ಮುಖ್ಯಮಂತ್ರಿಗಳು ಘೋಷಿಸಿರುವ ಹೊಸ ಮೀಸಲಾತಿ ನೀತಿಯನ್ನು ಸ್ವಾಗತಿಸುತ್ತೇನೆ. ಇದಕ್ಕೆ ಶೇ.90ರಷ್ಟು ನರಿಂದ ಸಹಮತ ವ್ಯಕ್ತವಾಗಿದೆ. ಜನರಿಂದ ಒಳ್ಳೆಯ ಅಭಿಪ್ರಾಯ ಬಂದಿದೆ. ಯಾರೋ ನಾಲ್ಕೈದು ಮಂದಿ ಮಾತ್ರ ವಿರೋಧ ವ್ಯಕ್ತಪಡಿಸುತ್ತಿದ್ದಾರೆ: ಯಡಿಯೂರಪ್ಪ
ಬೆಂಗಳೂರು(ಮಾ.28): ಶಿಕಾರಿಪುರದ ತಮ್ಮ ಮನೆ ಮೇಲೆ ತಪ್ಪು ಗ್ರಹಿಕೆಯಿಂದ ಬಂಜಾರ ಸಮುದಾಯದ ಕೆಲವರು ಕಲ್ಲು ತೂರಾಟ ನಡೆಸಿದ್ದಾರೆ. ಹಾಗಾಗಿ ಘಟನೆ ಸಂಬಂಧ ಯಾರನ್ನೂ ಬಂಧಿಸದಂತೆ ಅಧಿಕಾರಿಗಳಿಗೆ ಸೂಚಿಸಿದ್ದೇನೆ ಎಂದು ಮಾಜಿ ಮುಖ್ಯಮಂತ್ರಿ ಬಿ.ಎಸ್.ಯಡಿಯೂರಪ್ಪ ಹೇಳಿದ್ದಾರೆ.
ನಗರದ ತಮ್ಮ ಸರ್ಕಾರಿ ನಿವಾಸ ಕಾವೇರಿಯಲ್ಲಿ ಸೋಮವಾರ ಸಂಜೆ ತುರ್ತು ಸುದ್ದಿಗೋಷ್ಠಿ ನಡೆಸಿ ಮಾತನಾಡಿದ ಅವರು, ಮೊದಲಿನಿಂದಲೂ ಶಿಕಾರಿಪುರ ತಾಲೂಕಿನ ಜನರು ಶಾಂತಿಪ್ರಿಯರು. ಇವತ್ತಿನ ಘಟನಾವಳಿಗಳು ಅನಿರೀಕ್ಷಿತವಾಗಿದ್ದು, ಈಗ ಪರಿಸ್ಥಿತಿ ಶಾಂತವಾಗಿದೆ. ನಮ್ಮ ಮನೆ ಮೇಲೆ ತಪ್ಪು ಗ್ರಹಿಕೆಯಿಂದ ಬಂಜಾರ ಸಮುದಾಯದ ಕೆಲವರು ಕಲ್ಲು ತೂರಾಟ ಮಾಡಿದ್ದಾರೆ. ಈ ಘಟನೆ ತಿಳಿದ ಬಳಿಕ ಎಸ್ಪಿ ಮತ್ತು ಡಿಸಿ ಅವರ ಜತೆ ಮಾತನಾಡಿದ್ದೇನೆ. ನನ್ನೊಂದಿಗೆ ಬಂಜಾರ ಸಮುದಾಯದವರು ಇದ್ದಾರೆ. ನಾನು ನಾಲ್ಕು ಬಾರಿ ಮುಖ್ಯಮಂತ್ರಿಯಾಗಲು ಆ ಸಮುದಾಯ ದೊಡ್ಡ ಶಕ್ತಿಯಾಗಿ ಬೆಂಬಲ ನೀಡಿತ್ತು ಎಂದು ಸ್ಮರಿಸಿದರು.
ಶಿಕಾರಿಪುರದಲ್ಲಿ ತಾರಕಕ್ಕೇರಿದ ಒಳ ಮೀಸಲಾತಿ ಪ್ರತಿಭಟನೆ, ಬಿಎಸ್‌ವೈ ಮನೆಗೆ ಕಲ್ಲು ತೂರಾಟ, 144 ಸೆಕ್ಷನ್ ಜಾರಿ!
ನಾನು ತಾಂಡ ಅಭಿವೃದ್ಧಿ ನಿಗಮ ಮಾಡಿದ್ದೇನೆ. ಆ ಸಮುದಾಯದ ಪ್ರಗತಿಗೆ ಪ್ರಾಮಾಣಿಕವಾಗಿ ದುಡಿದ್ದೇನೆ. ಹೀಗಾಗಿ ತಪ್ಪು ಗ್ರಹಿಕೆಯಿಂದ ನಮ್ಮ ಮನೆ ಮೇಲೆ ಕಲ್ಲು ತೂರಾಟದಂತಹ ಘಟನೆ ನಡೆದಿದೆ. ಈ ಗಲಾಟೆ ಸಂಬಂಧ ಆ ಸಮುದಾಯದ ಹಿರಿಯ ಮುಖಂಡರ ಜತೆ ಮಾತನಾಡುತ್ತೇನೆ. ಗೊಂದಲಗಳಾಗಲು ಕಾರಣವೇನು ಎಂದು ಅವರೊಂದಿಗೆ ಸಮಾಲೋಚಿಸುತ್ತೇನೆ. ಬಂಜಾರ ಸಮುದಾಯದ ಸಮಸ್ಯೆಗಳೇನೇ ಇದ್ದರೂ ಬಗೆಹರಿಸಲು ನಾನು ಮತ್ತು ವಿಜಯೇಂದ್ರ ದಿನದ ಇಪ್ಪತ್ತನಾಲ್ಕು ತಾಸು ಸಿದ್ಧರಿದ್ದೇವೆ. ಶಾಂತಿ ಸುವ್ಯವಸ್ಥೆಗೆ ಹೆಸರುವಾಸಿಯಾದ ಶಿಕಾರಿಪುರ ತಾಲೂಕಿನಲ್ಲಿ ಯಾವುದೇ ಕಾರಣಕ್ಕೂ ಸಮಾಜಘಾತಕ ಶಕ್ತಿಗಳಿಗೆ ಅವಕಾಶ ನೀಡಬಾರದು ಎಂದು ಮನವಿ ಮಾಡಿದರು.
ಏಕಾಏಕಿ ಹಲ್ಲೆ ನಡೆದಾಗ ಮನಸ್ಸಿಗೆ ನೋವಾಗುತ್ತದೆ ಎಂದು ಬೇಸರ ವ್ಯಕ್ತಪಡಿಸಿದ ಯಡಿಯೂರಪ್ಪ, ಈ ಘಟನೆಗೆ ಯಾರಾದರೂ ಕುಮ್ಮಕ್ಕು ನೀಡಿದ್ದಾರೆಯೇ ಎಂಬ ಪತ್ರಕರ್ತರ ಪ್ರಶ್ನೆಗೆ ಈ ಸಮಯದಲ್ಲಿ ಹೇಳಲಿಚ್ಛಿಸುವುದಿಲ್ಲ ಎಂದರು. ನಾನು ಪ್ರತ್ಯಕ್ಷವಾಗಿ ನೋಡದೆ ಕುಮ್ಮಕ್ಕು ನೀಡಿರುವ ಬಗ್ಗೆ ಮಾತನಾಡುವುದಿಲ್ಲ. ಘಟನೆಗೆ ಕಾಂಗ್ರೆಸ್ ನಾಯಕರ ಪ್ರಚೋದನೆ ಇದೆ ಎಂಬ ಕೇಂದ್ರ ಸಚಿವ ನಾರಾಯಣಸ್ವಾಮಿ ಅವರ ಹೇಳಿಕೆಯನ್ನು ನಾನು ಒಪ್ಪುವುದಿಲ್ಲ. ನಾರಾಯಣ ಸ್ವಾಮಿ ಅವರಿಗೆ ಈ ರೀತಿ ಬೇರೆಯವರ ಮೇಲೆ ಆರೋಪ ಮಾಡದಂತೆ ಹೇಳುತ್ತೇನೆ. ಯಾರ ಕೈವಾಡವೂ ಇದರ ಹಿಂದೆ ಇದ್ದಂತೆ ಕಾಣುತ್ತಿಲ್ಲ. ತಪ್ಪು ಗ್ರಹಿಕೆಯಿಂದ ಘಟನೆ ನಡೆದಿದೆ ಎಂದು ಮತ್ತೆ ಸ್ಪಷ್ಟಪಡಿಸಿದರು.
ಮೀಸಲಾತಿಗೆ ಬಿಎಸ್‌ವೈ ಸಹಮತ
ಮುಖ್ಯಮಂತ್ರಿಗಳು ಘೋಷಿಸಿರುವ ಹೊಸ ಮೀಸಲಾತಿ ನೀತಿಯನ್ನು ಸ್ವಾಗತಿಸುತ್ತೇನೆ. ಇದಕ್ಕೆ ಶೇ.90ರಷ್ಟು ನರಿಂದ ಸಹಮತ ವ್ಯಕ್ತವಾಗಿದೆ. ಜನರಿಂದ ಒಳ್ಳೆಯ ಅಭಿಪ್ರಾಯ ಬಂದಿದೆ. ಯಾರೋ ನಾಲ್ಕೈದು ಮಂದಿ ಮಾತ್ರ ವಿರೋಧ ವ್ಯಕ್ತಪಡಿಸುತ್ತಿದ್ದಾರೆ ಎಂದು ಯಡಿಯೂರಪ್ಪ ಹೇಳಿದರು.
ಶಿಕಾರಿಪುರದ ನಮ್ಮ ಮನೆ ಮೇಲೆ ಕಲ್ಲುತೂರಾಟ ನಡೆಸಿದವರನ್ನು ಇನ್ನೆರಡು ದಿನಗಳಲ್ಲಿ ಭೇಟಿಯಾಗಿ ಸಮಸ್ಯೆ ಆಲಿಸುತ್ತೇನೆ. ಯಾರ ಮೇಲೂ ತೀವ್ರ ತರಹದ ಕಾನೂನು ಕ್ರಮ ಜರುಗಿಸದಂತೆ ಎಸ್ಪಿ ಹಾಗೂ ಡಿಸಿ ಅವರಿಗೆ ಸೂಚಿಸಿದ್ದೇನೆ. ನನಗೆ ಬಂಜಾರ ಸಮುದಾಯದವು ದೊಡ್ಡ ಶಕ್ತಿಯಾಗಿದೆ ಅಂತ ಮಾಜಿ ಮುಖ್ಯಮಂತ್ರಿ ಬಿ.ಎಸ್.ಯಡಿಯೂರಪ್ಪ ತಿಳಿಸಿದ್ದಾರೆ.
