ಡಾ. ಕೆ. ಸುಧಾಕರ್ ಅವರು, ರಾಜಕೀಯ ಭೀಷ್ಮ ಬಿ.ಎಸ್. ಯಡಿಯೂರಪ್ಪನವರನ್ನು ತಮ್ಮ ಗುರು ಮತ್ತು ಮಾರ್ಗದರ್ಶಕ ಎಂದು ಬಣ್ಣಿಸಿದ್ದಾರೆ. ಕೋವಿಡ್ ಸಂದರ್ಭದಲ್ಲಿನ ಯಡಿಯೂರಪ್ಪನವರ ನಾಯಕತ್ವ, ತಮ್ಮ ರಾಜಕೀಯ ಬೆಳವಣಿಗೆ ಹಾಗೂ ಚಿಕ್ಕಬಳ್ಳಾಪುರದ ಅಭಿವೃದ್ಧಿಗೆ  ಕೊಡುಗೆಗಳನ್ನು ಸ್ಮರಿಸುತ್ತಾ ಗೌರವ ಸಲ್ಲಿಸಿದ್ದಾರೆ.

-ಡಾ। ಕೆ.ಸುಧಾಕರ್‌, ಸಂಸದರು.

ಪ್ರಜಾಪ್ರಭುತ್ವದಲ್ಲಿ ಜನರ ಮನಸ್ಸನ್ನು ಗೆದ್ದು ಮತಗಳನ್ನು ಪಡೆದು ವಿಧಾನಸೌಧ ಪ್ರವೇಶಿಸುವುದು ಸುಲಭದ ಮಾತಲ್ಲ. ನಿರಂತರ ಜನಸೇವೆ, ಜನರ ಮಾತಿಗೆ ಕಿವಿಯಾಗುವುದು, ಸದಾ ರಾಜ್ಯದ ಅಭ್ಯುದಯದ ಚಿಂತನೆ ಹಾಗೂ ರಾಜಕೀಯದ ರಣತಂತ್ರಗಳ ಮೂಲಕ ಮಾತ್ರ ಒಬ್ಬ ರಾಜಕಾರಣಿ ಜನನಾಯಕನಾಗಿ ಬೆಳೆಯಲು ಸಾಧ್ಯ. ಅಂತಹ ಸುದೀರ್ಘ ರಾಜಕಾರಣವನ್ನು ನಡೆಸಿದ ರಾಜ್ಯ ರಾಜಕಾರಣದ ಭೀಷ್ಮ ಬಿ.ಎಸ್‌.ಯಡಿಯೂರಪ್ಪ. ಅವರೀಗ ನಮ್ಮೆಲ್ಲರಿಗೂ ಮಾರ್ಗದರ್ಶನ ನೀಡುವ ಉನ್ನತ ಸ್ಥಾನದಲ್ಲಿದ್ದಾರೆ. ಅವರು ಮುಖ್ಯಮಂತ್ರಿ ಹುದ್ದೆಯಿಂದ ಕೆಳಕ್ಕಿಳಿದಾಗ ನಿವೃತ್ತಿ ಬದುಕು ಆರಂಭವಾಯಿತು ಎಂದು ವ್ಯಾಖ್ಯಾನಿಸಲಾಗಿತ್ತು. ಆದರೆ ಇಂದಿಗೂ ಬಿಎಸ್‌ವೈ ಎಂದರೆ ಸಕ್ರಿಯ ರಾಜಕಾರಣದ ಶಕ್ತಿ ಎಂದೇ ಹೆಸರಾಗಿದ್ದಾರೆ. ಇಂದಿಗೂ ಬಿಎಸ್‌ವೈ ಹೆಸರು ಕೇಳಿದರೆ ಸಕ್ರಿಯವಾಗಿರುವ, ಕ್ರಿಯಾಶೀಲವಾಗಿರುವ ಬಿಜೆಪಿಯ ನಾಯಕ ಎಂದೇ ಹೇಳಲಾಗುತ್ತದೆ. ನಿವೃತ್ತಿ ಎನ್ನುವ ಪದ ಅವರ ಬಳಿ ಇಂದಿಗೂ ಸುಳಿದಿಲ್ಲ. ಅಂತಹ ಮೇರು ನಾಯಕನ ಬರೋಬ್ಬರಿ ಐವತ್ತು ವರ್ಷಗಳ ರಾಜಕೀಯ ಬದುಕಿಗೆ ಗೌರವ ಸಲ್ಲಿಸಲು ಬಿಜೆಪಿ ವತಿಯಿಂದ ಮೇ 9ರಂದು ಚಿತ್ರದುರ್ಗದಲ್ಲಿ ʼಬಿಎಸ್‌ವೈ ಅಭಿಮಾನೋತ್ಸವʼ ನಡೆಸಲಾಗುತ್ತಿದೆ.

ಇದು ಕೇವಲ ಕಾರ್ಯಕರ್ತರು ನಡೆಸುವ ಸಮಾವೇಶವಲ್ಲ ಅಥವಾ ಮುಂದಿನ ಚುನಾವಣೆಗಾಗಿ ಮಾಡುವ ಶಕ್ತಿ ಪ್ರದರ್ಶನದ ವೇದಿಕೆಯಲ್ಲ. ಇದು ಕೋಟ್ಯಂತರ ಜನರು ಸೇರಿ ಸಲ್ಲಿಸುತ್ತಿರುವ ಕೃತಜ್ಞತೆ. ಅವರು ಮಾಡಿದ ಅಭಿವೃದ್ಧಿ ಕಾರ್ಯಗಳಿಗೆ ನಾವೆಲ್ಲರೂ ಸೇರಿ ಸಲ್ಲಿಸುತ್ತಿರುವ ಸಣ್ಣ ಧನ್ಯವಾದ.

ಬಿ.ಎಸ್‌.ಯಡಿಯೂರಪ್ಪ ಎಂದರೆ ರೈತ ನಾಯಕ, ದಕ್ಷಿಣ ಭಾರತದಲ್ಲಿ ಬಿಜೆಪಿಯನ್ನು ಅಪ್ರತಿಮವಾಗಿ ಸಂಘಟಿಸಿ ಬೆಳೆಸಿದ ಸಂಘಟನಾ ಚತುರ, ಸದನದಲ್ಲಿ ಮರೆಯಲಾರದಂತಹ ವಾಕ್‌ ಚಾತುರ್ಯ ತೋರಿದ ಪಟು, ಕಟು ಸನ್ನಿವೇಶಗಳನ್ನು ಸುಲಭವಾಗಿ ನಿಭಾಯಿಸಿದ ಛಲಗಾರ, ಹೀಗೆ ಅನೇಕ ರೀತಿಯಲ್ಲಿ ಬಿಎಸ್‌ವೈ ದೊಡ್ಡ ಸ್ಪೂರ್ತಿಯಾಗಿ ಹೊರಹೊಮ್ಮುತ್ತಾರೆ. ಆದರೆ ವೈಯಕ್ತಿಕವಾಗಿ ನನ್ನ ಪಾಲಿಗೆ ಅವರು ಮಹಾನ್‌ ಗುರು ಹಾಗೂ ಮಾರ್ಗದರ್ಶಕ.

ಕೋವಿಡ್‌ ಸವಾಲು:

ಕೋವಿಡ್‌ನಂತಹ ಸನ್ನಿವೇಶವನ್ನು ಎದುರಿಸುವ ಹೊಣೆ ಬೇರೆಯವರಿಗೆ ಬಂದಿದ್ದರೆ ಭಯ ಪಡುತ್ತಿದ್ದರೋ ಏನೋ. ಆದರೆ ಯಡಿಯೂರಪ್ಪನವರು ಮುಖ್ಯಮಂತ್ರಿಯಾಗಿ ಕೋವಿಡ್‌ ಸನ್ನಿವೇಶವನ್ನು ನಿಭಾಯಿಸಿದ್ದು ಅಧ್ಯಯನ ಯೋಗ್ಯವಾದ ವಿಷಯ. ಕೋವಿಡ್‌ ಆರಂಭವಾದ ಸಮಯದಲ್ಲಿ ನಾನು ವೈದ್ಯಕೀಯ ಶಿಕ್ಷಣ ಸಚಿವನಾಗಿದ್ದೆ. ಶ್ರೀರಾಮುಲು ಅವರ ಬಳಿ ಆರೋಗ್ಯ ಖಾತೆ ಇತ್ತು. ಶತಮಾನದ ಅತ್ಯಂತ ಭೀಕರ ಸಾಂಕ್ರಾಮಿಕ ರೋಗದ ಪರಿಸ್ಥಿತಿ ಇರುವಾಗ ಆರೋಗ್ಯ ಮತ್ತು ವೈದ್ಯಕೀಯ ಶಿಕ್ಷಣ ಎರಡೂ ಇಲಾಖೆಗಳು ಒಬ್ಬರ ಬಳಿ ಇರುವುದು ನಿರ್ವಹಣೆ ದೃಷ್ಟಿಯಿಂದ ಸೂಕ್ತ ಎಂದು ಅನೇಕ ತಜ್ಞರು ಅಭಿಪ್ರಾಯ ಪಟ್ಟಾಗ, ಶ್ರೀರಾಮುಲು ಅವರಂತಹ ಹಿರಿಯ ಸಚಿವರ ಮನವೊಲಿಸಿ ಯಾವುದೇ ಗೊಂದಲಕ್ಕೆ ಅವಕಾಶ ಕೊಡದೆ, ಎರಡೂ ಇಲಾಖೆಗಳ ಜವಾಬ್ದಾರಿ ನನಗೆ ಕೊಟ್ಟರು. ಇದು ಅವರ ರಾಜಕೀಯ ಮತ್ತು ಆಡಳಿತಾತ್ಮಕ ಪ್ರಬುದ್ಧತೆಗೆ ಸಾಕ್ಷಿ. ಆ ಸಂದರ್ಭ ಹೇಗಿತ್ತು ಎಂದರೆ, ವೈದ್ಯರು, ಶುಶ್ರೂಷಕರು, ಅಧಿಕಾರಿಗಳು ಹೀಗೆ ಎಲ್ಲರೂ ಭೀತಿಯಲ್ಲಿದ್ದರು. ಲಾಕ್‌ಡೌನ್‌ನಿಂದಾಗಿ ಆರ್ಥಿಕ ವ್ಯವಸ್ಥೆ ಕೆಳಕ್ಕೆ ಇಳಿದುಹೋಗಿತ್ತು. ಅಂತಹ ಸಮಯದಲ್ಲಿ ಯಡಿಯೂರಪ್ಪನವರು ಪ್ರತಿ ದಿನ ನನ್ನನ್ನು ಕರೆದು ಆರೋಗ್ಯ ಕ್ಷೇತ್ರದ ಸ್ಥಿತಿಗತಿಗಳ ಬಗ್ಗೆ ಮಾಹಿತಿ ಪಡೆದು ಸಲಹೆ, ಸೂಚನೆಗಳನ್ನು ನೀಡುತ್ತಿದ್ದರು. ವೈದ್ಯರು, ಅಧಿಕಾರಿಗಳಿಗೆ ಧೈರ್ಯ ತುಂಬಿ ಕೋವಿಡ್‌ ಸ್ಥಿತಿಯನ್ನು ನಿಭಾಯಿಸಲು ಹುರಿದುಂಬಿಸುತ್ತಿದ್ದರು. ಅವರು ಕೋವಿಡ್ ಸೋಂಕಿತರಾಗಿ ಆಸ್ಪತ್ರೆಯಲ್ಲಿ ಚಿಕಿತ್ಸೆ ಪಡೆಯುತ್ತಿದ್ದಾಗಲೂ ನನ್ನ ಜೊತೆ ನಿರಂತರ ಸಂಪರ್ಕದಲ್ಲಿದ್ದು ಮಾಹಿತಿ ಪಡೆಯುತ್ತಿದ್ದರು. ಅನೇಕ ಬಾರಿ ಹಗಲು-ರಾತ್ರಿ ಎನ್ನದೆ ಮುಂಜಾನೆ 6 ಗಂಟೆಗೆ, ತಡರಾತ್ರಿ 1-2 ಗಂಟೆಗೆ ಸಭೆಗಳನ್ನು ನಡೆಸಿ ಜನರ ಸಮಸ್ಯೆಗಳನ್ನು ಪರಿಹರಿಸುತ್ತಿದ್ದರು. ಪ್ರತಿದಿನ ಸಂಜೆ ಅವರ ಗೃಹ ಕಚೇರಿಯಲ್ಲಿ ನಾನು, ಬೊಮ್ಮಾಯಿ ಅವರು, ಅಶೋಕ್ ಅವರು ಸೇರಿದಂತೆ ಸಂಪುಟದ ಹಿರಿಯ ಸಚಿವರು, ವಿಜಯೇಂದ್ರ ಸೇರಿ ಗಂಟೆಗಟ್ಟಲೆ ಸಭೆ ನಡೆಸುತ್ತಿದ್ದೆವು. ಅದರಿಂದಾಗಿ ಕೋವಿಡ್‌ ಸನ್ನಿವೇಶವನ್ನು ಸಮರ್ಥವಾಗಿ ಎದುರಿಸಲು ನನಗೆ ಸಾಧ್ಯವಾಯಿತು. ಆರೋಗ್ಯ ಮತ್ತು ವೈದ್ಯಕೀಯ ಶಿಕ್ಷಣ ಸಚಿವನಾಗಿ ಜನರು ನನ್ನ ಮೇಲೆ ಅಪಾರ ನಿರೀಕ್ಷೆ ಇಟ್ಟುಕೊಂಡಿದ್ದರು. ಆಕ್ಸಿಜನ್‌ ಕೊರತೆ, ಹಾಸಿಗೆಗಳ ಕೊರತೆ, ಆ್ಯಂಬುಲೆನ್ಸ್‌, ಕೋವಿಡ್‌ ಸೆಂಟರ್‌ಗಳ ನಿರ್ಮಾಣ, ಆಕ್ಸಿಜನ್‌ ಕಾನ್ಸಂಟ್ರೇಟರ್‌ಗಳ ಪೂರೈಕೆ, ಔಷಧಿ ಪೂರೈಕೆ ಹೀಗೆ ಒಂದರ ಮೇಲೆ ಒಂದರಂತೆ ಸವಾಲುಗಳು ಬಂದಾಗ ಅವುಗಳನ್ನು ಮೆಟ್ಟಿ ನಿಂತು ಪರಿಹರಿಸಲು ಬಿಎಸ್‌ವೈ ನನ್ನ ಹಿಂದೆ ಶಕ್ತಿಯಾಗಿ ನಿಂತಿದ್ದರು.

ಕೋವಿಡ್‌ ಲಸಿಕಾಕರಣ ಆರಂಭವಾದಾಗ ವಿರೋಧ ಪಕ್ಷಗಳ ನಾಯಕರು ಲಸಿಕೆಯ ಬಗ್ಗೆ ಟೀಕೆ ಮಾಡಿ ಅನುಮಾನ ವ್ಯಕ್ತಪಡಿಸುತ್ತಿದ್ದರು. ಈ ಬಗ್ಗೆ ಜನರಲ್ಲೂ ಅನುಮಾನಗಳಿತ್ತು. ಆಗ ತಾವೇ ಮಾದರಿಯಾಗಬೇಕೆಂದು ತೀರ್ಮಾನಿಸಿದ ಯಡಿಯೂರಪ್ಪನವರು ಸ್ವತಃ ಮುಂದೆ ಬಂದು ಲಸಿಕೆ ಪಡೆದರು. ಪತ್ರಿಕೆಗಳಲ್ಲಿ, ಟಿವಿಗಳಲ್ಲಿ ರಾಜ್ಯದ ಮುಖ್ಯಮಂತ್ರಿ ಲಸಿಕೆ ಪಡೆಯುತ್ತಿರುವ ದೃಶ್ಯಗಳ ಪ್ರಸಾರವಾಯಿತು. ಆ ಘಟನೆ ಎಷ್ಟರ ಮಟ್ಟಿಗೆ ಪರಿಣಾಮಕಾರಿಯಾಯಿತು ಎಂದರೆ, ಮುಖ್ಯಮಂತ್ರಿಯೇ ಲಸಿಕೆ ಪಡೆದಿದ್ದಾರೆ ಎಂಬ ವಿಶ್ವಾಸ ಜನಮಾನಸದಲ್ಲಿ ಮೂಡಿತ್ತು. ಕೆಲವೇ ದಿನಗಳಲ್ಲಿ ಲಸಿಕೆ ಪಡೆಯುವವರ ಸಂಖ್ಯೆ ಹೆಚ್ಚಾಯಿತು. ಇವೆಲ್ಲದರ ಪರಿಣಾಮವಾಗಿ, ರಾಜ್ಯದಲ್ಲಿ ಕೋವಿಡ್‌ ಯಶಸ್ವಿಯಾಗಿ ನಿಯಂತ್ರಣಕ್ಕೆ ಬಂತು. ದಿ ಇಂಡಿಯಾ ಟುಡೇ ಗ್ರೂಪ್‌ನಿಂದ ಕರ್ನಾಟಕಕ್ಕೆ ಹೆಲ್ತ್‌ಗಿರಿ ಪ್ರಶಸ್ತಿ ದೊರೆಯಿತು.

ಕೋವಿಡ್‌ನಿಂದ ಆರ್ಥಿಕತೆ ಇಳಿಮುಖವಾಗಿದ್ದಾಗ ಯಡಿಯೂರಪ್ಪನವರು ಎದೆಗುಂದಲಿಲ್ಲ. ಅನೇಕ ಯೋಜನೆಗಳು ಸ್ಥಗಿತವಾಗಬಹುದು ಎಂದೇ ಜನರು ಅಂದುಕೊಂಡಿದ್ದರು. ಆದರೆ ಅಚ್ಚರಿ ಎನ್ನುವಂತೆ ಅವರು ಹಲವು ಯೋಜನೆಗಳನ್ನು ಪ್ರಕಟಿಸಿದರು. ನೇಕಾರರಿಗೆ ಆರ್ಥಿಕ ನೆರವು ನೀಡಲು ತಂದ ನೇಕಾರ್‌ ಸಮ್ಮಾನ್‌ ಯೋಜನೆ, ಹೂ ಬೆಳೆಗಾರರಿಗೆ ಪರಿಹಾರ, ಆಟೋ-ಟ್ಯಾಕ್ಸಿ ಚಾಲಕರಿಗೆ ಪರಿಹಾರ, ಶಿಕ್ಷಕರಿಗೆ ಪರಿಹಾರ ಹೀಗೆ ವಿವಿಧ ಜನವರ್ಗಕ್ಕೆ ಪರಿಹಾರಗಳನ್ನು ನೀಡಿದರು. ಸ್ವತಃ ತಮಗೆ ಕೋವಿಡ್‌ ಸೋಂಕು ಬಂದು ಆಸ್ಪತ್ರೆಗೆ ದಾಖಲಾಗಿದ್ದರೂ, ಅಲ್ಲೂ ವಿಶ್ರಮಿಸದೆ ಯಾವೆಲ್ಲ ಕ್ರಮಗಳನ್ನು ಕೈಗೊಳ್ಳಲಾಗುತ್ತಿದೆ ಎಂದು ಮಾಹಿತಿ ಪಡೆಯುತ್ತಿದ್ದರು. ಒಬ್ಬ ಜನನಾಯಕನಿಗೆ ಇರಬೇಕಾದ ಇಚ್ಛಾಸಕ್ತಿ ಹಾಗೂ ಆತ್ಮಶಕ್ತಿಗೆ ಇದು ಉತ್ತಮ ನಿದರ್ಶನ.

ನನ್ನ ಮಾರ್ಗದರ್ಶಕ:

2019ರಲ್ಲಿ ನಾನು ಅನಿವಾರ್ಯವಾಗಿ ಕಾಂಗ್ರೆಸ್ ಪಕ್ಷ ತೊರೆದಾಗ, ನನಗೆ ಮಾರ್ಗದರ್ಶಕರಾಗಿ ಸಿಕ್ಕವರು ಬಿ.ಎಸ್‌.ಯಡಿಯೂರಪ್ಪ. ಬಿಜೆಪಿಗೆ ಕೇವಲ 5,000 ಮತ ಇದ್ದಂತಹ ಚಿಕ್ಕಬಳ್ಳಾಪುರ ಕ್ಷೇತ್ರದಲ್ಲಿ ಉಪಚುನಾವಣೆ ಎದುರಿಸುವುದು ದೊಡ್ಡ ಸವಾಲಾಗಿತ್ತು. ಅಂದು ನನ್ನ ರಾಜಕೀಯ ಭವಿಷ್ಯವನ್ನೇ ಒತ್ತೆ ಇಟ್ಟು ಬಿಜೆಪಿ ಸೇರಿ ಉಪಚುನಾವಣೆ ಎದುರಿಸುವ ರಿಸ್ಕ್ ತೆಗೆದುಕೊಂಡಿದ್ದು ಯಡಿಯೂರಪ್ಪನವರಿಗೆ 2018ರ ಚುನಾವಣೆಯ ಸಿಕ್ಕಿದ್ದ ಜನಾದೇಶಕ್ಕೆ ನ್ಯಾಯ ಒದಗಿಸಲು. ಯಡಿಯೂರಪ್ಪನವರು ಸಹ ನನ್ನ ತ್ಯಾಗ, ಹೋರಾಟಕ್ಕೆ ಗೌರವ ಕೊಟ್ಟು, ನನ್ನ ಕೈ ಹಿಡಿದು, ಉಪಚುನಾವಣಾ ಪ್ರಚಾರಕ್ಕೆ ಬಂದು ಮನಸ್ಸನ್ನು ಗಟ್ಟಿ ಮಾಡಿದರು. ನಾನು ಬಿಜೆಪಿಗೆ ಬರಬೇಕಾದ ಅನಿವಾರ್ಯತೆ ಏನಿತ್ತು ಎಂಬುದನ್ನು ಚಿಕ್ಕಬಳ್ಳಾಪುರದ ಜನತೆಗೆ ಮನವರಿಕೆ ಮಾಡಿಸುವಲ್ಲಿ ಅವರ ಪಾತ್ರ ಬಹಳ ದೊಡ್ಡದಿದೆ. ನಾನು ಬಿಜೆಪಿಗೆ ಬಂದ ಬಳಿಕ, ಬಿಎಸ್‌ವೈ ಸಹಕಾರದಲ್ಲಿ ಪಕ್ಷ ಸಂಘಟನೆಗೆ ಒತ್ತು ನೀಡಿದೆ. ಆ ಉಪಚುನಾವಣೆಯಲ್ಲಿ ಅಭೂತಪೂರ್ವವಾಗಿ ಗೆಲ್ಲುವುದರ ಜೊತೆಗೆ, ನಂತರದ ವರ್ಷಗಳಲ್ಲೂ ಪಕ್ಷದ ಸಂಘಟನೆ ವೇಗವಾಗಿ ಬೆಳೆದಿದೆ.

ಚುನಾವಣೆಯ ನಂತರ ನಾನು ಬಿಜೆಪಿಯ ಶಾಸಕನಾಗಿ, ನಂತರ ಅತಿ ಕಿರಿಯ ವಯಸ್ಸಿನ ಸಂಪುಟ ಸದಸ್ಯನಾಗಿ ಕೆಲಸ ಮಾಡಲು ಯಡಿಯೂರಪ್ಪ ಪ್ರೋತ್ಸಾಹಿಸಿದರು. ನನ್ನ ರಾಜಕೀಯ ಬೆಳವಣಿಗೆಯಲ್ಲಿ ಅವರ ಪಾತ್ರ ಅಪಾರ. ನಾಯಕ ಎಂದರೆ ತಂಡದ ಸದಸ್ಯರನ್ನು ಹಿಂದಿಕ್ಕಿ ತಾನು ಮುಂದೆ ನಿಲ್ಲುವುದಲ್ಲ. ತಂಡದ ಸದಸ್ಯರು ಮುಂದಕ್ಕೆ ಹೋಗುವಂತೆ ಪ್ರೇರಣೆ ನೀಡುವವನೇ ನಿಜವಾದ ನಾಯಕ. ಯಡಿಯೂರಪ್ಪನವರು ಯಾವಾಗಲೂ ತಮ್ಮ ತಂಡವನ್ನು ಮುಂದಕ್ಕೆ ಕಳುಹಿಸಿ ತಾವು ಹಿಂದೆ ನಿಂತು ಪ್ರೇರಕಶಕ್ತಿಯಾಗುತ್ತಿದ್ದರು.

ಚಿಕ್ಕಬಳ್ಳಾಪುರಕ್ಕೆ ಒಂದು ಮೆಡಿಕಲ್‌ ಕಾಲೇಜು ಬೇಕೆಂಬುದು ನನ್ನ ಬಹುವರ್ಷಗಳ ಕನಸು. ಅದಕ್ಕೆ ನೀರೆರೆದವರು ಬಿಎಸ್‌ವೈ. ನಾನು ಈ ಬಗ್ಗೆ ಅವರ ಬಳಿ ಚರ್ಚಿಸಿದಾಗ ಬಹಳ ಸಂತೋಷದಿಂದ ಒಪ್ಪಿಕೊಂಡು ಎಲ್ಲ ಬಗೆಯ ನೆರವು ನೀಡಿದರು. ಅದರಿಂದಾಗಿ ಬಹಳ ಕಡಿಮೆ ಸಮಯದಲ್ಲಿ ಸುಸಜ್ಜಿತವಾದ ಮೆಡಿಕಲ್‌ ಕಾಲೇಜು ತಲೆ ಎತ್ತಿ ನಿಂತಿದೆ. ಮಂಚೇನಹಳ್ಳಿಯ ಜನರು ಪ್ರತ್ಯೇಕ ತಾಲೂಕಿಗಾಗಿ ಬಹಳ ವರ್ಷಗಳಿಂದ ಬೇಡಿಕೆ ಇಡುತ್ತಿದ್ದರು. ಇದನ್ನು ಕೂಡ ನಾನು ಪ್ರಸ್ತಾಪಿಸಿದಾಗ ಇಲ್ಲ ಎನ್ನದೆ ಅದನ್ನು ಮಂಜೂರು ಮಾಡಿಕೊಟ್ಟರು. ಜಿಲ್ಲೆಗೆ ಪ್ರತ್ಯೇಕ ಹಾಲು ಒಕ್ಕೂಟ ಆರಂಭಿಸುವ ಪ್ರಯತ್ನಕ್ಕೂ ಅವರು ಚಾಲಕಶಕ್ತಿಯಾದರು. ನಮ್ಮ ಜಿಲ್ಲೆಯ ಹಾಲು ಒಕ್ಕೂಟವನ್ನು ಕೋಲಾರದಿಂದ ಪ್ರತ್ಯೇಕ ಮಾಡಿ ಸುಸಜ್ಜಿತ ಒಕ್ಕೂಟ ರಚಿಸಿದೆವು. ಇದು ನಮ್ಮ ಜಿಲ್ಲೆಯ ರೈತಾಪಿ ವರ್ಗಕ್ಕೆ ಸಿಕ್ಕ ದೊಡ್ಡ ಶಕ್ತಿ. ಹೀಗೆ ನನ್ನ ಜನರು ನನ್ನನ್ನು ಸದಾ ನೆನಪಿನಲ್ಲಿರಿಸುವಂತೆ ಮಾಡಲು ಯಡಿಯೂರಪ್ಪನವರು ಬೆಂಬಲಿಸಿದ್ದಾರೆ. ನನ್ನಂತೆಯೇ ಅನೇಕ ಯುವ ರಾಜಕಾರಣಿಗಳನ್ನು ಇದೇ ರೀತಿಯಲ್ಲಿ ಪ್ರೋತ್ಸಾಹಿಸಿ ಬೆಳೆಸಿದ್ದಾರೆ.

ರಾಜ್ಯದ ಒಕ್ಕಲಿಗ ಸಮುದಾಯ ಬಿ.ಎಸ್‌.ಯಡಿಯೂರಪ್ಪನವರಿಗೆ ಯಾವಾಗಲೂ ಋಣಿಯಾಗಿದೆ. ಒಕ್ಕಲಿಗ ಸಮುದಾಯದ ಜನಸಂಖ್ಯೆ ಹೆಚ್ಚಿರುವುದು ನಿಜ. ಆದರೆ ಸಮಸ್ಯೆಗಳು ಕೂಡ ಅಷ್ಟೇ ಹೆಚ್ಚಿದೆ. ಈ ಬಗ್ಗೆ ನಾನು ಹಲವಾರು ಬಾರಿ ಅವರಲ್ಲಿ ಪ್ರಸ್ತಾಪ ಮಾಡಿದ್ದೆ. ನನ್ನಂತಹ ಅನೇಕರ ಮನದ ಮಾತನ್ನು ಅರಿತ ಅವರು ಒಕ್ಕಲಿಗ ಅಭಿವೃದ್ಧಿ ನಿಗಮವನ್ನು ಸ್ಥಾಪಿಸಿ ಒಂದೇ ಬಾರಿಗೆ ₹500 ಕೋಟಿ ಅನುದಾನ ನೀಡಿದ್ದರು. ಇಂದು ಒಕ್ಕಲಿಗರ ಅನೇಕ ಕಲ್ಯಾಣ ಕಾರ್ಯಕ್ರಮಗಳನ್ನು ಈ ನಿಗಮ ಜಾರಿ ಮಾಡಿದೆ. ಇದಕ್ಕೆಲ್ಲ ಯಡಿಯೂರಪ್ಪನವರೇ ಕಾರಣೀಭೂತರು.

ಕಲಿಕೆ ನಿರಂತರ:

ಯಡಿಯೂರಪ್ಪನವರನ್ನು ಯುವ ರಾಜಕಾರಣಿಗಳು ಗುರುಗಳು ಎಂದೇ ಭಾವಿಸುತ್ತಾರೆ. ಆದರೆ ಯಡಿಯೂರಪ್ಪ ತಮ್ಮನ್ನು ತಾವು ಯಾವಾಗಲೂ ವಿದ್ಯಾರ್ಥಿ ಎಂದೇ ಭಾವಿಸುತ್ತಾರೆ. ಯಾವುದಾದರೂ ಸಭೆಗಳಿಗೆ ಹೋದರೆ ಯಾವುದೇ ಮುಜುಗರವಿಲ್ಲದೆ ಕೈಯಲ್ಲಿ ಪುಸ್ತಕ, ಪೆನ್‌ ಹಿಡಿದುಕೊಂಡು ಶಿಸ್ತಿನ ವಿದ್ಯಾರ್ಥಿಯಂತೆ ಮುಖ್ಯವಾದ ವಿಷಯಗಳನ್ನು ನೋಟ್‌ ಮಾಡಿಕೊಳ್ಳುತ್ತಾರೆ. ಅವರ ಶಿಸ್ತು ಹಾಗೂ ಕಲಿಕಾ ಅಭ್ಯಾಸ ಹೊಸ ರಾಜಕಾರಣಿಗಳಿಗೆ ಅನುಕರಣೀಯ.

ಯಡಿಯೂರಪ್ಪ ಯಾವಾಗಲೂ ಮುಂಗೋಪಿ ಎಂದು ಟೀಕಿಸುವವರೂ ಇದ್ದಾರೆ. ಅಧಿಕಾರಿಗಳ ಮೇಲೆ, ಆಪ್ತರ ಮೇಲೆ ಕೂಡಲೇ ಸಿಟ್ಟಾಗಿ ತರಾಟೆಗೆ ತೆಗೆದುಕೊಳ್ಳುವುದು ಅನೇಕ ಬಾರಿ ಮಾಧ್ಯಮಗಳಲ್ಲಿ ಪ್ರಸಾರವಾಗಿತ್ತು. ಆದರೆ ವಾಸ್ತವದಲ್ಲಿ ಯಡಿಯೂರಪ್ಪ ಮುಂಗೋಪಿಯಲ್ಲ. ಅವರ ಕೋಪದ ಹಿಂದೆ ಸಾಗರದಷ್ಟು ಮಮಕಾರವಿದೆ. ಮುಖ್ಯಮಂತ್ರಿಯಾಗಿದ್ದಾಗ ಹೇಳಿದ ಕೆಲಸಗಳು ಆಗದೇ ಇದ್ದಾಗ, ಯೋಜನೆಗಳು ವಿಳಂಬವಾದಾಗ, ಜನರಿಗೆ ಸಮಸ್ಯೆಯಾಗಿದ್ದರೂ ಅದನ್ನು ಪರಿಹರಿಸದೇ ಇದ್ದಾಗ ಅವರು ದಿಢೀರನೆ ಸಿಡಿಯುತ್ತಿದ್ದರು. ಹಾಗೆಯೇ ಕೆಲ ನಿಮಿಷಗಳ ಬಳಿಕ ಸಿಟ್ಟು ಕಡಿಮೆಯಾಗಿ ಸಹಜವಾಗಿ ಪ್ರೀತಿಯಿಂದ ಮಾತಾಡುತ್ತಿದ್ದರು. ಅಷ್ಟು ಹೊತ್ತು ಕೋಪಕ್ಕೆ ಗುರಿಯಾದ ವ್ಯಕ್ತಿಗೆ, ಕೆಲ ನಿಮಿಷಗಳ ಹಿಂದೆ ನನಗೆ ಬೈದಿದ್ದು ಇವರೇನಾ ಎಂದು ಅಚ್ಚರಿಪಡುವಂತಾಗುತ್ತಿತ್ತು. ಅವರ ಕೋಪದಲ್ಲಿ ಜನರ ಕಡೆಗಿನ ಕಾಳಜಿ ಅಡಗಿರುತ್ತದೆಯೇ ಹೊರತು, ವೈಯಕ್ತಿಕ ದ್ವೇಷ, ಮತ್ಸರ ಎಂದೂ ಸುಳಿದಿಲ್ಲ. ರಾಜಕೀಯವಾಗಿ ಯಾರನ್ನಾದರೂ ಮುಗಿಸಬೇಕು ಎಂಬ ದ್ವೇಷ ರಾಜಕಾರಣವನ್ನು ಅವರು ಎಂದಿಗೂ ಮಾಡಿಲ್ಲ. ಜೊತೆಗೆ ಇದ್ದವರನ್ನು ಬೆಳೆಸುವುದು ಅವರ ಸಹೃದಯ ರಾಜಕಾರಣದ ಭಾಗ.

ಯಡಿಯೂರಪ್ಪನವರ ದೇಹಕ್ಕೆ ಈಗ ವಯಸ್ಸಾಗಿರಬಹುದು. ಆದರೆ ಅವರ ಮನಸ್ಸು ಮಾತ್ರ ಇಂದಿಗೂ ಯುವ ರಾಜಕಾರಣಿಯಂತಿದೆ. ಜನರು ತಮ್ಮ ಸಮಸ್ಯೆಗಳನ್ನು ಬಿಎಸ್‌ವೈ ಬಳಿ ಹೊತ್ತೊಯ್ದರೆ, ಮರಳಿ ಬರುವಾಗ ಆ ಸಮಸ್ಯೆಗೆ ಪರಿಹಾರ ಸಿಕ್ಕಿರುತ್ತದೆ. ಇಂದು ಯುವಜನರು ರಾಜಕಾರಣ ಪ್ರವೇಶ ಮಾಡಲು ಹಿಂಜರಿಯುತ್ತಿದ್ದಾರೆ. ಆದರೆ ಯಡಿಯೂರಪ್ಪನವರ ಬದುಕನ್ನು ನೋಡಿದರೆ ಹೊಸಬರಿಗೆ ರಾಜಕಾರಣಕ್ಕೆ ಬರಲು ಪ್ರೇರಣೆ ಸಿಗುವುದು ಖಂಡಿತ. ಅವರ ಬದುಕು, ಹೋರಾಟ ಹಾಗೂ ಸಾಧನೆಗಳು ಪ್ರತ್ಯೇಕವಾದ ರಾಜಕೀಯ ಇತಿಹಾಸವನ್ನು ಸೃಷ್ಟಿಸಿದೆ. ಶಿಕ್ಷಣ ಸಂಸ್ಥೆಗಳು ಅಥವಾ ರಾಜ್ಯಶಾಸ್ತ್ರದ ವಿದ್ಯಾರ್ಥಿಗಳು ಈ ಬಗ್ಗೆ ಅಧ್ಯಯನ ನಡೆಸಿ ಪುಸ್ತಕ ಪ್ರಕಟಿಸಿದರೆ ಅದು ಮಹತ್ವದ ದಾಖಲೆಯಾಗುತ್ತದೆ.