ಕರ್ನಾಟಕ ಸುವರ್ಣ ಮಹೋತ್ಸವ ಹಿನ್ನೆಲೆಯಲ್ಲಿ ವಿಧಾನಸೌಧ ಪಶ್ಚಿಮದ್ವಾರದಲ್ಲಿ ನಿರ್ಮಿಸಲಾಗಿರುವ 25 ಅಡಿ ಎತ್ತರದ ನಾಡದೇವಿ ಭುವನೇಶ್ವರಿ ಕಂಚಿನ ಪ್ರತಿಮೆಯನ್ನು ಸೋಮವಾರ ಮುಖ್ಯಮಂತ್ರಿ ಸಿದ್ದರಾಮಯ್ಯ ಅನಾವರಣ ಮಾಡಲಿದ್ದಾರೆ.

ಬೆಂಗಳೂರು (ಜ.27): ಕರ್ನಾಟಕ ಸುವರ್ಣ ಮಹೋತ್ಸವ ಹಿನ್ನೆಲೆಯಲ್ಲಿ ವಿಧಾನಸೌಧ ಪಶ್ಚಿಮದ್ವಾರದಲ್ಲಿ ನಿರ್ಮಿಸಲಾಗಿರುವ 25 ಅಡಿ ಎತ್ತರದ ನಾಡದೇವಿ ಭುವನೇಶ್ವರಿ ಕಂಚಿನ ಪ್ರತಿಮೆಯನ್ನು ಸೋಮವಾರ ಮುಖ್ಯಮಂತ್ರಿ ಸಿದ್ದರಾಮಯ್ಯ ಅನಾವರಣ ಮಾಡಲಿದ್ದಾರೆ. ಸೋಮವಾರ ಮಧ್ಯಾಹ್ನ 12 ಗಂಟೆಗೆ ಬೆಂಗಳೂರಿನ ನಾಲ್ಕು ದಿಕ್ಕುಗಳಿಂದ ವಿಧಾನಸೌಧದತ್ತ ಕಲಾ ತಂಡಗಳ ಮೆರವಣಿಗೆ ಬರಲಿದೆ. 

ಪೂರ್ವ ದಿಕ್ಕನ್ನು ಪ್ರತಿನಿಧಿಸಿ ಇಂದಿರಾನಗರದಿಂದ, ಪಶ್ಚಿಮ ದಿಕ್ಕು-ಕೆಂಗೇರಿ ಉಪನಗರ, ಉತ್ತರ ದಿಕ್ಕು -ಹೆಬ್ಬಾಳ ಹಾಗೂ ದಕ್ಷಿಣ ದಿಕ್ಕು ಪ್ರತಿನಿಧಿಸಿ ಬಸವನಗುಡಿ ಬುಲ್‌ ಟೆಂಪಲ್‌ನಿಂದ ನಾಡಿನ ಗಣ್ಯ ಸಾಹಿತಿಗಳು, ಜ್ಞಾನಪೀಠ ಪುರಸ್ಕೃತರು, ಸಾಧಕರ ಭಾವಚಿತ್ರಗಳು, ವಿವಿಧ ಸಾಮ್ರಾಜ್ಯಗಳ ಪ್ರತಿಕೃತಿಗಳನ್ನು ಪಲ್ಲಕಿ ಮೂಲಕ ಮೆರವಣಿಗೆ ಮಾಡಲಾಗುವುದು. ಹತ್ತಾರು ಕಲಾ ತಂಡಗಳು ಸೇರಿ ಸಾವಿರಾರು ಮಂದಿ ಭಾಗವಹಿಸಲಿದ್ದು, ಅಂತಿಮವಾಗಿ ಸಂಜೆ 6 ಗಂಟೆಗೆ ವಿಧಾನಸೌಧದ ಆವರಣದಲ್ಲಿ ಪ್ರತಿಮೆ ಅನಾವರಣ ನಡೆಯಲಿದೆ.

ನಾಡದೇವಿ ಭುವನೇಶ್ವರಿ ಪ್ರತಿಮೆ ಅನಾವರಣದ ಬಳಿಕ ಕನ್ನಡ ಗೀತೆಗಳ ಕಾರ್ಯಕ್ರಮ ಮತ್ತು ಹೊನ್ನ ಬಿತ್ತೇವು-ನೃತ್ಯ ರೂಪಕ ಕಾರ್ಯಕ್ರಮ ಸೇರಿ ಸಾಂಸ್ಕೃತಿಕ ಕಾರ್ಯಕ್ರಮಗಳು ಇರಲಿವೆ. ಈ ಹಬ್ಬದ ವಾತಾವರಣದಲ್ಲಿ ಸಾರ್ವಜನಿಕರು ಹಾಗೂ ಕನ್ನಡಪರ ಸಂಘಟನೆಗಳು ಪಾಲ್ಗೊಳ್ಳಬೇಕು ಎಂದು ಕನ್ನಡ ಮತ್ತು ಸಂಸ್ಕೃತಿ ಇಲಾಖೆ ಸಚಿವ ಶಿವರಾಜ್ ತಂಗಡಗಿ ಮನವಿ ಮಾಡಿದ್ದಾರೆ. ನಾಡದೇವಿ ಪ್ರತಿಮೆ ಹಿಂದೆ ಕರ್ನಾಟಕ ನಕ್ಷೆ ಹಾಗೂ ಉಬ್ಬು ಶಿಲ್ಪ ಇರಲಿದೆ‌. ಮುಂಭಾಗದಲ್ಲಿ‌ ಭೌಗೋಳಿಕ ನಕ್ಷೆ ಇದ್ದರೆ, ಹಿಂಬದಿಯಲ್ಲಿ ನಾಡಗೀತೆ ಕೆತ್ತಲಾಗಿದೆ. 

ಸಾಲಗಾರರಿಗೆ ಕಿರುಕುಳ ಕೊಟ್ಟರೆ ಕ್ರಿಮಿನಲ್‌ ಕೇಸ್‌: ಮೈಕ್ರೋಫೈನಾನ್ಸ್‌ಗಳ ವಿರುದ್ಧ ಸುಗ್ರೀವಾಜ್ಞೆ ಅಸ್ತ್ರ

ಕರ್ನಾಟಕದ ಪ್ರಸಿದ್ಧ ಶಿಲ್ಪಕಲಾ ಶೈಲಿಗಳಾದ ಹೊಯ್ಸಳ, ಚಾಲುಕ್ಯ, ಕದಂಬ ಹಾಗೂ ಆಧುನಿಕ ನೈಜ ಶಿಲ್ಪ ಶೈಲಿಗಳನ್ನು ಅಳವಡಿಸಿ ಪ್ರತಿಮೆ ನಿರ್ಮಿಸಲಾಗಿದೆ. ಇದರಲ್ಲಿ ರಾಜಲಾಂಛನಗಳಾದ ಹೊಯ್ಸಳ ಲಾಂಛನ, ಕಂಠಿಹಾರ, ಗಂಡ ಭೇರುಂಡ ಇರಲಿದೆ. ಸೋಮವಾರ ಬಿಎಂಟಿಸಿ ಹಾಗೂ ಕೆಎಸ್ಆರ್‌ಟಿಸಿ ಬಸ್‌ಗಳಲ್ಲಿ ಕನ್ನಡದ ಧ್ವಜ ಹಾರಾಡಲಿದೆ. ಉಚಿತವಾಗಿ ಕನ್ನಡ ಮತ್ತು ಸಂಸ್ಕೃತಿ ಇಲಾಖೆಯಿಂದ ಕನ್ನಡದ ಧ್ವಜವನ್ನು ವಿತರಿಸಲಾಗುವುದು.