡಿಗಾಗಿ ಅಹೋರಾತ್ರಿ ಹೋರಾಟ ನಡೆಸಿದ್ದೆ. ನನ್ನ ಪೂರ್ವ ಜನ್ಮದ ಪುಣ್ಯ ಎಂಬಂತೆ ಈಗ ನಾನೇ ಮುಖ್ಯಮಂತ್ರಿಯಾಗಿ ಎಪಿಎಂಸಿ ಕಾಯ್ದೆ ತಿದ್ದುಪಡಿಗೊಳಿಸಿ ಜಾರಿಗೊಳಿಸಿದ್ದೇನೆ ಎಂದು ಹರ್ಷ ವ್ಯಕ್ತಪಡಿಸಿದರು.
ಮಾಜಿ ಪ್ರಧಾನಿ ವಾಜಪೇಯಿ ಅವರ ಜನ್ಮದಿನದ ಪ್ರಯುಕ್ತ ಕಿಸಾನ್‌ ಸಮ್ಮಾನ್‌ ಯೋಜನೆ ದಿನಾಚರಣೆಯನ್ನು ಆಚರಣೆ ಮಾಡುತ್ತಿರುವುದು ಅಪರೂಪದ ಕಾರ್ಯಕ್ರಮವಾಗಿದೆ. ಕಿಸಾನ್‌ ಯೋಜನೆಯನ್ನು ವಾಜಪೇಯಿ ಜನ್ಮದಿನಕ್ಕೆ ಅರ್ಪಿಸುತ್ತಿರುವುದು ಅತ್ಯಂತ ಸಂತೋಷದ ಸಂಗತಿ. ಅಲ್ಲದೇ, ಈ ದಿನವನ್ನು ಉತ್ತಮ ಆಡಳಿತದ ದಿನವಾಗಿಯೂ ಆಚರಣೆ ಮಾಡುತ್ತಿರುವುದು ವಿಶೇಷ. ಕಿಸಾನ್‌ ಸಮ್ಮಾನ್‌ ಯೋಜನೆಯಡಿ ರೈತರ ಖಾತೆಗೆ ಎರಡು ಸಾವಿರ ರು.ಗಳಂತೆ ಕೇಂದ್ರ ಸರ್ಕಾರವು 9 ಕೋಟಿ ರೈತರಿಗೆ ಮಧ್ಯವರ್ತಿಗಳಿಲ್ಲದೇ ಒಟ್ಟು 18 ಸಾವಿರ ಕೋಟಿ ರು. ಅವರ ಖಾತೆಗೆ ಪಾವತಿಸುತ್ತಿದೆ ಎಂದರು.

ಯಾವುದೇ ಕಾರಣಕ್ಕೂ ಎಪಿಎಂಸಿ ಮುಚ್ಚಲ್ಲ: ಎಸ್‌ಟಿಎಸ್‌

ದೇಶದ ಯಾವುದೇ ಭಾಗದಲ್ಲಿಯೂ ರೈತರು ತಾವು ಬೆಳೆದ ಉತ್ಪನ್ನಗಳನ್ನು ಮಾರಾಟ ಮಾಡಬಹುದು. ಶೇ.70ರಷ್ಟುರೈತರು ಎಪಿಎಂಸಿ ಕಾಯ್ದೆಯನ್ನು ಬೆಂಬಲಿಸಿದ್ದಾರೆ. ಆದರೆ, ಕೆಲವು ಸ್ವಾರ್ಥಿಗಳು ಈ ಕಾಯ್ದೆಯನ್ನು ವಿರೋಧಿಸುತ್ತಿದ್ದಾರೆ. ರೈತರನ್ನು ದಿಕ್ಕು ತಪ್ಪಿಸುವವರನ್ನು ನಂಬಬೇಡಿ. ರೈತರ ಆದಾಯ ದ್ವಿಗುಣ ಮಾಡಬೇಕು ಎಂಬುದು ಸರ್ಕಾರದ ಆಶಯವಾಗಿದೆ. ಇದಕ್ಕಾಗಿ ಎಪಿಎಂಸಿಯಲ್ಲಿ ಮಾತ್ರ ಮಾರಾಟಮಾಡಬೇಕು ಎಂಬ ನಿರ್ಬಂಧವನ್ನು ತೆಗೆದು ಹಾಕಲಾಗಿದೆ. ರೈತರಿಗೆ ಒಳ್ಳೆಯ ಬೆಲೆ ಎಲ್ಲಿ ಸಿಗುತ್ತದೋ ಅಲ್ಲಿ ಮಾರಾಟ ಮಾಡಲು ಅನುಕೂಲ ಮಾಡಿಕೊಡಲಾಗಿದೆ ಎಂದು ತಿಳಿಸಿದರು.

ಕೇಂದ್ರ ರಾಸಾಯನಿಕ ಮತ್ತು ರಸಗೊಬ್ಬರ ಸಚಿವ ಡಿ.ವಿ.ಸದಾನಂದಗೌಡ ಮಾತನಾಡಿ, ಅನ್ನದಾತನಿಗೆ ಗೌರವ ಬರುವ ರೀತಿಯಲ್ಲಿ ದೇಶದ ರಾಜನೀತಿ ನಡೆದಿರಲಿಲ್ಲ. ಪ್ರಧಾನಿ ನರೇಂದ್ರ ಮೋದಿ ರೈತನಿಗೆ ಎಲ್ಲ ಗೌರವ ಸಿಗುವ ನಿಟ್ಟಿನಲ್ಲಿ ಕೆಲಸ ಮಾಡುತ್ತಿದ್ದಾರೆ. ಅನ್ನದಾತನಿಗೆ ಬೇಕಾದ ಕೆಲಸ ಮಾಡಬಕು. ಸ್ವಾತಂತ್ರ್ಯ ಬಂದ ನಂತರವೂ ಆತ ಸ್ವಾಭಿಮಾನದಿಂದ ಬದುಕಲು ಸಾಧ್ಯವಾಗುತ್ತಿಲ್ಲ. ರೈತರು ಬೆಳೆದ ಉತ್ಪನ್ನಗಳು ರೈತನದ್ದಾಗಿರಲಿಲ್ಲ. ಅದು ದಲ್ಲಾಳಿಗಳದ್ದಾಗಿತ್ತು. ಅದರಿಂದ ಹೊರಗೆ ತರಬೇಕು ಎಂದು ಕಾನೂನು ತಿದ್ದುಪಡಿ ತರಲಾಗಿದೆ ಎಂದು ಹೇಳಿದರು.

ಸಹಕಾರ ಸಚಿವ ಎಸ್‌.ಟಿ.ಸೋಮಶೇಖರ್‌ ಮಾತನಾಡಿ, ಎಪಿಎಂಸಿ ಕಾಯ್ದೆ ತಿದ್ದುಪಡಿ ಕುರಿತು ಅನಗತ್ಯವಾಗಿ ಅಪಪ್ರಚಾರ ಮಾಡಲಾಗುತ್ತಿದೆ. ಯಾವುದೇ ಕಾರಣಕ್ಕೂ ಎಪಿಎಂಸಿಯನ್ನು ಮುಚ್ಚುವುದಿಲ್ಲ. ಎಪಿಎಂಸಿಯಲ್ಲಿ ಮೂಲಸೌಕರ್ಯ ಅಭಿವೃದ್ಧಿಗಾಗಿ 5 ಕೋಟಿ ರು. ಬಿಡುಗಡೆ ಮಾಡಲಾಗಿದೆ. ರಾಜ್ಯದಲ್ಲಿ 8500 ಎಕರೆ ಪ್ರದೇಶದಲ್ಲಿ ಎಪಿಎಂಸಿ ಇದ್ದು, ಕೋಟ್ಯಂತರ ರೈತರು ವ್ಯಾಪಾರ ಮಾಡುತ್ತಿದ್ದಾರೆ. ರೈತರಿಗೆ ಅನಾನೂಕೂಲವಾಗುವಂತಹ ತೀರ್ಮಾನವನ್ನು ಯಾವುದೇ ಕಾರಣಕ್ಕೂ ಕೈಗೊಳ್ಳುವುದಿಲ್ಲ. ಕಾಯ್ದೆಯ ವಾಸ್ತವಾಂಶದ ಕುರಿತು ರಾಜ್ಯದ ಮೂಲೆ ಮೂಲೆಗೆ ತೆರಳಿ ಅರಿವು ಮೂಡಿಸಲಾಗುವುದು. ಕೇಂದ್ರ ಮತ್ತು ರಾಜ್ಯ ಸರ್ಕಾರವು ರೈತರ ಪರ ಕೈಗೊಂಡಿರುವ ಕ್ರಮಗಳ ಕುರಿತು ಜಾಗೃತಿ ಮೂಡಿಸಲಾಗುವುದು ಎಂದರು.

ಕಾರ್ಯಕ್ರಮದಲ್ಲಿ ಉಪಮುಖ್ಯಮಂತ್ರಿ ಗೋವಿಂದ ಕಾರಜೋಳ, ಕೃಷಿ ಸಚಿವ ಬಿ.ಸಿ.ಪಾಟೀಲ್‌, ಆಹಾರ ಸಚಿವ ಗೋಪಾಲಯ್ಯ, ವಿಧಾನಪರಿಷತ್‌ ಸದಸ್ಯ ಎನ್‌.ರವಿಕುಮಾರ್‌ ಸೇರಿದಂತೆ ಇತರರು ಉಪಸ್ಥಿತರಿದ್ದರು.
ಮಾಜಿ ಪ್ರಧಾನಿ, ದಿವಂಗತ ಅಟಲ್‌ ಬಿಹಾರಿ ವಾಜಪೇಯಿ ಜನ್ಮದಿನದ ಪ್ರಯುಕ್ತ ಯಶವಂತಪುರದ ಎಪಿಎಂಸಿ ಆವರಣದಲ್ಲಿ ಶುಕ್ರವಾರ ನಡೆದ ಕಿಸಾನ್‌ ಸಮ್ಮಾನ್‌ ಕಾರ್ಯಕ್ರಮದಲ್ಲಿ ರೈತರನ್ನು ಸನ್ಮಾನಿಸಿದ ಸಿಎಂ ಬಿ.ಎಸ್‌.ಯಡಿಯೂರಪ್ಪ.

ಮಾಜಿ ಪ್ರಧಾನಿ, ದಿವಂಗತ ಅಟಲ್‌ ಬಿಹಾರಿ ವಾಜಪೇಯಿ ಜನ್ಮದಿನದ ಪ್ರಯುಕ್ತ ಯಶವಂತಪುರದ ಎಪಿಎಂಸಿ ಆವರಣದಲ್ಲಿ ಶುಕ್ರವಾರ ನಡೆದ ಕಿಸಾನ್‌ ಸಮ್ಮಾನ್‌ ಯೋಜನೆ ದಿನಾಚರಣೆ ಕಾರ್ಯಕ್ರಮದಲ್ಲಿ ಮುಖ್ಯಮಂತ್ರಿ ಬಿ.ಎಸ್‌.ಯಡಿಯೂರಪ್ಪ ಅವರು ರೈತರನ್ನು ಸನ್ಮಾನಿಸಿದರು. ಉಪಮುಖ್ಯಮಂತ್ರಿ ಗೋವಿಂದ ಕಾರಜೋಳ, ಸಹಕಾರ ಸಚಿವ ಎಸ್‌.ಟಿ.ಸೋಮಶೇಖರ್‌, ಕೃಷಿ ಸಚಿವ ಬಿ.ಸಿ.ಪಾಟೀಲ್‌, ಆಹಾರ ಸಚಿವ ಗೋಪಾಲಯ್ಯ ಇತರರು ಉಪಸ್ಥಿತರಿದ್ದರು.