ಬೆಂಗಳೂರು(ಜ.08): ಬ್ರಿಟನ್‌ನಿಂದ ಬೆಂಗಳೂರು ನಗರಕ್ಕೆ ಆಗಮಿಸಿದ ಪ್ರಯಾಣಿಕರ ಪೈಕಿ ನಾಪತ್ತೆ ಆಗಿರುವವರ ಸಂಖ್ಯೆ 205ಕ್ಕೆ ಏರಿಕೆಯಾಗಿದೆ. ಗುರುವಾರ ಹೊಸದಾಗಿ ಸೋಂಕು ಪತ್ತೆಯಾದ ವರದಿಯಾಗಿಲ್ಲ.

ಕಳೆದ ಡಿಸೆಂಬರ್‌ನಲ್ಲಿ ಬ್ರಿಟನ್‌ನಿಂದ ಬೆಂಗಳೂರು ನಗರಕ್ಕೆ ಒಟ್ಟು 2,066 ಮಂದಿ ಆಗಮಿಸಿದ್ದಾರೆ. ಈ ಪೈಕಿ 1,861 ಮಂದಿ ಪತ್ತೆಯಾಗಿದ್ದಾರೆ. ಆದರೆ, ನಾಪತ್ತೆಯಾದವರ ಸಂಖ್ಯೆ ಮಾತ್ರ ದಿನದಿಂದ ದಿನಕ್ಕೆ ಹೆಚ್ಚಾಗುತ್ತಲೇ ಇದೆ. ಕಳೆದ ಬುಧವಾರ 173 ಮಂದಿ ಮಾತ್ರ ನಾಪತ್ತೆಯಾಗಿದ್ದಾರೆ ಎಂದು ಬಿಬಿಎಂಪಿ ಮಾಹಿತಿ ನೀಡಿತ್ತು. ಆದರೆ, ಗುರುವಾರದ ವೇಳೆಗೆ ಈ ಸಂಖ್ಯೆ 205ಕ್ಕೆ ಏರಿಕೆಯಾಗಿದೆ ಎಂದು ಪಾಲಿಕೆ ಮಾಹಿತಿ ನೀಡಿದೆ. ನಾಪತ್ತೆಯಾದವರ ಮಾಹಿತಿಯನ್ನು ಪೊಲೀಸ್‌ ಇಲಾಖೆ ನೀಡಿ ಪತ್ತೆ ಮಾಡಿಕೊಡುವಂತೆ ಬಿಬಿಎಂಪಿ ಮನವಿ ಮಾಡಿಕೊಂಡಿದೆ.

ರಾಧಿಕಾಗೆ ಪೊಲೀಸ್ ಬುಲಾವ್, ವಿಚಾರಣೆಗೆ ಬರ್ತಾರಾ..? ಗೈರಾಗ್ತಾರಾ..?

ಈವರೆಗೆ ಬ್ರಿಟನ್‌ನಿಂದ ಆಗಮಿಸಿದವರಲ್ಲಿ 1,861 ಮಂದಿ ಪತ್ತೆಯಾಗಿದ್ದು, 1,755 ಮಂದಿಯನ್ನು ಯನ್ನು ಕೋವಿಡ್‌ ಪರೀಕ್ಷೆಗೆ ಒಳಪಡಿಸಲಾಗಿದೆ. ಇನ್ನೂ 112 ಮಂದಿಯನ್ನು ಸೋಂಕು ಪರೀಕ್ಷೆಗೆ ಒಳಪಡಿಸಬೇಕಿದೆ. ಈವರೆಗೆ 27 ಮಂದಿಗೆ ಸೋಂಕು ಕಾಣಿಸಿಕೊಂಡಿದೆ. ಈ ಸೋಂಕಿತರೊಂದಿಗೆ ಸಂಪರ್ಕದಲ್ಲಿದ್ದ 16 ಮಂದಿ ಸೋಂಕು ದೃಢಪಟ್ಟಿದೆ. ಈ ಮೂಲಕ ಒಟ್ಟು 43 ಮಂದಿಗೆ ಸೋಂಕು ಕಾಣಿಸಿಕೊಂಡಿದೆ. ಗುರುವಾರ ಯಾವುದೇ ಸೋಂಕು ದೃಢಪಟ್ಟವರದಿಯಾಗಿಲ್ಲ. ಸೋಂಕಿತರೊಂದಿಗೆ ಪ್ರಾಥಮಿಕ ಸಂಪರ್ಕದಲ್ಲಿ ಇದ್ದ 80 ಮಂದಿ ಹಾಗೂ ಪರೋಕ್ಷ ಸಂಪರ್ಕದಲ್ಲಿ ಇದ್ದ 110 ಮಂದಿಯನ್ನು ಕ್ವಾರಂಟೈನ್‌ ಮಾಡಲಾಗಿದೆ ಎಂದು ಬಿಬಿಎಂಪಿ ಮಾಹಿತಿ ನೀಡಿದೆ.

ಒಟ್ಟು 43 ಸೋಂಕು ಪ್ರಕರಣದಲ್ಲಿ ಬಿಬಿಎಂಪಿಯ ಮಹದೇವಪುರ ವಲಯದ ವ್ಯಾಪ್ತಿಯಲ್ಲಿ 19, ಬೊಮ್ಮನಹಳ್ಳಿಯಲ್ಲಿ 13, ಪೂರ್ವ ಮತ್ತು ಪಶ್ಚಿಮ ವಲಯದಲ್ಲಿ ತಲಾ 4, ದಾಸರಹಳ್ಳಿಯಲ್ಲಿ 2 ಹಾಗೂ ದಕ್ಷಿಣ ವಲಯದಲ್ಲಿ ಒಂದು ಪ್ರಕರಣ ಪತ್ತೆಯಾಗಿದೆ.